ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, January 12, 2019

Mahabharata Tatparya Nirnaya Kannada 11.174-11.178

ಪಾಣ್ಡುಸ್ತತೋ ರಾಜ್ಯಭರಂ ನಿಧಾಯ ಜ್ಯೇಷ್ಠೇsನುಜೇ ಚೈವ ವನಂ ಜಗಾಮ
ಪತ್ನೀದ್ವಯೇನಾನುಗತೋ ಬದರ್ಯ್ಯಾಮುವಾಸ ನಾರಾಯಣಪಾಲಿತಾಯಾಮ್ ॥೧೧.೧೭೪ 

ತದನಂತರ ಪಾಂಡುವು, ರಾಜ್ಯಭಾರವನ್ನು ಹಿರಿಯನಾದ ಧೃತರಾಷ್ಟ್ರನಲ್ಲಿ ಮತ್ತು ಕಿರಿಯನಾದ ವಿದುರನಲ್ಲಿಯೂ ಇತ್ತು  ಕಾಡಿಗೆ ತೆರಳಿದನು. ಪತ್ನಿಯರಿಂದ ಹಿಂಬಾಲಿಸಿದವನಾದ ಪಾಂಡುವು, ಧರ್ಮದೇವತೆಯ^ (ಯಮನ) ಮಗನಾದ  ನಾರಾಯಣನ^ ಪಾಲನೆಯಲ್ಲಿರುವ ಬದರಿಯಲ್ಲಿ ವಾಸಮಾಡಿದನು.

ಗೃಹಾಶ್ರಮೇಣೈವ ವನೇ ನಿವಾಸಂ ಕುರ್ವನ್ ಸ ಭೋಗಾನ್ ಬುಭುಜೇ ತಪಶ್ಚ       
ಚಕ್ರೇ ಮುನೀನ್ದ್ರೈಃ ಸಹಿತೋ ಜಗತ್ಪತಿಂ ರಮಾಪತಿಂ ಭಕ್ತಿಯುತೋsಭಿಪೂಜಯನ್ ॥೧೧.೧೭೫

ಅವನು ಗೃಹಸ್ಥಾಶ್ರಮದಿಂದಲೇ ಕಾಡಿನಲ್ಲಿ ವಾಸಮಾಡುತ್ತಾ, ಗೃಹಸ್ಥಾಶ್ರಮಕ್ಕೆ ಯೋಗ್ಯವಾದ ಸಕಲ ಭೋಗಗಳನ್ನೂ ಅನುಭೋಗಿಸಿದನು. ಮುನಿಗಳೊಂದಿಗೆ ಕೂಡಿಕೊಂಡು, ರಮೆಗೂ ಒಡೆಯನಾದ ಬದರೀನಾರಾಯಣನನ್ನು ಭಕ್ತಿಯಿಂದ ಪೂಜಿಸುತ್ತಾ  ತಪಸ್ಸನ್ನಾಚರಿಸಿದನು.   

ಸ ಕಾಮತೋ ಹರಿಣತ್ವಂ ಪ್ರಪನ್ನಂ ದೈವಾದೃಷಿಂ ಗ್ರಾಮ್ಯಕರ್ಮ್ಮಾನುಷಕ್ತಮ್      
ವಿದ್ಧ್ವಾ ಶಾಪಂ ಪ್ರಾಪ ತಸ್ಮಾತ್ ಸ್ತ್ರಿಯಾ ಯುಙ್ಮರಿಷ್ಯಸೀತ್ಯೇವ ಬಭೂವ ಚಾsರ್ತ್ತ ॥೧೧.೧೭೬

ನ್ಯಸಿಷ್ಣುರುಕ್ತಃ ಪೃಥಯಾ ಸ ನೇತಿ ಪ್ರಣಾಮಪೂರ್ವಂ ನ್ಯವಸತ್ ತಥೈವ ।
ತಾಭ್ಯಾಂ ಸಮೇತಃ ಶತಶೃಙ್ಗಪರ್ವತೇ ನಾರಾಯಣಸ್ಯಾsಶ್ರಮಮದ್ಧ್ಯಗೇ ಪುರಃ ॥೧೧.೧೭೭

ಒಮ್ಮೆ ದೈವಸಂಕಲ್ಪದಂತೆ, ಜಿಂಕೆಯ ವೇಷವನ್ನು ತೊಟ್ಟು  ಗ್ರಾಮ್ಯಕರ್ಮ(ಮೈಥುನ/ರತಿಕರ್ಮ)ದಲ್ಲಿ ತೊಡಗಿದ್ದ ಋಷಿಯನ್ನು ಪಾಂಡುವು ತನ್ನ ಬಾಣದಿಂದ  ಹೊಡೆದು,  ಆ ಋಷಿಯಿಂದ,  ‘ಹೆಣ್ಣಿನೊಂದಿಗೆ ಕೂಡಿದಾಗ ನಿನಗೆ ಸಾವು’ ಎಂಬ  ಶಾಪವನ್ನು ಪಡೆದನು. ಈ ಘಟನೆಯಿಂದ ಪಾಂಡು ಬಹಳ ಸಂಕಟಗೊಂಡು ತಾನು ಸನ್ಯಾಸವನ್ನು ತೆಗೆದುಕೊಳ್ಳಬೇಕೆಂಬ ಇಚ್ಛೆಯುಳ್ಳವನಾದನು. ಆದರೆ ಕುಂತಿಯಿಂದ ನಮಸ್ಕಾರಪೂರ್ವಕವಾಗಿ ‘ಸನ್ಯಾಸ ಬೇಡ’  ಎಂದು ಹೇಳಲ್ಪಟ್ಟವನಾಗಿ, ಗೃಹಸ್ಥಾಶ್ರಮಿಯಾಗಿಯೇ, ಶತಶೃಂಗ ಪರ್ವತದ ಮಧ್ಯದಲ್ಲಿರುವ ನಾರಾಯಣಾಶ್ರಮವುಳ್ಳ ಶತಶೃಂಗ ಪ್ರದೇಶದಲ್ಲಿ ಆವಾಸ ಮಾಡಿಕೊಂಡಿದ್ದನು.

ತಪೋ ನಿತಾನ್ತಂ ಸ ಚಚಾರ ತಾಭ್ಯಾಂ ಸಮನ್ವಿತಃ ಕೃಷ್ಣಪದಾಮ್ಬುಜಾಶ್ರಯಃ ।
ತತ್ಸಙ್ಗಪೂತದ್ಯುಸರಿದ್ವರಾಮ್ಭಃ ಸದಾವಗಾಹಾತಿಪವಿತ್ರಿತಾಙ್ಗಃ ॥೧೧.೧೭೮

ಅವನು ತನ್ನಿಬ್ಬರು ಹೆಂಡಂದಿರೊಂದಿಗೆ, ಕೃಷ್ಣನ^ ಪಾದವನ್ನೇ  ಸ್ಮರಣೆ ಮಾಡುತ್ತಾ, ಕೃಷ್ಣನ ಪಾದದ ಸಂಗದಿಂದ ಪವಿತ್ರವಾಗಿರುವ ಗಂಗಾನದಿಯ ಉತ್ಕೃಷ್ಟವಾದ ನೀರಿನಲ್ಲಿ ಯಾವಾಗಲೂ ಸ್ನಾನಮಾಡಿ, ಅತ್ಯಂತ  ಪವಿತ್ರವಾದ ಅಂಗವುಳ್ಳವನಾಗಿ, ನಿರಂತರವಾದ ತಪಸ್ಸನ್ನು ಮಾಡಿಕೊಂಡಿದ್ದನು.    
[^ಸ್ವಾಯಂಭುವಮನುವಿಗೆ ಮೂರು ಹೆಣ್ಣುಮಕ್ಕಳು. ೧. ಆಕೂತಿ; ೨. ದೇವಹೂತಿ ಮತ್ತು ೩. ಪ್ರಸೂತಿ. ಪ್ರಸೂತಿ ಮತ್ತು ದಕ್ಷಪ್ರಜಾಪತಿಯ ದಾಂಪತ್ಯದಲ್ಲಿ ಹತ್ತು ಹೆಣ್ಣುಮಕ್ಕಳು ಹುಟ್ಟಿದರು. ಅವರಲ್ಲಿ ಕೊನೆಯವಳು ‘ಮೂರ್ತಿ’. ಮೂರ್ತಿಯನ್ನು ಧರ್ಮದೇವತೆ(ಯಮ) ಮದುವೆ ಮಾಡಿಕೊಂಡ. ಅವರ ದಾಂಪತ್ಯದಲ್ಲಿ ನಾಲ್ಕು  ಗಂಡುಮಕ್ಕಳು ಜನಿಸಿದರು. ೧. ನರ; ೨. ನಾರಾಯಣ; ೩. ಹರಿ ಮತ್ತು ೪. ಕೃಷ್ಣ. ಇವರಲ್ಲಿ ನರ ಎಂದರೆ ಶೇಷ. ಶೇಷನಲ್ಲಿ ಭಗವಂತನ ವಿಶೇಷ ಆವೇಶವಿತ್ತು. ಇನ್ನು ಉಳಿದ ಮೂರು ರೂಪಗಳು ಭಗವಂತನ ಅವತಾರಗಳು. ಈ ಮೇಲಿನ ಶ್ಲೋಕಗಳಲ್ಲಿ ನಾರಾಯಣ(ಬದರೀನಾರಾಯಣ) ಮತ್ತು  ಕೃಷ್ಣ ಎಂದು ಉಲ್ಲೇಖಗೊಂಡಿರುವುದು ಧರ್ಮ ಮತ್ತು ಮೂರ್ತಿಯಲ್ಲಿ  ಅವತರಿಸಿಬಂದ ಶ್ರೀಮನ್ನಾರಾಯಣನ ರೂಪಗಳು.]

No comments:

Post a Comment