ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, January 9, 2019

Mahabharata Tatparya Nirnaya Kannada 11.162-11.166

ಅಥ ಕುನ್ತೀ ದತ್ತಾ ಸಾ ಪಾಣ್ಡೋಃ ಸೋsಪ್ಯೇತಯಾ ಚಿರಂ ರೇಮೇ ।
ಶೂರಾಚ್ಛೂದ್ರ್ಯಾಂ ಜಾತಾಂ ವಿದುರೋsವಹದಾರುಣೀಂ ಗುಣಾಢ್ಯಾಂ ಚ ॥೧೧.೧೬೨

ಕರ್ಣನ ಹುಟ್ಟಿನ ನಂತರ ಕುಂತಿಯು ಪಾಂಡುವಿಗಾಗಿ ಕೊಡಲ್ಪಟ್ಟಳು. ಪಾಂಡುವಾದರೋ ಕುಂತಿಯೊಂದಿಗೆ ಅನೇಕ ವರ್ಷಗಳಕಾಲ ವಿಹರಿಸಿಕೊಂಡು ಸುಖವಾಗಿದ್ದನು. ಕುಂತಿಯ ತಂದೆಯಾದ ಶೂರರಾಜನಿಂದ  ಶೂದ್ರಸ್ತ್ರೀಯಲ್ಲಿ ಹುಟ್ಟಿರುವ, ಗುಣಸಂಪನ್ನಳಾದ ಆರುಣೀ ಎನ್ನುವವಳನ್ನು  ವಿದುರನು ಮದುವೆಯಾದನು. 

ಅಥ ಚರ್ತ್ತಾಯನನಾಮಾ ಮದ್ರೇಶಃ ಶಕ್ರತುಲ್ಯಪುತ್ರಾರ್ತ್ಥೀ  ।
ಕನ್ಯಾರತ್ನಂ ಚೇಚ್ಛಂಶ್ಚಕ್ರೇ ಬ್ರಾಹ್ಮಂ ತಪೋ ವರಂ ಚಾsಪ ॥೧೧.೧೬೩

(ಕಥಾಂತರದಲ್ಲಿ  ಪಾಂಡುರಾಜನ ಎರಡನೇ ಪತ್ನಿಯ ಹಿನ್ನೆಲೆಯನ್ನು ಇಲ್ಲಿ ವಿವರಿಸಿದ್ದಾರೆ).  ಋತಾಯನ ಎಂಬ ಹೆಸರುಳ್ಳ  ಮದ್ರದೇಶದ ರಾಜನು ಇಂದ್ರನಿಗೆ ಸಮನಾದ ಮಗ ಹಾಗು  ಕನ್ಯಾರತ್ನವನ್ನು  ಬಯಸಿ, ಬ್ರಹ್ಮನಿಗೆ ಸಂಬಂಧಪಟ್ಟ ತಪಸ್ಸನ್ನು ಮಾಡಿ  ವರವನ್ನು ಹೊಂದಿದನು.

ಪ್ರಹ್ಲಾದಾವರಜೋ ಯಃ ಸಹ್ಲಾದೋ ನಾಮತೋ ಹರೇರ್ಭಕ್ತಃ ।
ಸೋsಭೂದ್ ಬ್ರಹ್ಮವರಾನ್ತೇ ವಾಯೋರಾವೇಶಯುಕ್ ಸುತೋ ರಾಜ್ಞಃ ॥೧೧.೧೬೪

ಪ್ರಹ್ಲಾದನ ತಮ್ಮನಾಗಿ ಯಾರು ಸಹ್ಲಾದ ಎಂಬ ಹೆಸರಿನಿಂದ ಪರಮಾತ್ಮನ ಭಕ್ತನಾಗಿದ್ದನೋ, ಅವನೇ ಬ್ರಹ್ಮದೇವರ ವರದಂತೆ ಮುಖ್ಯಪ್ರಾಣನ ಆವೇಶದಿಂದ ಕೂಡಿದವನಾಗಿ,  ಋತಾಯನನ ಮಗನಾಗಿ ಹುಟ್ಟಿದನು.

[ಈ ರೀತಿ ಸಹ್ಲಾದ  ಋತಾಯನನ ಮಗನಾಗಿ ಹುಟ್ಟಿರುವ ಹಿನ್ನೆಲೆಯನ್ನು  ಆದಿಪರ್ವದಲ್ಲಿ (೬೮.೬) ವಿವರಿಸಿರುವುದನ್ನು ಕಾಣುತ್ತೇವೆ: ‘ಸಹ್ಲಾದ ಇತಿ ವಿಖ್ಯಾತಃ  ಪ್ರಹ್ಲಾದಸ್ಯಾನುಜಸ್ತು ಯಃ । ಸ ಶಲ್ಯ ಇತಿ ವಿಖ್ಯಾತೋ ಜಜ್ಞೇ ವಾಹೀಕಪುಙ್ಗವಃ’]

ಸ ಮಾರುತಾವೇಶವಶಾತ್ ಪೃಥಿವ್ಯಾಂ ಬಲಾಧಿಕೋsಭೂದ್ ವರತಶ್ಚ ಧಾತುಃ ।
ಶಲ್ಯಶ್ಚ ನಾಮ್ನಾsಖಿಲಶತ್ರುಶಲ್ಯೋ ಬಭೂವ ಕನ್ಯಾsಸ್ಯ ಚ ಮಾದ್ರಿ ನಾಮ್ನೀ ॥೧೧.೧೬೫

ಅವನು ಮುಖ್ಯಪ್ರಾಣನ ಆವೇಶದಿಂದಾಗಿ, ಬ್ರಹ್ಮದೇವರ ವರದಿಂದಲೂ, ಭೂಮಿಯಲ್ಲಿ ಬಲದಿಂದ ಅಧಿಕನಾಗಿದ್ದ. ಎಲ್ಲ ರಾಜರಿಗೂ ಕೂಡಾ ಮುಳ್ಳಿನಂತೆ ಇರುವ ಅವನು ಹೆಸರಿನಿಂದಲೂ ಶಲ್ಯನಾದನು.  ಅವನಿಗೆ ಮಾದ್ರಿ ಎಂಬ ಹೆಸರುಳ್ಳ ಕನ್ಯೆಯು ಹುಟ್ಟಿದಳು.

ಸಾ ಪಾಣ್ಡುಭಾರ್ಯ್ಯೈವ ಚ ಪೂರ್ವಜನ್ಮನ್ಯಭೂತ್ ಪುನಶ್ಚ ಪ್ರತಿಪಾದಿತಾsಸ್ಮೈ ।
ಶಲ್ಯಶ್ಚ ರಾಜ್ಯಂ ಪಿತೃದತ್ತಮಞ್ಜೋ ಜುಗೋಪ ಧರ್ಮ್ಮೇಣ ಸಮಸ್ತಶಾಸ್ತ್ರವಿತ್ ॥೧೧.೧೬೬     

ಮಾದ್ರಿಯು ಮೂಲರೂಪದಲ್ಲಿಯೂ ಕೂಡಾ ಪಾಂಡುವಿನ ಹೆಂಡತಿಯಾಗಿಯೇ ಇದ್ದಳು. ಈಗ ಮತ್ತೆ ಪಾಂಡುವಿಗೆ ಕೊಡಲ್ಪಟ್ಟಳು. ಶಲ್ಯನಾದರೋ, ತಂದೆಕೊಟ್ಟ ರಾಜ್ಯವನ್ನು ಚನ್ನಾಗಿ, ಎಲ್ಲಶಾಸ್ತ್ರವನ್ನು ಬಲ್ಲವನಾಗಿ, ಧರ್ಮದಿಂದ ಪಾಲನೆ ಮಾಡಿಕೊಂಡಿದ್ದನು.
[ಈ ಮೇಲಿನ ಮಾತಿನ ಹಿನ್ನೆಲೆಯನ್ನು ಆದಿಪರ್ವದಲ್ಲಿ(೬೮.೧೬೦) ಕಾಣಬಹುದು: ‘ಸಿದ್ಧಿರ್ಧೃತಿಶ್ಚ ಯೇ ದೇವ್ಯೌ ಪಞ್ಚಾನಾಂ ಮಾತರೌ ತು ತೇ । ಕುಂತೀ ಮಾದ್ರೀ ಚ ಜಜ್ಞಾತೇ ಮತಿಸ್ತು ಸುಬಲಾತ್ಮಜಾ’]

No comments:

Post a Comment