ಯ ಉಗ್ರಸೇನಃ ಸುರಗಾಯಕಃ ಸ ಜಾತೋ ಯದುಷ್ವೇಷ ತಥಾಭಿಧೇಯಃ ।
ತವೈವ ಸೇವಾರ್ತ್ಥಮಮುಷ್ಯ ಪುತ್ರೋ ಜಾತೋsಸುರಃ ಕಾಲನೇಮಿಃ ಸ ಈಶ ॥೧೧.೧೯೯॥
ಉಗ್ರಸೇನನೆಂಬ ದೇವತೆಗಳ
ಹಾಡುಗಾರ ಯಾರಿದ್ದಾನೋ, ಅವನು ನಿನ್ನ ಸೇವೆಗಾಗಿ ಯಾದವರಲ್ಲಿ ಅದೇ ಹೆಸರುಳ್ಳವನಾಗಿ (ಉಗ್ರಸೇನ ಎಂಬ ಹೆಸರುಳ್ಳವನಾಗಿ) ಹುಟ್ಟಿದ್ದಾನೆ. ಎಲೋ ಈಶನೇ, ಈ ಉಗ್ರಸೇನನ ಮಗನಾಗಿ ಕಾಲನೇಮಿ ಅಸುರ ಹುಟ್ಟಿದ್ದಾನೆ.
ಯಸ್ತ್ವತ್ಪ್ರಿಯಾರ್ತ್ಥಂ ನ ಹತೋ ಹಿ ವಾಯುನಾ ಭವತ್ಪ್ರಸಾದಾತ್
ಪರಮೀಶಿತಾsಪಿ ।
ಸ ಏಷ ಭೋಜೇಷು ಪುನಶ್ಚ ಜಾತೋ ವರಾದುಮೇಶಸ್ಯ ಪರೈರಜೇಯಃ ॥೧೧.೨೦೦॥
ನಿನ್ನ ಅನುಗ್ರಹದಿಂದ ಅತ್ಯಂತ
ಸಮರ್ಥನಾಗಿರುವ ಮುಖ್ಯಪ್ರಾಣ, ನಿನ್ನ
ಪ್ರೀತಿಗಾಗಿ ಯಾರನ್ನು ಹಿಂದೆ ಕೊಲ್ಲಲಿಲ್ಲವೋ, ಅಂತಹ
ಆ ಕಾಲನೇಮಿ, ಇದೀಗ ಭೋಜರಲ್ಲಿ(ಯಾದವರಲ್ಲಿ)
ಹುಟ್ಟಿದ್ದಾನೆ. ರುದ್ರನ ವರದಿಂದ ಆತ ಬೇರೊಬ್ಬರಿಂದ ಜಯಿಸಲಸಾಧ್ಯನಾಗಿ (ಅಜೇಯನಾಗಿ)
ಉಳಿದಿದ್ದಾನೆ.
[ಮಹಾಭಾರತದ
ಆದಿಪರ್ವದಲ್ಲಿ(೬೮.೬೭) ಈ ಪ್ರಮೇಯವನ್ನು ‘ಕಾಲನೇಮಿರಿತಿ ಖ್ಯಾತೋ ದಾನವಾನಾಂ ಮಹಾಬಲಃ । ಸ ಕಂಸ ಇತಿ ವಿಖ್ಯಾತ
ಉಗ್ರಸೇನಸುತೋ ಬಲೀ’ ಎಂದು ಸ್ಪಷ್ಟವಾಗಿ ಹೇಳಿರುವುದನ್ನು ಕಾಣುತ್ತೇವೆ. ಅದೇ ರೀತಿ ಬ್ರಹ್ಮಪುರಾಣದಲ್ಲೂ(೧೮೧.೧)
ಕೂಡಾ ಈ ವಿವರ ಕಾಣಸಿಗುತ್ತದೆ: ‘ಕಾಲನೇಮಿರ್ಹತೋ ಯೋsಸೌ ವಿಷ್ಣುನಾ ಪ್ರಭವಿಷ್ಣುನಾ । ಉಗ್ರಸೇನಸುತಃ ಕಂಸಃ ಸಂಭೂತಃ ಸ ಮಹಾಸುರಃ’.
ಆದರೆ ಮಹಾಭಾರತದ
ಆದಿಪರ್ವದಲ್ಲಿ(೬೮.೧೨-೧೩) ಉಗ್ರಸೇನನ ಕುರಿತು ‘ಸ್ವರ್ಭಾನುರಿತಿ ವಿಖ್ಯಾತಃ ಶ್ರೀಮಾನ್ ಯಸ್ತು
ಮಹಾಸುರಃ । ಉಗ್ರಸೇನ ಇತಿ ಖ್ಯಾತಃ’ ಎಂದು ಹೇಳಿದ್ದಾರೆ. ಇಲ್ಲಿ ‘ಸ್ವರ್ಭಾನು’ ಎನ್ನುವ ದೈತ್ಯ ಉಗ್ರಸೇನ ಎಂದು
ಖ್ಯಾತನಾಗಿದ್ದಾನೆ ಎಂದು ಹೇಳಲಾಗಿದೆ. ಇದು ಮೇಲಿನ ವಿವರಣೆಗೆ ವಿರುದ್ಧವಲ್ಲವೇ? ಅಲ್ಲ! ಏಕೆಂದರೆ
ಇಲ್ಲಿ ಹೇಳಿರುವುದು ಅಸುರ ಆವೇಶವನ್ನು. ಅಂದರೆ:
ಉಗ್ರಸೇನನಲ್ಲಿ ‘ಸ್ವರ್ಭಾನು’ ಎನ್ನುವ ಅಸುರನ ಆವೇಶವಿತ್ತು ಎನ್ನುವುದಷ್ಟೇ ಈ ಮಾತಿನ ತಾತ್ಪರ್ಯ. ಅಸುರಾವೇಶದಿಂದಲೇ ಉಗ್ರಸೇನನಿಗೆ ಕಂಸನನ್ನು ಪಾಲನೆ ಮಾಡಬೇಕು ಎನ್ನುವ ಅಭಿಲಾಷೆ ಬಂದಿರುವುದು. ಅಷ್ಟೇ
ಅಲ್ಲ, ‘ಸ್ಯಮಂತಕ ಮಣಿ ನನಗೇ ಬೇಕು’ ಎಂಬಿತ್ಯಾದಿ ಶ್ರೀಕೃಷ್ಣನ ವಿರುದ್ಧ ನಡೆಯನ್ನು ಆತ ತೋರಿರುವುದೂ ಅಸುರ
ಆವೇಶದಿಂದಲೇ.]
ಸ ಔಗ್ರಸೇನೇ ಜನಿತೋsಸುರೇಣ ಕ್ಷೇತ್ರೇ ಹಿ
ತದ್ರೂಪಧರೇಣ ಮಾಯಯಾ ।
ಗನ್ಧರ್ವಿಜೇನ ದ್ರಮಿಳೇನ ನಾಮ್ನಾ ಕಂಸೋ ಜಿತೋ ಯೇನ
ವರಾಚ್ಛಚೀಪತಿಃ ॥೧೧.೨೦೧॥
ಉಗ್ರಸೇನನ ಹೆಂಡತಿಯಲ್ಲಿ, ಕಪಟ ವಿದ್ಯೆಯಿಂದ ಉಗ್ರಸೇನನ ವೇಷವನ್ನು ಧರಿಸಿದ್ದ,
ಗಂಧರ್ವಿಯಲ್ಲಿ ಹುಟ್ಟಿರುವ, ದ್ರಮಿಳನೆಂಬ ಅಸುರನಿಂದ ಹುಟ್ಟಿದ ‘ಕಂಸ’, ರುದ್ರನ ವರಬಲದಿಂದ ಶಚೀಪತಿಯನ್ನೂ
ಗೆದ್ದಿದ್ದಾನೆ.
[ಒಮ್ಮೆ ಉಗ್ರಸೇನನ ಪತ್ನಿ ತವರು ಮನೆಗೆ ಹೋಗಿದ್ದ ಸಮಯದಲ್ಲಿ, ಗಂಧರ್ವಿಯಲ್ಲಿ
ಹುಟ್ಟಿರುವ ದ್ರಮಿಳನೆನ್ನುವ ದೈತ್ಯನ ಕಣ್ಣಿಗೆ ಬೀಳುತ್ತಾಳೆ. ಆಕೆಯ ಸೌಂದರ್ಯವನ್ನು ಕಂಡ ಅಸುರ, ಉಗ್ರಸೇನನ ವೇಷವನ್ನು ಧರಿಸಿ,
ಕಪಟವಾಗಿ ಬಂದು ಅವಳನ್ನು ಸೇರುತ್ತಾನೆ. ಈ ರೀತಿ ಉಗ್ರಸೇನನ
ಪತ್ನಿಯಲ್ಲಿ ದ್ರಮಿಳನಿಂದ ಕಾಲನೇಮಿಯು ಕಂಸ ಎನ್ನುವ ಹೆಸರಿನಿಂದ ಹುಟ್ಟುತ್ತಾನೆ].
No comments:
Post a Comment