ತತಾsಪಿ ರಾಮಸೇವನಾದ್ದರೇಶ್ಚ ಸನ್ನಿಧಾನಯುಕ್ ।
ಸುದರ್ಶನೀಯಕರ್ಣ್ಣತಃ ಸ ಕರ್ಣ್ಣನಾಮಕೋsಭವತ್ ॥೧೧.೧೫೮॥
ಈ ರೀತಿ ಹುಟ್ಟಿದ ಸೂರ್ಯ, ಅಸುರಾವೇಶದಿಂದ ಹುಟ್ಟಿದ್ದರೂ ಕೂಡಾ, ಹಿಂದೆ ಸುಗ್ರೀವನಾಗಿದ್ದಾಗ ಮಾಡಿದ್ದ ಶ್ರೀರಾಮನ ಸೇವೆಯ ಫಲದಿಂದ ನಾರಾಯಣನ ಸನ್ನಿಧಾನದಿಂದ ಕೂಡಿದವನಾಗಿ ಹುಟ್ಟಿದ್ದ. ಅಂದವಾದ ಕಿವಿ ಉಳ್ಳವನಾದ ಅವನು ‘ಕರ್ಣ’ ಎಂಬ ಹೆಸರುಳ್ಳವನಾದ.
ಸ ರತ್ನಪೂರ್ಣ್ಣಮಞ್ಜುಷಾಗತೋ ವಿಸರ್ಜ್ಜಿತೋ ಜಲೇ ।
ಜನಾಪವಾದಭೀತಿತಸ್ತಯಾ ಯಮಸ್ವಸುರ್ದ್ದ್ರುತಮ್ ॥೧೧.೧೫೯॥
ನದೀಪ್ರವಾಹತೋ ಗತಂ ದದರ್ಶ ಸೂತನನ್ದನಃ ।
ತಮಗ್ರಹೀತ್ ಸರತ್ನಕಂ ಚಕಾರ ಪುತ್ರಕಂ ನಿಜಮ್ ॥೧೧.೧೬೦॥
ಜನರಿಂದೊದಗಬಹುದಾದ ಅಪವಾದ ಭಯಕ್ಕೊಳಪಟ್ಟ ಕುಂತಿಯಿಂದ, ಕರ್ಣನು ರತ್ನದಿಂದ ತುಂಬಿದ ಪೆಟ್ಟಿಗೆಯಲ್ಲಿ ಇಡಲ್ಪಟ್ಟವನಾಗಿ, ಯಮುನಾ ನದಿಯ ನೀರಿನಲ್ಲಿ ಬಿಡಲ್ಪಟ್ಟನು.
ನದಿಯ ಪ್ರವಾಹಕ್ಕನುಗುಣವಾಗಿ ಹೋಗುತ್ತಿರುವ ಆ ಪೆಟ್ಟಿಗೆ ಅಧಿರಥನೆಂಬ ಸೂತನ ಕಣ್ಣಿಗೆ ಬಿತ್ತು. ಆತ ರತ್ನದಿಂದ ಕೂಡಿದ ಪೆಟ್ಟಿಗೆಯಲ್ಲಿದ್ದ ಆ ಮಗುವನ್ನು ಸ್ವೀಕರಿಸಿ, ಆತನನ್ನು ತನ್ನ ಮಗನನ್ನಾಗಿ ಮಾಡಿಕೊಳ್ಳುತ್ತಾನೆ. ಹೀಗೆ ಕರ್ಣ ಸೂತಪುತ್ರನೆನಿಸುತ್ತಾನೆ.
ಸೂತೇನಾಧಿರಥೇನ ಲಾಳಿತತನುಸ್ತದ್ಭಾರ್ಯ್ಯಯಾ ರಾಧಯಾ ।
ಸಂವೃದ್ಧೋ ನಿಖಿಲಾಃ ಶ್ರುತಿರಧಿಜಗೌ ಶಾಸ್ತ್ರಾಣಿ ಸರ್ವಾಣಿ ಚ ।
ಬಾಲ್ಯಾದೇವ ಮಹಾಬಲೋ ನಿಜಗುಣೈಃ ಸಮ್ಭಾಸಮಾನೋsವಸ-
ನ್ನಾಮ್ನಾsಸೌ ವಸುಷೇಣತಾಮಗಮದಸ್ಯಾsಸೀದ್ಧ್ಯಮಾ ತದ್ ವಸು ॥೧೧.೧೬೧॥
ಆ ಅಧಿರಥನೆಂಬ ಸೂತನಿಂದ ಮತ್ತು ಅವನ ಹೆಂಡತಿಯಾದ ರಾಧೆಯಿಂದ ಮುದ್ದಿಸಲ್ಪಟ್ಟವನಾಗಿ ಬೆಳೆದ ಕರ್ಣ, ವೇದಗಳನ್ನೂ, ಎಲ್ಲ ಶಾಸ್ತ್ರಗಳನ್ನೂ ಅಭ್ಯಾಸ ಮಾಡಿದ. (ಕುಂತಿ ಪೆಟ್ಟಿಗೆಯಲ್ಲಿ ಇರಿಸಿದ್ದ) ಧನಾದಿ ಸಂಪತ್ತು ಅವನ ಸಮೀಪದಲ್ಲೇ ಇದ್ದುದರಿಂದ ಹೆಸರಿಂದ ಆತ ವಸುಷೇಣನಾದ. (ವಸುಷೇಣ ಎನ್ನುವುದು ಕರ್ಣನ ಮೂಲ ಹೆಸರು) ಬಾಲ್ಯದಿಂದಲೇ ಮಹಾಬಲವುಳ್ಳವನಾಗಿದ್ದ ಆತ, ತನ್ನ ಗುಣಗಳಿಂದ ಬೆಳಗುತ್ತಿದ್ದ.
No comments:
Post a Comment