ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, January 28, 2019

Mahabharata Tatparya Nirnaya Kannada 11.195-11.198


ತತೋsಸುರಾಸ್ತೇ ನಿಹತಾ ಅಶೇಷಾಸ್ತ್ವಯಾ ತ್ರಿಭಾಗಾ ನಿಹತಾಶ್ಚತುರ್ತ್ಥಮ್ ।
ಜಘಾನ ವಾಯುಃ ಪುನರೇವ ಜಾತಾಸ್ತೇ ಭೂತಳೇ ಧರ್ಮ್ಮಬಲೋಪಪನ್ನಾಃ ॥೧೧.೧೯೫     

ಕಾಲನೇಮಿಯ ಸಂಹಾರದ ನಂತರ,  ಆ ಅಸುರರ ಮುಕ್ಕಾಲು ಭಾಗವನ್ನು ನೀನು ಸಂಹಾರ ಮಾಡಿದರೆ, ಉಳಿದ ಒಂದು ಭಾಗ ಮುಖ್ಯಪ್ರಾಣನಿಂದ ಸಂಹರಿಸಲ್ಪಟ್ಟಿತು. ಆ ಅಸುರರೇ ಪಾರಂಪರಿಕವಾದ ಧರ್ಮಬಲವುಳ್ಳವರಾಗಿ ಮತ್ತೆ ಭೂಮಿಯಲ್ಲಿ ಹುಟ್ಟಿದ್ದಾರೆ.  

ರಾಜ್ಞಾಂ ಮಹಾವಂಶಸುಜನ್ಮನಾಂ ತು ತೇಷಾಮಭೂದ್ ಧರ್ಮ್ಮಮತಿರ್ವಿಪಾಪಾ ।
ಶಿಕ್ಷಾಮವಾಪ್ಯ ದ್ವಿಜಪುಙ್ಗವಾನಾಂ ತ್ವದ್ಭಕ್ತಿರಪ್ಯೇಷು ಹಿ ಕಾಚನ ಸ್ಯಾತ್ ॥೧೧.೧೯೬

ಇದೀಗ ಭಾಗವತರಾದ  ದೊಡ್ಡ-ದೊಡ್ಡ ರಾಜವಂಶದಲ್ಲಿ ಹುಟ್ಟಿರುವ ಆ ದೈತ್ಯರಿಗೆ, ಧರ್ಮದಲ್ಲಿ ಬುದ್ಧಿಯು ಉಂಟಾಗಿದೆ. (ಪಾಪರಹಿತವಾದ ಧಾರ್ಮಿಕ ಪ್ರಜ್ಞೆ ಅವರಲ್ಲಿ ಬೆಳೆಯುವಂತಾಗಿದೆ). ಶ್ರೇಷ್ಠ ಬ್ರಾಹ್ಮಣರಿಂದ ಶಿಕ್ಷಣವನ್ನು ಹೊಂದಿದ ಅವರಲ್ಲಿ ಎಲ್ಲೋ ಒಂದು ಸಣ್ಣಅಂಶದಲ್ಲಿ ನಿನ್ನ ಭಕ್ತಿಯೂ ಉಂಟಾಗಿರಬಹುದು.

ತ್ವದ್ಭಕ್ತಿಲೇಶಾಭಿಯುತಃ ಸುಕರ್ಮ್ಮಾ ವ್ರಜೇನ್ನ ಪಾಪಾಂ ತು ಗತಿಂ ಕಥಞ್ಚಿತ್ ।
ದೈತ್ಯೇಶ್ವರಾಣಾಂ ಚ ತಮೋsನ್ಧಮೇವ ತ್ವಯೈವ ಕ್ಲೃಪ್ತಂ ನನು ಸತ್ಯಕಾಮ ॥೧೧.೧೯೭  

ನಿನ್ನ ಭಕ್ತಿಲೇಶವನ್ನು ಹೊಂದಿ ಸತ್ಕರ್ಮವನ್ನು ಮಾಡಿದವನು ಪಾಪಿಷ್ಠವಾದ ನರಕಾದಿ ಗತಿಯನ್ನು ಯಾವ ರೀತಿಯಲ್ಲಿಯೂ ಕೂಡಾ ಹೊಂದಲಾರ. ಎಲೋ ಸತ್ಯಕಾಮನೇ,  ಸತ್ಯಸಂಕಲ್ಪನೇ,  ದೈತ್ಯೇಯೇಶ್ವರರಿಗೆ ಅಂಧಂತಮಸ್ಸು ನಿನ್ನಿಂದಲೇ ನಿರ್ಧರಿಸಲ್ಪಟ್ಟಿದೆಯಲ್ಲವೇ.

ಧರ್ಮಸ್ಯ ಮಿತ್ಥ್ಯಾತ್ವಭಯಾದ್ ವಯಂ ತ್ವಾಮಥಾಪಿವಾ ದೈತ್ಯಶುಭಾಪ್ತಿಭೀಷಾ
ಸಮ್ಪ್ರಾರ್ತ್ಥಯಾಮೋ ದಿತಿಜಾನ್ ಸುಕರ್ಮ್ಮಣಸ್ತ್ವದ್ಭಕ್ತಿತಶ್ಚ್ಯಾವಯಿತುಂ ಚ ಶೀಘ್ರಮ್ ॥೧೧.೧೯೮

ಧರ್ಮ  ಸುಳ್ಳಾದೀತು (ಅಂದರೆ: ದೈತ್ಯರ  ಸ್ವಭಾವಕ್ಕೆ ಯೋಗ್ಯವಾದ ಗತಿ ಅಂಧಂತಮಸ್ಸು. ಆದರೆ ಇದೀಗ ರಾಜವಂಶದಲ್ಲಿ ಹುಟ್ಟಿದ ಅವರು ಮಾಡುತ್ತಿರುವ ಕೆಲಸ ಅಂಧಂತಮಸ್ಸಿಗೆ ಅವಕಾಶ ನೀಡುವುದಿಲ್ಲ. ಅಯೋಗ್ಯರಾದ ಅವರು ಭಕ್ತಿ ಮಾಡಿದರೂ ಸದ್ಗತಿಯನ್ನು ಪಡೆಯಲಾರರು ಎಂದರೆ ವೇದವಾಕ್ಯ ಸುಳ್ಳಾಗುತ್ತದೆ. ಏಕೆಂದರೆ ಯಾರು ನಿನ್ನನ್ನು ಭಜಿಸುತ್ತಾನೋ ಅವನು ಅಂಧಂತಮಸ್ಸನ್ನು ಹೊಂದುವುದಿಲ್ಲ ಎನ್ನುವುದು ವೇದವಾಕ್ಯ), ಧರ್ಮದ ಪ್ರಾಮಾಣ್ಯಕ್ಕಾಗಿ ಅವರಿಗೆ ಒಳ್ಳೆ ಗತಿಯನ್ನು ಕೊಡುತ್ತೇನೆ ಎಂದರೆ: ದೈತ್ಯರಿಗೆ ಅಯೋಗ್ಯವಾಗಿರುವ ಶುಭಗತಿಯು ಬರುತ್ತದೆ. ಈ ದ್ವಂದ್ವದ ಭಯದಿಂದ ತತ್ತರಿಸಿ [೧. ಧರ್ಮಸ್ಯ ಮಿಥ್ಯಾತ್ವಭಯಾದ್, ೨. ದೈತ್ಯಶುಭಾಪ್ತಿಭೀಷಾ ಈ ಎರಡು ಭಯಗಳಿಂದ ತತ್ತರಿಸಿ ]. ‘ದೈತ್ಯರನ್ನು ಸುಕರ್ಮದಿಂದ, ನಿನ್ನ ಭಕ್ತಿಯಿಂದಲೂ ಕೂಡಾ ಚ್ಯುತಿಗೊಳಿಸಲು, ಅವರನ್ನು ಜಾರುವಂತೆ ಮಾಡಲು ನಿನ್ನನ್ನು ಬೇಡುತ್ತಿದ್ದೇವೆ. 

No comments:

Post a Comment