ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, January 18, 2019

Mahabharata Tatparya Nirnaya Kannada 11.189-11.194


ತಸ್ಮಿನ್ ಹತೇ ದಾನವಲೋಕಪಾಲೇ ದಿತೇಃ ಸುತಾ ದುದ್ರುವುರಿನ್ದ್ರಭೀಷಿತಾಃ ।
ತಾನ್ ವಿಪ್ರಚಿತ್ತಿರ್ವಿನಿವಾರ್ಯ್ಯ ಧನ್ವೀ ಸಸಾರ ಶಕ್ರಪ್ರಮುಖಾನ್ ಸುರೋತ್ತಮಾನ್ ೧೧.೧೮೯    

ತಮ್ಮ ಲೋಕವನ್ನು ಪಾಲನೆ ಮಾಡುತ್ತಿದ್ದ, ಒಡೆಯನಾದ ಶಂಬರನು ಇಂದ್ರನಿಂದ ಸಾಯುತ್ತಿರಲು ದೈತ್ಯರು ಭಯಗೊಂಡು ಓಡಲು ಪ್ರಾರಂಭಿಸಿದರು. ಓಡುತ್ತಿರುವ ಅವರನ್ನು ‘ವಿಪ್ರಚಿತ್ತಿ’ ಎಂಬ ಅಸುರನು ತಡೆದನು. ಬಿಲ್ಲನ್ನು ಹಿಡಿದ ವಿಪ್ರಚಿತ್ತಿ, ಇಂದ್ರನೇ ಮೊದಲಾಗಿರುವ ದೇವತೆಗಳನ್ನು ಎದುರುಗೊಂಡನು.

ವರಾದಜೇಯೇನ ವಿಧಾತುರೇವ ಸುರೋತ್ತಮಾಂಸ್ತೇನ ಶರೈರ್ನ್ನಿಪಾತಿತಾನ್ ।
ನಿರೀಕ್ಷ್ಯ ಶಕ್ರಂ ಚ ವಿಮೋಹಿತಂ ದ್ರುತಂ ನ್ಯವಾರಯತ್ ತಂ ಪವನಃ ಶರೌಘೈಃ ॥೧೧.೧೯೦    

ಬ್ರಹ್ಮದೇವರ ವರದಿಂದ  ಅಜೇಯನಾಗಿದ್ದ ವಿಪ್ರಚಿತ್ತಿಯ ಬಾಣಗಳಿಂದ ಕೆಳಗೆ ಬಿದ್ದ ದೇವತೆಗಳನ್ನು ಮತ್ತು ಮೂರ್ಛೆಗೊಂಡ ಇಂದ್ರನನ್ನು ನೋಡಿದ ಮುಖ್ಯಪ್ರಾಣನು, ತಕ್ಷಣ ತನ್ನ ಬಾಣಗಳಿಂದ ವಿಪ್ರಚಿತ್ತಿಯನ್ನು ತಡೆದನು.

ಅಸ್ತ್ರಾಣಿ ತಸ್ಯಾಸ್ತ್ರವರೈರ್ನ್ನಿವಾರ್ಯ್ಯ ಚಿಕ್ಷೇಪ ತಸ್ಯೋರಸಿ ಕಾಞ್ಚನೀಮ್ ಗದಾಮ್ ।
ವಿಚೂರ್ಣ್ಣಿತೋsಸೌ ನಿಪಪಾತ ಮೇರೌ ಮಹಾಬಲೋ ವಾಯುಬಲಾಭಿನುನ್ನಃ ೧೧.೧೯೧  

ಪವನನು ವಿಪ್ರಚಿತ್ತಿಯ ಅಸ್ತ್ರಗಳನ್ನು ತನ್ನ ಅಸ್ತ್ರಗಳಿಂದ ತಡೆದು, ವಿಪ್ರಚಿತ್ತಿಯ ಎದೆಯಮೇಲೆ ಬಂಗಾರದ ಗದೆಯನ್ನು ಎಸೆದನು. ಹೀಗೆ ಮುಖ್ಯಪ್ರಾಣನ ಬಲದಿಂದ ಪ್ರೇರಿಸಿಕೊಳ್ಳಲ್ಲಪಟ್ಟ   ವಿಪ್ರಚಿತ್ತಿಯು ಮೇರುಪರ್ವತದ ಮೇಲೆ  ಬಿದ್ದು ಪುಡಿಪುಡಿಯಾಗಿ ಸತ್ತನು.

ಅಥಾsಸಸಾದಾsಶು ಸ ಕಾಲನೇಮೀಸ್ತ್ವದಾಜ್ಞಯಾ ಯಸ್ಯ ವರಂ ದದೌ ಪುರಾ ।
ಸರ್ವೈರಜೇಯತ್ವಮಜೋsಸುರಃ ಸ ಸಹಸ್ರಶೀರ್ಷೋ ದ್ವಿಸಹಸ್ರಬಾಹುಯುಕ್ ॥೧೧.೧೯೨  

ವಿಪ್ರಚಿತ್ತಿ ಸತ್ತಮೇಲೆ, ಬ್ರಹ್ಮನು ಯಾವ ಕಾಲನೇಮಿಗೆ ನಿನ್ನ ಆಜ್ಞೆಯಂತೆ ಅಜೇಯತ್ವದ ವರವನ್ನು ಕೊಟ್ಟಿದ್ದನೋ, ಅಂತಹ ಸಾವಿರ ತಲೆಗಳು ಮತ್ತು ಎರಡು ಸಾವಿರ ಬಾಹುಗಳುಳ್ಳ  ಕಾಲನೇಮಿ ಯುದ್ಧಕ್ಕೆ ಬಂದನು.
 [ಮಹಾಭಾರತದ ಸಭಾಪರ್ವದಲ್ಲಿ(೫೧.೨೧) ಈ ವಿವರ ಕಾಣಸಿಗುತ್ತದೆ: ‘ಕಾಲನೇಮಿರಿತಿ ಖ್ಯಾತೋ ದಾನವಃ ಪ್ರತ್ಯದೃಶ್ಯತಾ॥ ಶತ್ರುಪ್ರಹರಣೇ ಘೋರಃ ಶತಬಾಹುಃ ಶತಾನನಃ’. ಹರಿವಂಶದಲ್ಲೂ(೧.೪೬.೫೦) ಕೂಡಾ ಈ ವಿವರ ಬರುತ್ತದೆ: ಶತಪ್ರಹರಣೋದಗ್ರಃ ಶತಬಾಹುಃ ಶತಾನನಃ ಶತಶೀರ್ಷಃ ಸ್ಥಿತಃ ಶ್ರೀಮಾನ್ ಶತಶೃಙ್ಗ ಇವಾಚಲಃ’].

ತಮಾಪತನ್ತನಂ ಪ್ರಸಮೀಕ್ಷ್ಯ ಮಾರುತಸ್ತ್ವದಾಜ್ಞಯಾ ದತ್ತವರಸ್ತ್ವಯೈವ ।
ಹನ್ತವ್ಯ ಇತ್ಯಸ್ಮರದಾಶು ಹಿ ತ್ವಾಂ ತದಾssವಿರಾಸೀಸ್ತ್ವಮನನ್ತಪೌರುಷಃ ॥೧೧.೧೯೩

ಯುದ್ಧಭೂಮಿಗೆ ಬರುತ್ತಿರುವ ಕಾಲನೇಮಿಯನ್ನು ಕಂಡ  ಮಾರುತನು,  ‘ನಿನ್ನ ಆಜ್ಞೆಯಂತೆ ವರವನ್ನು ಪಡೆದಿರುವ ಈತ ನಿನ್ನಿಂದಲೇ ಕೊಲ್ಲಲು ಯೋಗ್ಯನಾದವನು’ ಎನ್ನುವ  ಅಭಿಪ್ರಾಯವುಳ್ಳವನಾಗಿ ನಿನ್ನನ್ನು ಸ್ಮರಿಸಿದ. [ನಿನ್ನ ಸಂಕಲ್ಪ ಕಾಲನೇಮಿಯನ್ನು ನೀನೇ ಕೊಲ್ಲಬೇಕು ಎಂದಿತ್ತು. ಅದನ್ನು ಮುಖ್ಯಪ್ರಾಣ ಸ್ಮರಣೆ ಮಾಡಿ, ನಿನ್ನನ್ನು ಸ್ಮರಿಸಿದ. (ಮುಖ್ಯಪ್ರಾಣನ ಸಂಕಲ್ಪ ಎಂದೂ ಶ್ರೀಹರಿಗೆ ವಿರುದ್ಧವಾಗಿರುವುದಿಲ್ಲ. ಭಗವಂತನ ಸಂಕಲ್ಪವನ್ನು ತಿಳಿದಿದ್ದ ಮುಖ್ಯಪ್ರಾಣ ತಕ್ಷಣ ಆತನನ್ನು ಸ್ಮರಿಸಿದ)] ಆಗ ನೀನು ಅನಂತಪರಾಕ್ರಮವುಳ್ಳವನಾಗಿ ಆವೀರ್ಭೂತನಾದೆ.

ತಮಸ್ತ್ರಶಸ್ತ್ರಾಣಿ ಬಹೂನಿ ಬಾಹುಭಿಃ ಪ್ರವರ್ಷಮಾಣಂ ಭುವನಾಪ್ತದೇಹಮ್
ಚಕ್ರೇಣ ಬಾಹೂನ್ ವಿನಿಕೃತ್ಯ ಕಾನಿ ಚ ನ್ಯವೇದಯಶ್ಚಾsಶು ಯಮಾಯ ಪಾಪಮ್ ॥೧೧.೧೯೪     

ಬಹಳವಾಗಿರುವ  ಅಸ್ತ್ರ-ಶಸ್ತ್ರಗಳನ್ನು ತನ್ನೆಲ್ಲ ಕೈಗಳಿಂದ ಎಸೆಯುತ್ತಾ, ಭೂಮಿಯೆಲ್ಲಾ ವ್ಯಾಪಿಸಿರುವ ಆ ಕಾಲನೇಮಿಯ ಕೈಗಳನ್ನು ಮತ್ತು ಶಿರಸ್ಸುಗಳನ್ನು ಸುದರ್ಶನದಿಂದ ಛೇದಿಸಿದ ನೀನು, ಭೂಮಿಯಲ್ಲಿ ಬಿದ್ದ ದೇಹವುಳ್ಳ ಅವನನ್ನು ಯಮನಿಗೆ ಕೊಟ್ಟೆ.

No comments:

Post a Comment