ಭ್ರಾತೃಮಾತ್ರಾದಿಷು ಸ್ನೇಹಾತ್ ಕ್ಷಿಪ್ರಮಾತ್ಮವಿಮೋಕ್ಷಣಮ್ ।
ಇಚ್ಛನ್ನಪಿ ನ ಮೋಕ್ಷಾಯ ಯತ್ನಂ ಚಕ್ರೇ ವೃಕೋದರಃ ॥೨೨.೩೬೬॥
ತನ್ನ ಅಣ್ಣ-ತಮ್ಮಂದಿರಲ್ಲಿ, ತಾಯಿ ಹಾಗೂ ದ್ರೌಪದಿ ಮೊದಲಾದವರಲ್ಲಿನ ಸ್ನೇಹದಿಂದಾಗಿ,
ಬೇಗನೆ ತನ್ನ ಬಿಡುಗಡೆಯನ್ನು ಬಯಸಿದರೂ(ತಡವಾದಲ್ಲಿ ಅವರು ಸಂಕಟಪಡಬಹುದು ಎಂದು ಚಿಂತಿಸಿದರೂ), ಭೀಮಸೇನನು
ತನ್ನನ್ನು ಬಿಡಿಸಿಕೊಳ್ಳುವ ಪ್ರಯತ್ನವನ್ನು ಮಾತ್ರ ಮಾಡಲಿಲ್ಲ.
ಸರ್ವದೇವಮುನೀನ್ದ್ರಾಣಾಂ ತಪ ಆದಾತುಮತ್ರಗಮ್ ।
ಭ್ರಾತ್ರಾದಿಷು ಸ್ನೇಹವಶಾನ್ನ ಸ್ಥಾತವ್ಯಮಿಹೇತ್ಯಪಿ ॥೨೨.೩೬೭॥
ಮನ್ವಾನಃ ಕಾಲತೋ ಭಙ್ಗಂ ಸ್ವಯಮೇವೈಷ ಯಾಸ್ಯತಿ ।
ಆಜ್ಞಯಾ ವಾಸುದೇವಸ್ಯ ದಾರ್ಢ್ಯಾದ್ ದೇಹಸ್ಯ ಮೇ ತಥಾ ॥೨೨.೩೬೮॥
‘ಎಲ್ಲಾ ದೇವತೆಗಳ, ಮುನಿಶ್ರೇಷ್ಠರ ತಪಸ್ಸನ್ನು ನಹುಷನಿಂದ ಸ್ವೀಕರಿಸಲು ನಾನು ಇಲ್ಲಿ ಈ ಹಾವಿನ
ತೆಕ್ಕೆಯಲ್ಲಿ ಇರಬೇಕು. ಆದರೆ ಅಣ್ಣ-ತಮ್ಮಂದಿರ
ಸ್ನೇಹಾತಿಶಯವಶದಿಂದ ಹೆಚ್ಚುಕಾಲ ಇಲ್ಲಿ ಇರಬಾರದು’ ಎಂದು ಭೀಮಸೇನ ಮನಸ್ಸಿನಲ್ಲಿ ಚಿಂತಿಸಿದರೂ, ಈ ಅಜಗರರೂಪಿ ನಹುಷ ಕಾಲಾಂತರದಲ್ಲಿ (ಸ್ವಲ್ಪ ಸಮಯದ ನಂತರ) ಪರಮಾತ್ಮನ ಆಜ್ಞೆಯ
ಕಾರಣದಿಂದಲೂ, ಹಾಗೆಯೇ ನನ್ನಲ್ಲಿರುವ ದೇಹದಾರ್ಢ್ಯ ಸಹಿಸದೇ ಅವನಾಗಿಯೇ ಬಿಟ್ಟು ಹೋಗುತ್ತಾನೆ
ಎಂದುಕೊಂಡು ಸುಮ್ಮನಿದ್ದನು.
ಸ್ರಸ್ತಾಙ್ಗೇ ಪತಿತೇ ಸರ್ಪ್ಪೇ ಯಾಸ್ಯಾಮೀತಿ ವಿಚಿನ್ತಯನ್ ।
ತಸ್ಥೌ ಭೀಮೋ ಹರಿಂ ದ್ಧ್ಯಾಯನ್ ಸ್ವಭಾವಾನ್ನ ತದಿಚ್ಛಯಾ ॥೨೨.೩೬೯॥
‘ನಹುಷನು ತನ್ನ ಬಲಹ್ರಾಸಗೊಂಡು ಬಿದ್ದ ಮೇಲೆ ನಾನು ಇಲ್ಲಿಂದ ತೆರಳುತ್ತೇನೆ ಎಂದು ಚಿಂತಿಸಿದ
ಭೀಮಸೇನನು, ಪರಮಾತ್ಮನನ್ನು ತನ್ನ ಸ್ವಭಾವದಂತೆ ಧ್ಯಾನ ಮಾಡುತ್ತಾ ನಿಂತನು. ಅವನು ಸ್ವಭಾವಸಹಜವಾಗಿ
ಧ್ಯಾನ ಮಾಡುತ್ತಿದ್ದನೇ ಹೊರತು ಅಜಗರದಿಂದ ಬಿಡುಗಡೆ ಬಯಸಿ ಧ್ಯಾನಿಸುತ್ತಿರಲಿಲ್ಲ.
ತದೈವ ಬ್ರಹ್ಮವಚನಾತ್
ಪೂರ್ವೋಕ್ತಾತ್ ಕೇಶವಾಜ್ಞಯಾ ।
ಬಲಂ ತಪಶ್ಚ ಸರ್ವಸ್ಯ ತತ್ಸ್ಥಮಾಯಾದ್ ವೃಕೋದರಮ್ ॥೨೨.೩೭೦॥
ಆಗಲೇ, ಬ್ರಹ್ಮದೇವರ ಮಾತಿನಿಂದಲೂ, ಭಗವಂತನ ಆಜ್ಞೆಯಿಂದಲೂ, ನಹುಷನಲ್ಲಿದ್ದ ದೇವಾದಿಗಳೆಲ್ಲರ
ಬಲ ಹಾಗೂ ತಪಸ್ಸು ಭೀಮಸೇನನನ್ನು ಆಶ್ರಯಿಸಿತು.
ಪೂರಿತೇ ನಹುಷಸ್ಥೇನ ತಪಸಾ ಚ ಬಲೇನ ಚ ।
ಭೀಮೇ ಸ ನಹುಷೋSಥಾSಸೀತ್
ಸ್ರಸ್ತಭೋಗಃ ಶನೈಃ ಶನೈಃ ॥೨೨.೩೭೧॥
ನಹುಷನಲ್ಲಿರುವ ತಪಸ್ಸಿನಿಂದ ಹಾಗೂ ಬಲದಿಂದ ಭೀಮಸೇನನು ತುಂಬಲ್ಪಡುತ್ತಿರಲು, ನಹುಷನು ಬಲಹ್ರಾಸಗೊಂಡ
ಮೈಯುಳ್ಳವನಾಗಿ ನಿಧಾನವಾಗಿ ಭೀಮಸೇನನ ಮೇಲಿನ ಬಂಧನವನ್ನು ಸಡಿಲಗೊಳಿಸಿದನು.
No comments:
Post a Comment