ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 16, 2022

Mahabharata Tatparya Nirnaya Kannada 22-344-350

 

ಸ ಶಚೀಪ್ರತಿಷೇಧಾರ್ತ್ಥಮಗಸ್ತ್ಯೇನ ಮಹಾತ್ಮನಾ ।

ವೇದಪ್ರಾಮಾಣ್ಯವಿಷಯೇ ಪೃಷ್ಟೋ ನೇತ್ಯಾಹ ಮೂಢಧೀಃ ।

ಪ್ರಮಾಣಮಿತಿ ತೇನೋಕ್ತಃ ಶಿರಸ್ಯೇನಂ ಪದಾSಹನತ್ ॥೨೨.೩೪೪॥

 

ಶಚೀದೇವಿಯನ್ನು ಬಯಸುತ್ತಿರುವ ನಹುಷನನ್ನು ಪ್ರತಿಷೇಧ ಮಾಡಲು, ಮಹಾತ್ಮನಾಗಿರುವ ಅಗಸ್ತ್ಯರಿಂದ ವೇದಪ್ರಾಮಾಣ್ಯ ವಿಷಯದಲ್ಲಿ ಪ್ರಶ್ನೆಮಾಡಲ್ಪಟ್ಟವನಾಗಿ, ಮೊಹಿತವಾಗಿರುವ ಬುದ್ಧಿಯುಳ್ಳವನಾದ ನಹುಷ ‘ವೇದಗಳು ಪ್ರಮಾಣವಲ್ಲ’ ಎಂದು ಹೇಳಿದ. ಅಗಸ್ತ್ಯರಿಂದ ಪ್ರತಿಯಾಗಿ ‘ವೇದವು ಪ್ರಮಾಣ’ ಎಂದು ಹೇಳಲ್ಪಟ್ಟಾಗ ನಹುಷ ಅಗಸ್ತ್ಯರ ತಲೆಗೆ ಕಾಲಿನಿಂದ ಒದ್ದ.

[ಪಲ್ಲಕ್ಕಿಯನ್ನು ಹೊತ್ತ ಅಗಸ್ತ್ಯರು ದಾರಿಯಲ್ಲಿ ನಹುಷನನ್ನು ಕುರಿತು ‘ವೇದ ಪ್ರಮಾಣ ಹೌದೋ-ಅಲ್ಲವೋ ಎಂದು ಪ್ರಶ್ನಿಸಿದರು. ಏಕೆ ಹೀಗೆ ಕೇಳಿದರು ಎಂದರೆ- ವೇದ ಪ್ರಮಾಣ ಎಂದು ನಹುಷ ಒಪ್ಪಿದರೆ- ಪರಸ್ತ್ರೀ ಸಂಗವನ್ನು ಬಯಸಬಾರದು ಎಂದು ವೇದ ಹೇಳುತ್ತದೆ(ಶಚೀದೇವಿಯ ಸಂಸರ್ಗವನ್ನು ಮಾಡಬಾರದು ಎಂದಾಗುತ್ತದೆ). ಇನ್ನು ವೇದ ಪ್ರಾಮಾಣ್ಯವನ್ನು ಒಪ್ಪುವುದಿಲ್ಲ ಎಂದು ಇಂದ್ರಪದವಿಯನ್ನು ಅನುಭವಿಸುತ್ತಿರುವ ನಹುಷ ಹೇಳಿದರೆ, ಅವನ ಅನುಭವಗಳೆಲ್ಲವೂ ಸುಳ್ಳು ಎಂದಾಗುತ್ತದೆ. ಹೀಗಾಗಿ ನಹುಷನನ್ನು ಶಚೀದೇವಿಯ ಬಳಿ ಹೋಗದಂತೆ ತಡೆಯಲು ಅಗಸ್ತ್ಯರು ಈ ರೀತಿ ಪ್ರಶ್ನೆ ಮಾಡಿದರು. ನಹುಷ ಸಜ್ಜನನೇ, ಆದರೆ ಮಿತಿಮೀರಿದ ಅಹಂಕಾರದಿಂದ ಆ ರೀತಿ ವೇದವನ್ನು ನಿರಾಕರಿಸಿ ಮಾತನಾಡಿದ.  (ದುರ್ಜನರು, ನಾಸ್ತಿಕರು ತಮ್ಮ ಕೆಟ್ಟ ಕೆಲಸಕ್ಕೆ ವೇದದಲ್ಲಿ ಅವಕಾಶವಿರುವುದಿಲ್ಲ ಎಂದು ವೇದವನ್ನು ನಿರಾಕರಿಸಿ ಮಾತನಾಡುವುದು ಸರ್ವೇ ಸಾಮಾನ್ಯ)]

 

ತದಾ ಭೃಗುಂ ತಸ್ಯ ಜಟಾಸು ಲೀನಂ ಕದಾSಪಿ ತಸ್ಯಾಕ್ಷಿಪಥಂ ನ ಯಾತಮ್ ।

ಆವಿಶ್ಯ ಕಞ್ಜಪ್ರಭವಃ ಶಶಾಪ ವ್ರಜಾSಶು ಪಾಪಾಜಗರತ್ವಮೇವ ॥೨೨.೩೪೫॥

 

ಆಗ ನಹುಷನ ಕಣ್ಣಿಗೆ ಕಾಣದ, ಅಗಸ್ತ್ಯರ ಜಟೆಯಲ್ಲಿ ಅಡಗಿರುವ ಭೃಗುಋಷಿಯನ್ನು ಬ್ರಹ್ಮದೇವರು ಪ್ರವೇಶಮಾಡಿ ‘ಪಾಪಿಷ್ಠನಾದ ನಹುಷನೇ, ನೀನು ಉರಗ ಶರೀರವನ್ನು ಹೊಂದು ಎಂದು  ಶಾಪಕೊಟ್ಟರು.

[ಮಹಾಭಾರತದಲ್ಲಿ ಈ ಕುರಿತ ವಿವರಗಳನ್ನು ಕಾಣಬಹುದು: ‘ಅಥಾಗಸ್ತ್ಯಮೃಷಿಶ್ರೇಷ್ಠಂ ವಾಹನಾಯಾSಜುಹಾವ ಹ । ......ತತೋ ಭೃಗುರ್ಮಹಾತೇಜಾ ಮೈತ್ರಾವರುಣಿಮಬ್ರವೀತ್ । ನಿಮೀಲಯ ಸ್ವನಯನೇ ಜಟಾಂ ಯಾವದ್ ವಿಶಾಮಿ ತೇ ।  ಸುರೇನ್ದ್ರಪಾತನಾಯೇತಿ ಸ ಚ ನೇತ್ರೇ ನ್ಯಮೀಲಯತ್ ।  ತತೋSಗಸ್ತ್ಯಸ್ಯಾಥ ಜಟಾಂ ದೃಷ್ಟ್ವಾ ಪ್ರಾವಿಶದಚ್ಯುತಃ  । ಭೃಗುಃ ಸ ಸುಮಹಾತೇಜಾ ಪಾತನಾಯ ನೃಪಸ್ಯ ಚ (ಅನುಶಾಸನಪರ್ವ ೧೫೭.೧೪-೧೬)

ತನ್ನನ್ನು ಹೊರಲೆಂದು ಅಗಸ್ತ್ಯನನ್ನು ನಹುಷ ಕರೆದ.  ‘ನಹುಷನನ್ನು ಕೆಳಗೆ ಬೀಳಿಸಬೇಕು. ಅದಕ್ಕಾಗಿ ನಾನು ನಿನ್ನ ಜಟೆಯೊಳಗೆ ಪ್ರವೇಶ ಮಾಡುತ್ತೇನೆ ಎಂದು ಅಗಸ್ತ್ಯರನ್ನು ಕುರಿತು ಭೃಗು ಮಹರ್ಷಿಗಳು ಹೇಳಿ ಅವರ ಜಟೆಯನ್ನು ಹೊಕ್ಕರು. ‘ಪಿತಾಮಹನಿಯೋಗೇನ ಭವನ್ತಂ ಸೋSಹಮಾಗತಃ । ಪ್ರತಿಕರ್ತುಂ ಬಲವತಿ ನಹುಷೇ ದರ್ಪಮೋಹಿತೇ’ (ಅನುಶಾಸನಪರ್ವ ೧೫೬.೨೨) ಬ್ರಹ್ಮದೇವರ ಆಜ್ಞೆಯಂತೆ ಮತ್ತು ಬ್ರಹ್ಮದೇವರ ಪ್ರವೇಶದಿಂದಕೂಡಿ ನಾನು ನಿನ್ನನ್ನು ಪ್ರವೇಶಮಾಡುತ್ತೇನೆ ಎಂದು ಭೃಗು ಹೇಳಿರುವ ಮಾತು ಇದಾಗಿದೆ.]

 

[ಬ್ರಹ್ಮದೇವರು ಯಾವ ಶಾಪ ನೀಡಿದರು ಎನ್ನುವುದನ್ನು ವಿವರಿಸುತ್ತಾರೆ:]

 

ಷಷ್ಠೇ ಕಾಲೇ ಯಸ್ತ್ವಯಾSಸಾದಿತಃ ಸ್ಯಾತ್ ಸ ತೇ ವಶಂ ಯಾತು ಬಲಾಧಿಕೋSಪಿ ।

ಯದಾ ಗೃಹೀತಂ ಪುರುಷಂ ನಿಹನ್ತುಂ ನ ಶಕ್ಷ್ಯಸೇ ಯದಿ ಸ ತ್ವದ್ಗೃಹೀತಃ ।

ಶಕ್ತೋSಪಿ ನಾSತ್ಮಾನಮಭಿಪ್ರಮೋಚಯೇತ್ ತದಾSಸ್ಯ ಸ್ಯಾತ್ ತ್ವತ್ತಪೋSಗ್ರ್ಯಂ ಬಲಂ ಚ ॥೨೨.೩೪೬॥

 

‘ನೀನು ಅಜಗರನಾಗಿ ಬೀಳು. ಒಮ್ಮೆ ಮೂರು ದಿನಗಳಾದಮೇಲೂ ಊಟ ಸಿಗದೇ ನೀನಿರುವಾಗ   (ಊಟವಿಲ್ಲದ ಆರನೆಯ ಕಾಲದಲ್ಲಿ) ನಿನ್ನಿಂದ ಹೊಂದಲ್ಪಟ್ಟ ಒಬ್ಬ ವ್ಯಕ್ತಿ,  ಬಲದಿಂದ ಶ್ರೇಷ್ಠನಾಗಿದ್ದರೂ ಕೂಡಾ, ಅವನು ನಿನ್ನ ವಶನಾಗಲಿ. ಯಾವಾಗ ನೀನು ಹಿಡಿದ ವ್ಯಕ್ತಿಯನ್ನು ಕೊಲ್ಲಲು ನೀನು ಸಮರ್ಥನಾಗುವುದಿಲ್ಲವೋ, ಒಂದುವೇಳೆ ನಿನ್ನಿಂದ ಗ್ರಹೀತನಾದ ಅವನೂ ನಿನ್ನನ್ನು ನಿಗ್ರಹಿಸಲು ಶಕ್ತನಾಗಿದ್ದರೂ ತನ್ನನ್ನು ಬಿಡಿಸಿಕೊಳ್ಳುವುದಿಲ್ಲವೋ, ಆಗ ನಿನ್ನ ಬಲವೂ, ನಿನ್ನ ತಪಸ್ಸೂ ಅವನಿಗೆ ವರ್ಗಾವಣೆಯಾಗುವುದು.  

 

ಸರ್ವದೇವಮುನೀನಾಂ ಯತ್ ತಪಸ್ತ್ವಾಂ ಸಮುಪಾಶ್ರಿತಮ್ ।

ತಚ್ಚ ಸರ್ವಂ ತಮೇವೈತಿ ನಾತ್ರ ಕಾರ್ಯ್ಯಾ ವಿಚಾರಣಾ            ॥೨೨.೩೪೭॥

 

ಯಾವ ದೇವತೆಗಳ ಮತ್ತು ಮುನಿಗಳ ತಪಸ್ಸು ನಿನ್ನನ್ನು ಆಶ್ರಯಿಸಿಕೊಂಡಿದೆಯೋ. ಅದೆಲ್ಲವೂ ಕೂಡಾ ಅವನನ್ನೇ ಹೊಂದುತ್ತದೆ. ಈ ವಿಚಾರದಲ್ಲಿ ಯಾವ ವಿಚಾರಣೆಯನ್ನೂ ಮಾಡಕೂಡದು.

 

ಯದಾ ಪ್ರಶ್ನಾಂಸ್ತ್ವದೀಯಾಂಶ್ಚ ಕಶ್ಚಿತ್ ಪರಿಹರಿಷ್ಯತಿ ।

ತದಾ ಗನ್ತಾSಸಿ ಚ ದಿವಂ ವಿಸೃಜ್ಯಾSಜಗರಂ ತನುಮ್  ॥೨೨.೩೪೮॥

 

ಯಾವಾಗ ನಿನ್ನೆಲ್ಲಾ ಪ್ರಶ್ನೆಗಳನ್ನು ಯಾರೋ ಒಬ್ಬ ಪರಿಹರಿಸುತ್ತಾನೋ, ಆಗ ಹೆಬ್ಬಾವಿನ ದೇಹವನ್ನು  ಬಿಟ್ಟು ನೀನು ಸ್ವರ್ಗವನ್ನು ಹೊಂದುವೆ.

 

ಸ್ಮೃತಿಶ್ಚ ಮತ್ಪ್ರಸಾದೇನ ಸರ್ವದಾ ತೇ ಭವಿಷ್ಯತಿ ।

ಭೃಗುದೇಹಗತೇನೈವಂ ಶಪ್ತಃ ಕಮಲಯೋನಿನಾ ॥೨೨.೩೪೯॥

 

ಪಪಾತಾಜಗರೋ ಭೂತ್ವಾ ನಹುಷಃ ಕ್ಷಣಮಾತ್ರತಃ ।

ಇನ್ದ್ರೋSಪ್ಯವಾಪ ಸ್ವಂ ಸ್ಥಾನಮಿಷ್ಟ್ವಾ ವಿಷ್ಣುಂ ವಿಪಾಪಕಃ ॥೨೨.೩೫೦॥

 

ನನ್ನ ಅನುಗ್ರಹದಿಂದ ನಿನಗೆ ಪೂರ್ವಜನ್ಮದ ಸ್ಮೃತಿ ಯಾವಾಗಲೂ ಇರುತ್ತದೆ’. ಹೀಗೆ ಭೃಗುವಿನ ದೇಹದಲ್ಲಿರುವ ಬ್ರಹ್ಮದೇವರಿಂದ ಶಪಿತನಾದ ನಹುಷ ಒಂದು ಕ್ಷಣದಲ್ಲಿಯೇ ಹೆಬ್ಬಾವಾಗಿ ಕೆಳಗಡೆ ಬಿದ್ದ. ಅದೇ ಸಮಯದಲ್ಲಿ ಇತ್ತ ಇಂದ್ರ  ತನ್ನ ಪಾಪವನ್ನು ಕಳೆದುಕೊಂಡು ವಿಷ್ಣುವನ್ನು ಅಶ್ವಮೇದದಿಂದ ಹೋಮಿಸಿ, ತನ್ನ ಸ್ಥಾನವಾದ ಸ್ವರ್ಗವನ್ನು ಹೊಂದಿದ.

No comments:

Post a Comment