ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, October 12, 2022

Mahabharata Tatparya Nirnaya Kannada 22-337-343

 

ನೈವ ಶತ್ರೂನನುತ್ಸಾದ್ಯ ನಾನಾದಾಯ ಮಹದ್ ಯಶಃ ।

ನಾಕೃತ್ವಾ ವಾಸುದೇವಾಜ್ಞಾಂ ರಾಜ್ಞಾಂ ಮುಖ್ಯಗತಿರ್ಭವೇತ್ ॥೨೨.೩೩೭॥

 

ತದನ್ಯೇಷಾಂ ತು ವರ್ಣ್ಣಾನಾಂ ಕ್ಷಮಾ ಬಾಹ್ಯೇಷು ಶತ್ರುಷು ।

ಪ್ರಾಯೋ  ಧರ್ಮ್ಮ ಇತಿ ಪ್ರೋಕ್ತೋ ಹರೇರಾಜ್ಞಾSಖಿಲಸ್ಯ ಚ ॥೨೨.೩೩೮॥

 

ಶತ್ರುಗಳನ್ನು ಕೊಲ್ಲದೇ, ಶತ್ರುಗಳ ಜಯರೂಪದ ಕೀರ್ತಿಯನ್ನು ಪಡೆಯದೇ, ಪರಮಾತ್ಮನ ಆಜ್ಞೆಯನ್ನು ಪಾಲಿಸದೇ  ಕ್ಷತ್ರಿಯರಿಗೆ ಒಳ್ಳೆಯಗತಿ ಪ್ರಾಪ್ತವಾಗುವುದಿಲ್ಲ.

ಕ್ಷತ್ರಿಯರಿಗಿಂತ ವಿಲಕ್ಷಣವಾದ ವರ್ಣದವರಾದ ಬ್ರಾಹ್ಮಣ-ವೈಶ್ಯ-ಶೂದ್ರರಿಗೆ ಪ್ರಾಯಃ ಬಾಹ್ಯ ಶತ್ರುಗಳಲ್ಲಿ ಮಾತ್ರ ಕ್ಷಮೆ[ಆದರೆ ಅವರಿಗೆ ಆಂತರಿಕ ಶತ್ರುಗಳಾದ ಕಾಮಕ್ರೋಧಾದಿಗಳಲ್ಲಿ ಕ್ಷಮೆಯು ಧರ್ಮವಲ್ಲ. ಆದರೆ ಕ್ಷತ್ರಿಯರಿಗೆ ಬಾಹ್ಯ ಶತ್ರುಗಳಲ್ಲಿಯೂ ಕೂಡಾ ಕ್ಷಮೆ ಎನ್ನುವುದು ಇರಬಾರದು. ಇದು ಪ್ರಾಯೋ ಧರ್ಮ.  ಅಂದರೆ ಹೆಚ್ಚಿನ ಅಂಶ ಇದು ಧರ್ಮ. ಇದಕ್ಕೆ ಕೆಲವೊಂದು ಅಪವಾದ(exception) ಇರಬಹುದು]. ಈರೀತಿಯಾಗಿ ಪರಮಾತ್ಮನಿಂದ ಹೇಳಲ್ಪಟ್ಟಿದೆ ಮತ್ತು ಇದು ಪರಮಾತ್ಮನ ಆಜ್ಞೆ.

 

ಇತಿ ಭೀಮವಚಃ ಶ್ರುತ್ವಾ ಸಸೋದರ್ಯ್ಯೋ ಯುಧಿಷ್ಠಿರಃ ।

ರಾಕ್ಷಸಸ್ಕನ್ಧಮಾರೂಢಃ ಕೃಷ್ಣಯಾ ಚಾSಯಯೌ ಪುನಃ ॥೨೨.೩೩೯॥

 

ಭೀಮಸೇನನ ಈ ಮಾತನ್ನು ಕೇಳಿದ ಯುಧಿಷ್ಠಿರನು, ತಮ್ಮಂದಿರರಿಂದ ಕೂಡಿಕೊಂಡು, ದ್ರೌಪದೀಸಮೇತನಾಗಿ, ಘಟೋತ್ಕಚಾದಿ ರಾಕ್ಷಸರ ಹೆಗಲನ್ನು ಏರಿದವನಾಗಿ ಹಸ್ತಿನಪುರದ ಸಮೀಪದ ಕಾಡಿನತ್ತ ಪ್ರಯಾಣ ಬೆಳೆಸಿದ.

 

ಪಾದೇಷು ತೇಷು ನಿವಸತ್ಸು ಹಿಮಾಚಲಸ್ಯ ಯಾಮ್ಯಾಶ್ರಿತೇಷು ಪವಮಾನಸುತಃ ಕದಾಚಿತ್ ।

ಧನ್ವೀ ಮೃಗಾನನುಚರನ್ ಸಹಸಾSSಸಸಾದ ಹಾSಯೋಃ ಸುತಂ ನಹುಷಮಾಜಗರೋರುರೂಪಮ್ ॥೨೨.೩೪೦॥

 

ಹೀಗೆ ಬರುತ್ತಿರುವಾಗ, ಹಿಮಾಚಲ ಪರ್ವತದ ತಪ್ಪಲಿನಲ್ಲಿ ಅವರು ಇರುವಾಗ, ಒಮ್ಮೆ ಭೀಮಸೇನನು ಬಿಲ್ಲನ್ನು ಹಿಡಿದು ಬೇಟೆಯಾಡುತ್ತಾ, ಆಯುವಿನ ಮಗನಾಗಿರುವ, ದೊಡ್ಡ ಹೆಬ್ಬಾವಿನ ರೂಪವನ್ನು ಧರಿಸಿದ ನಹುಷನನ್ನು ಹೊಂದಿದ.

 

[ನಹುಷನಿಗೆ ಅಜಗರ ರೂಪ ಹೇಗೆ ಪ್ರಾಪ್ತಿಯಾಯಿತು ಎನ್ನುವುದರ ವಿವರವನ್ನು ಹೇಳುತ್ತಾರೆ:]

 

ಪೂರ್ವಂ ಹಿ ವೃತ್ರವಧತೋSಮ್ಬುಜನಾಳತನ್ತುಸಂಸ್ಥೇ ಶಚೀಪ್ರಣಯಿನಿ ಪ್ರವಿಚಿನ್ತ್ಯ ದೇವಾಃ ।

ಚಕ್ರುಸ್ತ್ರಿಲೋಕಪತಿಮಾಯುಸುತಂ ವರಂ ಚ ದತ್ವಾSಕ್ಷಿಗೋಚರತಪೋSಸ್ಯ ಬಲಂ ಚ ಸರ್ವಮ್ ॥೨೨.೩೪೧॥

 

ಬಹಳ ಹಿಂದೆ ವೃತ್ರನನ್ನು ಕೊಂದದ್ದರಿಂದಾಗಿ ಶಚಿದೇವಿಗೆ ಪ್ರಿಯನಾದ ದೇವೇಂದ್ರನು ತಾವರೆಯ ದಂಟಿನ ಒಳಗೆ ಗುಪ್ತವಾಗಿದ್ದು ತಪಸ್ಸು ಮಾಡುತ್ತಿರಲು, ದೇವತೆಗಳು ಯಾರನ್ನು ಸ್ವರ್ಗದ ಅಧಿಪತಿಯನ್ನಾಗಿ ಮಾಡುವುದು ಎಂದು ಚೆನ್ನಾಗಿ ಯೋಚನೆಮಾಡಿ, ಆಯುರಾಜನ ಮಗನಾದ ನಹುಷನಿಗೆ ‘ಯಾರನ್ನು ನೀನು ಕಣ್ಣಿನಲ್ಲಿ ನೋಡುತ್ತೀಯೋ ಅವರೆಲ್ಲರ ತಪಸ್ಸು ಮತ್ತು ಬಲ ನಿನಗೆ ಸೇರಲಿ’ ಎನ್ನುವ ವರವನ್ನು ಕೊಟ್ಟು, ಅವನನ್ನು  ಇಂದ್ರನ ಸ್ಥಾನದಲ್ಲಿಟ್ಟರು.

 

ಸ ಸರ್ವಸುರವಿಪ್ರೇನ್ದ್ರತಪಶ್ಚ ಬಲಮಕ್ಷಯಮ್ ।

ಅವಾಪ್ಯ ವವೃಧೇ ನಿತ್ಯಂ ದರ್ಪ್ಪಾದೈಚ್ಛಚ್ಛಚೀಮಪಿ ॥೨೨.೩೪೨॥

 

ನಹುಷನು ಎಲ್ಲಾ ದೇವತೆಗಳ, ಶ್ರೇಷ್ಠ ಬ್ರಾಹ್ಮಣರ ತಪಸ್ಸನ್ನೂ, ಎಣೆಯಿರದ ಬಲವನ್ನೂ ಹೊಂದಿ, ಯೋಗ್ಯತೆ ಮೀರಿ ಬೆಳೆದನು. ತಾನೇ ಇಂದ್ರ ಎನ್ನುವ ದರ್ಪದಿಂದ ಅವನು   ಶಚೀದೇವಿಯನ್ನೂ ಕೂಡಾ ಬಯಸಿದನು.

 

ಸ ಇನ್ದ್ರವಚನಾಚ್ಛಚ್ಯಾ ಮಹರ್ಷಿಗಣವಾಹನೇ ।

ನಿಯುಕ್ತೋ ವಞ್ಚನಾಯೈವ ವಾಹಯಾಮಾಸ ತಾನೃಷೀನ್ ॥೨೨.೩೪೩॥

 

ಇಂದ್ರನಿಂದ ಶಚೀದೇವಿಗೆ ಹೇಳಿದ ಮಾತಿನಂತೆ, ಶಚೀದೇವಿಯಿಂದ ನಹುಷನನ್ನು ವಂಚಿಸುವುದಕ್ಕಾಗಿಯೇ  ಮಹರ್ಷಿಗಳಿಂದ ಸಪ್ತಪಲ್ಲಕ್ಕಿಯಲ್ಲಿ ಕುಳಿತು ಬರಬೇಕೆಂದು ಪ್ರೇರಿತನಾದ ನಹುಷ,  ಋಷಿಗಳನ್ನು ತನ್ನನ್ನು ಹೊರುವಂತೆ ಮಾಡಿದ.

[ನಹುಷ ಪುರಂದರನ ಪತ್ನಿಯಾದ ಶಚೀದೇವಿಯನ್ನು ಬಯಸಿದ. ಆಗ ಶಚೀದೇವಿ ಇಂದ್ರನ ಬಳಿಗೆ ಹೋದಳು. ಇಂದ್ರ ‘ಸಪ್ತರ್ಷಿಗಳು ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಬಾ ಎಂದು ಅವನಿಗೆ ಹೇಳು, ಆಗ ಅವನು ನಿನ್ನನ್ನು ಹೊಂದುವುದೇ ಇಲ್ಲಾ’ ಎಂದು ಹೇಳಿದ. ಶಚೀದೇವಿ ಇಂದ್ರ ಪದವಿಯಲ್ಲಿರುವ ಪುರಂದರನ ಹೆಂಡತಿಯೇ ಹೊರತು, ಇಂದ್ರ ಪದವಿಯಲ್ಲಿರುವ ಎಲ್ಲರ ಹೆಂಡತಿ ಅಲ್ಲ. ಹೀಗಾಗಿ ದಾರಿತಪ್ಪಿದ ನಹುಷನಿಗೆ ತಕ್ಕ ಪಾಠ ಕಲಿಸಲು ‘ಸಪ್ತರ್ಷಿಗಳು ಹೊತ್ತ ಮೇನೆಯಲ್ಲಿ ಬರುವಂತೆ ನಹುಷನಿಗೆ ಹೇಳು’ ಎಂದು ಇಂದ್ರ(ಪುರಂದರ) ಶಚೀದೇವಿಗೆ ಹೇಳುತ್ತಾನೆ]

No comments:

Post a Comment