ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, October 29, 2022

Mahabharata Tatparya Nirnaya Kannada 22-356-365

 

ತಸ್ಮಿನ್ನೇವಂ ನಿಪತಿತೇ ಬ್ರಹ್ಮಣಃ ಶಾಪಕಾರಣಾತ್ ।

ಅಷ್ಟಾವಿಂಶತಿಮೇ ಪ್ರಾಪ ಯುಗೇ ಭೀಮಸ್ತಮುಲ್ಬಣಮ್ ॥೨೨.೩೫೬॥

 

ಈ ರೀತಿಯಾಗಿ ನಹುಷನು ಬ್ರಹ್ಮಶಾಪದ ನಿಮಿತ್ತವಾಗಿ ಅಜಗರನಾಗಿ ಭೂಮಿಯಲ್ಲಿ ಬಿದ್ದ. ಇದೀಗ ೨೮ನೆಯ ದ್ವಾಪರಯುಗದಲ್ಲಿ ಭೀಮನು ಅವನನ್ನು ಹೊಂದಿದ.[ಅಂದರೆ ಇದು ಯುಗ-ಯುಗಗಳ ಕಥೆ]

 

ಜಾನನ್ನೇವ ತದೀಯಂ ತತ್ ತಪ ಆದಾತುಮೀಪ್ಸಯಾ ।

ಯತ್ತತ್ ಸುರಾಣಾಂ ಸರ್ವೇಷಾಂ ಮುನೀನಾಂ ಚ ತಪಃ ಸ್ಥಿತಮ್ ॥೨೨.೩೫೭॥

 

ತದ್ ಗೃಹೀತುಂ ವಶಗವದಿಚ್ಛಯೈವಾSಸ ಮಾರುತಿಃ ।

ದೇವಾನಾಂ ಹಿ ನೃಜಾತಾನಾಮಲ್ಪಂ ವ್ಯಕ್ತಂ ಭವೇದ್ ಬಲಮ್  ॥೨೨.೩೫೮॥

 

ಇಚ್ಛಯಾ ವ್ಯಕ್ತತಾಂ ಯಾತಿ ವಾಯೋರನ್ಯೇಷು ತಚ್ಚ ನ ।

ನಿತ್ಯವ್ಯಕ್ತಾ ಗುಣಾ ವಿಷ್ಣೋರಿತಿ ಶಾಸ್ತ್ರಸ್ಯ ನಿರ್ಣ್ಣಯಃ ॥೨೨.೩೫೯॥

 

ಅಜಗರ ರೂಪದಲ್ಲಿರುವವನು ನಹುಷ ಎಂದು ತಿಳಿದರೂ ಕೂಡಾ, ಅವನ ಒಳಗಡೆ ಇರುವ, ಅವನ ಯೋಗ್ಯತೆಗೆ ಮೀರಿದ ತಪಸ್ಸನ್ನು, ದೇವತೆಗಳ ಹಾಗು ಎಲ್ಲಾ ಮುನಿಗಳ ಯಾವ ವಿಶೇಷವಾದ ತಪಸ್ಸು ನಹುಷನಲ್ಲಿತ್ತೋ, ಅವೆಲ್ಲವನ್ನೂ ಸ್ವೀಕರಿಸುವುದಕ್ಕಾಗಿಯೇ ಭೀಮಸೇನನು ಸ್ವಇಚ್ಛೆಯಿಂದಲೇ ಅಜಗರನ  ವಶಕ್ಕೆ ಒಳಗಾದಂತೆ ಹೋಗಿ ಸಿಕ್ಕಿಕೊಂಡ.

ಪರಮಾತ್ಮನಿಗೆ ಅವತಾರ ಕಾಲದಲ್ಲೇ ಆಗಲೀ, ಯಾವುದೇ ರೂಪದಲ್ಲೇ ಆಗಲಿ, ಮೂಲ ಗುಣಗಳು ನಿತ್ಯವ್ಯಕ್ತ. ಇದು ಶಾಸ್ತ್ರದ ನಿರ್ಣಯ.

 

ಏವಮನ್ಯೇSಪಿ ಹಿ ಗುಣಾ ಮಾನುಷಾದಿಷು ಜನ್ಮಸು ।

ದೇವಾನಾಂ ಮಾನುಷಾದೌ ತು ಶಕ್ಯೇSಪ್ಯವ್ಯಕ್ತತಾಕೃತೇಃ ॥೨೨.೩೬೦॥

 

ಧರ್ಮ್ಮವೃದ್ಧಿರ್ಭವೇತ್ ತೇಷಾಂ ಪ್ರೀತೋ ಭವತಿ ಕೇಶವಃ ।

ತನ್ಮಾನುಷೇ ಬಲೇ ತಸ್ಯ ವರಾದ್ ವಾರಿತವತ್ ಸ್ಥಿತೇ ॥೨೨.೩೬೧॥

 

ದೈವಂ ಬಲಂ ನ ಶಕ್ತೋSಪಿ ವ್ಯಕ್ತಂ ಚಕ್ರೇ ನ ಮಾರುತಿಃ ।

ಆತ್ಮಮೋಕ್ಷಾಯ ನ ಪ್ರಶ್ನಾನ್ ವ್ಯಾಜಹಾರ ಸ ಚಾಭಿಭೂಃ  ॥೨೨.೩೬೨॥

 

ಮನುಷ್ಯರಾಗಿ ಅವತರಿಸಿದ ದೇವತೆಗಳಿಗೆ ಅವರ ಸ್ವರೂಪದ ಬಲವು ಯಥಾಯೋಗ್ಯವಾಗಿ ಸ್ವಲ್ಪಸ್ವಲ್ಪ ಅಭಿವ್ಯಕ್ತವಾಗುತ್ತದೆ. ಆದರೆ  ಮುಖ್ಯಪ್ರಾಣನಿಗೆ ಮಾನವ ಅವತಾರದಲ್ಲೂ ಕೂಡಾ ಅವನ ಇಚ್ಛೆಯಂತೆ ಜ್ಞಾನ-ಬಲಾದಿ ಗುಣಗಳು  ಸಂಪೂರ್ಣವಾಗಿ ಅಭಿವ್ಯಕ್ತವಾಗುತ್ತದೆ. 

ದೇವತೆಗಳು ಮನುಷ್ಯಜನ್ಮದಲ್ಲಿ ಬಂದಾಗ, ಶಕ್ತಿ ಇದ್ದೂ ತಮ್ಮ ಸ್ವರೂಪಬಲವನ್ನು ಸಂಪೂರ್ಣವಾಗಿ ಅಭಿವ್ಯಕ್ತಿಗೊಳಿಸದಿದ್ದರೆ, ಆಗ ಅವರ ಪುಣ್ಯದ ಅಭಿವೃದ್ಧಿಯಾಗುತ್ತದೆ ಮತ್ತು ಇದು ಭಗವಂತನಿಗೆ ಅತ್ಯಂತ ಪ್ರಿಯ.

ಮನುಷ್ಯಜನ್ಮದಲ್ಲಿನ ಭೀಮನ ಬಲವು ಬ್ರಹ್ಮನ ವರದ ಕಾರಣದಿಂದ ಇಲ್ಲಿ ತಡೆಯಲ್ಪಟ್ಟಂತೆ ಇರಲು, ಅವನು ತನ್ನ ಮೂಲಸ್ವರೂಪದ ಬಲವನ್ನು ವ್ಯಕ್ತಪಡಿಸಲು ಶಕ್ತನಾಗಿದ್ದರೂ ಕೂಡಾ, ಅದನ್ನು ವ್ಯಕ್ತಪಡಿಸಲಿಲ್ಲ. ಅಷ್ಟೇ ಅಲ್ಲ, ತನ್ನ ಬಿಡುಗಡೆಗಾಗಿ ನಹುಷ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಸಮರ್ಥನಿದ್ದರೂ ಉತ್ತರಿಸಲಿಲ್ಲ.

 

[ತನ್ನ ಪ್ರಶ್ನೆಗೆ ಉತ್ತರ ಕೊಟ್ಟರೆ ನಿನ್ನನ್ನು ಬಿಡುಗಡೆಗೊಳಿಸುತ್ತೇನೆ ಎಂದು ನಹುಷ ಹೇಳಿದಾಗ, ಆತನ ಪ್ರಶ್ನೆಗಳಿಗೆ ಉತ್ತರ ತಿಳಿದಿದ್ದರೂ ಕೂಡಾ ಭೀಮ ಉತ್ತರಿಸಲಿಲ್ಲ. ಏಕೆ ಉತ್ತರಿಸಲಿಲ್ಲ ಎನ್ನುವುದನ್ನು ಆಚಾರ್ಯರು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾರೆ:]

 

ವಿದ್ಯೋಪಜೀವನಂ ಧರ್ಮ್ಮೋ ವಿಪ್ರಾಣಾಮಪಿ ನೋ ಯತಃ ।

ಕಿಮುತ ಕ್ಷತ್ರಿಯಸ್ಯೇತಿ ಜಾನನ್ನಪಿ ವೃಕೋದರಃ  ॥೨೨.೩೬೩॥

 

ತತ್ಪ್ರಶ್ನಪರಿಹಾರೇಣ ನಾSತ್ಮಮೋಕ್ಷಂ ಸಮೈಚ್ಛತ ।

ಅಯತನ್ತಮಪಿ ಹ್ಯೇನಂ ಚಾಲನಾಯಾಪಿ ನಾಶಕತ್ ॥೨೨.೩೬೪॥

 

ಪೂರ್ಣ್ಣೋSಪಿ ಸರ್ವಲೋಕಾನಾಂ ಬಲೇನ ನಹುಷಸ್ತದಾ ।

ವೇಷ್ಟಯಿತ್ವೈವ ತಂ ಭೀಮಂ ಸ್ಥಿತೋSಸೌ ನಾಶಕತ್ ಪರಮ್ ॥೨೨.೩೬೫॥

 

ಯಾವ ಕಾರಣದಿಂದ ವಿದ್ಯೆಯಿಂದ ಉಪಜೀವನ ಮಾಡುವುದು ಬ್ರಾಹ್ಮಣರಿಗೂ ಧರ್ಮವಲ್ಲವೋ, ಇನ್ನು ಕ್ಷತ್ರಿಯರಿಗೆ ಇದು ಒಳ್ಳೆಯದಲ್ಲವೆಂದು ಏನು ಹೇಳಬೇಕು? ಈ ಕಾರಣದಿಂದ ಭೀಮಸೇನ ನಹುಷನ ಪ್ರಶ್ನೆಗೆ ಉತ್ತರ ತಿಳಿದಿದ್ದರೂ,  ಅವನ ಪ್ರಶ್ನೆಗೆ ಉತ್ತರ ಕೊಡುವಿಕೆಯಿಂದ ತನ್ನ ಬಿಡುಗಡೆಯನ್ನು ಬಯಸಲಿಲ್ಲ(ಉತ್ತರಿಸಲಿಲ್ಲ). ಆದರೆ ಬಿಡಿಸಿಕೊಳ್ಳಲು ಯಾವುದೇ ಪ್ರಯತ್ನಮಾಡದ ಭೀಮಸೇನನನ್ನು ಅಲುಗಾಡಿಸಲೂ ಕೂಡ ನಹುಷ ಶಕ್ತನಾಗಲಿಲ್ಲ. ಎಲ್ಲಾ ಲೋಕಗಳ ಬಲದಿಂದ ಪೂರ್ಣನಾದರೂ ಕೂಡಾ, ನಹುಷ ಭೀಮನನ್ನು ಸುತ್ತಿಕೊಂಡು ಇದ್ದನೇ ಹೊರತು ಇನ್ನೇನನ್ನೂ ಮಾಡಲು ಅವನಿಂದಾಗಲಿಲ್ಲ.

No comments:

Post a Comment