ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, October 25, 2022

Mahabharata Tatparya Nirnaya Kannada 22-351-355

[ವೃತ್ರನನ್ನು ಕೊಂದದ್ದರಿಂದ ಬಂದ ಬ್ರಹ್ಮಹತ್ಯಾ ದೋಷವನ್ನು ಪರಿಹರಿಸಿಕೊಳ್ಳಲು ಇಂದ್ರ ತಪಸ್ಸು ಮಾಡಿದ ಎನ್ನುವುದನ್ನು ತಿಳಿದೆವು. ಇಲ್ಲಿ ಸಾಮಾನ್ಯವಾಗಿ ನಮಗೆ ಒಂದು ಕುತೂಹಲ ಏನೆಂದರೆ- ದೇವತೆಗಳ ಪಾಪ-ಪುಣ್ಯಕ್ಕೂ ಮನುಷ್ಯರ ಪಾಪ-ಪುಣ್ಯಕ್ಕೂ ಏನಾದರು ವ್ಯತ್ಯಾಸವಿದೆಯೇ ಎನ್ನುವುದು. ಈ ಪ್ರಶ್ನೆಗೆ ಆಚಾರ್ಯರು ಮುಂದೆ ಉತ್ತರ ನೀಡಿರುವುದನ್ನು ನಾವು ಕಾಣಬಹುದು:]

 

ಧರ್ಮ್ಮವೃದ್ಧ್ಯರ್ತ್ಥಮೇವೈತತ್ ಪಾಪಮಾಸೀಚ್ಛಚೀಪತೇಃ ।

ನಹಿ ಲೋಕಾವನಂ ಪಾಪಂ ತ್ರೈಲೋಕ್ಯೇಶಸ್ಯ ವಜ್ರಿಣಃ ॥೨೨.೩೫೧॥

 

ಹೇಗೆ ಇಂದ್ರನಿಗೆ ಬ್ರಹ್ಮಹತ್ಯಾ ದೋಷ ಬಂತೋ ಆ ರೀತಿಯ ದೋಷ ಇತರ ದೇವತೆಗಳೆಲ್ಲರಿಗೂ ಬರಬಹುದು. ಆದರೆ ದೇವತೆಗಳಲ್ಲಿ ಅವರ ಪಾಪ  ಪುಣ್ಯವನ್ನು ಹೆಚ್ಚಿಸಿಕೊಳ್ಳವ ಸಾಧನವಾಗುತ್ತದೆ. ಮೂರುಲೋಕಕ್ಕೂ ಒಡೆಯನಾಗಿರುವ ಇಂದ್ರನ ಪಾಪ ಎನ್ನುವುದು ಅವನಿಗೆ ನರಕಾದಿಗಳಿಗೆ ಸಾಧನವಲ್ಲ.

 

ವೃತ್ರಂ ಹತ್ವಾ ಮಹಾನಾಸೇತ್ಯಾದಿ ವೇದಪದಂ ಚ ಯತ್ ।

‘ಕ್ವಚಿತ್ ಪಾಪಂ ಚ ಪುಣ್ಯಾನಾಂ ವೃದ್ಧಯೇ ಭವತಿ ಸ್ಫುಟಮ್ ॥೨೨.೩೫೨॥

 

‘ವೃತ್ರಹತ್ಯಾ ಯಥೇನ್ದ್ರಸ್ಯ ಜಾತಾ ಧರ್ಮ್ಮಸ್ಯ ವೃದ್ಧಯೇ ।

‘ದೇವಾನಾಂ ವಾ ಮುನೀನಾಂ ವಾ ಭವೇದೇವಂ ನವೈ ನೃಣಾಮ್ ॥೨೨.೩೫೩॥

 

‘ಪಾಪಂ ಯತ್ ಪುಣ್ಯಮೇವೈತದಸುರಾಣಾಂ ವಿಲೋಮತಃ’ ।

ಏವಂ ಸ್ಕಾನ್ದೇ ಹಿ ವಚನಂ ನ ಪಾಪಂ ತಚ್ಛಚೀಪತೇಃ ॥೨೨.೩೫೪॥ ॥

 

ವೃತ್ರನನ್ನು ಕೊಂದು ಇಂದ್ರ ಶ್ರೇಷ್ಠನಾದ ಎನ್ನುವ ವೇದವಚನವಿದೆ (‘ಇಂದ್ರೋ ವೈ ವೃತ್ರಂ ಹತ್ವಾ ಮಹಾನಭವತ್’). ಸ್ಕಂಧಪುರಾಣದಲ್ಲಿ ಹೇಳಿರುವಂತೆ: ‘ದೇವತೆಗಳಿಗೆ ಪಾಪ ಬಂದರೂ ಕೂಡಾ ಅದು ಅವರ ಪುಣ್ಯವೃದ್ಧಿಗೆ ಸಾಧನವಾಗುತ್ತದೆ. ಯಾವ ರೀತಿ ಇಂದ್ರನಿಗೆ ವೃತ್ರನ ಕೊಲೆಯು ಪುಣ್ಯದ ಅಭಿವೃದ್ಧಿಗೆ ಕಾರಣವಾಯಿತೋ, ಆ ರೀತಿ ದೇವತೆಗಳಲ್ಲಿ ಅಥವಾ ಮುನಿಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ. ಆದರೆ ಮನುಷ್ಯರ ಪಕ್ಷದಲ್ಲಿ ಈರೀತಿ ಆಗುವುದಿಲ್ಲ.  ಇನ್ನು ಅಸುರರಲ್ಲಿ ಅವರು ಪುಣ್ಯಮಾಡಿದರೂ ಕೂಡಾ ಅದು ಪಾಪದಲ್ಲಿಯೇ ಕೊನೆಗೊಳ್ಳುತ್ತದೆ’. ಹೀಗಾಗಿ ಶಚೀಪತಿಗೆ ವೃತ್ರ ಸಂಹಾರದ ಪಾಪವಿಲ್ಲ.

[ಏಕೆ ದೇವತೆಗಳು ಪುರಂದರನ ಅನುಪಸ್ಥಿತಿಯಲ್ಲಿ ನಹುಷನಿಗೆ ಇಂದ್ರಪದವಿಯನ್ನು ನೀಡಿದರು? ದೇವತೆಗಳಲ್ಲೇ ಒಬ್ಬ ಹಿರಿಯ ದೇವತೆ ಏಕೆ ಹಂಗಾಮಿ ಇಂದ್ರನಾಗಿ ಕಾರ್ಯನಿರ್ವಹಿಸಲಿಲ್ಲಾ ?  ಇದು ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುವ ಪ್ರಶ್ನೆ. ಈ ಪ್ರಶ್ನೆಗೆ ಆಚಾರ್ಯರು ಉತ್ತರ ನೀಡುವುದನ್ನು ನಾವು ಮುಂದಿನ ಶ್ಲೋಕದಲ್ಲಿ ಕಾಣಬಹುದು:]

 

ನಾನ್ಯಸ್ಯ ಪದಮಾಪ್ಸ್ಯನ್ತಿ ತದ್ ದೇವಾನಾಂ ವ್ರತಂ ಪರಮ್ ।

ತಸ್ಮಾತ್ ತೇ ನಹುಷಂ ಶಕ್ರಪದೇ ನಿದಧುರೀಶ್ವರಾಃ ॥೨೨.೩೫೫॥

 

‘ಇನ್ನೊಬ್ಬನ ಪದವಿಯನ್ನು ಹೊಂದುವುದಿಲ್ಲ’ ಎನ್ನುವುದು ದೇವತೆಗಳ ಶ್ರೇಷ್ಠ ವ್ರತ. ಆ ಕಾರಣದಿಂದ ಸಮರ್ಥರಿದ್ದರೂ ಕೂಡಾ ದೇವತೆಗಳು ನಹುಷನನ್ನು ಇಂದ್ರಪದವಿಯಲ್ಲಿ ಸ್ಥಾಪಿಸಿದರು. 

No comments:

Post a Comment