ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 30, 2022

Mahabharata Tatparya Nirnaya Kannada 22-372-378

 

ಗತೇ ಭೀಮೇ ನಿಮಿತ್ತಾನಿ ದೃಷ್ಟ್ವಾ ರಾಜಾ ಯುಧಿಷ್ಠಿರಃ ।

ಪಪ್ರಚ್ಛ ಕ್ವ ಗತೋ ಭೀಮ ಇತಿ ಕೃಷ್ಣಾಂ ಚಲನ್ಮನಾಃ ॥೨೨.೩೭೨॥

 

ಇತ್ತ, ಯಾವಾಗ ಭೀಮಸೇನ ಹೊರಟಿದ್ದನೋ ಆನಂತರ ನಡೆದ ನಿಮಿತ್ತಗಳನ್ನು ಕಂಡು, ಕಳವಳಗೊಂಡ ಮನಸ್ಸಿನವನಾದ ಧರ್ಮರಾಜನು ‘ಭೀಮಸೇನ ಎಲ್ಲಿಗೆ ಹೋಗಿದ್ದಾನೆ ಎಂದು  ದ್ರೌಪದಿಯನ್ನು ಕೇಳಿದನು.

 

ಯಾತಂ ಮೃಗಾರ್ತ್ಥಂ ಸ ನಿಶಮ್ಯ ತಸ್ಯಾಸ್ತದೂರುವೇಗಾತ್ ಪತಿತಾನ್ ನಗೇನ್ದ್ರಾನ್ ।

ದೃಷ್ಟ್ವಾ ಪಥಾ ತೇನ ಯಯೌ ಸ ತತ್ರ ದೃಷ್ಟ್ವಾ ಚ ಸರ್ಪ್ಪಾವೃತಮನ್ವಪೃಚ್ಛತ್ ॥೨೨.೩೭೩॥

 

ಸ ಕಾರಣಂ ನಹುಷಾತ್ ಸರ್ವಮೇವ ಶುಶ್ರಾವ ತತ್ಪ್ರಶ್ನಮಶೇಷತಶ್ಚ ।

ಭ್ರಾತೃಸ್ನೇಹಾದ್ ವ್ಯಾಕರೋದ್ ಧರ್ಮ್ಮಸೂನುಸ್ತದೈವ ಸೋSಪ್ಯಾರುಹತ್ ಸ್ವರ್ಗ್ಗಲೋಕಮ್ ॥೨೨.೩೭೪॥

 

‘ಬೇಟೆಗಾಗಿ ತೆರಳಿದ್ದಾನೆ’ ಎಂದು ದ್ರೌಪದಿಯಿಂದ ಕೇಳಿದ ಧರ್ಮರಾಜನು, ಭೀಮನ ನಡಿಗೆಯ ರಭಸಕ್ಕೆ, ಅವನ ಸಂಸ್ಪರ್ಶದಿಂದ ಬಿದ್ದಿರುವ ಮರಗಳಿಂದ ಸೂಚಿತವಾದ, ಅವನು ಹೋಗಿರುವ ದಾರಿಯನ್ನು ಹಿಡಿದು,  ಆ ದಾರಿಯಲ್ಲೇ ಹೆಬ್ಬಾವಿನಿಂದ ಸುತ್ತಲ್ಪಟ್ಟ  ಭೀಮನನ್ನು ನೋಡಿ ನಹುಷನನ್ನು ಕುರಿತು ಕೇಳಿದನು: 

ಧರ್ಮರಾಜನು ನಹುಷನಿಂದ ಎಲ್ಲಾ ಕಾರಣವನ್ನು ಕೇಳಿ, ತನ್ನ ತಮ್ಮನ ಮೇಲಿನ ಪ್ರೀತಿಯಿಂದ ಸಂಪೂರ್ಣವಾಗಿ ಅವನ ಪ್ರಶ್ನೆಗೆ ಉತ್ತರವನ್ನೂ ಕೊಟ್ಟನು. ಅದಾಗಲೇ ಶಾಪದಿಂದ ಮುಕ್ತನಾದ ನಹುಷ  ಸ್ವರ್ಗಲೋಕವನ್ನೇರಿದನು.

 

 

ದಿವ್ಯಾಮ್ಬರೇ ಕುಣ್ಡಲಿನಿ ಸ್ವಪೂರ್ವೇ ಗತೇ ವಿಮಾನೇನ ಸ ಧರ್ಮ್ಮರಾಜಃ ।

ಭೀಮಶ್ಚಾSಯಾತ್ ಸ್ವಾಶ್ರಮಾಯೈವ ಸರ್ವಂ ಯುಧಿಷ್ಠಿರಃ ಕಥಯಾಮಾಸ ತತ್ರ ॥೨೨.೩೭೫॥

 

ತನ್ನ ವಂಶದ ಮೂಲಪುರುಷನಾಗಿರುವ ನಹುಷನು ದಿವ್ಯವಾದ ವಸ್ತ್ರವುಳ್ಳವನಾಗಿಯೂ, ಕುಂಡಲಧಾರಿಯಾಗಿಯೂ, ಆಕಾಶರಥದಲ್ಲಿ ಸ್ವರ್ಗಲೋಕಕ್ಕೆ ತೆರಳಲು, ಧರ್ಮರಾಜ ಮತ್ತು ಭೀಮಸೇನ ತಮ್ಮ ಆಶ್ರಮಕ್ಕೆ ಮರಳಿ ಬಂದರು. ಅಲ್ಲಿ ಯುಧಿಷ್ಠಿರ ಎಲ್ಲರ ಮುಂದೆ ಎಲ್ಲಾ ಕಥೆಯನ್ನೂ ಹೇಳಿದನು.

 

ಶ್ರುತ್ವಾ ಕೃಷ್ಣಾ ಭ್ರಾತರಶ್ಚಾಸ್ಯ ಸರ್ವೇ ಸರ್ವೇ ಮುನೀನ್ದ್ರಾ ಭೀಮಸೇನೇSತಿಭಕ್ತಾಃ ।

ವ್ರೀಳಾಂ ಯಯುರ್ಭೀಮಸೇನಗ್ರಹೇಣ ತಥಾSಬ್ರುವನ್ ಸ್ನೇಹತೋ ಭೀಮಸೇನಮ್ ॥೨೨.೩೭೬॥

 

ಭೀಮಸೇನನಲ್ಲಿ ಅತ್ಯಂತ ಭಕ್ತರಾಗಿರುವ ದ್ರೌಪದಿಯು, ಅವನ ಸಹೋದರರು, ಎಲ್ಲಾ ಮುನಿಶ್ರೇಷ್ಠರೂ ಕೂಡಾ, ನಹುಷನ ಕೈಯಲ್ಲಿ ಭೀಮಸೇನ ಸಿಕ್ಕಿದ್ದ ಎನ್ನುವುದನ್ನು ಕೇಳಿ ಬಹಳ ನಾಚಿಕೊಂಡರು. ಹಾಗೆಯೇ ಭೀಮಸೇನನಲ್ಲಿ ಪ್ರೀತಿಯಿಂದ ಹೀಗೆ ಹೇಳಿದರು:

 

ನೈತಾದೃಶಂ ಸಾಹಸಂ ತೇSನುರೂಪಂ  ಶಕ್ತೋSಪಿ ಯತ್ ಸ್ವಾತ್ಮನೋ ಮೋಕ್ಷಣಾಯ ।

ನೈವಾSಚರೋ ಯತ್ನಮತೋ ನಿಜಾನಾಂ ಮಹದ್ ದುಃಖಂ ಹೃದಯೇ ಪ್ರಾರ್ಪ್ಪಯಸ್ತ್ವಮ್ ॥೨೨.೩೭೭॥

 

‘ಈರೀತಿಯಾಗಿರುವ ಸಾಹಸವು ನಿನಗೆ ಯೋಗ್ಯವಾದುದ್ದಲ್ಲ.. ಯಾವ ಕಾರಣದಿಂದ ತನ್ನನ್ನು ಬಿಡಿಸಿಕೊಳ್ಳಲು ಶಕ್ತನಾದರೂ ಪ್ರಯತ್ನವನ್ನೂ ಕೂಡಾ ನೀನು ಮಾಡಲಿಲ್ಲವೋ, ಅದರಿಂದ ನಿನ್ನವರಿಗೆ ಮಹಾದುಃಖವನ್ನು ಹೃದಯದಲ್ಲಿ ಉಂಟು ಮಾಡಿರುವೆ’.

 

ಮೈವಂ ಪುನಃ ಕಾರ್ಯ್ಯಮಿತಿ ಬ್ರುವನ್ತಃ ಸಮಾಶ್ಲಿಷನ್ ಸರ್ವ ಏವೈತ್ಯ ಭೀಮಮ್ ।

ತತೋSಹೋಭಿಃ ಕೈಶ್ಚಿದಾಪುಃ ಕುರೂಣಾಂ ರಾಷ್ಟ್ರಂ ಪಾರ್ತ್ಥಾ ಮುನಿಮುಖ್ಯೈಃ ಸಮೇತಾಃ ॥೨೨.೩೭೮॥

 

‘ಈರೀತಿಯಾಗಿ ಮತ್ತೆ ಮಾಡಬೇಡ’ ಎಂದು ಹೇಳುತ್ತಾ, ಎಲ್ಲರೂ ಭೀಮನನ್ನು ಹೊಂದಿ ಆಲಿಂಗಿಸಿದರು. ತದನಂತರ ಕೆಲವು ದಿನಗಳಾದ ಮೇಲೆ ಪಾಂಡವರು ಮುನಿಗಳಿಂದ ಕೂಡಿದವರಾಗಿ ಹಸ್ತಿನಾವತಿಯ ಹತ್ತಿರದ ಕಾಡಿಗೆ ಬಂದರು. 

No comments:

Post a Comment