ತತ್ರೈವ ತೇಷಾಂ ವಸತಾಂ ಮಹಾತ್ಮನಾಮಾನನ್ದಿನಾಮಬ್ದಚತುಷ್ಟಯೇ ಗತೇ ।
ಪಞ್ಚಾಬ್ದಮದ್ಧ್ಯಾಪ್ಯ ಮಹಾನ್ತಿ ಚಾಸ್ತ್ರಾಣೀನ್ದ್ರೋ ಗುರ್ವರ್ತ್ಥಂ ಫಲ್ಗುನೇನಾರ್ತ್ಥಿತೋSಭೂತ್ ॥೨೨.೩೨೨॥
ಕುಬೇರನ ಮನೆಯ ಪ್ರದೇಶದಲ್ಲಿ ಆನಂದದಿಂದ ವಾಸಮಾಡುತ್ತಾ ಪಾಂಡವರು ನಾಲ್ಕು ವರ್ಷಗಳನ್ನು
ಕಳೆದಿರಲು, ಇತ್ತ ಅರ್ಜುನನಿಗೆ ಐದು ವರ್ಷಗಳ ಕಾಲ ಶ್ರೇಷ್ಠವಾಗಿರುವ ಅಸ್ತ್ರಗಳನ್ನು ಅಧ್ಯಾಪನ
ಮಾಡಿರುವ ಇಂದ್ರನು, ಗುರುದಕ್ಷಿಣೆಯ ವಿಚಾರವಾಗಿ ಅರ್ಜುನನಿಂದ ಪ್ರಾರ್ಥಿತನಾದನು.(ಅರ್ಜುನ -ಗುರುದಕ್ಷಿಣೆ
ವಿಚಾರವಾಗಿ ಇಂದ್ರನನ್ನು ಪ್ರಾರ್ಥಿಸಿದನು).
ವಧಂ ವವ್ರೇ ಸ್ವಶತ್ರೂಣಾಮಿನ್ದ್ರಃ ಪಾರ್ತ್ಥಾತ್ ಸ್ವರೂಪತಃ ।
ನಿವಾತಕವಚಾಖ್ಯಾನಾಂ ಯೇಷಾಂ ಬ್ರಹ್ಮಾ ದದೌ ವರಮ್ ॥೨೨.೩೨೩॥
ಇಂದ್ರನು ತಾನೇ ಆಗಿರುವ(ತನ್ನದೇ ಅವತಾರವಾಗಿರುವ) ಅರ್ಜುನನಿಂದ ತನ್ನ ಶತ್ರುಗಳಾಗಿರುವ, ಯಾರಿಗೆ
ಬ್ರಹ್ಮನು ಅವಧ್ಯದ ವರವನ್ನು ಕೊಟ್ಟಿದ್ದನೋ ಅಂತಹ ನಿವಾತಕವಚ ಎಂಬ ಹೆಸರಿನ ರಾಕ್ಷಸರ ಸಂಹಾರವನ್ನು
ಗುರುದಕ್ಷಿಣೆಯಾಗಿ ಕೇಳಿದನು.
ಅವದ್ಧ್ಯತ್ವಂ ಸುರೈರ್ದ್ದೈತ್ಯೈರ್ಗ್ಗನ್ಧರ್ವೈಃ ಪಕ್ಷಿರಾಕ್ಷಸೈಃ ।
ಪುನರಿನ್ದ್ರೇಣಾರ್ತ್ಥಿತೋSದಾಜ್ಜಹೀಮಾನ್ ನರದೇಹವಾನ್ ॥೨೨.೩೨೪॥
ದೇವತೆಗಳು, ದೈತ್ಯರು, ಗಂಧರ್ವರು, ಯಕ್ಷ-ರಾಕ್ಷಸರಿಂದಲೂ ಅವಧ್ಯತ್ವದ
ವರವನ್ನು ನಿವಾತಕವಚರು ಚತುರ್ಮುಖನಿಂದ ಪಡೆದಿದ್ದರು. ರಾಕ್ಷಸರು ಬ್ರಹ್ಮನಿಂದ ವರವನ್ನು ಪಡೆದ ನಂತರ
ಇಂದ್ರನಿಂದ ಪ್ರಾರ್ಥಿತನಾದ ಬ್ರಹ್ಮದೇವನು ‘ನೀನು ಮನುಷ್ಯ ರೂಪದಲ್ಲಿ ಅವರನ್ನು ಸಂಹರಿಸು’ ಎನ್ನುವ ವರವನ್ನು ಇಂದ್ರನಿಗೆ ನೀಡಿದ್ದನು.
ಇತಿ ತೇನಾರ್ಜ್ಜುನಂ ಶಕ್ರಃ ಸ್ವಾತ್ಮಾನಂ ನರದೇಹಗಮ್ ।
ಜಗಾದ ತಾನ್ ಜಹೀತ್ಯೇವ ಕಿರೀಟಂ ಸ್ವಂ ನಿಬದ್ಧ್ಯ ಚ ॥೨೨.೩೨೫॥
ಈ ಕಾರಣದಿಂದ ಶಕ್ರನು ತನ್ನ ಸ್ವರೂಪಭೂತನಾದ, ಆದರೆ ಮನುಷ್ಯ ಶರೀರವನ್ನು ಹೊಂದಿರುವ
ಅರ್ಜುನನನ್ನು ಕುರಿತು ‘ನೀನು ನಿವಾತಕವಚರನ್ನು ಕೊಲ್ಲು’ ಎಂದು ತನ್ನ ಕಿರೀಟವನ್ನೇ ಅವನ ತಲೆಗೆ ಇಟ್ಟು
ಹೇಳಿದನು. [ಅರ್ಜುನ ಇಂದ್ರನೇ ಎಂದು ಜಗತ್ತಿಗೆ ತೋರಿಸುವುದೂ ಅದರ ಉದ್ದೇಶವಾಗಿತ್ತು]
ಐನ್ದ್ರಂ ಸ್ಯನ್ದನಮಾರುಹ್ಯ ಪಾರ್ತ್ಥೋ ಮಾತಲಿಸಂಯುತಃ ।
ಗಾಣ್ಡೀವಂ ಧನುರಾದಾಯ ಯಯೌ ಹನ್ತುಂ ಮಹಾಸುರಾನ್ ॥೨೨.೩೨೬॥
ಅರ್ಜುನನು ಸಾರಥಿಯಾದ ಮಾತಲಿಯಿಂದ ಕೂಡಿದ ಇಂದ್ರ ಕೊಟ್ಟ ರಥವನ್ನೇರಿ, ಗಾಂಡೀವವೆಂಬ ಬಿಲ್ಲನ್ನು ಹಿಡಿದು, ನಿವಾತಕವಚರ ಸಂಹಾರಕ್ಕೆಂದು ತೆರಳಿದನು.
ಶಙ್ಖಂ ದದುಸ್ತಸ್ಯ ದೇವಾ ದೇವದತ್ತಃ ಸ ಶಙ್ಖರಾಟ್ ।
ನಾದಯನ್ ಶಙ್ಖಘೋಷೇಣ ಧನುರ್ವಿಷ್ಫಾರಯನ್ ಮಹತ್ ॥೨೨.೩೨೭॥
ದಧಾನಃ ಕುಣ್ಡಲೇ ದಿವ್ಯೇ ಶಕ್ರದತ್ತೇ ಸುಭಾಸ್ವರೇ ।
ಆಸಸಾದ ಪುರಂ ದಿವ್ಯಂ ದೈತ್ಯಾನಾಮಿನ್ದ್ರನನ್ದನಃ ॥೨೨.೩೨೮॥
ಅರ್ಜುನನಿಗೆ ದೇವತೆಗಳೆಲ್ಲರು ಶಂಖವನ್ನು ಕೊಟ್ಟರು. ದೇವತೆಗಳಿಂದ ಕೊಡಲ್ಪಟ್ಟ ಆ
ಶ್ರೇಷ್ಠವಾದ ಶಂಖವು ದೇವದತ್ತ ಎನ್ನುವ ಹೆಸರಿನದಾಯಿತು. ಹೀಗೆ ಅರ್ಜುನನು ದೇವೇಂದ್ರನಿಂದ
ಕೊಡಲ್ಪಟ್ಟ ಅಲೌಕಿಕವಾದ ಕುಂಡಲವನ್ನು ಧರಿಸಿದವನಾಗಿ, ಶಂಖಘೋಷದಿಂದ ಎಲ್ಲಾ ದಿಕ್ಕನ್ನು ಶಬ್ದಸಹಿತವನ್ನಾಗಿ
ಮಾಡುತ್ತಾ, ಮಹತ್ತಾದ ಬಿಲ್ಲನ್ನು ಠೇಂಕರಿಸುತ್ತಾ, ದೈತ್ಯರ ಅಲೌಕಿಕವಾದ ಪಟ್ಟಣವನ್ನು ಹೊಂದಿದನು.
ತಸ್ಯ ಶಙ್ಖಧ್ವನಿಂ ಶ್ರುತ್ವಾ ಗಾಣ್ಡೀವಸ್ಯ ಚ ನಿಸ್ಸ್ವನಮ್ ।
ಅಭಿಸಸ್ರುರ್ಮ್ಮಹಾವೀರ್ಯ್ಯಾ ನಿವಾತಕವಚಾಸುರಾಃ ॥೨೨.೩೨೯॥
ಅರ್ಜುನನ ಶಂಖದ ಧ್ವನಿಯನ್ನು, ಗಾಂಡೀವ ಬಿಲ್ಲಿನ ಧ್ವನಿಯನ್ನು ಕೇಳಿ, ಮಹಾವೀರ್ಯರಾಗಿರುವ
ನಿವಾತಕವಚರೆಂಬ ಆ ಅಸುರರು ಅರ್ಜುನನನ್ನು ಎದುರುಗೊಂಡರು.
ತಿಸ್ರಃ ಕೋಟ್ಯೋ ದಾನವಾನಾಂ ಸ್ವಯಮ್ಭುವರಗರ್ವಿತಾಃ ।
ನಾನಾಯುಧೈ ರಣೇ ಪಾರ್ತ್ಥಮಭ್ಯವರ್ಷನ್ ಸುಸಂಹತಾಃ ॥೨೨.೩೩೦॥
ಬ್ರಹ್ಮನ ವರದಿಂದ ದರ್ಪವನ್ನು ಹೊಂದಿರುವ ಆ ಮೂರು ಕೋಟಿ ದಾನವರು ಬೇರೆಬೇರೆ ಆಯುಧಗಳನ್ನು
ಹಿಡಿದುಕೊಂಡು ಒಟ್ಟಾಗಿ ಯುದ್ಧದಲ್ಲಿ ಅರ್ಜುನನನ್ನು ಕುರಿತು ದಾಳಿಮಾಡಿದರು.
ತೇಷಾಂ ಸ ಶಸ್ತ್ರಾಣಿ ಕಿರೀಟಮಾಲೀ ನಿವಾರ್ಯ್ಯ ಗಾಣ್ಡೀವಧನುಪ್ರಮುಕ್ತೈಃ ।
ಶರೈಃ ಶಿರಾಂಸಿ ಪ್ರಚಕರ್ತ್ತ ವೀರೋ ಮಹಾಸ್ತ್ರಶಿಕ್ಷಾಬಲಸಮ್ಪ್ರಯುಕ್ತೈಃ ॥೨೨.೩೩೧॥
ವೀರನಾಗಿರುವ, ಕಿರೀಟವನ್ನೂ ಮಾಲೆಯನ್ನೂ ಧರಿಸಿರುವ ಅರ್ಜುನನು, ತನ್ನ ಅಸ್ತ್ರಬಲ
ಮತ್ತು ನಿರಂತರವಾದ ಅಭ್ಯಾಸಬಲದಿಂದ ಆ ಎಲ್ಲಾ ರಾಕ್ಷಸರ ಶಸ್ತ್ರಗಳನ್ನು ತಡೆದನು ಮತ್ತು ಗಾಂಡೀವವೆಂಬ ಬಿಲ್ಲಿನಿಂದ ಬಾಣಗಳನ್ನು ಬಿಟ್ಟು ಅವರ ತಲೆಗಳನ್ನು ಕತ್ತರಿಸಿದನು.
No comments:
Post a Comment