ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, October 4, 2022

Mahabharata Tatparya Nirnaya Kannada 22-300-307

 

[ಭೀಮಸೇನನ ಸಾಮರ್ಥ್ಯದ ಕುರಿತು ಹೇಳುತ್ತಾರೆ:]

 

‘ವಾತೇನ ಕುನ್ತ್ಯಾಂ ಬಲವಾನ್ ಸ ಜಾತಃ ಶೂರಸ್ತಪಸ್ವೀ ದ್ವಿಷತಾಂ ನಿಹನ್ತಾ ।

‘ಸತ್ಯೇ ಚ ಧರ್ಮ್ಮೇ ಚ ರತಃ ಸದೈವ ಪರಾಕ್ರಮೇ ಶತ್ರುಭಿರಪ್ರಧೃಷ್ಯಃ’ ॥೨೨.೩೦೦॥

 

ಆ ಭೀಮಸೇನನು ಮುಖ್ಯಪ್ರಾಣನಿಂದ ಕುಂತಿಯಲ್ಲಿ ಹುಟ್ಟಿದ ಬಲಿಷ್ಠನು. ಜ್ಞಾನಿಯಾಗಿರುವ ಅವನು ಸತ್ಯದಲ್ಲಿಯೂ, ಧರ್ಮದಲ್ಲಿಯೂ ರಥನಾಗಿರುವ, ಹಗೆಗಳನ್ನು ಕೊಲ್ಲುವ,  ಶತ್ರುಗಳಿಂದ ಕೊಲ್ಲಲಾಗದ ಅತ್ಯಂತ ಮಿಗಿಲಾಗಿರುವ ಪರಾಕ್ರಮಶಾಲಿ.  

[‘ವಾತೇನ ಕುನ್ತ್ಯಾಮ್- ಎಂದು ಮಹಾಭಾರತದಲ್ಲಿ(ವನಪರ್ವ ೧೫೫.೨೦) ಈ ಮೇಲಿನ ವಿವರಣೆ ಕಾಣಸಿಗುತ್ತದೆ.]

 

ತತ್ರಾಪರಾಂಶ್ಚೈವ ಬಹೂನಸತ್ಯಂ ನಿರೀಶ್ವರಂ ಚಾಪ್ರತಿಷ್ಠಂ ಚ ಲೋಕಮ್ ।

ಸಿದ್ಧೋsಹಮೀಶೋsಹಮಿತಿ ಬ್ರುವಾಣಾನ್ ಗುಣಾನ್ ವಿಷ್ಣೋಃ ಖ್ಯಾಪಯನ್ ವಾದತೋsಜೈತ್ ॥೨೨.೩೦೧॥

 

ಆ ಸೌಗಂಧಿಕವನದಲ್ಲಿ - ಈ ಜಗತ್ತು ಅಸತ್ಯ, ದೇವರಿಗೆ ಈ ಜಗದ ಒಡೆತನವಿಲ್ಲ. ತಾವು ಏನನ್ನು ಹೊಂದಬೇಕೋ ಅದನ್ನು ಹೊಂದಿದ್ದೇವೆ, ನಾನು ಎಲ್ಲದರ ಒಡೆಯ, ನಾನೇ ಬ್ರಹ್ಮ, ನಾನೇ ದೇವರು, ಎಂಬಿತ್ಯಾದಿಯಾಗಿ ಹೇಳುತ್ತಿರುವ ಬಹುಮಂದಿ ದೈತ್ಯರನ್ನು  – ‘ನಾರಾಯಣ ಸರ್ವೋತ್ತಮ, ಸರ್ವೋತ್ಕೃಷ್ಟ. ಅವನು ಎಲ್ಲಾ ಜ್ಞಾನಾನಂದಗಳಿಂದ ಪೂರ್ಣ, ಆದರೆ ನೀವು ಅಲ್ಲ’ ಎನ್ನುವ ವಾದದಿಂದ  ಭೀಮಸೇನ ಗೆದ್ದ.

 

ಭಿನ್ನಂ ವಿಷ್ಣುಮಧಿಕಂ ಸರ್ವತಶ್ಚ ಬ್ರುವನ್ ಪ್ರವೀರಾನ್ ಲಕ್ಷಮೇಷಾಂ ನಿಜಘ್ನೇ ।

‘ತೇ ತಸ್ಯ ವೀರ್ಯಂ ಚ ಬಲಂ ಚ ದೃಷ್ಟ್ವಾ ವಿದ್ಯಾಬಲಂ ಬಾಹುಬಲಂ ತಥೈವ ।

‘ಅಶಕ್ನುವನ್ತಃ ಸಹಿತಾಃ ಸಮಸ್ತಾ ಹತಪ್ರವೀರಾಃ ಸಹಸಾ ನಿವೃತ್ತಾಃ’ ॥೨೨.೩೦೨॥

 

ನಮಗಿಂತ ಭಿನ್ನನಾಗಿರುವ, ಎಲ್ಲರಿಗಿಂತಲೂ  ಮಿಗಿಲಾಗಿರುವ ನಾರಾಯಣನನ್ನು ಪ್ರತಿಪಾದನೆ ಮಾಡುತ್ತಾ, ಲಕ್ಷ ಸಂಖ್ಯೆಯ ರಾಕ್ಷಸರನ್ನು ಭೀಮ ಕೊಂದ. ಆ ರಾಕ್ಷಸರಾದರೋ ಭೀಮಸೇನನ ವೀರ್ಯವನ್ನೂ(ಹಿಡಿದ ಕೆಲಸವನ್ನು ಮಾಡಿ ಮುಗಿಸುವ ತಾಕತ್ತನ್ನೂ), ವಿದ್ಯಾಬಲವನ್ನೂ, ಬಾಹುಬಲವನ್ನು(ತೋಳ್ಬಲವನ್ನು) ಕಂಡು, ಅವನನ್ನು ಸಹಿಸಲಾರದೇ -ಎಷ್ಟೋ ಜನ ಭೀಮಸೇನನಿಂದ ಸತ್ತರು, ಉಳಿದವರು ಅಲ್ಲಿಂದ ಓಡಿಹೋದರು.

[ಈ ಶ್ಲೋಕವನ್ನು ನೇರವಾಗಿ ಮಹಾಭಾರತದ ವನಪರ್ವದಿಂದ ನೀಡಲಾಗಿದೆ. ‘ಅಶಕ್ನುವನ್ತಃ ಸಹಿತಂ ಸಮನ್ತಾದ್ ದ್ರುತಂ ಪ್ರವೀರಾಃ ಸಹಸಾ ನಿವೃತ್ತಾಃ’ (ವನಪರ್ವ ೧೫೫.೨೨)].

 

ವಿಕ್ರಮ್ಯ ತಾನ್ ಗದಯಾsಸೌ ನಿಹತ್ಯ ವಿದ್ರಾಪ್ಯ ಸರ್ವಾನ್ ನಳಿನೀಂ ಪ್ರವಿಶ್ಯ ।

ಪೀತ್ವಾsಮೃತಾಮ್ಭಶ್ಚ ತತೋsಮ್ಬುಜಾನಿ ದಿವ್ಯಾನಿ ಜಗ್ರಾಹ ಕುರುಪ್ರವೀರಃ ॥೨೨.೩೦೩॥

 

ಅವರೆಲ್ಲರನ್ನೂ ಆಕ್ರಮಿಸಿ ಗದೆಯಿಂದ ಕೊಂದು, ಎಲ್ಲರನ್ನೂ ಓಡಿಸಿ, ಸರೋವರವನ್ನು ಹೊಕ್ಕು, ಅಮೃತಕ್ಕೆ ಸಮಾನವಾಗಿರುವ ನೀರನ್ನು ಕುಡಿದ ಭೀಮಸೇನನು, ಸರೋವರದಲ್ಲಿನ ಅಲೌಕಿಕವಾದ ತಾವರೆಗಳನ್ನು ಹಿಡಿದುಕೊಂಡನು.

 

ಅಥೋ ಕಲಹಶಂಸೀನಿ ನಿಮಿತ್ತಾನಿ ಯುಧಿಷ್ಠಿರಃ ।

ದೃಷ್ಟ್ವಾ ಕೃಷ್ಣಾಮಪೃಚ್ಛಚ್ಚ ಕ್ವ ಭೀಮ ಇತಿ ದೀನಧೀಃ ॥೨೨.೩೦೪॥

 

ಇತ್ತ ಯುದ್ಧವನ್ನು ಸೂಚಿಸುವ ಶಕುನಗಳನ್ನು ಕಂಡ ಯುಧಿಷ್ಠಿರನು ಕಥಿಗೊಂಡವನಾಗಿ, ದ್ರೌಪದಿಯನ್ನು ಕುರಿತು ಭೀಮಸೇನನೆಲ್ಲಿದ್ದಾನೆ ಎಂದು ಪ್ರಶ್ನೆ ಮಾಡಿದ.

 

ಸೌಗನ್ಧಿಕಾರ್ತ್ಥಂ ಯಾತಂ ತಂ ಶ್ರುತ್ವಾ ಕೃಷ್ಣಾಮುಖಾನ್ನೃಪಃ ।

ಆರುಹ್ಯ ರಾಕ್ಷಸಶ್ರೇಷ್ಠಾನ್ ಕೃಷ್ಣಯಾ ಭ್ರಾತೃಭಿಃ ಸಹ ॥೨೨.೩೦೫॥

 

ಯಯೌ ವೃಕೋದರೋ ಯತ್ರ ದೃಷ್ಟ್ವಾ ಚೈನಮವಸ್ಥಿತಮ್ ।

ಉವಾಚ ಮೈವಮಿತ್ಯೇನಂ ಭೀತೋ ಗಿರಿಶಕೋಪತಃ ॥೨೨.೩೦೬॥

 

ಧರ್ಮರಾಜನು ದ್ರೌಪದಿಯಿಂದ ‘ಭೀಮನು ಸೌಗಂಧಿಕ ಪುಷ್ಪವನ್ನು ತರಲು ಹೋಗಿದ್ದಾನೆ’ ಎನ್ನುವ ವಿಷಯವನ್ನು ಕೇಳಿ, ಘಟೋತ್ಕಚ ಮೊದಲಾದವರನ್ನು ಏರಿ, ದ್ರೌಪದಿಯಿಂದಲೂ, ತಮ್ಮಂದಿರಿಂದಲೂ ಕೂಡಿಕೊಂಡು, ಎಲ್ಲಿ ಭೀಮಸೇನ ಇದ್ದನೋ ಅಲ್ಲಿಗೆ ತೆರಳಿದ. ಅಲ್ಲಿ ನಿರ್ಭೀತನಾಗಿ ನಿಂತ ವೃಕೋದರನನ್ನು ಕಂಡ ಧರ್ಮರಾಜ, ಶಿವನಿಗೆ ಸಿಟ್ಟು ಬಂದೀತು ಎನ್ನುವ ದೃಷ್ಟಿಯಿಂದ ‘ನೀನು ಹೀಗೆ ಮಾಡಬಾರದಿತ್ತು ಎಂದು ಹೇಳಿದ.

 

ದೇವೇಭ್ಯೋ ಮರಣಾದ್ ಭೀತಾ ರಾಕ್ಷಸಾ ವಿತ್ತಪಾಜ್ಞಯಾ ।

ತದೀಯಾಂ ನಳಿನೀಂ ತೇ ಹಿ ರಕ್ಷನ್ತ್ಯಸ್ಯಾsಶ್ರಯೋ ಹರಃ ।

ಜಾನನ್ ವಿತ್ತೇಶ್ವರೋ ಭೀಮಮಾಹಾತ್ಮ್ಯಂ ನ ಚುಕೋಪ ಹ ॥೨೨.೩೦೭॥

 

ದೇವತೆಗಳಿಂದ ಸಾವಿನ ಭಯದಿಂದ ರಾಕ್ಷಸರು ಕುಬೇರನ ಅಣತಿಯಿಂದ ಅವನಿಗೆ ಸೇರಿದ ಸರೋವರವನ್ನು ರಕ್ಷಿಸುತ್ತಿದ್ದರು. ಕುಬೇರನಿಗೆ ಶಿವ ಆಶ್ರಯನಷ್ಟೇ. ಆದರೆ ಕುಬೇರನು ಭೀಮಸೇನನ ಮಾಹಾತ್ಮ್ಯವನ್ನು ತಿಳಿದು ಮುನಿಯಲಿಲ್ಲ.

No comments:

Post a Comment