ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, October 5, 2022

Mahabharata Tatparya Nirnaya Kannada 22-316-321

 

ರಾಕ್ಷಸಾನಾಮವದ್ಧ್ಯಾನಾಂ ಸಖಾಯೇ ಮಣಿಮತ್ಯಪಿ ।

ಆರುರೋಹ ರಥಂ ದಿವ್ಯಂ ಯೋದ್ಧುಕಾಮೋ ವೃಕೋದರಮ್ ॥೨೨.೩೧೬॥

 

ಕೊಟ್ಯಂತರ ರಾಕ್ಷಸರು ಕೊಲ್ಲಲ್ಪಡಲು, ಗೆಳೆಯನಾಗಿರುವ ಮಣಿಮಂತನೂ ಕೂಡಾ ಕೊಲ್ಲಲ್ಪಡುತ್ತಿರಲು, ಕುಬೇರನು ಭೀಮನೊಡನೆ ಯುದ್ಧ ಮಾಡಬೇಕೆಂದು ಅಲೌಕಿಕ(ದಿವ್ಯ)ವಾದ ರಥವನ್ನೇರಿದನು.

 

ಅಸುರಾವೇಶತಸ್ತಸ್ಯ ಭೀಮೇ ಕ್ರೋಧೋ ಮಹಾನಭೂತ್ ।

ಸ ಆಜಗಾಮ ಭೀಮೇನ ಯೋದ್ಧುಂ ವಿತ್ತಪತಿಃ ಸ್ವಯಮ್ ॥೨೨.೩೧೭॥

 

ಕುಬೇರನಿಗೆ ಅಸುರಾವೇಶ ಬಂದುದ್ದರಿಂದ ಭೀಮನಲ್ಲಿ ಬಹಳ ಕೋಪ ಬಂದಿತು. ಆ ಕುಬೇರನು ಭೀಮನೊಂದಿಗೆ ಯುದ್ಧಮಾಡಲು ತಾನೇ ಬಂದನು.

 

ತಸ್ಮಿನ್ ಕಾಲೇ ಭೀಮಸೇನಸ್ಯ ಘೋಷಂ ಶ್ರುತ್ವಾ ರಾಜಾsಪೃಚ್ಛದಾಶು ಸ್ಮ ಕೃಷ್ಣಾಮ್ ।

ಕ್ವ ಭೀಮ ಇತ್ಯೇವ ತಯೋದಿತಂ ಚ ಶ್ರುತ್ವಾ ಜಗಾಮಾsಶು ರಕ್ಷೋಂಸಸಂಸ್ಥಃ ॥೨೨.೩೧೮॥

 

ಅದೇ ಕಾಲದಲ್ಲಿ ಭೀಮಸೇನನ ವೀರಶಬ್ದವನ್ನು ಕೇಳಿ ಧರ್ಮರಾಜನು ಕೂಡಲೇ ದ್ರೌಪದಿಯನ್ನು ಕುರಿತು  ‘ಭೀಮಸೇನ ಎಲ್ಲಿ’ ಎಂದು ಕೇಳಿದ. ಅವಳಿಂದ ಹೇಳಲ್ಪಟ್ಟದ್ದನ್ನು ಕೇಳಿ ರಾಕ್ಷಸನ(ಘಟೋತ್ಕಚನ) ಹೆಗಲನ್ನೇರಿ ಧರ್ಮರಾಜ ಕೂಡಲೇ ಹೊರಟನು.

 

ಸಭ್ರಾತೃಕೇ ಮುನಿಭಿಃ ಕೃಷ್ಣಯಾ ಚ ಗತೇ ರಾಜನ್ಯತ್ರ ಭೀಮಂ ಕುಬೇರಃ ।

ದೃಷ್ಟ್ವಾsಸುರಾವೇಶತೋ ಧರ್ಮಜಂ ಚ ಕಿಞ್ಚಿನ್ಮುಕ್ತಃ ಸ್ನೇಹಯುಕ್ತಸ್ತಥಾssಸ ॥೨೨.೩೧೯॥

 

ತಮ್ಮಂದಿರಿಂದ ಕೂಡಿಕೊಂಡು, ಮುನಿಗಳಿಂದಲೂ, ದ್ರೌಪದಿಯಿಂದಲೂ ಕೂಡಿಕೊಂಡು ಧರ್ಮರಾಜನು ತೆರಳಲು, ಕುಬೇರನು ಭೀಮಸೇನನನ್ನು, ಧರ್ಮರಾಜನನ್ನೂ  ನೋಡಿ, ಅಸುರಾವೇಶದಿಂದ ಸ್ವಲ್ಪ ಮಟ್ಟಿಗೆ ಬಿಡುಗಡೆಯನ್ನು ಹೊಂದಿದನು.  ಅದರಿಂದ ಧರ್ಮರಾಜನನ್ನು ಕುರಿತು ಸ್ನೇಹಯುಕ್ತನಾದನು.   

 

[ಇಲ್ಲಿ ದ್ರೌಪದಿಯಿಂದಲೂ ಕೂಡಿ ಧರ್ಮರಾಜ ತೆರಳಿದ ಎಂದು ಹೇಳಿದ್ದಾರೆ.  ನಮಗೆ ಮಹಾಭಾರತದ ಈಗಿನ ಪಾಠದಲ್ಲಿ(ವನಪರ್ವ ೧೬೨.೩) ‘ದ್ರೌಪದೀಮಾರ್ಷ್ಟಿಷೇಣಾಯ ಸಮ್ಪ್ರಧಾರ್ಯ’ -ದ್ರೌಪದಿ ಬಂದಿಲ್ಲ ಎಂದಿದೆ. ಆದರೆ  ಇದು ಪ್ರಮಾದ. ಆಚಾರ್ಯರು ಶುದ್ಧಪಾಠವನ್ನು ನಿರ್ಣಯ ಮಾಡುವಾಗ ಇದನ್ನು ಹೇಳಿಲ್ಲ.   ಇನ್ನು ಅಲ್ಲಿಯೇ ಹಿಂದಿನ ಶ್ಲೋಕದಲ್ಲಿ  (೧೬೨.೨)  ಧೌಮ್ಯಃ ಕೃಷ್ಣಾ ಚ ವಿಪ್ರಾಶ್ಚ ಸರ್ವೇ ಚ ಸುಹೃದಸ್ತಥಾ । ಭೀಮಸೇನಮಪಶ್ಯನ್ತಃ ಸರ್ವೇ ವಿಮನಸೋSಭವನ್’ ಎಂದು ದ್ರೌಪದಿ ಅಲ್ಲೆಲ್ಲೂ ಕಾಣದೇನೇ ಸ್ವಲ್ಪ ಕಥಿಗೊಂಡಳು ಎಂದಿದೆ. ಹೀಗಾಗಿ ಪೂರ್ವವಚನಕ್ಕನುಗುಣವಾಗಿ  ದ್ರೌಪದೀಮಾರ್ಷ್ಟಿಷೇಣಾಯ ಸಮ್ಪ್ರಧಾರ್ಯ’ ಎನ್ನುವುದು ಪ್ರಕ್ಷಿಪ್ತ ಎಂದು ತೆಗೆದುಕೊಳ್ಳಬೇಕಾಗುತ್ತದೆ.]

 

ಧೃತಾಯುಧಂ ಭೀಮಮೀಕ್ಷ್ಯಾಪಿ ಕಿಞ್ಚಿದ್ ದೈತ್ಯಾವೇಶಾದ್ ಬಹು ಮೇನೇ ನ ಭೀಮಮ್ ।

ಅಗಸ್ತ್ಯಶಾಪಂ ಚಾವದತ್ ಸ್ವಸ್ಯ ಪೂರ್ವಂ ಸಖಾಯನಾಶೇ ಕಾರಣಂ ರಾಜರಾಜಃ ॥೨೨.೩೨೦॥

 

ಆಯುಧವನ್ನು ಹಿಡಿದ ಭೀಮಸೇನನನ್ನು ನೋಡಿದರೂ ಕೂಡಾ ದೈತ್ಯಾವೇಶದಿಂದ ಭೀಮಸೇನನನ್ನು ಕುಬೇರ ಗೌರವಿಸಲಿಲ್ಲ. ತನ್ನ ಗೆಳೆಯ ಮಣಿಮಂತನ ನಾಶಕ್ಕೆ ಅಗಸ್ತ್ಯನ ಶಾಪ ಕಾರಣ ಎಂದು ಹೇಳಿದನು.

 

ದೈತ್ಯಾವೇಶಾದುಜ್ಝಿತಃ ಶಾನ್ತಭಾವೋ ದದೌ ನಿಜಂ ಸ್ಥಾನಮೇಷಾಂ ಸುತುಷ್ಟಃ ।

ಆವಾಸಾರ್ತ್ಥಂ ತೇsವಸಂಸ್ತತ್ರ ಪಾರ್ತ್ಥಾಸ್ತಥಾsನ್ಯೇಷಾಂ ದೈವತಾನಾಂ ಗೃಹೇಷು ॥೨೨.೩೨೧॥

 

ಕ್ರಮೇಣ ದೈತ್ಯಾವೇಶದಿಂದ ರಹಿತನಾಗಿ, ಮನಸ್ಸು ಶಾಂತವಾದಮೇಲೆ ಅವರೆಲ್ಲರಿಗೂ ತನ್ನ ಸ್ಥಾನವನ್ನೇ ಸಂತೋಷದಿಂದ ಕೊಟ್ಟ. (ಎಲ್ಲಿ ಬೇಕಿದ್ದರೂ ವಾಸ ಮಾಡಬಹುದು ಎಂದು ಹೇಳಿದ). ಪಾಂಡವರೂ ಕೂಡಾ ಕುಬೇರನೊಂದಿಗೆ ಮಾತನಾಡಿ, ಅಲ್ಲಿಯೇ ವಾಸಮಾಡಿದರು. ಅವರು ಬೇರೆ  ದೇವತೆಗಳ ಮನೆಗೂ ಹೋಗಿ ಬರುತ್ತಿದ್ದರು.

No comments:

Post a Comment