ಸರ್ವೇ ಹತಾಸ್ತೇನ ಮಹಾರಥೇನ ತೇ ದಾನವಾಃ ಸೋSಪಿ
ಯಯೌ ತಥಾSನ್ಯಾನ್ ।
ಪೌಲೋಮಕಾಲೇಯಗಣಾಭಿಧಾನಾನ್ ಷಷ್ಟಿಂ ಸಹಸ್ರಾಣಿ ಮಹಾರಥಾನಾಮ್ ॥೨೨.೩೩೨॥
ಆ ಮಹಾರಥನಾದ ಅರ್ಜುನನಿಂದ ಆ ಎಲ್ಲಾ ನಿವಾತಕವಚ ರಾಕ್ಷಸರು ಕೊಲ್ಲಲ್ಪಟ್ಟರು. ತದನಂತರ
ಅರ್ಜುನನು ನಿವಾತಕವಚರಿಗಿಂತ ವಿಲಕ್ಷಣರಾದ, ಪೌಲೋಮಗಣ ಮತ್ತು ಕಾಲೇಯಗಣ ಎಂಬ ಹೆಸರುಳ್ಳ ಅರವತ್ತು
ಸಾವಿರ ಸಂಖ್ಯೆಯ ದೈತ್ಯರನ್ನು ಕುರಿತು ತೆರಳಿದನು.
ತಾನಸ್ತ್ರಶತ್ರಾಣ್ಯಭಿವರ್ಷಮಾಣಾನ್ ಧನಞ್ಜಯಃ ಪಾಶುಪತಾಸ್ತ್ರತೋ ದ್ರಾಕ್ ।
ದಗ್ಧ್ವಾ ಯಯೌ ಪುನರೇವೇನ್ದ್ರಸದ್ಮ ತಂ ಸಸ್ವಜೇ ಪ್ರೀತಿಯುತಶ್ಚ ಶಕ್ರಃ ॥೨೨.೩೩೩॥
ಅಸ್ತ್ರಗಳನ್ನೂ ಶಸ್ತ್ರಗಳನ್ನೂ ಎಸೆಯುವ ಅವರನ್ನು ಧನಞ್ಜಯನು ಶೀಘ್ರದಲ್ಲಿಯೇ ಪಾಶುಪತಾಸ್ತ್ರದಿಂದ
ಸುಟ್ಟು, ಪುನಃ ಇಂದ್ರನ ಮನೆಗೆ ತೆರಳಿದನು. ಇಂದ್ರನು ಅತ್ಯಂತ ಪ್ರೀತಿಯಿಂದ ಅರ್ಜುನನನ್ನು ಆಲಿಂಗಿಸಿದನು.
ಯಯುರನ್ಧಂ ತಮಸ್ತೇSಪಿ ಸರ್ವದೇವದ್ವಿಷೋSಸುರಾಃ ।
ಅಥಾನುಜ್ಞಾಪ್ಯ ಪಿತರಂ ರಥೇನೈನ್ದ್ರೇಣ ಭಾಸ್ವತಾ ।
ಸೋದರ್ಯ್ಯಾಣಾಂ ಸಕಾಶಂ ಸ ಯಯೌ ವಜ್ರಧರಾತ್ಮಜಃ ॥೨೨.೩೩೪॥
ದೇವದ್ವೇಷಿಗಳಾದ ಆ ಎಲ್ಲಾ ಅಸುರರು ಆನ್ಧಂತಮಸ್ಸನ್ನು ಹೊಂದಿದರು. ತದನಂತರ ತಂದೆಯಾದ
ಇಂದ್ರನ ಅಣತಿಯನ್ನು ಪಡೆದು, ಪ್ರಕಾಶಮಾನವಾದ ಇಂದ್ರನ ರಥದ ಮೂಲಕ ಅರ್ಜುನನು ತನ್ನ ಅಣ್ಣ-ತಮ್ಮಂದಿರರಿರುವಲ್ಲಿಗೆ
ತೆರಳಿದನು.
ಆಯಾನ್ತಮೀಕ್ಷ್ಯ ಬೀಭತ್ಸುಂ ಮುಮುದುರ್ಭ್ರಾತರೋSಧಿಕಮ್ ।
ಊಷುಶ್ಚ ಚತುರೋSಬ್ದಾಂಸ್ತೇ ಪುನರ್ಮ್ಮೇರೌ ಪ್ರಮೋದಿನಃ ॥೨೨.೩೩೫॥
ಆ ಎಲ್ಲಾ ಸಹೋದರರು ಬಂದಿರುವ ಬೀಭತ್ಸುವನ್ನು(ಅರ್ಜುನನನ್ನು) ಕಂಡು ಅತ್ಯಂತ ಸಂತೋಷಪಟ್ಟರು.
ಅವರು ಪುನಃ ಮೇರುಪರ್ವತದಲ್ಲಿಯೇ ಆನಂದಿಗಳಾಗಿ ನಾಲ್ಕುವರ್ಷಗಳ ಕಾಲ ವಾಸಮಾಡಿದರು.
ಕಥಾಭಿರ್ವಾಸುದೇವಸ್ಯ ದ್ಧ್ಯಾನೇನಾಭ್ಯರ್ಚ್ಚನೇನ ಚ ।
ಯಯೌ ಕಾಲಃ ಸುಖೇನೈವ ತೇಷಾಂ ವಿಷ್ಣುರತಾತ್ಮನಾಮ್ ॥೨೨.೩೩೬॥
ಪರಮಾತ್ಮನ ಕಥೆಗಳಿಂದಲೂ, ಪರಮಾತ್ಮನ ಗುಣಗಣ ಚಿಂತನೆಯಿಂದಲೂ, ಪೂಜೆಯಿಂದಲೂ, ವಿಷ್ಣುಭಕ್ತರಾದ
ಅವರ ಕಾಲವು ಸುಖವಾಗಿ ಸಾಗಿತು.
No comments:
Post a Comment