ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, November 2, 2022

Mahabharata Tatparya Nirnaya Kannada 22-379-383

 

ತತೋSಮಿತೌಜಾ ಭಗವಾನುಪಾಗಮನ್ನಾರಾಯಣಃ ಸತ್ಯಭಾಮಾಸಹಾಯಃ ।

ಸಮ್ಪೂಜಿತಃ ಪಾಣ್ಡವೈಸ್ತೈಃ ಸಮೇತಶ್ಚಕ್ರೇSಥ ಸೌಹಾರ್ದ್ದನಿಮಿತ್ತಸತ್ಕಥಾಃ ॥೨೨.೩೭೯॥

 

ತದನಂತರ ಎಣೆಯಿರದ ಪರಾಕ್ರಮವುಳ್ಳ, ಷಡ್ಗುಗುಣೈಶ್ವರ್ಯಸಂಪನ್ನನಾದ ಶ್ರೀಕೃಷ್ಣನು ಸತ್ಯಭಾಮೆಯಿಂದ ಕೂಡಿಕೊಂಡು ಕಾಡಿಗೆ ಬಂದ.  ಅಲ್ಲಿ ಪಾಂಡವರಿಂದ ಪೂಜಿತನಾದ ಕೃಷ್ಣ, ಗೆಳೆತನದಿಂದ ಸಂವಾದ ಮೊದಲಾದವುಗಳನ್ನು ಮಾಡಿದ.

 

ಕೃಷ್ಣಾ ಚ ಸತ್ಯಾ ಚ ಪರಸ್ಪರಂ ಮುದಾ ಸಮ್ಭಾಷಣಂ ಚಕ್ರತುರ್ಯ್ಯೋಷಿದಗ್ರ್ಯೇ ।

ಪರೀಕ್ಷನ್ತ್ಯಾ ಸತ್ಯಯಾ ಸರ್ವವೇತ್ರ್ಯಾ ನಿರ್ದ್ದೋಷಯಾ ಚೋದಿತಾ ಪ್ರಾಹ ಕೃಷ್ಣಾ ॥೨೨.೩೮೦॥

 

ಸ್ತ್ರಿಯರಲ್ಲೇ ಅತ್ಯಂತ ಶ್ರೇಷ್ಠರಾದ ದ್ರೌಪದಿ ಮತ್ತು ಸತ್ಯಭಾಮೆಯು ಪರಸ್ಪರ ಸಂಭಾಷಣೆಯನ್ನು ಮಾಡಿದರು. ಅಲ್ಲಿ ಪರೀಕ್ಷೆ ಮಾಡಲೋಸುಗ, ಎಲ್ಲವನ್ನೂ ಬಲ್ಲ, ದೋಷ ಇಲ್ಲದ ಸತ್ಯಭಾಮೆಯಿಂದ ಪ್ರಶ್ನೆ ಮಾಡಲ್ಪಟ್ಟ ದ್ರೌಪದಿಯು ಹೇಳಿದಳು:

 

ಸ್ತ್ರೀಧರ್ಮ್ಮಾನಖಿಲಾಂಸ್ತತ್ರ ಸತ್ಯಾಂ ನಿರ್ದ್ದೋಷಸಂವಿದಮ್ ।

ಜ್ಞಾತ್ವಾSಪಿ ಕೃಷ್ಣಾ ಪ್ರೋವಾಚ ಲೋಕಶಿಕ್ಷಾರ್ತ್ಥಮೇವ ತು ॥೨೨.೩೮೧॥

 

ಸತ್ಯಭಾಮೆಯು ಎಲ್ಲವನ್ನೂ ತಿಳಿದಿದ್ದಾಳೆ ಎಂದು ತಿಳಿದೂ,  ಎಲ್ಲಾ ಸ್ತ್ರೀಧರ್ಮಗಳನ್ನು (ಒಂದು ಹೆಣ್ಣು ಯಾವ ಪ್ರಸಂಗದಲ್ಲಿ ಹೇಗೆ ಇರಬೇಕು, ಇತ್ಯಾದಿ ಸ್ತ್ರೀಧರ್ಮವನ್ನು), ಲೋಕಶಿಕ್ಷಣಾರ್ಥವಾಗಿ ದ್ರೌಪದಿಯು ಹೇಳಿದಳು.

 

ಕ್ರೀಡಾರ್ತ್ಥಮೇವ ವಚನಂ ಜ್ಞಾತ್ವಾ ಸತ್ಯಾಸಮೀರಿತಮ್ ।

ತಸ್ಯಾನುಸಾರವಾಕ್ಯಾನಿ ತತ್ಪ್ರೀತ್ಯಾ ಏವ ಸಾSಬ್ರವೀತ್ ॥೨೨.೩೮೨॥

 

ಸತ್ಯಭಾಮೆ ಹೇಳಿದ ಮಾತನ್ನು ಕೇವಲ ಕ್ರೀಡೆಗಾಗಿ ಎಂದು ತಿಳಿದು, ಅದಕ್ಕೆ ಅನುಗುಣವಾದ ಮಾತನ್ನು, ಅವಳ ಮೇಲಿನ ಪ್ರೀತಿಯಿಂದ ಮತ್ತು ಅವಳಿಗೆ ಸಂತೋಷವಾಗಲೆಂದೇ ದ್ರೌಪದಿ ನುಡಿದಳು:

 

ತತಃ ಕತಿಪಯಾಹಾನಿ ನಿರುಷ್ಯಾತ್ರ ಜನಾರ್ದ್ದನಃ ।

ಯಯೌ ಸಭಾರ್ಯ್ಯಃ ಸ್ವಪುರೀಂ ಪಾಣ್ಡವಾನನುಮಾನ್ಯ ಚ ॥೨೨.೩೮೩॥

 

ಕೆಲವು ದಿನಗಳ ಕಾಲ ಶ್ರೀಕೃಷ್ಣ ಪರಮಾತ್ಮನು ಪಾಂಡವರಿದ್ದಲ್ಲಿ ವಾಸಮಾಡಿ, ತದನಂತರ ತನ್ನ ಹೆಂಡತಿಯೊಂದಿಗೆ, ಪಾಂಡವರಿಗೆ ಹೋಗಿ ಬರುತ್ತೇನೆ ಎಂದು ಹೇಳಿ, ದ್ವಾರಕೆಗೆ ಮರಳಿದ.

No comments:

Post a Comment