ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, November 8, 2022

Mahabharata Tatparya Nirnaya Kannada 22-384-389

 

ತತಃ ಕದಾಚಿನ್ಮೃಗಯಾಂ ಗತೇಷು ಪಾರ್ತ್ಥೇಷು ರಾಜಾ ಸೈನ್ಧವ ಆಸಸಾದ ।

ಸಕೋಟಿಕಾಶ್ಯಃ  ಸಬಲಶ್ಚ ತೇಷಾಂ ವರಾಶ್ರಮಂ ಸೋSತ್ರ ದದರ್ಶ ಕೃಷ್ಣಾಮ್ ॥೨೨.೩೮೪॥

 

ಒಮ್ಮೆ ಪಾಂಡವರೆಲ್ಲರೂ ಬೇಟೆಗೆ ತೆರಳಿದ್ದ ಸಮಯದಲ್ಲಿ, ಸಿಂಧು ದೇಶಕ್ಕೆ ಅಧಿಪತಿಯಾದ ಜಯದ್ರಥನು, ರಾಜನಾದ ಕೋಟಿಕಾಶ್ಯನೊಂದಿಗೆ ಹಾಗೂ ತನ್ನ ಸೈನ್ಯದಿಂದಲೂ ಕೂಡಿಕೊಂಡು ಪಾಂಡವರ ಆಶ್ರಮವನ್ನು ಹೊಂದಿದನು ಮತ್ತು ಅಲ್ಲಿ ದ್ರೌಪದಿಯನ್ನು ಕಂಡನು.

 

ವ್ರಜನ್ ವಿವಾಹಾರ್ತ್ಥಮಸೌ ನಿಶಾಮ್ಯ ಕೃಷ್ಣಾಂ ಕೋಟಿಂ ಪ್ರೇಷಯಿತ್ವೈವ ಕಾಶ್ಯಮ್ ।

ಆಯಾಹಿ ಮಾಮಿತ್ಯವದತ್ ಸುಪಾಪಸ್ತಯಾ ನಿರಸ್ತೋ ಜಗೃಹೇ ಕರೇ ಚ ॥೨೨.೩೮೫॥

 

ಯಾವುದೋ ಒಂದು ವಿವಾಹಕ್ಕಾಗಿ ಆ ಮಾರ್ಗದಲ್ಲಿ ಹೋಗುತ್ತಿದ್ದ  ಆ ಜಯದ್ರಥನು, ದ್ರೌಪದಿಯನ್ನು ಕಂಡು, ಅವಳನ್ನು ತನ್ನಲ್ಲಿಗೆ ಬರುವಂತೆ ಕೋಟಿಕಾಶ್ಯನಲ್ಲಿ ಹೇಳಿ ಕಳುಹಿಸಿದ. ದ್ರೌಪದಿಯಿಂದ ತಿರಸ್ಕರಿಸಲ್ಪಟ್ಟ ಅತ್ಯಂತ ಪಾಪಿಷ್ಠನಾದ ಜಯದ್ರಥನು ಅವಳ ಕೈಯನ್ನು ಹಿಡಿದುಕೊಂಡ.

 

ತಯಾ ಧುತೋ ನಿಪಪಾತಾSಶು ಭೂಮೌ ಪುನಶ್ಚ ಸಜ್ಜೋSಭ್ಯಪತದ್ ವಿಲಜ್ಜಃ ।

ತತೋSಸಹಾಯತ್ವತ ಏವ ಕೃಷ್ಣಾ ಧೌಮ್ಯಾಯೋಕ್ತ್ವಾ ಸಾಗ್ನಿರನ್ವೇಹಿ ಮೇತಿ ॥೨೨.೩೮೬॥

 

ಸಮಾರುಹತ್ ಸೈನ್ಧವಸ್ಯೈವ ಯಾನಂ ಸುಖಂ ನ ಯಾಸೀತಿ ತಮೀರಯಿತ್ವಾ ।

ತದಾ ನಿಮಿತ್ತಾನಿ ನಿಶಾಮ್ಯ ಪಾರ್ತ್ಥಾಃ ಸಮಾಯಯುಸ್ತ್ವರಯೈವಾSಶ್ರಮಾಯ ॥೨೨.೩೮೭॥

 

ದ್ರೌಪದಿಯಿಂದ ದೂಡಲ್ಪಟ್ಟವನಾದ ಜಯದ್ರಥ ಭೂಮಿಯಲ್ಲಿ ಬಿದ್ದ. ಮತ್ತೆ ಸಿದ್ದನಾಗಿ, ನಾಚಿಕೆಯೇ ಇಲ್ಲದೇ, ದ್ರೌಪದಿಯ ಎದುರು ಬಂದ. ಆಗ ಯಾರೂ ಸಹಾಯಕ್ಕಾಗಿ ಇಲ್ಲದಿರುವುದರಿಂದ ದ್ರೌಪದಿಯು ಧೌಮ್ಯರಿಗೆ ‘ಅಗ್ನಿಯನ್ನು ಹಿಡಿದು ನನ್ನನ್ನು ಅನುಸರಿಸಿ ಎಂದು ಹೇಳಿ, ಜಯದ್ರಥನನ್ನು ಕುರಿತು ‘ನೀನು ಸುಖವಾಗಿ ಪಟ್ಟಣಕ್ಕೆ ಹಿಂತಿರುಗುವೆ ಎಂದುಕೊಳ್ಳಬೇಡ ಎಂದು  ಹೇಳಿ ಅವನ ರಥವನ್ನೇರಿದಳು. ಆಗಲೇ ಪಾಂಡವರು ಅಶುಭ ನಿಮಿತ್ತಗಳನ್ನು ಕಂಡು, ಅವಸರದಿಂದ ಆಶ್ರಮಕ್ಕೆ ಹಿಂತಿರುಗಿದರು.

 

ಶ್ರುತ್ವಾ ದಾಸೀವಚನಾತ್ ಸರ್ವಮೇವ ಚಕ್ರುಃ ಕ್ಷಿಪ್ರಂ ಸೈನ್ಧವಸ್ಯಾನುಯಾನಮ್ ।

ಅಕ್ರೋಶಮಾನಂ ಭೀಮಸೇನೇತಿ ಧೌಮ್ಯಂ ದೃಷ್ಟ್ವಾ ತಸ್ಯಾಗ್ರೇ ಸೈನ್ಧವಂ ಚಾತಿಪಾಪಮ್ ॥೨೨.೩೮೮॥

 

ಚಕ್ರುರ್ನ್ನಾದಾನ್ ಸಿಂಹವತ್ ಪಾಣ್ಡುಪುತ್ರಾ ದೃಷ್ಟ್ವಾ ಕೃಷ್ಣಾ ಚಾವತರದ್ ರಥಾತ್ ತದಾ ।

ಧೌಮ್ಯೇನ ಸಾರ್ದ್ಧಂ ಸಾ ಯಯೌ ಚಾSಶ್ರಮಾಯ ಸೈನ್ಯಂ ಪಾರ್ತ್ಥಾಸ್ತತ್ರ ನಿಜಘ್ನುರೋಜಸಾ  ॥೨೨.೩೮೯॥

 

ಅಲ್ಲಿದ್ದ ಒಬ್ಬಳು ದಾಸಿಯಿಂದ ಎಲ್ಲವನ್ನೂ ಕೂಡಾ ಕೇಳಿ ತಿಳಿದು, ಕ್ಷಿಪ್ರದಲ್ಲಿ ಅವರು ಜಯದ್ರಥನ ಹಿಂಬಾಲಿಸುವಿಕೆಯನ್ನು ಮಾಡಿದರು. ‘ಭೀಮಸೇನ’ ಎಂದು ಗಟ್ಟಿಯಾಗಿ ಕಿರುಚುತ್ತಿರುವ ಧೌಮ್ಯರನ್ನು ಮತ್ತು ಅವರ ಮುಂದಿರುವ ಅತ್ಯಂತ ಪಾಪಿಷ್ಠನಾದ ಜಯದ್ರಥನನ್ನು ಕಂಡ ಅವರು ಸಿಂಹದಂತೆ ಗರ್ಜಿಸಿದರು. ದ್ರೌಪದಿಯು ಆಗಲೇ ರಥದಿಂದ ಇಳಿದು ಧೌಮ್ಯರಿಂದ ಒಡಗೂಡಿ ಆಶ್ರಮಕ್ಕೆ ಹೋದಳು. ಪಾಂಡವರು  ಜಯದ್ರಥನ ಸೈನ್ಯವನ್ನು ಸಂಹಾರ ಮಾಡಿದರು.

No comments:

Post a Comment