ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, November 9, 2022

Mahabharata Tatparya Nirnaya Kannada 22-390-398

 

ಅಗ್ರೇ ಕೃಷ್ಣಾಂ ಯೋSವದತ್ ಸಿನ್ಧುರಾಜಂ ಯಾಹೀತಿ ತಂ ಕೋಟಿಕಾಶ್ಯಂ ಸುಪಾಪಮ್ ।

ಛಿತ್ವಾ ಶಿರೋ ಮೃತ್ಯವೇ ಭೀಮಸೇನೋ ನಿವೇದಯಾಮಾಸ ತಮಃ ಸ ಚಾಗಾತ್ ॥೨೨.೩೯೦॥

 

ಯಾರು ಮೊದಲು ದ್ರೌಪದಿ ಬಳಿ ಬಂದು  ‘ನೀನು ಜಯದ್ರಥನನ್ನು ಮದುವೆಯಾಗು’ ಎಂದು ಹೇಳಿದ್ದನೋ, ಅಂತಹ ಕೋಟಿಕಾಶ್ಯನ ತಲೆಯನ್ನು ಭೀಮಸೇನ ಕತ್ತರಿಸಿ ಮೃತ್ಯುವಿಗೆ ಅರ್ಪಿಸಿದನು. ಪಾಪಿಷ್ಠನಾದ ಆ ಕೋಟಿಕಾಶ್ಯನು ಅನ್ಧಂತಮಸ್ಸನ್ನು ಹೊಂದಿದನು.

 

ಹತ್ವಾ ಸೇನಾಮಖಿಲಾಂ ಸೈನ್ಧವಸ್ಯ ಭೀಮಾರ್ಜ್ಜುನೌ ಸಯಮಂ ಧರ್ಮ್ಮರಾಜಮ್ ।

ವಿಸೃಜ್ಯ ಧಾವನ್ತಮಥಾನುಜಗ್ಮತುರ್ಜ್ಜಯದ್ರಥಂ ವಿರಥಂ ಫಲ್ಗುನೋSಕಃ ॥೨೨.೩೯೧॥

 

ಜಯದ್ರಥನ ಎಲ್ಲಾ ಸೇನೆಯನ್ನು ಕೊಂದ ಭೀಮಾರ್ಜುನರು, ಧರ್ಮರಾಜ ಹಾಗೂ ನಕುಲ ಸಹದೇವರನ್ನು ಆಶ್ರಮಕ್ಕೆ ಕಳುಹಿಸಿ, ಓಡುತ್ತಿರುವ ಜಯದ್ರಥನನ್ನು ಅನುಸರಿಸಿದರು. ಅರ್ಜುನನು ಜಯದ್ರಥನನ್ನು ರಥಹೀನನನ್ನಾಗಿ ಮಾಡಿದನು.

 

ಪದ್ಭ್ಯಾಂ ಧಾವನ್ತಮ್  ಭೀಮಸೇನೋ ನಿಗೃಹ್ಯ ದತ್ವಾ ಪ್ರಹಾರಾಂಶ್ಚ ಭೃಶಂ ತಮಾರ್ತ್ತಮ್ ।

ಆದಾಯಾಧಾದ್ ದ್ರೌಪದೀಪಾದಯೋಶ್ಚ ತಂ ಮೋಚಯಾಮಾಸ ಚ ಧರ್ಮ್ಮಸೂನುಃ ॥೨೨.೩೯೨॥

 

ರಥವನ್ನು ಕಳೆದುಕೊಂಡು, ಕಾಲಿನಿಂದ ಓಡುವಂತಹ ಜಯದ್ರಥನನ್ನು ಭೀಮಸೇನನು ಹಿಡಿದು, ಗಟ್ಟಿಯಾದ ಗುದ್ದುಗಳನ್ನು ಕೊಟ್ಟು, ಅವನನ್ನು ಸಂಕಟಗೊಂಡವನನ್ನಾಗಿ ಮಾಡಿ, ತಂದು ದ್ರೌಪದಿಯ ಪಾದಗಳ ಬುಡದಲ್ಲಿ ಕೆಡವಿದನು. ಆಗ ಧರ್ಮರಾಜನು ಆ ಜಯದ್ರಥನನ್ನು ಬಿಡುಗಡೆ ಮಾಡಿದನು.

 

ದಾಸೋ ದ್ರೌಪದ್ಯಾ ಅಹಮಿತ್ಯೇವ ವಾಕ್ಯೇ ತೇನೈವೋಕ್ತೇ ಭೀಮಸೇನೋSಪ್ಯಮುಞ್ಚತ್ ।

ಸ ಬ್ರೀಳಿತೋSವಾಗ್ವದನೋ ಯಯೌ ವನಂ ಪಾರ್ತ್ಥಾಶ್ಚ ತತ್ರೋಷುರತಿಪ್ರಮೋದಿನಃ ॥೨೨.೩೯೩॥

 

‘ನಾನು ದ್ರೌಪದಿಯ ದಾಸನು’ ಎಂದು ಜಯದ್ರಥನಿಂದಲೇ ಹೇಳಲ್ಪಡಲು, ಭೀಮಸೇನನು ಕೂಡಾ  ಅವನನ್ನು ಬಿಟ್ಟುಬಿಟ್ಟ. ಜಯದ್ರಥನು ಬಹಳ ಅವಮಾನಿತನಾಗಿ ತಲೆತಗ್ಗಿಸಿ, ತಪಸ್ಸಿಗಾಗಿ ಕಾಡಿಗೆ ತೆರಳಿದ. ಪಾಂಡವರಾದರೋ ಆಶ್ರಮದಲ್ಲಿ ಅತ್ಯಂತ ಆನಂದದಿಂದ ವಾಸಮಾಡಿದರು.

 

ಮಾರ್ಕ್ಕಣ್ಡೇಯಸ್ತದಾSSಗತ್ಯ ತೇಷಾಮಕಥಯತ್ ಕಥಾಃ ।

ಬಹ್ವ್ಯಶ್ಚೈವ ವಿಚಿತ್ರಾಶ್ಚ ಭಾಷಾತ್ರಯಸಮನ್ವಿತಾಃ ॥೨೨.೩೯೪॥

 

ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಾರ್ಕಂಡೇಯರು ಪಾಂಡವರಿಗೆ ಬಹಳವಾಗಿರುವ, ಅಚ್ಚರಿಯನ್ನು ಕೊಡುವ, ಮೂರು ಭಾಷೆಯಿಂದ ಕೂಡಿದ ಕಥೆಗಳನ್ನು ಹೇಳಿದರು.

 

[ಮಾರ್ಕಂಡೇಯ ಸಮಾಸ್ಯಾಪರ್ವ, ಮೊದಲಾದವುಗಳಲ್ಲಿ ಬಹಳ ಕಥೆಗಳಿವೆ. ಆ ಕಥೆಗಳನ್ನು ಯಥಾರ್ಥವಾಗಿ ಹೇಗೆ ಹೇಳಿದ್ದಾರೋ ಹಾಗೇ ತೆಗೆದುಕೊಳ್ಳಬಾರದು ಎಂದು ಹೇಳುತ್ತಾರೆ. ಹಾಗಿದ್ದರೆ ಯಾವುದನ್ನು ಸ್ವೀಕರಿಸಬೇಕು ಎಂದರೆ:]

 

ಲೋಕದರ್ಶನಮಾಶ್ರಿತ್ಯ ದೇವಾಶ್ಚ ಮುನಯಸ್ತಥಾ ।

ಬ್ರೂಯುಃ ಕಥಾಸ್ತತ್ರ ಶಿಕ್ಷಾ ಗ್ರಾಹ್ಯಾ ನಾರ್ತ್ಥಾಃ ಕಥಞ್ಚನ ॥೨೨.೩೯೫॥

 

ಲೋಕ ಅಥವಾ ಜನರು ಯಾವ ರೀತಿ ಕಂಡರೋ(ಅವರ ದರ್ಶನ),  ಆರೀತಿ ದೇವತೆಗಳು ಮತ್ತು ಮುನಿಗಳು ಕಥೆಗಳನ್ನು ಹೇಳುತ್ತಾರೆ. ಆ ಕಥೆಯ ವಿಚಾರದಲ್ಲಿ ನೀತಿಯನ್ನು  ಸ್ವೀಕರಿಸಬೇಕು, ಅರ್ಥವನ್ನು ಸ್ವೀಕರಿಸಬಾರದು.

[ಮಹಾಭಾರತದಲ್ಲಿ ಇಂತಹ ಕಥೆಗಳು ಬಂದಿವೆ. ಉದಾಹರಣೆಗೆ ಅಲ್ಲಿ ಗರುಡನ ಮಾನಭಂಗವಿದೆ. ಗರುಡ ಒಬ್ಬ ಸಾಮಾನ್ಯ ಸ್ತ್ರೀಯ ಮುಂದೆ ಸೋಲನ್ನು ಒಪ್ಪುತ್ತಾನೆ! ಹಾಗೇ ನಳ ಕಲಿಯನ್ನು ನಿಗ್ರಹಿಸುವ ಕಥೆ,  ಇತ್ಯಾದಿ. ಅದು ಲೋಕದ ದರ್ಶನ. ಈ ಎಲ್ಲಾ ಕಥೆಗಳು ಲೌಕಿಕ ನೀತಿಯನ್ನು ಹೇಳುತ್ತವೆಯೇ ವಿನಃ, ಇದು ಇತಿಹಾಸವೂ ಅಲ್ಲಾ, ದೇವತೆಗಳ ಸ್ವರೂಪ ನಿರ್ಣಯವೂ ಅಲ್ಲ. ದೇವತೆಗಳ ಸ್ವರೂಪ ನಿರ್ಣಯ ಇರುವುದು ಪಾಂಡವರ ಕಥೆಯಲ್ಲಿ. ಕೃಷ್ಣಾವತಾರದ ಕಥೆಯೇ ನಿರ್ಣಾಯಕ].

 

ಅರ್ತ್ಥಃ ಸಮಾಧಿಭಾಷಾಸು ಗ್ರಾಹ್ಯಃ ಸರ್ವೋSಪ್ಯಸಂಶಯಮ್ ।

ಪರದರ್ಶನಭಾಷಾಸು ಜ್ಞೇಯಂ ತದ್ದರ್ಶನಂ ತಥಾ ॥೨೨.೩೯೬॥

 

ಸಮಾಧಿ(ಇದ್ದಂತೆ ಹೇಳುವ) ಭಾಷೆಯಿಂದ ಯಾವ ಅರ್ಥವನ್ನು ಹೇಳಿರುತ್ತಾರೋ, ಅದೆಲ್ಲವನ್ನೂ  ಯಾವುದೇ ಸಂಶಯವಿಲ್ಲದೇ ಸ್ವೀಕರಿಸಬೇಕು. ಅವೈದಿಕ ಪರದರ್ಶನದಲ್ಲಿ ಹೇಳಿರುವುದನ್ನು ಎಂದೂ ಸ್ವೀಕರಿಸಬಾರದು.  

 

ಗ್ರಾಹ್ಯೋ ನಾರ್ತ್ಥೋ  ವೈದಿಕಂ ತು ದರ್ಶನಂ ಗ್ರಾಹ್ಯಮೇವ ಚ ।

ಅನ್ಯಾರ್ತ್ಥೋ ಗುಹ್ಯಭಾಷಾಸು ಗ್ರಾಹ್ಯ ಏವಂ ವಿನಿರ್ಣ್ಣಯಃ ॥೨೨.೩೯೭॥

 

ಹೀಗೇ, ಇತಿಹಾಸದಲ್ಲಿರುವ ದರ್ಶನಭಾಷೆಯನ್ನೂ ಕೂಡಾ ತೆಗೆದುಕೊಳ್ಳಬಾರದು.  ಆದರೆ ವೈದಿಕ ದರ್ಶನವನ್ನು ಸ್ವೀಕರಿಸಬೇಕು. ಇನ್ನು ಗುಹ್ಯಭಾಷೆಗೆ  ಮೇಲ್ನೋಟಕ್ಕೆ ಕಾಣುವ ಅರ್ಥಕ್ಕಿಂತ ಇತರವಾದ ಅರ್ಥವನ್ನು ಸ್ವೀಕರಿಸಬೇಕು. ಇದು ನಿರ್ಣಯವು.

 

ಜಯದ್ರಥಸ್ತು ಭೀಮೇನ ತದಾ ಪಞ್ಚಶಿಖೀಕೃತಃ ।

ತಪಸಾ ಶಿವಮಾರಾದ್ಧ್ಯ ವವ್ರೇ ಪಾಣ್ಡವರೋಧನಮ್ ।

ಋತೇSರ್ಜ್ಜುನಾದರ್ಜ್ಜುನಸ್ಯ ತುಷ್ಟೋ ಹಿ ತಪಸಾ ಶಿವಃ ॥೨೨.೩೯೮॥

 

ಭೀಮಸೇನ ಜಯದ್ರಥನ ತಲೆಯನ್ನು ಬೋಳಿಸಿ, ಐದು ಜುಟ್ಟುಗಳನ್ನು ಇಟ್ಟ. ಜಯದ್ರಥ ಬಹಳ ಅವಮಾನಗೊಂಡು ತಪಸ್ಸಿನಿಂದ ಶಿವನನ್ನು ಆರಾಧನೆಮಾಡಿ ಪಾಂಡವರನ್ನು ತಡೆಯುವ ಶಕ್ತಿಯ ವರವನ್ನು ಬೇಡಿದ. ಆಗತಾನೇ ಅರ್ಜುನ ಮಾಡಿದ ತಪಸ್ಸಿನಿಂದ ಸಂತುಷ್ಟನಾಗಿದ್ದ ಶಿವ, ‘ಅರ್ಜುನನನ್ನು ಬಿಟ್ಟು ಉಳಿದವರನ್ನು ತಡೆಯುವ ಸಾಮರ್ಥ್ಯ ನಿನಗೆ ಬರಲೀ’ ಎನ್ನುವ ವರವನ್ನು ಜಯದ್ರಥನಿಗೆ ಕೊಟ್ಟ.  

No comments:

Post a Comment