ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, November 14, 2022

Mahabharata Tatparya Nirnaya Kannada 22-451-458

 

ಧರ್ಮ್ಮಾತ್ಮಜೋSಥಾSಜಗಾಮೋದಕಾನ್ತಂ ದೃಷ್ಟ್ವಾ ಭ್ರಾತೄಂಸ್ತತ್ರ ದುಃಖಾಭಿತಪ್ತಃ ।

ಇಚ್ಛನ್ ಪಾತುಂ ವಾರಿ ಸಂವಾರಿತಶ್ಚ ಪಿತ್ರಾ ಬಕಾಗಾರಮಿತೇನ ನಾಪಾತ್ ॥೨೨.೪೫೧॥

 

ತದನಂತರ ಯಮಧರ್ಮನ ಮಗನಾದ ಯುಧಿಷ್ಠಿರನು ನೀರಿಗಾಗಿ ತೆರಳಿದ ತಮ್ಮಂದಿರರ್ಯಾರೂ ಹಿಂತಿರುಗದೇ ಇರುವುದನ್ನು ನೋಡಿ, ತಾನೇ ನೀರಿನ ಬಳಿಗೆ ಬಂದ. ಅಲ್ಲಿ ತನ್ನ ತಮ್ಮಂದಿರನ್ನು ನೋಡಿ ದುಃಖಗೊಂಡರೂ ಕೂಡಾ, ನೀರನ್ನು ಕುಡಿಯಲು ಬಯಸಿದವನಾದನು. ಆಗ ಕೊಕ್ಕರೆಯ ವೇಷದಲ್ಲಿರುವ ತಂದೆಯಿಂದ ತಡೆಯಲ್ಪಟ್ಟವನಾಗಿ ನೀರನ್ನು ಕುಡಿಯಲಿಲ್ಲ.

 

ಅರ್ತ್ಥೇ ಭ್ರಾತೄಣಾಮೈಚ್ಛದಸೌ ತದೀಯಪ್ರಶ್ನಪ್ರತಿವ್ಯಾಹರಣಂ ದಯಾಳುಃ ।

ತತೋ ಧರ್ಮ್ಮೋ ಯಕ್ಷತನುಃ ಸ ಭೂತ್ವಾ ಪ್ರಶ್ನಾಂಶ್ಚಕ್ರೇ ವ್ಯಾಕರೋತ್  ತಾನ್ ಸ ಪಾರ್ತ್ಥಃ ॥೨೨.೪೫೨॥

 

ತನ್ನ ತಮ್ಮಂದಿರಿಗಾಗಿ ಆ ಯಕ್ಷನ ಪ್ರಶ್ನೆಗೆ ಉತ್ತರಕೊಡಲು ದಯಾಳುವಾದ ಧರ್ಮರಾಜ ಬಯಸಿದ. ಆಗ ಬಕವೇಷವನ್ನು ಬಿಟ್ಟು, ದೊಡ್ಡ ಅವ್ಯಕ್ತವಾದ ವೇಷವನ್ನು ಧರಿಸಿದ ಯಮಧರ್ಮನು, ಯುಧಿಷ್ಠಿರನಿಗೆ ಪ್ರಶ್ನೆಗಳನ್ನು ಮಾಡಿದನು ಮತ್ತು ಧರ್ಮರಾಜನು ಅದಕ್ಕೆ ಉತ್ತರಕೊಟ್ಟನು[1].

 

ತತಸ್ತುಷ್ಟೋ ವರಮಸ್ಮೈ ದದೌ ಸ ಏಕೋತ್ಥಾನಂ ಭ್ರಾತೃಮದ್ಧ್ಯೇ ಸ ವವ್ರೇ ।

ಯದ್ಯೇಕಃ ಸ್ಯಾನ್ನಕುಲೋSಸ್ತ್ವಿತ್ಯಥಾSಹ ತುಷ್ಟೋ ಧರ್ಮ್ಮಃ ಕಥಮೇತತ್ ಕೃತಂ ತೇ ॥೨೨.೪೫೩॥

 

ಯುಧಿಷ್ಠಿರನ ಉತ್ತರದಿಂದ ಸಂತೃಪ್ತನಾದ ಯಮಧರ್ಮ, ಧರ್ಮರಾಜನಿಗೆ ಅವನ ತಮ್ಮಂದಿರರಲ್ಲಿ ಯಾರಾದರೂ ಒಬ್ಬ ಮಾತ್ರ ಏಳಬಹುದು ಎನ್ನುವ ವರವನ್ನಿತ್ತನು. ಒಬ್ಬನೇ ಆದರೆ ನಕುಲನೇ ಏಳಲಿ ಎಂದು ಯುಧಿಷ್ಠಿರ ಹೇಳಿದಾಗ, ತೃಪ್ತಿಗೊಂಡ ಯಮಧರ್ಮನು ಏಕಾಗಿ ಇದನ್ನು ಮಾಡಿದೆ(ಏಕಾಗಿ ನಕುಲನನ್ನು ಆರಿಸಿದೆ)  ಎಂದು ಕೇಳಿದನು.

 

ಅತಿಪ್ರೀತಿರ್ಭೀಮಸೇನೇ ತವಾಸ್ತಿ ಬಲೀ ಚಾಸೌ ರಾಜ್ಯಹೇತುಸ್ತವ ಸ್ಯಾತ್ ।

ಇತ್ಯುಕ್ತ ಊಚೇ ಮಾದ್ರಿಪುತ್ರಂ ವಿಹಾಯ ಕುನ್ತೀಪುತ್ರೋ ನ ಮಯೋತ್ಥಾಪನೀಯಃ  ॥೨೨.೪೫೪॥

 

‘ನಿನಗೆ ಭೀಮಸೇನನಲ್ಲಿ ಅತ್ಯಂತ ಪ್ರೀತಿ ಇದೆ. ಅವನು ಅತ್ಯಂತ ಬಲಿಷ್ಠ. ಅವನು ನಿನಗೆ ರಾಜ್ಯಕ್ಕೂ ಕಾರಣನಾಗುವನು’ ಎಂದು ಯಮಧರ್ಮ ಹೇಳಿದಾಗ, ಧರ್ಮರಾಜ ಹೇಳುತ್ತಾನೆ: ‘ಇಬ್ಬರಿಗೇ ಅವಕಾಶವಿರಬೇಕಾದರೆ ಮಾದ್ರಿಯ ಮಗನನ್ನು ಬಿಟ್ಟು ಕುಂತಿಯ ಮಗನು ನನ್ನಿಂದ ಏಳಿಸಲು ಯೋಗ್ಯನಾಗುವುದಿಲ್ಲ’ ಎಂದು.

[ಇಬ್ಬರೇ ಎಂದು ಹೇಳಿದಾಗ ಕುಂತಿಯ ಮಗನಾಗಿ ನಾನು ಬದುಕಿದ್ದೇನೆ, ಹಾಗೆಯೇ ಮಾದ್ರಿಯ ಮಗನೊಬ್ಬ ಬೇಕಲ್ಲವೇ ? ಅದಕ್ಕಾಗಿ ನಕುಲನನ್ನು ಆರಿಸಿಕೊಂಡೆ ಎಂದು ಧರ್ಮರಾಜ ಹೇಳಿದ]

 

ಸ ಏವಮುಕ್ತೋ ನಿತರಾಂ ಪ್ರೀಯಮಾಣ ಉತ್ಥಾಪಯಾಮಾಸ ಚ ತಾನ್ ಸಮಸ್ತಾನ್ ।

ಯತೇಷ್ಟರೂಪಪ್ರಾಪ್ತಿಮೇಷಾಂ ಪುನಶ್ಚ ಸ್ವಕಾಮತೋ ನಿಜರೂಪಾಪ್ತಿಮಾದಾತ್ ॥೨೨.೪೫೫॥

 

ಈರೀತಿಯಾಗಿ ಹೇಳಿದಾಗ ಆ ಯಮಧರ್ಮನು ಅತ್ಯಂತ ಪ್ರೀತಿಯುಳ್ಳವನಾಗಿ, ಅವರೆಲ್ಲರನ್ನೂ ಎಬ್ಬಿಸಿದನು ಮತ್ತು ಅವರಿಗೆ ‘ನೀವು ಬಯಸಿದ ರೂಪವನ್ನು ತೆಗೆದುಕೊಳ್ಳಲು ಶಕ್ತರಾಗುವಿರಿ’ ಎನ್ನುವ ವರವನ್ನು ಕೊಟ್ಟನು. ಅಷ್ಟೇ ಅಲ್ಲಾ,  ‘ನೀವು ಬಯಸಿದಾಗ ನಿಮ್ಮ ನಿಜರೂಪಕ್ಕೆ ಹಿಂತಿರುಗಬಹುದು’ ಎನ್ನುವ ವರವನ್ನೂ ಕೊಟ್ಟನು.

 

ಆಜ್ಞಾತವಾಸೇSಜ್ಞಾತತಾಂ ಸರ್ವದೈವ ದದೌ ತೇಷಾಂ ಪ್ರೀತ ಇವಾSನೃಶಂಸ್ಯಾತ್ ।

ಏವಂ ಕ್ರೀಡನ್ ಪುತ್ರ ಇತ್ಯಾತ್ಮನೈವ ಯಶೋಧರ್ಮಾವಾತ್ಮನೋ ವರ್ದ್ಧಯನ್ ಸಃ ॥೨೨.೪೫೬॥

 

ಅಜ್ಞಾತವಾಸದಲ್ಲಿ ಯಾವಾಗಲೂ ಆ ಪಾಂಡವರು ಯಾರಿಗೂ ತಿಳಿಯದಂತಾಗಿರಲಿ ಎನ್ನುವ ವರವನ್ನೂ ಯಮಧರ್ಮ ಕೊಟ್ಟ. ಧರ್ಮರಾಜನ ಕರುಣೆಯಿಂದ ಪ್ರೀತನಾಗಿಯೋ ಎಂಬಂತೆ ಯಮಧರ್ಮ ಈ ಎಲ್ಲಾ ವರಗಳನ್ನು ಪಾಂಡವರಿಗೆ ಕೊಟ್ಟ. ಮಗ ಎಂದು ತನ್ನಿಂದಲೇ ತಾನು ಸಂತೋಷಪಡುತ್ತಾ, ತನ್ನ ಕೀರ್ತಿಯನ್ನು (ಪುಣ್ಯವನ್ನು) ಜಗತ್ತಿನ ದೃಷ್ಟಿಯಲ್ಲಿ ಬೆಳೆಸಿಕೊಳ್ಳುತ್ತಾ ಯಮ ಸಂತಸಪಟ್ಟ.

[ಯಕ್ಷ ರೂಪದಿಂದ ತಾನೇ ಪ್ರಶ್ನೆಯನ್ನು ಕೇಳಿ, ಅದಕ್ಕೆ ಯುಧಿಷ್ಠಿರ ರೂಪದಲ್ಲಿ ತಾನೇ ಉತ್ತರಕೊಟ್ಟು, ಅದಕ್ಕೆ ತಾನೇ ಪರೀಕ್ಷೆಯನ್ನು ಕೊಟ್ಟು, ತಾನೇ ಮಾದ್ರಿಪುತ್ರನನ್ನು ಆರಿಸಿ, ಅದಕ್ಕೆ ಕಾರಣವನ್ನು ಹೇಳಿ, ತನಗೆಷ್ಟು ದಯೆ ಇದೇ ಎನ್ನುವುದನ್ನು ಜಗತ್ತಿನ ಜನರಿಗೆ ತೋರಿಸಿಕೊಂಡು, ತನ್ನ ಕೀರ್ತಿಯನ್ನು ಯಮಧರ್ಮ ಬೆಳೆಸಿಕೊಂಡ]

 

ಯುಧಿಷ್ಠಿರಾತ್ಮನಸ್ತಸ್ಯ ಯಶೋಧರ್ಮ್ಮವಿವೃದ್ಧಯೇ ।

ಕೃತ್ವಾSರಣ್ಯಪಹಾರಾದಿ ಪುನರ್ದ್ದತ್ವಾ ಚ ತತ್ ಸ್ವಯಮ್ ।

ದಾತುಂ ವಿಪ್ರಾಯ ತದ್ಧಸ್ತೇ ಯಯೌ ಧರ್ಮ್ಮೋ ದಿವಂ ಪುನಃ ॥೨೨.೪೫೭॥

 

ಯುಧಿಷ್ಠಿರನೇ ಆಗಿರುವ ತನ್ನ ಕೀರ್ತಿ ಮತ್ತು ಪುಣ್ಯ ಬೆಳೆಯಲೆಂದು, ತಾನೇ ಅರಣಿಯನ್ನು ಅಪಹರಿಸಿ, ತಾನೇ ಅದನ್ನು ತನ್ನ ಕೈಯಲ್ಲಿ ಕೊಟ್ಟು ‘ಬ್ರಾಹ್ಮಣರಿಗೆ ಕೊಡಿ’ ಎಂದು ಹೇಳಿದ. ತದನಂತರ  ಯಮಧರ್ಮನು ತನ್ನ ಲೋಕಕ್ಕೆ ತೆರಳಿದ.

 

ತತೋ ರಾಜಾ ಭೀಮಸೇನಾರ್ಜ್ಜುನೌ ಚ ಸಾರ್ದ್ಧಂ ಯಮಾಭ್ಯಾಮರಣೀಂ ಪ್ರದಾಯ ।

ಮುದಾ ಯುತಾಃ ಕೃಷ್ಣಯಾ ಸಾರ್ದ್ಧಮೇವ ಸನ್ತುಷ್ಟುವುಃ ಕೃಷ್ಣಮನನ್ತಮಚ್ಯುತಮ್ ॥೨೨.೪೫೮॥

 

ತದನಂತರ ಧರ್ಮರಾಜನು, ಭೀಮಸೇನ, ಅರ್ಜುನ ಹಾಗೂ ನಕುಲ ಸಹದೇವರಿಂದ ಕೂಡಿಕೊಂಡು, ಅರಣಿಯನ್ನು ಬ್ರಾಹ್ಮಣರಿಗೆ ಕೊಟ್ಟು, ದ್ರೌಪದಿಯ ಜೊತೆಗೂಡಿ, ಸಂತಸದಿಂದ ಎಣೆಯಿರದ ಗುಣ-ಪರಾಕ್ರಮವುಳ್ಳ, ತನ್ನ ಪದವಿಯಿಂದ ಎಂದೂ ಜಾರದ ಶ್ರೀಕೃಷ್ಣನನ್ನು ಚನ್ನಾಗಿ ಸ್ತೋತ್ರಮಾಡಿದರು. (ಹೀಗೆ ಪಾಂಡವರು ತಮ್ಮ ವನವಾಸವನ್ನು ಕಳೆದರು).

 

[ಆದಿತಃ ಶ್ಲೋಕಾಃ :  ೩೧೮೧+೪೫೮=೩೬೩೯]

॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಅರಣೀಪ್ರಾಪ್ತಿರ್ನ್ನಾಮ ದ್ವಾವಿಂಶೋSದ್ಧ್ಯಾಯಃ

*********



[1]  ಯಕ್ಷಪ್ರಶ್ನೆ-ಸಂಕ್ಷಿಪ್ತ :

1. ಭೂಮಿಗಿಂತ ಭಾರವಾದ ವಸ್ತು - ತಾಯಿ.   2. ಆಕಾಶಕ್ಕಿಂತ ಎತ್ತರವಾದ ವಸ್ತು - ತಂದೆ.  3. ಗಾಳಿಗಿಂತ ವೇಗವಾಗಿ ಹೋಗುವ ವಸ್ತು -  ಮನಸ್ಸು.   4. ಪ್ರಪಂಚದಲ್ಲಿ ಹುಲ್ಲಿಗಿಂತ ಚನ್ನಾಗಿ ಬೆಳೆಯುವ ವಸ್ತು- ಚಿಂತೆ.    5. ಕಣ್ಣು ತೆರೆದು ನಿದ್ದೆ ಮಾಡುವ ಜೀವಿ- ಮೀನು.  6. ಪ್ರಯಾಣಕಾಲದಲ್ಲಿ (ಯಾತ್ರೆಯಲ್ಲಿ ಇರತಕ್ಕವನಿಗೆ) ಶ್ರೇಷ್ಠನಾದ ಮಿತ್ರ - ಯಾತ್ರೆಯ ಪಡೆ (ಗುಂಪು).  7. ಕಾಯಿಲೆಯಲ್ಲಿರತಕ್ಕವನಿಗೆ ಶ್ರೇಷ್ಠಮಿತ್ರ - ಉತ್ತಮ ವೈದ್ಯ.   8. ಸಾಯಲು ಹೊರಟವನಿಗೆ ಶ್ರೇಷ್ಠನಾದ ಮಿತ್ರ -  ಜೀವನ ಕಾಲದಲ್ಲಿ ಅವನು ಮಾಡಿದ ದಾನ-ಧರ್ಮ. 9. ಮನೆಯಲ್ಲಿ ಅಂತರಂಗದ ಗೆಳತಿ - ನಡತೆ ಹಾಗೂ ಸೇವಾಮನೋಭಾವ ಇರುವ, ಅಹಂಕಾರವಿಲ್ಲದ ಹೆಂಡತಿ. 10. ಧನ್ಯನಾಗಿರುವುದು ಅಂದರೆ - ಇರುವುದರಲ್ಲಿ ಸಂತೃಪ್ತಿಪಡುವುದು,ದಕ್ಷತೆಯಿಂದಿರುವುದು.  11. ಶ್ರೇಷ್ಠವಾದ ಸಂಪತ್ತು - ಶಾಸ್ತ್ರದ ನಿರಂತರ ಶ್ರವಣ (ಕೇಳಿ ತಿಳಿಯುವುದು).   12. ಶ್ರೇಷ್ಠವಾದ  ಲಾಭ - ಆರೋಗ್ಯ.  13. ನಿಜವಾದ ಸುಖ - ತೃಪ್ತಿ (Contentment)   14. ಸ್ನೇಹಿತರಿಂದ ದೂರವಾಗುವುದಕ್ಕೆ ಕಾರಣ  - ನಮ್ಮ ಲೋಭ.  15. ಸ್ವರ್ಗದಿಂದ ದೂರವಾಗುವುದು - ಮಮಕಾರ ಹೆಚ್ಚಾಗಿ (over attachment towards worldly life)  16. ನಮ್ಮ ಅರಿವು ಬೆಳಕು ಕಾಣದಂತೆ ಮಾಡುವುದು - ನಮ್ಮ ಅಜ್ಞಾನ (ನಮಗೆ ಏನೂ ಗೊತ್ತಿಲ್ಲಾ ಎಂದೂ ಗೊತ್ತಿಲ್ಲದಿರುವುದು). 17. ಯಾವುದೇ ಒಂದು ವಸ್ತು ಬೆಳಕು ಕಾಣದಂತೆ ಮಾಡುವುದು - ಕತ್ತಲು   18. ಗೆಲ್ಲಲಾಗದ ಶತ್ರು - ಸಿಟ್ಟು. 19. ವಾಸಿ ಮಾಡಲಾಗದ ವ್ಯಾಧಿ - ಲೋಭ (ಐಶ್ವರ್ಯ ಮೋಹ)   20. ಸಾಧು - ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುವವನು. 21. ಅಸಾದು(ದುರ್ಜನ) - ಇನ್ನೊಬ್ಬರ ಮೇಲೆ ಕ್ರೌರ್ಯ ಮಾಡುವವನು  22. ಬ್ರಾಹ್ಮಣ - ದಯೆ, ಹೃದಯವಂತಿಕೆ, ನಡತೆ, ನಿರಂತರ ಜ್ಞಾನ ಪಿಪಾಸೆ, ಇಂದ್ರಿಯ ನಿಗ್ರಹ, ಎಲ್ಲರನ್ನೂ ಪ್ರೀತಿಸುವ ಹೃದಯ ಇರುವವನು.  23.ಪಂಡಿತ - ಧರ್ಮ-ಅಧರ್ಮದ ಅರಿವು ಇರುವವನು.   24. ನಾಸ್ತಿಕ - ಮೂರ್ಖ (ತನ್ನ ಅರಿವಿಗಿಂತ ಹೊರಗಿನ ವಿಷಯವಿಲ್ಲಾ ಎಂದು ಜಂಭ ಪಡುವವನು)  25. ಆಸ್ತಿಕ - ತನಗೆ ಗೊತ್ತಿಲ್ಲದ ವಿಷಯ ಇದೇ ಎಂದು ತಿಳಿದವನು (ದೇವರನ್ನು ನಂಬುವವನು)    26. ಕಾಮ - ಕೆಟ್ಟದ್ದನ್ನು ಬಯಸುವುದು (ಕುತ್ಸಿತವಾದ ಬಯಕೆ) 27. ಮತ್ಸರ - ಹೊಟ್ಟೆಕಿಚ್ಚು, ಇನ್ನೊಬ್ಬರ ಒಳಿತನ್ನು ಸಹಿಸದಿರುವುದು, ತಾನು ಅಂದುಕೊಂಡಂತೆ ಆಗಲಿಲ್ಲ ಎಂದು ಹಲಬುವುದು. 28. ಶಾಶ್ವತವಾಗಿ ನರಕಕ್ಕೆ ಹೋಗುವ ವ್ಯಕ್ತಿ - ತನ್ನಲ್ಲಿ ಸಾಕಷ್ಟು ಸಂಪತ್ತಿದ್ದರೂ ದಾನ-ಧರ್ಮ ಮಾಡದವನು, ಜ್ಞಾನವನ್ನು ಹಂಚದವನು, ಜ್ಞಾನವನ್ನು ದ್ವೇಷ ಮಾಡುವವನು.    29. ಹಾಯಾಗಿ (ಸಂತೋಷದಿಂದ)   ಬದುಕುವವ - ಮನೆಯಲ್ಲಿ ಉಪವಾಸವಿದ್ದರೂ ಸಾಲಮಾಡದೇ ಇರುವವನು, ಅಲೆಮಾರಿಯಲ್ಲದವನು. 30. ಪ್ರಪಂಚದಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿ - ಹುಟ್ಟು ಸಾವುಗಳ ಮಧ್ಯದಲ್ಲಿದ್ದೂ, ಹುಟ್ಟಿದ್ದು ಸಾಯಲು ಎಂದು ತಿಳಿಯದೇ ಬದುಕುತ್ತಿರುವ ಮನುಷ್ಯನ ಆಲೋಚನೆ. 31. ನಾವು ಸಾಗಬೇಕಾದ ದಾರಿಯಲ್ಲಿ ಅತ್ಯಂತ ಶ್ರೇಷ್ಠವಾದ ದಾರಿ - ನಮಗೆ ಗೊತ್ತಿಲ್ಲದ ವಿಷಯದಲ್ಲಿ ತರ್ಕ ಮಾಡದೆ, ಜೀವನ ಅನುಭವ ಪಡೆದು ಸಾಗುವುದು. 32. ಎಲ್ಲಕ್ಕಿಂತ ದೊಡ್ಡ ಸುದ್ದಿ - ಈ ಮೋಹದಲ್ಲಿ ನಿರ್ಮಿತವಾದ ವಿಶ್ವ ಎನ್ನುವ ಪಾತ್ರೆಯಲ್ಲಿ, ಸೂರ್ಯ ಎನ್ನುವ ಬೆಂಕಿ ಹಚ್ಚಿ, ಜೀವ ಎನ್ನುವ ತರಕಾರಿಯನ್ನು, ಹಗಲು-ರಾತ್ರಿ ಎನ್ನುವ ಕಟ್ಟಿಗೆಯಿಂದ, ಕಾಲಪುರುಷ, ಮಾಸ, ಋತು ಎನ್ನುವ ಸೌಟು ಉಪಯೋಗಿಸಿ ಬೇಯಿಸುವುದು.

No comments:

Post a Comment