ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 26, 2022

Mahabharata Tatparya Nirnaya Kannada 23-01-06

 

೨೩. ಅಜ್ಞಾತವಾಸಸಮಾಪ್ತಿಃ

̐

 

ನಾರಾಯಣಾನುಗ್ರಹತೋ ಯಥಾವನ್ನಿಸ್ತೀರ್ಯ್ಯ ತಾನ್ ದ್ವಾದಶಾಬ್ದಾನ್ ವನೇ ತೇ ।

ವಿಸೃಜ್ಯ ಚ ಬ್ರಾಹ್ಮಣಾದೀನ್ ಸಧೌಮ್ಯಾನಜ್ಞಾತವಾಸಾಯ ತತೋ ಮನೋ ದಧುಃ ॥೨೩.೦೧॥

 

ಪಾಂಡವರು ನಾರಾಯಣನ ಅನುಗ್ರಹದಿಂದ ಯಾವುದೇ ಕೊರತೆಯಿಲ್ಲದೇ ಕಾಡಿನಲ್ಲಿ ಹನ್ನೆರಡು ವರ್ಷಗಳನ್ನು ಕಳೆದು, ಧೌಮ್ಯರಿಂದ ಕೂಡಿದ ಬ್ರಾಹ್ಮಣರೇ ಮೊದಲಾದವರನ್ನು ಬೀಳ್ಕೊಟ್ಟು, ತದನಂತರ ಅಜ್ಞಾತವಾಸ ಮಾಡಲೆಂದು ನಿಶ್ಚಯಮಾಡಿದರು. 

 

ಗತ್ವಾ ವಿರಾಟಸ್ಯ ಪುರೀಂ ನಿಧಾಯ ಹೇತೀಃ ಶಮ್ಯಾಂ ಛನ್ನರೂಪಾ ಬಭೂವುಃ ।

ಯತಿಃ ಸೂದಃ ಷಣ್ಢವೇಷೋsಶ್ವಸೂತವೇಷೋ ಗೋಪೋ ಗನ್ಧಕರ್ತ್ತ್ರಿ ಚ ಜಾತಾಃ ॥೨೩.೦೨॥

 

ವಿರಾಟನ ಪಟ್ಟಣವನ್ನು ಕುರಿತು ತೆರಳಿ, ಶಮೀವೃಕ್ಷದಲ್ಲಿ ಆಯುಧಗಳನ್ನಿಟ್ಟ ಪಾಂಡವರು ತಮ್ಮ ವೇಷವನ್ನು ಮರೆಸಿಕೊಂಡರು. ಧರ್ಮರಾಜನು ಯತಿಯಾಗಿಯೂ, ಭೀಮಸೇನ ಅಡಿಗೆಯವನಾಗಿಯೂ, ಅರ್ಜುನ ನಾಟ್ಯವನ್ನು ಹೇಳಿಕೊಡುವ ಷಣ್ಢವೇಷಧಾರಿಯಾಗಿಯೂ, ನಕುಲನು ಕುದುರೆ ಕಾಯುವವನಾಗಿಯೂ, ಸಹದೇವ ಗೋಪಾಲಕನಾಗಿಯೂ ಮತ್ತು  ದ್ರೌಪದಿಯು ಗನ್ಧಕರ್ತ್ರಿಯಾಗಿ ವೇಷಧರಿಸಿದರು.  

 

ಸರ್ವೇ ವಿರಾಟಂ ಯಯುರತ್ರ ದೇವವತ್ ಸಮ್ಭಾವಿತಾಸ್ತೇನ ಶುಭೋರುಲಕ್ಷಣಾಃ ।

ಯುಧಿಷ್ಠಿರಸ್ಯೈವ ಶುಶ್ರೂಷಣಂ ತೇ ಚಕ್ರುರ್ಹೃದಾ ವಾಸುದೇವಸ್ಯ ನಾನ್ಯತ್ ॥೨೩.೦೩॥

 

ಅವರೆಲ್ಲರೂ ವಿರಾಟನ ಬಳಿ ತೆರಳಿದರು. ಒಳ್ಳೆಯ ಲಕ್ಷಣ ಇರುವುದರಿಂದ ದೇವತೆಗಳೋ ಎಂಬಂತೆ ವಿರಾಟನಿಂದ ಗೌರವಿಸಲ್ಪಟ್ಟರು. ಅವರೆಲ್ಲರೂ ಯುಧಿಷ್ಠಿರನ ಹೃದಯದಲ್ಲಿ ಪರಮಾತ್ಮನ ಸೇವೆಯನ್ನು ಮಾಡಿರುವುದೇ ಹೊರತು ಬೇರೆ ಅಲ್ಲ.

 

ಪರಾಪಾಕೋ ಗೃಹಸ್ತಸ್ಯ ಕ್ಷತ್ರಿಯಸ್ಯ ವಿಶೇಷತಃ ।

ನ ಯೋಗ್ಯ ಇತಿ ಸೂದಸ್ಯ ಬಭ್ರೇ ವೇಷಂ ವೃಕೋದರಃ ॥೨೩.೦೪॥

 

ವೈದಿಕವ್ಯವಹಾರೇಷು ಜ್ಞಾನಾಧಿಕ್ಯಪ್ರಸಿದ್ಧಿತಃ ।

ಜಾನೀಯುರ್ಭೀಮ ಇತ್ಯೇವ ಶೂದ್ರವೇಷಸ್ತತೋsಭವತ್ ॥೨೩.೦೫॥

 

ಗೃಹಸ್ತನಿಗೆ, ವಿಶೇಷವಾಗಿ ಕ್ಷತ್ರಿಯನಿಗೆ ಪರಪಾಕ ಯೋಗ್ಯವಾದದ್ದಲ್ಲ(ವಿಷಪ್ರಾಶನ ಇತ್ಯಾದಿ ಅಪಾಯ ಪರಪಾಕದ ಸಾಧ್ಯತೆ ಕೂಡಾ). ಈರೀತಿಯಾಗಿ ಭೀಮಸೇನನು ಅಡಿಗೆಯವನಾದ.

ಅಲ್ಲದೇ, ಯಾವತ್ತಾದರೂ (ಉದಾಹರಣೆಗೆ ಸಭೆಯಲ್ಲಿದ್ದಾಗ), ವೇದಕ್ಕೆ ಸಂಬಂಧಪಟ್ಟ ಮಾತು ಬಂದಾಗ, ಭೀಮ ತನ್ನ ಜ್ಞಾನವನ್ನು ತೋರಿಸಬೇಕಾಗುತ್ತದೆ. ಆಗ ‘ಇವನು ಭೀಮ’ ಎಂದು ಜನರಿಗೆ ತಿಳಿಯುವ ಸಾಧ್ಯತೆಯಿದೆ. ಆ ಕಾರಣದಿಂದ ಭೀಮ ಶೂದ್ರವೇಷದವನಾದ.

 

[ಹಾಗಿದ್ದರೆ ಇಲ್ಲಿ ಪಾಂಡವರು ಪರರ ಅನ್ನದಿಂದ ಉಪಜೀವನ ನಡೆಸುವುದು ಅವರಿಗೆ ಹೇಗೆ ಯೋಗ್ಯ ಎಂದರೆ ಹೇಳುತ್ತಾರೆ: ]

 

ಸ್ವೀಯಂ ವೇದವಿದಾಂ ಸರ್ವಂ ದೇವೇಶಾನಾಂ ಚ ಕಿಂ ಪುನಃ ।

ಅತಸ್ತೇsನ್ಯಾಶ್ರಯಂ ನೈವ ಚಕ್ರುಃ ಸ್ವಬಲಸಂಶ್ರಯಾತ್ ॥೨೩.೦೬॥

 

ವೇದವನ್ನು ಬಲ್ಲ ಮಾನವರಿಗೇ ಇದು ಹಕ್ಕು. ಹೀಗಿರುವಾಗ ಸ್ವಯಂ ದೇವತೆಗಳಾಗಿರುವ ಪಾಂಡವರಿಗೆ ಅದು ಸ್ವಕೀಯವೇ ಆಗುತ್ತದೆ. ಅಲ್ಲದೇ ಪಾಂಡವರು ತಮ್ಮ ಬಲದಿಂದ ಇದನ್ನು ಗಳಿಸಿದ್ದರು. (ಕೀಚಕನನ್ನು ಹಿಂದೆ ಭೀಮಸೇನ ಸೋಲಿಸಿದ್ದ. ಸೋತವನ ಹಣ ಗೆದ್ದವನದ್ದೇ). ಹೀಗಾಗಿ ಪಾಂಡವರು ಬೇರೊಬ್ಬರನ್ನು ಆಶ್ರಯಿಸಲೇ ಇಲ್ಲ.   

No comments:

Post a Comment