ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 12, 2022

Mahabharata Tatparya Nirnaya Kannada 22-433-437

 ಉಮಯಾ ನಿರ್ಮ್ಮಿತಾತ್ಮಾರ್ದ್ದಮುತ್ತರಂ ಹರನಿರ್ಮ್ಮಿತಮ್ ।

ಜ್ಞಾತ್ವೈವಾವದ್ಧ್ಯತಾಂ ಚೈವ ರಾಜ್ಯೇ ಬುದ್ಧಿಂ ಚಕಾರ ಸಃ ॥೨೨.೪೩೩॥

 

ನೋವಾಚ ಕಸ್ಯಚಿತ್ ತೇಷು ಸ್ವಾನುಭೂತಂ ಸುಯೋಧನಃ ।

ಪ್ರಭಾತಾಯಾಂ ತು ಶರ್ವರ್ಯ್ಯಾಂ ಪುನಃ ಕರ್ಣ್ಣೋ ವಚೋSಬ್ರವೀತ್ ॥೨೨.೪೩೪॥

 

ದುರ್ಯೋಧನನು ತನ್ನ ಅರ್ಧದೇಹ ಪಾರ್ವತೀದೇವಿಯಿಂದಲೂ, ಇನ್ನರ್ಧದೇಹ ರುದ್ರನಿಂದ ನಿರ್ಮಿಸಲ್ಪಟ್ಟಿದೆ ಎಂದು ತಿಳಿದು, (ಪಾರ್ವತೀ-ಪರಮೇಶ್ವರರಿಂದ ನಿರ್ಮಿತವಾದ ತನ್ನ ದೇಹ ವಜ್ರಮಯ ಎಂದು ತಿಳಿದು), ತನಗೆ ಅವಧ್ಯತ್ವವನ್ನು ತಿಳಿದು, ತಾನು ರಾಜ್ಯವಾಳಬೇಕು ಎಂದು ನಿಶ್ಚಿತಬುದ್ಧಿಯನ್ನು  ಮಾಡಿದನು.

ರಾತ್ರಿ ನಡೆದ ಘಟನೆಯನ್ನು, ತಾನು ಅನುಭವಿಸಿದ್ದನ್ನು ದುರ್ಯೋಧನ ಯಾರಿಗೂ, ತನ್ನ ಆತ್ಮೀಯರಿಗೂ  ಕೂಡಾ ಹೇಳಲಿಲ್ಲ. ಮರುದಿನ ಬೆಳಿಗ್ಗೆ ಮತ್ತೆ ಕರ್ಣನು ದುರ್ಯೋಧನನನ್ನು ಕುರಿತು ಹೇಳಿದ-

 

ಭೃತ್ಯೈಸ್ತವೈವ ಪಾರ್ತ್ಥೈರ್ಯ್ಯನ್ಮೋಚಿತೋSಸಿ ಪರನ್ತಪ ।

ತೇನ ಮಾನ್ಯೋSಧಿಕಂ ಲೋಕೇ ಯದ್ ಭೃತ್ಯಾ ಏವ ತಾದೃಶಾಃ ।

ಕಿಮು ತ್ವಂ ರಾಜಶಾರ್ದ್ದೂಲ ತದುತ್ತಿಷ್ಠ ಸ್ಥಿರೋ ಭವ ॥೨೨.೪೩೫॥

 

ಶತ್ರುಗಳ ಎದೆಗೆಡಿಸುವವನೇ, ಯಾವ ಕಾರಣದಿಂದ ನಿನ್ನ ಭೃತ್ಯರೇ ಆಗಿರುವ ಪಾಂಡವರಿಂದ ನೀನು ಬಿಡುಗಡೆಗೊಳಗಾಗಿದ್ದೀಯೋ, ಅದರಿಂದ ನೀನು ಇನ್ನೂ ಹೆಚ್ಚು ಗೌರವಾಸ್ಪದನಾದೆ. (ಯಾರಸೇವಕರು ಇಷ್ಟು ಬಲಿಷ್ಠವಾಗಿರಬೇಕಾದರೆ ಅವರ ಸ್ವಾಮಿಯಾದ ನೀನು ಎಷ್ಟು ಬಲಿಷ್ಠನಾಗಿರಬೇಕು ಎಂದು ಲೋಕದವರು ನಿನ್ನ ಬಲದ ಬಗ್ಗೆಯೇ ಚಿಂತನೆ ಮಾಡುತ್ತಾರೆ ಎನ್ನುವ ಧ್ವನಿ). ಅದರಿಂದ ಓ ರಾಜನೇ  ಏಳು, ಏನು ಮಾಡಬೇಕೆಂದುಕೊಂಡಿದ್ದೀಯೋ ಅದರಲ್ಲಿ ಗಟ್ಟಿಯಾಗಿ ನಿಲ್ಲು.

 

ಯಾ ಚ ತೇSರ್ಜ್ಜುನಮಾಹಾತ್ಮ್ಯೇ ಶಙ್ಕಾ ಸಾ ವ್ಯೈತು ಮೇ ಶೃಣು ।

ಯಾವನ್ನೈವಾರ್ಜ್ಜುನಂ ಹನ್ಯಾಂ ಪಾದೌ ಪ್ರಕ್ಷಾಳಯೇ ಸ್ವಯಮ್ ॥೨೨.೪೩೬॥

 

ಅರ್ಜುನನ ಬಲದಲ್ಲಿ ನಿನಗೆ ಯಾವ ಅನುಮಾನ ಭೀತಿಗಳಿವೆಯೋ ಅದು ನಾಶವಾಗಲಿ. ನನ್ನ ಮಾತನ್ನು  ಕೇಳು. ಎಲ್ಲಿಯ ತನಕ ನಾನು ಅರ್ಜುನನನ್ನು ಕೊಲ್ಲಲಾರೆನೋ, ಅಲ್ಲಿಯ ತನಕ ನಾನೇ ಕಾಲುಗಳನ್ನು ತೊಳೆದುಕೊಳ್ಳುತ್ತೇನೆ(ಭೃತ್ಯರಿಂದ ತೊಳೆಸಿಕೊಳ್ಳುವುದಿಲ್ಲ).

[ಮಹಾಭಾರತದಲ್ಲಿ(ವನಪರ್ವ ೨೫೮.೧೭) ಅರ್ಜುನನನ್ನು ಕೊಲ್ಲುವತನಕ ಕಾಲನ್ನೇ ತೊಳೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ- ‘ಪಾದೌ ನ ಧಾವಯೇತಾವದ್ ಯಾವನ್ನ ನಿಹತೋSರ್ಜುನಃ’  ಇದರ ಅಭಿಪ್ರಾಯ ತನ್ನ ದಾಸರಿಂದ ಕಾಲು ತೊಳೆಸಿಕೊಳ್ಳುವುದಿಲ್ಲ ಎನ್ನುವ ನಿರ್ಣಯವನ್ನು ಇಲ್ಲಿ ಆಚಾರ್ಯರು ನೀಡಿದ್ದಾರೆ]  

 

ಇತ್ಯುಕ್ತೋSವರಜೈಶ್ಚೈವ ಸರ್ವೈಃ ಶಕುನಿನಾ ತಥಾ ।

ಯಾಚಿತೋ ರಥಮಾರು̐ಹ್ಯ ಯಯೌ ನಾಗಪುರಂ ದ್ರುತಮ್ ॥೨೨.೪೩೭॥

 

ಈರೀತಿಯಾಗಿ ದುಃಶ್ಯಾಸನಾದಿಗಳಿಂದಲೂ, ಶಕುನಿಯಿಂದಲೂ ಹೇಳಲ್ಪಟ್ಟವನಾಗಿ, ಬೇಡಲ್ಪಟ್ಟವನಾಗಿ, ದುರ್ಯೋಧನ ನಾಗಪುರಕ್ಕೆ(ಹಸ್ತಿನಪುರಕ್ಕೆ) ತೆರಳಿದನು.

[ಇಲ್ಲಿ ಕರ್ಣಾದಿಗಳು ತಾವು ಸಮರ್ಥವಾಗಿ ದುರ್ಯೋಧನನ ಮನಃಪರಿವರ್ತನೆ ಮಾಡಿದೆವು ಎಂದುಕೊಂಡರೇ ವಿನಃ, ಅಲ್ಲಿ ರಾತ್ರಿ ನಡೆದ ಘಟನೆ ಅವರಿಗೆ ತಿಳಿದಿರಲಿಲ್ಲ. ಮಹಾಭಾರತ(ವನಪರ್ವ ೨೫೩.೩೭) ಇದನ್ನು ಸ್ಪಷ್ಟವಾಗಿ ಹೇಳಿದೆ: ‘ನಚಾSಚಚಕ್ಷೇ ಕಸ್ಮೈಚಿದೇತದ್ ರಾಜಾ ಸುಯೋಧನಃ’ ]

No comments:

Post a Comment