ವನೇ ವಸತ್ಸ್ವೇವ ಚ ಪಾಣ್ಡವೇಷು ಚಕ್ರೇ ಯಜ್ಞಂ ಪೌಣ್ಡರೀಕಾಖ್ಯಮೇವ ।
ಸಂಸ್ಪರ್ಧಯಾ ರಾಜಸೂಯಸ್ಯ ರಾಜಾ ದುರ್ಯ್ಯೋಧನೋ ನಾಪ್ಯಸೌ ತತ್ಕಲಾರ್ಹಃ ॥೨೨.೩೯೯॥
ಪಾಂಡವರು ಕಾಡಿನಲ್ಲಿ ವಾಸಮಾಡುತ್ತಿರುವಾಗಲೇ ರಾಜನಾದ ದುರ್ಯೋಧನನು ಪಾಂಡವರು ಮಾಡಿದ್ದ ರಾಜಸೂಯ
ಯಾಗಕ್ಕೆ ಸ್ಪರ್ಧೆಯಿಂದ ಪೌಣ್ಡರೀಕ ಎನ್ನುವ ಯಜ್ಞವನ್ನು ಮಾಡಿದ. ಆ ಯಜ್ಞವು ರಾಜಸೂಯ ಯಾಗದ ಹದಿನಾರನೇ
ಒಂದು ಭಾಗಕ್ಕೂ ಸದೃಶವಾಗಿರಲಿಲ್ಲ.
[ಇದನ್ನು ವೇದವ್ಯಾಸರು ಮಹಾಭಾರತದಲ್ಲಿ(ವನಪರ್ವ ೨೫೮.೩) ಸ್ಪಷ್ಟವಾಗಿ ಹೀಗೆ ಹೇಳಿದ್ದಾರೆ:
‘ಯೌಧಿಷ್ಠಿರಸ್ಯ ಯಜ್ಞಸ್ಯ ನ ಸಮೋ ಹೇಷ ತೇ ಕ್ರತುಃ । ನೈವ ತಸ್ಯ ಕ್ರತೋರೇಷ ಕಲಾಮರ್ಹತಿ ಷೋಡಶೀಮ್’]
ದುರ್ಯ್ಯೋಧನಸ್ಯಾSಜ್ಞಯಾ ಪಾಣ್ಡವಾನಾಂ ದುಃಶಾಸನಃ ಪ್ರೇಷಯಾಮಾಸ
ತತ್ರ ।
ಆಗಚ್ಛತೇತ್ಯವಮಾನಾಯ ತಂ ತು ಭೀಮೋSವಾದೀದ್ ರಣಯಜ್ಞಂ ಸ್ವಗಮ್ಯಮ್ ॥೨೨.೪೦೦॥
ದುರ್ಯೋಧನನ ಆಜ್ಞೆಯಂತೆ, ಪಾಂಡವರಿಗೆ ಅವಮಾನ ಮಾಡುವ ಉದ್ದೇಶದಿಂದ ದುಃಶಾಸನನು ಪಾಂಡವರ
ಬಳಿಗೆ ‘ಯಜ್ಞಕ್ಕೆ ಬನ್ನಿರಿ’ ಎಂದು ಹೇಳಿ ಧೂತನನ್ನು ಕಳುಹಿಸಿದನು. ಭೀಮನಾದರೋ ಆ ಧೂತನನ್ನು
ಕುರಿತು ‘ನಾವು ಮುಂದೆ ರಣಯಜ್ಞಕ್ಕೆ ಬರುತ್ತೇವೆ ಎಂದು ದುರ್ಯೋಧನನಿಗೆ ಹೇಳು’ ಎಂದು ಹೇಳಿದ.
ತತೋ ದಿನೈಃ ಕೈಶ್ಚನ ಧಾರ್ತ್ತರಾಷ್ಟ್ರಾಃ ಸಕರ್ಣ್ಣಗಾನ್ಧಾರನೃಪಾಃ ಕುಮನ್ತ್ರತಃ ।
ಸಭಾರ್ಯ್ಯಕಾಃ ಪಾಣ್ಡವಾನ್ ದ್ರೌಪದೀಂ ಚ ಮಹೈಶ್ವರ್ಯ್ಯಂ ದರ್ಶಯಿತ್ವಾSವಮನ್ತುಮ್ ॥೨೨.೪೦೧॥
ತೇ ಸ್ಯನ್ದನೈಃ ಕಾಞ್ಚನರತ್ನಚಿತ್ರೈರ್ಮ್ಮಹಾಗಜೈಸ್ತುರಗೈಃ ಪತ್ತಿಭಿಷ್ಚ ।
ಸ್ವಲಙ್ಕೃತಾಶ್ಚಿತ್ರಮಾಲ್ಯಾಮ್ಬರಾಶ್ಚ ವಿನಿರ್ಯ್ಯಯುರ್ದ್ದ್ವೈತವನಾಯ ಶೀಘ್ರಮ್ ॥೨೨.೪೦೨॥
ತದನಂತರ, ಕೆಲವು ದಿನಗಳಾದಮೇಲೆ, ಕೆಟ್ಟ ಆಲೋಚನೆ ಮಾಡಿದ ದುರ್ಯೋಧನಾದಿಗಳು, ತಮ್ಮ ಹೆಂಡತಿಯರೊಡಗೂಡಿ,
ಕರ್ಣ, ಶಕುನಿ, ಮೊದಲಾದವರೊಂದಿಗೂ ಕೂಡಿಕೊಂಡು, ಪಾಂಡವರಿಗೆ ಮತ್ತು ದ್ರೌಪದಿಗೆ ತಮ್ಮ
ಐಶ್ವರ್ಯವನ್ನು ತೋರಿಸಿ ಅವಮಾನ ಮಾಡಬೇಕೆಂದು, ಬಂಗಾರದಿಂದ ಶೋಭಿತವಾಗಿರುವ ರಥಗಳಿಂದಲೂ, ದೊಡ್ಡ
ಆನೆಗಳಿಂದಲೂ, ಕುದುರೆಗಳಿಂದಲೂ, ಸೇನೆಗಳಿಂದಲೂ ಅಲಂಕಾರ ಮಾಡಿಕೊಂಡು, ಚಿತ್ರ-ವಿಚಿತ್ರವಾಗಿರುವ
ಮಾಲೆ, ಬಟ್ಟೆ ಮೊದಲಾದವುಗಳನ್ನು ಧರಿಸಿಕೊಂಡು, ಪಾಂಡವರಿರುವ ದ್ವೈತವನಕ್ಕೆಂದು ತೆರಳಿದರು.
ಗವಾಂ ದೃಷ್ಟಿಚ್ಛದ್ಮನಾ ನಿರ್ಗ್ಗತಾಂಸ್ತಾನ್ ಜ್ಞಾತ್ವಾ ಶಕ್ರಸ್ತೇಜಸೋ ಭಙ್ಗಕಾಮಃ ।
ತತ್ಸಾಮರ್ತ್ಥ್ಯಂ ವರಮಸ್ಮೈ ಪ್ರದಾಯ ತದ್ವನ್ಧನಾಯಾದಿಶಚ್ಚಿತ್ರಸೇನಮ್ ॥೨೨.೪೦೩॥
ಪಶುಗಳು ಬೆಳೆಯುತ್ತಿವೆ, ಅದರ ಗಣತಿಯಾಗಬೇಕು, ಹಾಗಾಗಿ ಗೋವುಗಳನ್ನು ಕಾಣಬೇಕು ಎನ್ನುವ
ನೆಪದಿಂದ ಹೊರಟ ದುರ್ಯೋಧನ ಮೊದಲಾದವರನ್ನು ತಿಳಿದು, ಅವರ ತೇಜಸ್ಸನ್ನು ಭಂಗಿಸಬೇಕು ಎನ್ನುವ
ಬಯಕೆಯುಳ್ಳವನಾದ ಇಂದ್ರನು, ಆ ಭಂಗಸಾಮರ್ಥ್ಯವನ್ನು ಚಿತ್ರಸೇನನಿಗೆ ವರವಾಗಿ ಕೊಟ್ಟು, ದುರ್ಯೋಧನನ
ಬಂಧನಕ್ಕಾಗಿ ಆಜ್ಞೆಮಾಡಿದನು.
ಸ ಷಷ್ಟಿಸಾಹಸ್ರಕಕೋಟಿಯೂಥಪೈರ್ಗನ್ಧರ್ವಮುಖ್ಯೈಃ ಸಂವೃತೋSಗಾತ್ ಸರಸ್ತತ್ ।
ಯಸ್ಮಿನ್ ಸ್ನಾತುಂ ವಾಞ್ಛತಿ ಧಾರ್ತ್ತರಾಷ್ಟ್ರಸ್ತದಾಜ್ಞಯಾ ಪುರುಷಾಸ್ತಾನಥೋಚುಃ ॥೨೨.೪೦೪॥
ಚಿತ್ರಸೇನನಾದರೋ, ಅರವತ್ತು ಸಾವಿರ ಕೋಟಿ ಗಂಧರ್ವಮುಖ್ಯರಿಂದ ಕೂಡಿಕೊಂಡು, ಯಾವ
ಸರೋವರದಲ್ಲಿ ದುರ್ಯೋಧನ ಸ್ನಾನಮಾಡಲು ಬಯಸಿದ್ದನೋ, ಆ ಸರೋವರಕ್ಕೆ ಬಂದನು. ಆಗ ದುರ್ಯೋಧನನ ಸೈನಿಕರು
ಅವರನ್ನು ಕುರಿತು ಹೇಳಿದರು:
ಸ್ನಾತುಂ ಸಮಾಯಾಸ್ಯತಿ ಧಾರ್ತ್ತರಾಷ್ಟ್ರೋ ರಾಜೇಶ್ವರೋ ನಿಸ್ಸರಧ್ವಂ ತದಸ್ಮಾತ್ ।
ತೀರ್ತ್ಥಾದಾಜ್ಞಾಂ ಧಾರಯನ್ತಶ್ಚ ತಸ್ಯೇತ್ಯುಕ್ತಾ ಗನ್ಧರ್ವಾ ಜಹಸುಸ್ತಾನಥೋಚ್ಚೈಃ ॥೨೨.೪೦೫॥
‘ಚಕ್ರವರ್ತಿಯಾಗಿರುವ ದುರ್ಯೋಧನನು ಸ್ನಾನಮಾಡಲೆಂದು ಬರುತ್ತಿದ್ದಾನೆ. ಆಕಾರಣದಿಂದ ತೀರ್ಥಭೂತವಾದ
ಈ ಸರೋವರದಿಂದ ಹೊರಟು ಹೋಗಿರಿ’ ಎಂದು ದುರ್ಯೋಧನನ ಧೂತರು ಹೇಳಿದಾಗ, ಅವರನ್ನು ಎಲ್ಲಾ ಗಂಧರ್ವರೂ ಕೂಡಾ ಗಟ್ಟಿಯಾಗಿ ನಕ್ಕು ಹಾಸ್ಯ ಮಾಡಿದರು.
ಊಚುರ್ವಯಂ ಮಾನಯಾಮಸ್ತದಾಜ್ಞಾಂ ತ್ರಿಲೋಕಾನಾಂ ಯಃ ಪತಿಃ ಶಕ್ರದೇವಃ ।
ನ ಮಾನುಷಾಣಾಮಪಿ ಚಕ್ರವರ್ತ್ತಿನಾಂ ಕಿಮ್ವಲ್ಪಸಾರಸ್ಯ ಸುಯೋಧನಸ್ಯ ॥೨೨.೪೦೬॥
‘ಮೂರುಲೋಕಕ್ಕೆ ಒಡೆಯನಾಗಿರುವ ಇಂದ್ರನ ಆಜ್ಞೆಯನ್ನು ನಾವು ಗೌರವಿಸುತ್ತೇವೆಯೇ ವಿನಃ ಮನುಷ್ಯರಾಗಿರುವ ಚಕ್ರವರ್ತಿಗಳ ಆಜ್ಞೆಯನ್ನು
ಗೌರವಿಸುವುದಿಲ್ಲ. ಹೀಗಿರುವಾಗ ಅಲ್ಪವಾದ ಬಲವುಳ್ಳ ದುರ್ಯೋಧನನ ಆಜ್ಞೆಯನ್ನು ನಾವು
ಗೌರವಿಸುತ್ತೇವೆಯೇ?(ಖಂಡಿತ ಇಲ್ಲ).
ಇತೀರಿತೇ ಕುಪಿತೋ ಧಾರ್ತ್ತರಾಷ್ಟ್ರೋ ಜಘಾನ ಗನ್ಧರ್ವವರಾಞ್ಛರೌಘೈಃ ।
ಜಘ್ನುಃ ಸಕರ್ಣ್ಣಾ ಅಪಿ ತಸ್ಯ ಸೋದರಾ
ಜಘ್ನುಶ್ಚ ತೇ ಧಾರ್ತ್ತರಾಷ್ಟ್ರಸ್ಯ ಸೇನಾಮ್ ॥೨೨.೪೦೭॥
ಈರೀತಿಯಾಗಿ ಹೇಳುತ್ತಿರಲು, ಕೋಪಗೊಂಡ ದುರ್ಯೋಧನನು
ಗಂಧರ್ವಶ್ರೇಷ್ಠರನ್ನು ಬಾಣಗಳಿಂದ ಹೊಡೆದ. ಕರ್ಣನಿಂದ ಕೂಡಿರುವ ಅವನ ತಮ್ಮಂದಿರೂ ಕೂಡಾ ಗಂಧರ್ವರ
ಮೇಲೆ ದಾಳಿ ಮಾಡಿದರು. ಗಂಧರ್ವರು ದುರ್ಯೋಧನನ ಸೇನೆಯನ್ನು ಕೊಂದರು.
ಮುಹೂರ್ತ್ತಮಾಸೀತ್ ಸಮಮೇವ ಯುದ್ಧಂ ತೇಷಾಂ ತದಾ ಧಾರ್ತ್ತರಾಷ್ಟ್ರಸ್ಯ ಚೈವ ।
ಪುರಾಂ ಬಿನ್ಧೋರ್ವರತೋ ಮಾಯಯಾ ಚ
ಗನ್ಧರ್ವವೀರಾ ವವೃಧುಸ್ತತಃ ಸ್ಮ ॥೨೨.೪೦೮॥
ಗಂಧರ್ವರಿಗೂ ದುರ್ಯೋಧನನ ನಡುವಿನ ಆ ಯುದ್ಧ ಒಂದು ಮಹೂರ್ತದ ತನಕ ಸಮವಾಗಿ ನಡೆಯಿತು.
ಆನಂತರ ದೈತ್ಯರ ಪಟ್ಟಣವನ್ನು ಛೇದಿಸುವ ಇಂದ್ರನ ವರದಿಂದಲೂ, ಮಾಯೆಯಿಂದಲೂ, ಗಂಧರ್ವರು
ವಿಜಯಶಾಲಿಗಳಾಗಿ ಬೆಳೆದರು.
ತೇಜೋಭಙ್ಗಂ ತತ್ರ ಸುಯೋಧನಸ್ಯ ಪಾರ್ತ್ಥಾರ್ತ್ಥಮತ್ರ ಪ್ರವಿಧಾತುಮೇವ ಚ ।
ಬಲಂ ದದಾವಬ್ಜಜಃ ಕೇಶವಶ್ಚ ಗನ್ಧರ್ವಾಣಾಂ ತೇSಭ್ಯಯುರ್ದ್ದಾರ್ತ್ತರಾಷ್ಟ್ರಾನ್ ॥೨೨.೪೦೯॥
ಅಲ್ಲಿ ಪಾಂಡವರಿಗಾಗಿ, ದುರ್ಯೋಧನನ ತೇಜೋಭಂಗವನ್ನು ಮಾಡಲೆಂದೇ, ಸಾಕ್ಷಾತ್ ಬ್ರಹ್ಮದೇವರು, ನಾರಾಯಣನು ಗಂಧರ್ವರಿಗೆ ಬಲವನ್ನಿತ್ತಿದ್ದರು. ಅದರಿಂದ ಅವರು ದುರ್ಯೋಧನಾದಿಗಳನ್ನು
ಸಮರ್ಥವಾಗಿ ಎದುರಿಸಿದರು.
No comments:
Post a Comment