ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, February 3, 2023

Mahabharata Tatparya Nirnaya Kannada 25-128-135

 

ಅಮರ್ಷಯುಕ್ತೌ ಚಿರಮೇವ ವೀರಾವಯುದ್ಧ್ಯತಾಮರ್ಜ್ಜುನಧಾರ್ತ್ತರಾಷ್ಟ್ರೌ ।

ಸಮಂ ತದಾಸೀನ್ಮಹದದ್ಭುತಂ ಚ ದಿವೌಕಸಾಂ  ಪಶ್ಯತಾಂ ಭೂಭೃತಾಂ ಚ ॥ ೨೫.೧೨೮॥

 

ವೀರರಾದ ಅರ್ಜುನ-ದುಃಶಾಸನರಿಬ್ಬರೂ ಸಿಟ್ಟಿನಿಂದ ಕೂಡಿದವರಾಗಿ ಬಹಳ ಹೊತ್ತು ಯುದ್ಧಮಾಡಿದರು.  ಆ ಯುದ್ಧವು ಸಮವಾಗಿಯೂ ಅದ್ಭುತವಾಗಿಯೂ ಇದ್ದು, ಅದನ್ನು ದೇವತೆಗಳು, ಹಾಗೂ ರಾಜರುಗಳೂ ಕೂಡಾ ನೋಡುತ್ತಿದ್ದರು.

 

ತದಾ ವಿರಾಟದ್ರುಪದೌ ಕುನ್ತಿಭೋಜಂ ಕೃಷ್ಣಾಸುತಾನ್ ಕೇಕಯಾಂಶ್ಚೇಕಿತಾನಮ್ ।

ಭೂರಿಃ ಶಲಃ ಸೋಮದತ್ತೋ ವಿಕರ್ಣ್ಣಃ ಸಕೇಕಯಾ ವಾರಯಾಮಾಸುರುಚ್ಚೈಃ ॥ ೨೫.೧೨೯॥

 

ಜಿತ್ವೈವ ತಾಂಸ್ತೇSಭಿಯಯುಶ್ಚ ಭೀಷ್ಮಂ ತತೋSರ್ಜ್ಜುನೋSತೀತ್ಯ ದುಃಶಾಸನಂ ಚ ।

ಭೀಷ್ಮಂ ಶರೈರಾರ್ಚ್ಛದರಿಪ್ರಾಮಾಥಿಭಿಃ ಶಿಖಣ್ಡಿನಂ ಧಾರ್ತ್ತರಾಷ್ಟ್ರಾದ್ ವಿಮುಚ್ಯ ॥ ೨೫.೧೩೦॥

ಈ ರೀತಿ ಯುದ್ಧ ಮಾಡುತ್ತಿರುವಾಗ ದುರ್ಯೋಧನನ ಪಕ್ಷದಲ್ಲಿರುವ ಕೈಕಯರಿಂದ ಕೂಡಿದ ಭೂರಿ, ಶಲ್ಯ, ಸೋಮದತ್ತ, ವಿಕರ್ಣ, ಇವರೆಲ್ಲರೂ ದ್ರುಪದ, ವಿರಾಟ, ಕುಂತೀಭೋಜ, ದ್ರೌಪದೀಪುತ್ರರು, ಪಾಂಡವರ ಕಡೆಯಲ್ಲಿರುವ ಕೈಕಯರು, ಚೇಕಿತಾನ, ಇವರೆಲ್ಲರನ್ನೂ  ಕೂಡ ತಡೆದರು.

ಆಗ ವಿರಾಟಾದಿಗಳು ಅವರೆಲ್ಲರನ್ನೂ ಗೆದ್ದು ಭೀಷ್ಮಾಚಾರ್ಯರನ್ನು ಹೊಂದಿದರು. ಆ ಹೊತ್ತಿಗೆ ಅರ್ಜುನನು ದುಃಶಾಸನನನ್ನು ಮೀರಿ, ದುರ್ಮರ್ಷಣನಿಂದ ಶಿಖಂಡಿಯನ್ನು ಬಿಡಿಸಿ, ಭೀಷ್ಮಾಚಾರ್ಯರನ್ನು ಬಾಣಗಳಿಂದ ಹೊಡೆದ.

 

ಸ ತೈಃ ಸಮಸ್ತೈರ್ಬಹುಶಸ್ತ್ರಪೂಗೈರ್ಭೃಶಂ ಮರ್ಮ್ಮಸ್ವರ್ದ್ದಿತಶ್ಚಾಪಮುಕ್ತೈಃ 

ಶರೈಃ ಸಮಸ್ತಾನ್ ವಿರಥಾಂಶ್ಚಕಾರ ಶೈನೇಯಪಾಞ್ಚಾಲ್ಯಯುಧಿಷ್ಠಿರಾದ್ಯಾನ್ ॥ ೨೫.೧೩೧॥

 

ಸ ಚೇದಿಪಾಞ್ಚಾಲಕರೂಶಮುಖ್ಯಾನ್ ರಥೋತ್ತಮಾನ್ ಪಞ್ಚವಿಂಶತ್ಸಹಸ್ರಾನ್ ।

ಸಮ್ಪ್ರೇಷಯಾಮಾಸ ಯಮಾಯ ಬಾಣೈರ್ಯ್ಯುಗಾನ್ತಕಾಲೇSಗ್ನಿರಿವ ಪ್ರವೃದ್ಧಃ ॥ ೨೫.೧೩೨॥

 

ಬಹಳ ಬಾಣಗಳಿಂದ ಮರ್ಮಸ್ಥಾನಗಳಲ್ಲೆಲ್ಲ ಹೊಡೆಯಲ್ಪಟ್ಟರೂ ಕೂಡಾ ಭೀಷ್ಮಾಚಾರ್ಯರು ತನ್ನ  ಬಿಲ್ಲಿನಿಂದ ಬಿಡಲ್ಪಟ್ಟ ಬಾಣಗಳಿಂದ ಸಾತ್ಯಕಿ, ಪಾಂಚಾಲ, ಯುಧಿಷ್ಠಿರ, ಮೊದಲಾದವರೆಲ್ಲರನ್ನು   ವಿರಥರನ್ನಾಗಿ ಮಾಡಿದರು.  

ಆ ಭೀಷ್ಮಾಚಾರ್ಯರು ಪ್ರಳಯಕಾಲದ ಬೆಂಕಿಯಂತೆ ಚೇದಿ, ಪಾಂಚಾಲ, ಕರೂಶ, ಮೊದಲಾದ ದೇಶದ ಇಪ್ಪತ್ತೈದು ಸಾವಿರ ಜನ ಶ್ರೇಷ್ಠ ರಥಿಕರನ್ನು ಸಂಹಾರ ಮಾಡಿದರು.

 

ನಿರೀಕ್ಷ್ಯ ತಂ ಸೂರ್ಯ್ಯಮಿವಾSತಪನ್ತಂ ಸಞ್ಚೋದಿತೋ ವಾಸುದೇವೇನ ಪಾರ್ತ್ಥಃ ।

ಚಿಚ್ಛೇದ ತತ್ಕಾರ್ಮ್ಮುಕಂ ಲೋಕವೀರೋ ರಣೇSರ್ದ್ಧಚನ್ದ್ರೇಣ ಸ ಚಾನ್ಯದಾದದೇ ॥ ೨೫.೧೩೩॥

 

ಚಿಚ್ಛೇದ ತಚ್ಛೈವಮಷ್ಟೌ ಧನೂಂಷಿ ಶಕ್ತಿಂ ಚ ಚರ್ಮ್ಮಾಸಿವರಂ ಪರಾಣಿ ಚ ।

ಧನೂಂಷಿ ದತ್ತಾನಿ ನೃಭಿರ್ನ್ನೃಪಸ್ಯ ಸರ್ವಾಣಿ ಚಿಚ್ಛೇದ ಸ ಪಾಕಶಾಸನಿಃ ॥ ೨೫.೧೩೪॥

 

ಸೂರ್ಯನೋಪಾದಿಯಲ್ಲಿ ಚೆನ್ನಾಗಿ ಬೆಳಗುತ್ತಿರುವ ಭೀಷ್ಮಾಚಾರ್ಯರನ್ನು ನೋಡಿ, ಶ್ರೀಕೃಷ್ಣನಿಂದ ಪ್ರೇರಿಸಲ್ಪಟ್ಟ ಅರ್ಜುನನು ಅವರ ಬಿಲ್ಲನ್ನು ತನ್ನ ಅರ್ಧಚಂದ್ರಾಕೃತಿಯ ಬಾಣದಿಂದ ಕತ್ತರಿಸಿದನು. ಆಗ ಭೀಷ್ಮಾಚಾರ್ಯರು ಇನ್ನೊಂದು ಬಿಲ್ಲನ್ನು ತೆಗೆದುಕೊಂಡರು.

ಅರ್ಜುನನು ಆ ಧನುಸ್ಸನ್ನೂ ಕತ್ತರಿಸಿದನು. ಹೀಗೆಯೇ ಎಂಟು ಬಿಲ್ಲುಗಳನ್ನೂ, ಶಕ್ತ್ಯಾಯುಧವನ್ನೂ, ಗುರಾಣಿ-ಕತ್ತಿಗಳನ್ನೂ, ಇತರರು ತಂದು ಕೊಟ್ಟ ಧನುಸ್ಸುಗಳನ್ನೂ ಅರ್ಜುನ ಕತ್ತರಿಸಿದ.

 

ತತಃ ಶರೈಃ ಸೂರ್ಯ್ಯಕರಪ್ರಕಾಶೈರ್ವಿವ್ಯಾಧ ಸರ್ವೇ ಚ ಯುಧಿಷ್ಠಿರಾದ್ಯಾಃ ।

ತೈರರ್ದ್ದಿತೋ ನ್ಯಪತದ್ ಭೂತಳೇ ಸ ಪ್ರಾಣಾನ್ ದಧಾರಾಪಿ ತಥೋತ್ತರಾಯಣಾತ್ ॥ ೨೫.೧೩೫॥

 

ತದನಂತರ ಸೂರ್ಯಕಿರಣಗಳಿಗೆ ಸಮಾನವಾಗಿರುವ ಬಾಣಗಳಿಂದ ಅರ್ಜುನನು ಭೀಷ್ಮರನ್ನು ಹೊಡೆದ. ಯುಧಿಷ್ಠಿರ ಮೊದಲಾದವರೆಲ್ಲರಿಂದಲೂ ಹೊಡೆಯಲ್ಪಟ್ಟ ಭೀಷ್ಮಾಚಾರ್ಯರು ಭೂಮಿಗೆ ಬಿದ್ದರು. ಆದರೂ ಉತ್ತರಾಯಣ ಬರುವ ತನಕ ತನ್ನ ಪ್ರಾಣವನ್ನು ತಡೆ ಹಿಡಿದುಕೊಂಡರು.

No comments:

Post a Comment