ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, February 2, 2023

Mahabharata Tatparya Nirnaya Kannada 25-114-127

 

ಯುಧಿಷ್ಠಿರೋ ಭೀಷ್ಮಪರಾಕ್ರಮೇಣ ಭೀತೋ ಭೀಷ್ಮಂ ಸ್ವವಧೋಪಾಯಮೇವ ।

ಪ್ರಷ್ಟುಂ ಯಯೌ ನಿಶಿ ಕೃಷ್ಣೋSನುಜಾಶ್ಚ ತಸ್ಯಾನ್ವಯುಸ್ತಂ ಸ ಪಿತಾಮಹೋ ಯತ್ ॥ ೨೫.೧೧೪॥

 

ಯುಧಿಷ್ಠಿರನು ಭೀಷ್ಮರ ಪರಾಕ್ರಮದಿಂದ ಭಯಗೊಂಡು, ಅವರನ್ನು ಕೊಲ್ಲುವುದು ಹೇಗೆ ಎನ್ನುವ ಉಪಾಯವನ್ನು ಅವರಲ್ಲೇ ಕೇಳಲು ರಾತ್ರಿ ಅವರ ಶಿಬಿರಕ್ಕೆ ತೆರಳಿದನು. ಕೃಷ್ಣನು, ಧರ್ಮರಾಜನ ತಮ್ಮಂದಿರು ಧರ್ಮರಾಜನನ್ನು ಅನುಸರಿಸಿದರು. ಭೀಷ್ಮಾಚಾರ್ಯರು ಕುರುಕುಲದ ಪಿತಾಮಹನಷ್ಟೇ. ಆ ಕಾರಣದಿಂದ ಎಲ್ಲರೂ ಯುಧಿಷ್ಠಿರನನ್ನು ಅನುಸರಿಸಿದರು.

 

(ಹಾಗಿದ್ದರೆ ಭೀಮಾರ್ಜುನರಿಗೆ ಭೀಷ್ಮನನ್ನು ಕೊಲ್ಲುವ ಉಪಾಯ ಗೊತ್ತಿರಲಿಲ್ಲವೇ ಎಂದರೆ-)

 

ಭೀಮಾರ್ಜ್ಜುನೌ ಶಕ್ನುವನ್ತಾವಪಿ ಸ್ಮ ನರ್ತ್ತೇSನುಜ್ಞಾಂ ಹನ್ತುಮಿಮಂ ತದೈಚ್ಛತಾಮ್ ।

ಪೂಜ್ಯೋ ಯತೋ ಭೀಷ್ಮ ಉದಾರಕರ್ಮ್ಮಾ ಕೃಷ್ಣೋSಪ್ಯಯಾತ್ ತೇನ ಹಿ ಪಾಣ್ಡವಾರ್ತ್ಥೇ ॥ ೨೫.೧೧೫॥

 

ಭೀಮಸೇನಾರ್ಜುನರು ಭೀಷ್ಮರನ್ನು ಕೊಲ್ಲಲು ಸಮರ್ಥರಿದ್ದರೂ ಕೂಡಾ, ಪೂಜ್ಯರಾದ, ಉತ್ಕೃಷ್ಟಕರ್ಮಿ ಭೀಷ್ಮರ ಅನುಜ್ಞೆ ಇಲ್ಲದೇ ಅವರನ್ನು ಕೊಲ್ಲಲು ಪಾಂಡವರು ಬಯಸಲಿಲ್ಲ.   ಆ ಕಾರಣದಿಂದ ಪಾಂಡವರಿಗಾಗಿ, (ಭೀಷ್ಮಾಚಾರ್ಯರಿಂದ ಅನುಜ್ಞೆ ಕೊಡಿಸುವುದಕ್ಕಾಗಿ)  ಶ್ರೀಕೃಷ್ಣನೂ ಕೂಡಾ ಅವರೊಂದಿಗೆ ಹೋದ.

 

ಪ್ರಾಪ್ಯಾನುಜ್ಞಾಂ ಭೀಷ್ಮತಸ್ತೇ ವಧಾಯ ಶಿಖಣ್ಡಿನಂ ತದ್ವಚಸಾSಗ್ರಯಾಯಿನಮ್ ।

ಕೃತ್ವಾSಪರೇದ್ಯುರ್ಯ್ಯುಧಯೇ ವಿನಿರ್ಗ್ಗತಾ ಭೀಷ್ಮಂ ಪುರಸ್ಕೃತ್ಯ ತಥಾ ಪರೇSಪಿ ॥ ೨೫.೧೧೬॥

 

ಅವರೆಲ್ಲರೂ ಭೀಷ್ಮಾಚಾರ್ಯರಿಂದ ಅವರನ್ನು ಕೊಲ್ಲಲು ಅನುಜ್ಞೆಯನ್ನು ಪಡೆದು, ಅವರ ಮಾತಿನಂತೆ  ಶಿಖಂಡಿಯನ್ನು ಮುಂದೆ ಮಾಡಿಕೊಂಡು ಮಾರನೇದಿನ ಯುದ್ಧಕ್ಕೆಂದು ತೆರಳಿದರು. ಹಾಗೆಯೇ ಕೌರವರು   ಭೀಷ್ಮಾಚಾರ್ಯರನ್ನು ಮುಂದೆ ಮಾಡಿಕೊಂಡು ಹತ್ತನೇ ದಿನದ ಯುದ್ಧಕ್ಕಾಗಿ ಹೊರಟರು.

 

ಶಿಖಣ್ಡಿನೋ ರಕ್ಷಕಃ ಫಲ್ಗುನೋSಭೂದ್ ಭೀಷ್ಮಸ್ಯ ದುಃಶಾಸನ ಆಸ ಚಾಗ್ರೇ ।

ಅನ್ಯೇ ಚ ಸರ್ವೇ ಜುಗುಪುರ್ಭೀಷ್ಮಮೇವ ನ್ಯವಾರಯನ್ ಭೀಮಸೇನಾದಯಸ್ತಾನ್  ॥೨೫.೧೧೭॥

 

ಶಿಖಂಡಿಯ ಬೆಂಗಾವಲು ಪಡೆಯಾಗಿ ಸ್ವಯಂ ಅರ್ಜುನನಿದ್ದ. ಭೀಷ್ಮನ ಮುಂದೆ ದುಃಶಾಸನನಿದ್ದ. ಕೌರವರಲ್ಲಿ ಇತರ ಎಲ್ಲರೂ ಭೀಷ್ಮಾಚಾರ್ಯರನ್ನೇ ರಕ್ಷಿಸುವವರಾಗಿ ಸಾಗುತ್ತಿರಲು, ಭೀಮಸೇನನೇ ಮೊದಲಾದವರು ಭೀಷ್ಮರಕ್ಷಕರನ್ನು ತಡೆದರು.

 

ಭೀಷ್ಮಾಯ ಯಾನ್ತಂ ಯುಯುಧಾನಮಾಜೌ ನ್ಯವಾರಯದ್ ರಾಕ್ಷಸೋSಲಮ್ಬುಸೋSಥ ।

ತಂ ವಜ್ರಕಲ್ಪೈರತುದದ್ ವೃಷ್ಣಿವೀರಃ ಶರೈಃ ಸ ಮಾಯಾಮಸೃಜತ್ ತದೋಗ್ರಾಮ್ ॥ ೨೫.೧೧೮॥

 

ಭೀಷ್ಮರನ್ನು ಕುರಿತು ಯುದ್ಧಕ್ಕಾಗಿ ಹೋಗುತ್ತಿರುವ ಸಾತ್ಯಕಿಯನ್ನು ಅಲಂಬುಸ ರಾಕ್ಷಸ ತಡೆದ. ಯಾದವವೀರನಾಗಿರುವ ಸಾತ್ಯಕಿಯು ವಜ್ರಾಯುಧಕ್ಕೆ ಸಮಾನವಾದ ಬಾಣಗಳಿಂದ ಅಲಂಬುಸನನ್ನು  ಚೆನ್ನಾಗಿ ಪೀಡಿಸಿದ. ಆಗ ಅವನು ಭಯಂಕರವಾದ ಕೃತ್ರಿಮ ವಿದ್ಯೆಯನ್ನು ಪ್ರಯೋಗಿಸಿದ.

 

ಅಸ್ತ್ರೇಣ ಮಾಯಾಮಪನುದ್ಯ ವೀರೋ ವ್ಯದ್ರಾವಯದ್ ರಾಕ್ಷಸಂ ಸಾತ್ಯಕಿಸ್ತಮ್ ।

ತಸ್ಮಿನ್ ಗತೇ ಯುಯುಧಾನೋ ರಥೇನ ಯಯೌ ಭೀಷ್ಮಂ ಪಾರ್ತ್ಥಮನ್ವೇವ  ಧನ್ವೀ ॥ ೨೫.೧೧೯॥

 

ವೀರನಾಗಿರುವ ಸಾತ್ಯಕಿಯು ಅಸ್ತ್ರಬಲದಿಂದ ಆ ಮಾಟವನ್ನು ತಿರಸ್ಕರಿಸಿ, ಆ ಅಲಂಬುಸ ರಾಕ್ಷಸನನ್ನು ಓಡಿಸಿದನು. ಅವನು ಹೋದಮೇಲೆ ಸಾತ್ಯಕಿಯು ಅರ್ಜುನನ ಬೆಂಗಾವಲಾಗಿ ಸೇರಿಕೊಂಡು ಭೀಷ್ಮಾಚಾರ್ಯರನ್ನು ಕುರಿತು ಹೋದ.

 

ದ್ರೋಣೋ ದ್ರೌಣಿರ್ದ್ಧ್ರಾರ್ತ್ತರಾಷ್ಟ್ರಶ್ಚ ರಾಜಾ ಭೂರಿಶ್ರವಾ ಭಗದತ್ತಃ ಕೃಪಶ್ಚ ।

ಶಲ್ಯೋ ಬಾಹ್ಲೀಕಃ ಕೃತವರ್ಮ್ಮಾ ಸುಶರ್ಮ್ಮಾ ಸರ್ವಾಶ್ಚ ಸೇನಾ ವಾರಿತಾ ವಾಯುಜೇನ ॥ ೨೫.೧೨೦॥

 

ದ್ರೋಣಾಚಾರ್ಯ, ಅಶ್ವತ್ಥಾಮ, ರಾಜನಾದ ದುರ್ಯೋಧನ, ಭೂರಿಶ್ರವಸ್ಸು, ಭಗದತ್ತ, ಕೃಪ, ಶಲ್ಯ, ಬಾಹ್ಲೀಕ, ಕೃತವರ್ಮ, ಸುಶರ್ಮ, ಈ ಹತ್ತುಜನರು ಮತ್ತು ಅವರ ಸೇನೆಯನ್ನು ಭೀಮನೊಬ್ಬನೇ ತಡೆದುನಿಂತ.  

 

ಸ ತಾನ್ ಮುಹುರ್ವಿರಥೀಕೃತ್ಯ ವೀರಃ ಪ್ರಾಗ್ಜ್ಯೋತಿಷಂ ಸಗಜಂ ದ್ರಾವಯಿತ್ವಾ ।

ನ್ಯವಾರಯತ್  ಫಲ್ಗುನಂ ರೋದ್ಧುಕಾಮಂ ಪಾರ್ತ್ಥಶ್ಚ ದೇವವ್ರತಮಾಸಸಾದ ॥ ೨೫.೧೨೧॥

 

ಭೀಮಸೇನನು ಮತ್ತೆ ಮತ್ತೆ ಈ ಹತ್ತೂ ಜನರನ್ನು ರಥಹೀನರನ್ನಾಗಿ ಮಾಡಿ, ಅರ್ಜುನನನ್ನು ಎದುರಿಸಬೇಕು ಎಂದು ಬರುತ್ತಿರುವ ಆನೆಯಿಂದ ಕೂಡಿರುವ ಭಗದತ್ತನನ್ನು ಮತ್ತೆ ಮತ್ತೆ ಓಡಿಸಿದನು, ಹೀಗೆ ಭೀಮಸೇನ ಅರ್ಜುನನನ್ನು ತಡೆಯಲು ಇಚ್ಛಿಸುತ್ತಿರುವ ಎಲ್ಲಾ ದಾಳಿಗಳನ್ನೂ ತಡೆದು ಸುಗಮ ಮಾಡಿಕೊಟ್ಟ ಮೇಲೆ ಅರ್ಜುನನು ದೇವವ್ರತ(ಭೀಷ್ಮ)ನನ್ನು ಹೊಂದಿದ.

 

ಯುಧಿಷ್ಠಿರಂ ಭೀಷ್ಮಮಭಿಪ್ರಯಾನ್ತಂ ಮಾದ್ರೀಸುತಾಭ್ಯಾಂ ಸಹಿತಂ ನೃವೀರಮ್ ।

ನ್ಯವಾರಯಚ್ಛಕುನಿಃ ಸಾದಿನಾಂ ಚ ಯುತೋSಯುತೇನೈವ ವರಾಶ್ವಗೇನ ॥ ೨೫.೧೨೨॥

 

ಇತ್ತ ಭೀಷ್ಮಾಚಾರ್ಯರತ್ತ ತೆರಳುತ್ತಿರುವ, ಮಾದ್ರಿಯ ಮಕ್ಕಳಾದ ನಕುಲ-ಸಹದೇವರಿಂದ ಸಹಿತನಾದ ಯುಧಿಷ್ಠಿರನನ್ನು, ಶ್ರೇಷ್ಠವಾದ ಹತ್ತು ಸಾವಿರ ಕುದುರೆಗಳ ಪಡೆಯನ್ನು ಹೊಂದಿದ ಶಕುನಿಯು ತಡೆದನು.

 

ತಾನ್ ಸಾದಿನೋSಶ್ವಾಂಶ್ಚ ನಿಹತ್ಯ ಸರ್ವಾನ್ ವಿಜಿತ್ಯ ತಂ ಶಕುನಿಂ ಪಾಣ್ಡವಾಸ್ತೇ ।

ಪ್ರಾಪುರ್ಭೀಷ್ಮಂ ದ್ರೌಪದೇಯಾಶ್ಚ ಸರ್ವೇ ತಥಾ ವಿರಾಟದ್ರುಪದೌ ಕುನ್ತಿಭೋಜಃ ॥ ೨೫.೧೨೩॥

 

ಆ ಯುಧಿಷ್ಠಿರ, ನಕುಲ-ಸಹದೇವರು, ಆ ಎಲ್ಲಾ ಅಶ್ವಾರೂಢಪಡೆಗಳನ್ನೂ, ಅವರ ಕುದುರೆಗಳನ್ನೂ  ಕೊಂದು, ಶಕುನಿಯನ್ನೂ ಗೆದ್ದು, ಭೀಷ್ಮಾಚಾರ್ಯರ ಬಳಿಗೆ ಬಂದರು. ಇನ್ನೊಂದು ದಿಕ್ಕಿನಿಂದ ದ್ರೌಪದಿಯ ಮಕ್ಕಳು ಹಾಗೇ ವಿರಾಟ, ದ್ರುಪದ, ಕುಂತಿಭೋಜ, ಹೀಗೆ ಎಲ್ಲರೂ ಭೀಷ್ಮಾಚಾರ್ಯರನ್ನು ಹೊಂದಿದರು.

 

ಧೃಷ್ಟದ್ಯುಮ್ನಂ ಭೀಷ್ಮಮಭಿಪ್ರಯಾನ್ತಂ ನ್ಯವಾರಯತ್ ಸೈನ್ಧವಸ್ತಂ ಸ ಬಾಣೈಃ ।

ಹತಾಶ್ವಸೂತಂ  ಸಗಣಂ ದ್ರಾವಯಿತ್ವಾ ಸಮಾಸದದ್ ಭೀಷ್ಮಮೇವಾSಶು ವೀರಃ ॥ ೨೫.೧೨೪॥

 

ಭೀಷ್ಮನನ್ನು ಎದುರುಗೊಳ್ಳುತ್ತಿರುವ ಧೃಷ್ಟದ್ಯುಮ್ನನನ್ನು ಸೈನ್ಧವನು(ಜಯದ್ರಥನು) ತಡೆದ. ಆಗ ವೀರನಾದ ಧೃಷ್ಟದ್ಯುಮ್ನನು ಅವನ ಕುದುರೆಗಳನ್ನು ಹಾಗೂ ಸಾರಥಿಯನ್ನೂ ಕೊಂದು,  ಪಡೆಯೊಡನೆ ಅವನನ್ನು ಓಡಿಸಿ, ಭೀಷ್ಮಾಚಾರ್ಯರಲ್ಲಿಗೆ ಬಂದ.

 

ಗುಪ್ತೋSಥ ಪಾರ್ತ್ಥೇನ ರಣೇ ಶಿಖಣ್ಡೀ ಭೀಷ್ಮಂ ಸಮಾಸಾದ್ಯ ಶರೈರತಾಡಯತ್ ।

ಭೀಷ್ಮಃ ಸ್ತ್ರೀತ್ವಂ ತಸ್ಯ ಜಾನನ್ ನ ತಸ್ಮೈ ಮುಮೋಚ ಬಾಣಾನ್ ಸ ತು ತಂ ತುತೋದ ॥ ೨೫.೧೨೫॥

 

ತದನಂತರ ಅರ್ಜುನನಿಂದ ರಕ್ಷಿಸಲ್ಪಟ್ಟ ಶಿಖಂಡಿಯು ಯುದ್ಧದಲ್ಲಿ ಭೀಷ್ಮಾಚಾರ್ಯರನ್ನು ಹೊಂದಿ ಬಾಣಗಳಿಂದ ಚೆನ್ನಾಗಿ ಹೊಡೆದ. ಭೀಷ್ಮನು ಶಿಖಂಡಿಯ ಸ್ತ್ರೀಪೂರ್ವವನ್ನು ತಿಳಿದು, ಅವನ ವಿರುದ್ಧ ಬಾಣಗಳನ್ನು ಬಿಡಲಿಲ್ಲ. ಆಗ ಶಿಖಂಡಿ ಭೀಷ್ಮನನ್ನು ಬಾಣಗಳಿಂದ ಗಾಯಗೊಳಿಸಿದನು.

 

ಶಿಖಣ್ಡಿನಂ ವಾರಯಾಮಾಸ ಬಾಣೈರ್ದ್ದುರ್ಮ್ಮಷಣೋSಮರ್ಷಣವಿಹ್ವಲೇಕ್ಷಣಃ ।

ನಾತ್ಯೇತುಮೇನಮಶಕಚ್ಛಿಖಣ್ಡೀ ದುಃಶಾಸನಃ ಪಾರ್ತ್ಥಮವಾರಯತ್ ತದಾ ॥ ೨೫.೧೨೬॥

 

ಆಗ ಸಿಟ್ಟಿನಿಂದ ಕೆಂಪಡರಿದ ಕಣ್ಗಳುಳ್ಳ ದುರ್ಮರ್ಷಣ ಎಂಬ  ದುರ್ಯೋಧನನ ತಮ್ಮನು ಬಾಣಗಳಿಂದ ಶಿಖಂಡಿಯನ್ನು ತಡೆದ. ಶಿಖಂಡಿಯು ದುರ್ಮರ್ಷಣನನ್ನು ಮೀರಲು ಸಮರ್ಥನಾಗಲಿಲ್ಲ. ಆಗ ದುಃಶಾಸನ ಅರ್ಜುನನೊಂದಿಗೆ ಯುದ್ಧ ಮಾಡಲಾರಂಭಿಸಿದ.   

 

ಸ ಲೋಕವೀರೋSಪಿ ದುರಾತ್ಮನಾSಮುನಾ ರುದ್ಧೋSಶಕನ್ನೈನಮತೀತ್ಯ ಯಾತುಮ್ ।

ಭೀಷ್ಮಂ ಪಾರ್ತ್ಥಃ ಸಾಯಕಾಶ್ಚಾಸ್ಯ ತಸ್ಮಿನ್  ಸಸಜ್ಜಿರೇ ಪರ್ವತೇಷ್ವಪ್ಯಸಕ್ತಾಃ ॥ ೨೫.೧೨೭॥

 

ಅತ್ಯಂತ ವೀರನಾದರೂ ಕೂಡಾ, ದುಷ್ಟನಾದ ದುಃಶಾಸನನಿಂದ ತಡೆಯಲ್ಪಟ್ಟ ಅರ್ಜುನನು, ದುಃಶಾಸನನನ್ನು ಮೀರಿ ಮುಂದುವರಿಯಲು ಸಮರ್ಥನಾಗಲಿಲ್ಲ. ಪರ್ವತವನ್ನೇ ಭೇದಿಸತಕ್ಕ ಅರ್ಜುನನ ಬಾಣಗಳು ದುಃಶಾಸನನ ದೇಹಕ್ಕೆ ತಾಗಿ ಬಿದ್ದವೇ ಹೊರತು ಅವನ ದೇಹವನ್ನು ಸೀಳಲಿಲ್ಲ.

No comments:

Post a Comment