ಸ ಧಾರ್ತ್ತರಾಷ್ಟ್ರೇಣ ಯುಧಿಷ್ಠಿರಾಗ್ರಹಾತ್
ಸಂಶ್ರಾವಿತಃ ಕ್ರೂರವಚೋ ನಿಶಾಯಾಮ್ ।
ಜಗಾದ ದೂರಂ ಸಮರಾದ್
ವಿನೀಯತಾಂ ಪಾರ್ತ್ಥಸ್ತತೋ ಧರ್ಮ್ಮಸುತಂ ಗ್ರಹೀಷ್ಯೇ ॥ ೨೬.೧೪ ॥
ಆ ರಾತ್ರಿ, ಯುಧಿಷ್ಠಿರನನ್ನು
ಬಂಧಿಸಲಾಗದ ಕಾರಣಕ್ಕೆ ದುರ್ಯೋಧನನಿಂದ ಕ್ರೂರವಾದ ಬೈಗುಳಗಳನ್ನು ಕೇಳಿದ ದ್ರೋಣಾಚಾರ್ಯರು: ‘ಅರ್ಜುನನು
ಯುದ್ಧಭೂಮಿಯಿಂದ ದೂರ ಒಯ್ಯಲ್ಪಡಲಿ, ಆಮೇಲೆ ನಾನು ಧರ್ಮರಾಜನನ್ನು ಹಿಡಿಯುತ್ತೇನೆ’ ಎಂದು
ಹೇಳಿದರು.
ತತಃ ಸುಶರ್ಮ್ಮಾ ಸಹಿತೋ
ಮಹಾರಥೈಃ ಸಂಶಪ್ತಕೈರ್ದ್ದೂರತರಂ ಪ್ರಣೇತುಮ್ ।
ಯುದ್ಧಾಯ ಭೀಮಾನುಜಮಾಶು
ಕ್ಲ್-ಪ್ತೋ ದುರ್ಯ್ಯೋಧನೇನೋಮಿತಿ ಸೋSಪ್ಯವಾದೀತ್ ॥ ೨೬.೧೫ ॥
ತದನಂತರ ಮಹಾರಥಿಕರಾದ
ಸಂಶಪ್ತಕರಿಂದ ಸಹಿತನಾದ ಸುಶರ್ಮನು, ಭೀಮನ ತಮ್ಮನಾದ ಅರ್ಜುನನನ್ನು ಯುದ್ಧಭೂಮಿಯಲ್ಲಿ ದೂರಕ್ಕೆ ಒಯ್ಯಲು
ಶೀಘ್ರದಲ್ಲೇ ದುರ್ಯೋಧನನಿಂದ ಆಜ್ಞಾಪಿಸಲ್ಪಟ್ಟನು. ಅದಕ್ಕೆ ಸುಶರ್ಮನು ‘ಹಾಗೇ ಆಗಲಿ’ ಎಂದು ಹೇಳಿದನು ಕೂಡಾ.
[ತ್ರಿಗರ್ತದವರಿಗೆ
ದುರ್ಯೋಧನನು ಯುದ್ಧಭೂಮಿಯಲ್ಲಿ ಅರ್ಜುನನನ್ನು ದೂರಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದ.
ಆಗ ಅವರು ಪ್ರತಿಜ್ಞೆ ಮಾಡಿದರು. (ಈ ರೀತಿ ಶಪತಮಾಡಿ ಯುದ್ಧ
ಮಾಡುವವರನ್ನು ಸಂಶಪ್ತಕರು ಎಂದು ಕರೆಯುತ್ತಾರೆ). ‘ತಸ್ಮಿನ್ನಗ್ರೌ ತದಾ ಚಕ್ರುಃ ಪ್ರತಿಜ್ಞಾಂ
ದೃಢನಿಶ್ಚಯಾಃ । ಶೃಣ್ವತಾಂ ಸರ್ವಭೂತಾನಾಮುಚ್ಚೈರ್ವಾಚೋ ಬಭಾಷಿರೇ । ಸರ್ವೇ ಧನಞ್ಜಯವಧೇ
ಪ್ರತಿಜ್ಞಾಂ ಚಾಪಿ ಚಕ್ರಿರೇ’ (ದ್ರೋಣಪರ್ವ ೧೭.೨೮-೨೯) ಬೆಂಕಿಯ ಮುಂದೆ ಅವರು ಅರ್ಜುನನನ್ನು ಕೊಲ್ಲಬೇಕು ಎಂದು
ಪ್ರತಿಜ್ಞೆಮಾಡಿದರು. ‘ನಾಸ್ತಿಕಾನಾಂ ಚ ಯೇ ಲೋಕಾ ಯೇSಗ್ನಿಮಾತೃಪಿತೃತ್ಯಜಾಮ್ । ತಾನಾಪ್ನುಯಾಮಹೇ
ಲೋಕಾನ್ ಯೇ ಚ ಪಾಪಕೃತಾಮಪಿ । ಯದ್ಯಹತ್ವಾ ವಯಂ ಯುದ್ಧೇ ನಿವರ್ತೇಮ ಧನಞ್ಜಯಮ್(೩೫). ನಾವು
ಅರ್ಜುನನನ್ನು ಕೊಲ್ಲದೇ ಯುದ್ಧದಿಂದ ಮರಳಿ ಬಂದರೆ ವಿವಿಧ ಪಾಪಕರ್ಮಿಗಳಿಗೆ ಯಾವ ಲೋಕಗಳು ದೊರೆಯುತ್ತವೋ
ಆ ಲೋಕ ನಮಗೆ ದೊರೆಯಲಿ ಎಂದು ಅವರು ಪ್ರತಿಜ್ಞೆ ಮಾಡಿದರು]
ಸಮಾಹ್ವಯಾಮಾಸುರಥಾರ್ಜ್ಜುನಂ
ತೇ ಪ್ರಾತರ್ಹುತಾಶಸ್ಯ ದಿಶಂ ರಣಾಯ ।
ಅಯೋಧಯತ್ ತಾನ್ ಸ ಚ
ತತ್ರ ಗತ್ವಾ ಭೀಮೋ ಗಜಾನೀಕಮಥಾತ್ರ ಚಾವಧೀತ್ ॥ ೨೬.೧೬ ॥
ಬೆಳಗಾದೊಡನೆ ಯುದ್ಧಭೂಮಿಯಲ್ಲಿ
ಅವರು ಆಗ್ನೇಯದಿಕ್ಕನ್ನು
ಕುರಿತು ಯುದ್ಧಕ್ಕಾಗಿ ಅರ್ಜುನನನ್ನು ಕರೆದರು. ಅರ್ಜುನನು ಅಲ್ಲಿಗೆ ಹೋಗಿ ಅವರೊಂದಿಗೆ ಯುದ್ಧಮಾಡಿದ.
ಭೀಮಸೇನ ಈ ಹನ್ನೆರಡನೇದಿನದ ಯುದ್ಧದಲ್ಲಿ ಆನೆಗಳ ಸಮೂಹವನ್ನೇ ಕೊಂದ.
ನಿಹನ್ಯಮಾನೇಷು ಗಜೇಷು
ಸರ್ವಶೋ ವಿದ್ರಾಪ್ಯಮಾಣೇಷ್ವಖಿಲೇಷು ರಾಜಸು ।
ಪ್ರಾಗ್ಜ್ಯೋತಿಷೋ ಧಾರ್ತ್ತರಾಷ್ಟ್ರಾರ್ತ್ಥಿತಸ್ತಂ
ಸಮಾಸದತ್ ಸುಪ್ರತೀಕೇನ ಧನ್ವೀ ॥ ೨೬.೧೭॥
ಭೀಮನಿಂದ ಎಲ್ಲಾ ಕಡೆ
ಆನೆಗಳು ಕೊಲ್ಲಲ್ಪಡುತ್ತಿರಲು,
ಎಲ್ಲಾ ರಾಜರೂ ಓಡುತ್ತಿರಲು, ದುರ್ಯೋಧನನಿಂದ ಬೇಡಿಕೊಳ್ಳಲ್ಪಟ್ಟ
ಭಗದತ್ತನು ಬಿಲ್ಲನ್ನು ಹಿಡಿದು, ಸುಪ್ರತೀಕವನ್ನೇರಿ ಭೀಮಸೇನನನ್ನು ಎದುರುಗೊಂಡ.
ವಿಭೀಷಿತಾಃ
ಸುಪ್ರತೀಕೇನ ಭೀಮಹಯಾ ನ ತಸ್ಥುಸ್ತದನು ಸ್ಮ ಸಾತ್ಯಕಿಃ ।
ಸೌಭದ್ರಮುಖ್ಯಾಶ್ಚ ಗಜಂ
ತಮಭ್ಯಯುಶ್ಚಿಕ್ಷೇಪ ತೇಷಾಂ ಸ ರಥಾನಥಾಮ್ಬರೇ ॥ ೨೬.೧೮ ॥
ಸುಪ್ರತೀಕ ಆನೆಯಿಂದ
ಭಯಗೊಂಡ ಭೀಮಸೇನನ ಕುದುರೆಗಳು ಒಂದು ಕಡೆ ನಿಲ್ಲಲಿಲ್ಲ. ಆಗ ಸಾತ್ಯಕಿ, ಅಭಿಮನ್ಯು, ಮೊದಲಾದವರು ಆ
ಆನೆಯನ್ನು ಎದುರುಗೊಂಡರು. ಆ ಸುಪ್ರತೀಕ ಆನೆಯು ಅವರೆಲ್ಲರ ರಥಗಳನ್ನು ಆಕಾಶಕ್ಕೆಸೆಯಿತು.
ಶೈನೇಯಪೂರ್ವೇಷು
ರಥೋಜ್ಝಿತೇಷು ಭೂಮಾವವಪ್ಲುತ್ಯ ಕಥಞ್ಚಿದೇವ ।
ಸ್ಥಿತೇಷು ಭೀಮೇ ಚ
ವಿಭೀಷಿತಾಶ್ವಾನ್ ಸಂಯಮ್ಯ ಯುದ್ಧ್ಯತ್ಯಪಿ ಕೃಷ್ಣ ಐಕ್ಷತ್ ॥ ೨೬.೧೯ ॥
ಸಙ್ಕ್ಲೇಶಿತೋ
ವೈಷ್ಣವಾಸ್ತ್ರಂ ಪ್ರಮುಞ್ಚೇತ್ ಪ್ರಾಗ್ಜ್ಯೋತಿಷೋ ಭೀಮಸೇನೇ ತತೋSಹಮ್ ।
ಯಾಮ್ಯರ್ಜ್ಜುನೇನೈವ
ತದಸ್ತ್ರಮಾತ್ಮನಃ ಸ್ವೀಕರ್ತ್ತುಮನ್ಯೇನ ವರಾದಧಾರ್ಯ್ಯಮ್ ॥ ೨೬.೨೦ ॥
ಹೀಗೆ ಸಾತ್ಯಕಿ
ಮೊದಲಾದವರೆಲ್ಲಾ ರಥರಹಿತರಾಗಿ, ಭೂಮಿಗೆ ಹಾರಿ, ಪ್ರಾಯಾಸದಿಂದಿರುತ್ತಿರಲು, ಭೀಮಸೇನನು ಹೆದರಿದ ಕುದುರೆಗಳನ್ನು ನಿಯಮಿಸಿ ಮತ್ತೆ
ಯುದ್ಧರಂಗಕ್ಕೆ ಬಂದು ಯುದ್ಧ ಮಾಡುತ್ತಿರಲು, ಕೃಷ್ಣಪರಮಾತ್ಮನು ಹೀಗೆ ಯೋಚನೆ
ಮಾಡಿದ-
‘ಭಗದತ್ತನು
ಪೀಡಿಸಲ್ಪಟ್ಟವನಾಗಿ ಭೀಮಸೇನನಲ್ಲಿ ನಾರಾಯಣಾಸ್ತ್ರವನ್ನು ಬಿಡಬಹುದು. ಆ ಕಾರಣದಿಂದ ನನ್ನ
ಅಸ್ತ್ರವನ್ನು ನಾನೇ ಸ್ವೀಕರಿಸಲು ನಾನು ಅರ್ಜುನನಿಂದ ಕೂಡಿಕೊಂಡು, ಅಲ್ಲಿಗೆ ಹೋಗುತ್ತೇನೆ. ಆ
ಅಸ್ತ್ರವನ್ನು ಇನ್ನೊಬ್ಬರು ಸ್ವೀಕರಿಸಲು ಅಶಕ್ಯರು’ ಎಂದು ಶ್ರೀಕೃಷ್ಣ ಸಂಕಲ್ಪ ಮಾಡಿದ.
ಇತಿ ಸ್ಮ ಸಞ್ಚಿನ್ತ್ಯ
ಸಹಾರ್ಜ್ಜುನೇನ ತತ್ರಾSಯಯಾವಥ
ಪಾರ್ತ್ಥಂ ತ್ರಿಗರ್ತ್ತಾಃ ।
ನ್ಯವಾರಯಂಸ್ತ್ವಾಷ್ಟ್ರಮಸ್ತ್ರಂ
ಸ ತೇಷು ವ್ಯವಾಸೃಜನ್ಮೋಹನಾಯಾSಶು ವೀರಃ ॥ ೨೬.೨೧ ॥
ಈರೀತಿಯಾಗಿ ಯೋಚನೆ
ಮಾಡಿದ ಕೃಷ್ಣನು ಅರ್ಜುನನೊಡಗೂಡಿ ಭಗದತ್ತನಿದ್ದಲ್ಲಿಗೆ ಬಂದನು. ಅಷ್ಟರಲ್ಲೇ ಪಾರ್ಥನನ್ನು ತ್ರಿಗರ್ತದವರು ತಡೆದರು. ಆಗ ಅವನು
ಅವರಲ್ಲಿ ತ್ವಷ್ಟ್ರು ದೇವತಾಕವಾದ ಮೊಹನಾಸ್ತ್ರವನ್ನು ಬಿಟ್ಟ,
ತದಸ್ತ್ರವೀರ್ಯೇಣ
ವಿಮೋಹಿತಾಸ್ತೇ ಪರಸ್ಪರಂ ಕೃಷ್ಣಪಾರ್ತ್ಥಾವಿತಿ ಸ್ಮ ।
ಜಘ್ನುಸ್ತದಾ
ವಾಸವಿಸ್ತಾನ್ ವಿಸೃಜ್ಯ ಪ್ರಾಗ್ಜ್ಯೋತಿಷಂ ಹನ್ತುಮಿಹಾಭ್ಯಗಾದ್ ದ್ರುತಮ್ ॥ ೨೬.೨೨ ॥
ಆ ಸಮ್ಮೊಹನಾಸ್ತ್ರದ
ಬಲದಿಂದ ಮೋಹಗೊಂಡು ಬುದ್ಧಿ ಕೆಡಿಸಿಕೊಂಡ ಆ ತ್ರಿಗರ್ತದವರು ಪರಸ್ಪರರನ್ನು ‘ಇವನು ಕೃಷ್ಣ, ಇವನು ಅರ್ಜುನ’ ಎಂದು
ತಿಳಿದುಕೊಂಡು ಹೊಡೆದುಕೊಂಡರು. ಆಗ ಅರ್ಜುನನು ಅವರನ್ನು ಬಿಟ್ಟು ಭಗದತ್ತನನ್ನು ಕೊಲ್ಲಲು ಎದುರಾಗಿ
ಬಂದನು.
[ಮಹಾಭಾರತ: ‘ಅಯಮರ್ಜುನೋSಯಂ ಗೋವಿನ್ದ ಇಮೌ ಪಾಂಡವಯಾದವೌ
। ಇತಿ ಬ್ರುವಾಣಾಃ ಸಮ್ಮೂಢಾ ಜಘ್ನುರನ್ಯೋನ್ಯಮಾಹವೇ’ (ದ್ರೋಣಪರ್ವ ೧೯.೧೩) ಸಂಶಪ್ತಕರು ಪರಸ್ಪರ ಹೊಡೆದಾಡಿಕೊಂಡು ಸಾಯುತ್ತಿದ್ದರು]
No comments:
Post a Comment