ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, February 19, 2023

Mahabharata Tatparya Nirnaya Kannada 26-79-88

 

ದ್ರೋಣಂ ತತಃ ಶೈಶುಪಾಲಿಃ ಸಪುತ್ರೋ ಜಾರಾಸನ್ಧಿಃ ಕಾಶಿರಾಜಃ ಸಶೈವ್ಯಃ ।

ಸಮಾಸದನ್ ಕೈಕಯಾಶ್ಚೈವ ಪಞ್ಚ ಸಮಾರ್ದ್ದಯನ್ ಬಾಣಗಣೈಶ್ಚ ಸರ್ವಶಃ ॥ ೨೬.೭೯ ॥

 

ತದನಂತರ ಶಿಶುಪಾಲನ ಮಗನಾದ ಧೃಷ್ಟಕೇತು (ಯುಧಿಷ್ಠಿರನ ಪತ್ನಿ ದೇವಕಿಯ ಅಣ್ಣ), ಜರಾಸಂಧನ ಮಗ ಸಹದೇವ, ಭೀಮನ ಮಾವನಾದ ಕಾಶೀರಾಜ, ಶೈಬ್ಯ, ಐದುಜನ ಕೇಕಯರು ದ್ರೋಣಾಚಾರ್ಯರನ್ನು ಎದುರುಗೊಂಡರು ಹಾಗೂ ಎಲ್ಲೆಡೆಯಿಂದ ಬಾಣಗಳಿಂದ ದಾಳಿ ನಡೆಸಿ ಅವರನ್ನು ಪೀಡಿಸಿದರು.

 

ಸ ತಾನ್ ಕ್ರಮೇಣೈವ ನಿಕೃತ್ತಕನ್ಧರಾಞ್ಛರೋತ್ತಮೈರತ್ರ ವಿಧಾಯ ವಿಪ್ರಃ ।

ನಿನಾಯ ಲೋಕಂ ಪರಮರ್ಕ್ಕಮಣ್ಡಲಂ ವ್ರಜನ್ತಿ ನಿರ್ಭಿದ್ಯ ಯಮೂರ್ಧ್ವರೇತಸಃ ॥ ೨೬.೮೦ ॥

 

ಹೀಗೆ ಬಂದ ಅವರೆಲ್ಲರನ್ನೂ ಕ್ರಮವಾಗಿ ಆ ದ್ರೋಣಾಚಾರ್ಯರು ತನ್ನ ಬಾಣಗಳಿಂದ ಕತ್ತರಿಸಲ್ಪಟ್ಟ ಕತ್ತುಳ್ಳವರನ್ನಾಗಿ ಮಾಡಿ, ಸೂರ್ಯಮಂಡಲದ ಆಚೆ ಇರುವ ಲೋಕಕ್ಕೆ ಕಳುಹಿಸಿದರು. ಯಾವ ಲೋಕವನ್ನು ಸನ್ಯಾಸಿಗಳು ಸೂರ್ಯಮಂಡಲವನ್ನು ಭೇದಿಸಿ ಹೋಗುತ್ತಾರೋ, ಆ ಲೋಕವನ್ನು ಅವರಿಗೆ ದ್ರೋಣಾಚಾರ್ಯರು ಹೊಂದಿಸಿಕೊಟ್ಟರು.

 

ವಿಧೂಯಮಾನೇ ಗುರುಣೋರುಸೈನ್ಯೇ ಪೃಥಾಸುತಾನಾಂ ಪೃತನಾಃ ಪರೇಷಾಮ್ ।

ಪ್ರಾಯೋ ರಣೇ ಮಾರುತಸೂನುನೈವ ಹತಪ್ರವೀರಾ ಮೃದಿತಾಃ ಪರಾದ್ರವನ್ ॥೨೬.೮೧॥

 

ಹೀಗೆ ದ್ರೋಣಾಚಾರ್ಯರಿಂದ ಪಾಂಡವರ ಸೈನ್ಯವು ನಾಶಮಾಡಲ್ಪಡುತ್ತಿರಲು, ಅತ್ತ ಕೌರವರ ಸೇನೆಯು ಭೀಮನಿಂದ ತಮ್ಮ ವೀರರನ್ನು ಕಳೆದುಕೊಂಡು, ಪೀಡಿತವಾಗಿ, ಪಲಾಯನ ಮಾಡಿದವು.

 

ಅಲಮ್ಭುಸೋ ನಾಮ ತದೈವ ರಾಕ್ಷಸಃ ಸಮಾಸದನ್ಮಾರುತಿಮುಗ್ರಪೌರುಷಮ್ ।

ಸ ಪೀಡಿತಸ್ತೇನ ಶರೈಃ ಸುತೇಜನೈಃ ಕ್ಷಣಾದದೃಶ್ಯತ್ವಮವಾಪ ಮಾಯಯಾ ॥೨೬.೮೨ ॥

 

ಆಗಲೇ ಅಲಮ್ಭುಸ ಎನ್ನುವ ರಾಕ್ಷಸನು ಉಗ್ರವಾದ ಪರಾಕ್ರಮವುಳ್ಳ ಭೀಮಸೇನನನ್ನು ಹೊಂದಿದನು. ಅವನು ಭೀಮನ ತೀಕ್ಷ್ಣವಾದ ಬಾಣಗಳಿಂದ ನೋವುಂಡು ಕ್ಷಣದಲ್ಲೇ ಮಾಯಾ ವಿದ್ಯೆಯಿಂದ ಅದೃಶ್ಯತ್ವವನ್ನು ಹೊಂದಿದನು.

 

ಸೋSದೃಶ್ಯರೂಪೋSನುಚರಾನಪೀಡಯದ್ ಭೀಮಸ್ಯ ತದ್ ವೀಕ್ಷ್ಯ ಚುಕೋಪ ಮಾರುತಿಃ ।

ಅಸ್ತ್ರಜ್ಞತಾಮಾತ್ಮನಿ ಕೇಶವಾಜ್ಞಯಾ ಸನ್ದರ್ಶಯನ್ನಾಗತಧರ್ಮ್ಮಸಙ್ಕಟಃ ॥೨೬.೮೩ ॥

 

ತ್ವಾಷ್ಟ್ರಾಸ್ತ್ರಮಾದತ್ತ ಸ ಕಾಮ್ಯಕರ್ಮ್ಮಹೀನೋSಪಿ ಭೀಮಸ್ತತ ಉತ್ಥಿಥಾಃ ಶರಾಃ ।

ತೇ ಬಾಣವರ್ಯ್ಯಾಸ್ತದದೃಶ್ಯವೇಧಿನೋ ರಕ್ಷೋ ವಿದಾರ್ಯ್ಯಾSವಿವಿಶುರ್ದ್ಧರಾತಳಮ್ ॥ ೨೬.೮೪ ॥

 

ಅಲಮ್ಭುಸನು ಅದೃಶ್ಯರೂಪನಾಗಿ ಭೀಮಸೇನನ ಬೆಂಗಾವಲು ಪಡೆಯನ್ನು ಹಿಂಸೆ ಮಾಡಿದನು. ಅದನ್ನು ನೋಡಿ, ಭೀಮಸೇನ ಕೋಪಗೊಂಡ. ಪರಮಾತ್ಮನ ಆಜ್ಞೆಯಿಂದ ತನ್ನಲ್ಲಿ ಅಸ್ತ್ರ ವಿದ್ಯೆಯೂ ಇದೇ ಎನ್ನುವುದನ್ನು ಪ್ರಪಂಚಕ್ಕೆ ತೋರಿಸುತ್ತಾ, ಕಾಮ್ಯಕರ್ಮವಿಲ್ಲದ ಭೀಮಸೇನನು ತ್ವಷ್ಟ್ರ ದೇವತಾಕವಾದ ಅಸ್ತ್ರವನ್ನು ತೆಗೆದುಕೊಂಡ. ಆ ಅಸ್ತ್ರದಿಂದ ಮೇಲೆದ್ದ ಬಾಣಗಳು ಯಾರಿಗೂ ಕಾಣದ ಅಲಮ್ಭುಸನನ್ನು ಸೀಳಿಕೊಂಡು ಭೂಮಿಯನ್ನು ಪ್ರವೇಶ ಮಾಡಿತು.

[ಭೀಮಸೇನ ದ್ರೋಣಾಚಾರ್ಯರಲ್ಲಾಗಲೀ  ಅಥವಾ ಇನ್ನೆಲ್ಲೋ ಅಸ್ತ್ರವಿದ್ಯೆ ಕಲಿತ  ವಿವರ ನಮಗೆ ಕಾಣಸಿಗುವುದಿಲ್ಲ. ಆದರೆ ಇಲ್ಲಿ ಅವನು ಅಸ್ತ್ರವನ್ನು ಅನುಸಂಧಾನ ಮಾಡಿದ ಎಂದು ಹೇಳಿದ್ದಾರೆ. ಹೌದು, ಭೀಮ ಅಸ್ತ್ರವನ್ನು ಕಲಿಯಲಿಲ್ಲ. ಆದರೆ ಪ್ರತಿಭೆ ಇರುವುದರಿಂದ ಅಸ್ತ್ರದ ಮಂತ್ರ ಗೊತ್ತಿತ್ತು. ಕಾಮ್ಯಕರ್ಮ ಮಾಡದ ಭೀಮಸೇನ ಆ ಮಂತ್ರಗಳನ್ನು ಉಪಯೋಗಿಸುತ್ತಿರಲಿಲ್ಲ ಅಷ್ಟೇ. ಮಹಾಭಾರತದಲ್ಲಿ ಭೀಮಸೇನ ಅಸ್ತ್ರಪ್ರಯೋಗಿಸುವುದನ್ನು ಹೀಗೆ ವಿವರಿಸಿದ್ದಾರೆ: ‘ಸಾ ರಾಕ್ಷಸವಿಸೃಷ್ಟಾ ತು ಶರವೃಷ್ಟಿಃ ಸುದಾರುಣಾ । ಜಘಾನ ಪಾಂಡುಪುತ್ರಸ್ಯ ಸೈನಿಕಾನ್ ರಣಮೂರ್ಧನಿ’ (ದ್ರೋಣಪರ್ವ ೧೦೮.೩೦) ‘ತತಃ ಕ್ರೋಧಾಭಿತಾಮ್ರಾರಾಕ್ಷೋ ನಿರ್ದಹನ್ನಿವ ಪಾವಕಃ । ಸನ್ದಧೇ ತ್ವಾಷ್ಟ್ರಮಸ್ತ್ರಂ ಸ ಸ್ವಯಂ ತ್ವಷ್ಟೇವ  ಮಾರುತಿಃ’ (೩೮) ] 

 ವಿವರ ನಮಗೆ ಕಾಣಸಿಗುವುದಿಲ್ಲ

ತದ್ಧನ್ಯಮಾನಂ ಪ್ರವಿಹಾಯ ಭೀಮಮಪಾದ್ರವದ್ ದೂರತರಂ ಸುಭೀತಮ್ ।

ತತಸ್ತು ಭೀಮೋ ದ್ವಿಷತಾಂ ವರೂಥಿನೀಂ ವಿದ್ರಾವಯಾಮಾಸ ಶರೈಃ ಸುಮುಕ್ತೈಃ ॥ ೨೬.೮೫ ॥

 

ಆ ರಾಕ್ಷಸನು ಭೀಮನಿಂದ ಪೆಟ್ಟು ತಿಂದು, ಭೀಮನನ್ನು ಬಿಟ್ಟು, ಅತಿ ಭಯಗೊಂಡು ಬಹಳ ದೂರ ಓಡಿಹೋದನು. ತದನಂತರ ಭೀಮಸೇನನು ಶತ್ರುಗಳ ಸೇನೆಯನ್ನು ಉತ್ಕೃಷ್ಟವಾದ ಬಾಣಗಳಿಂದ ಓಡಿಸಿದನು.

[ತದಸ್ತ್ರಂ ಪ್ರೇರಿತಂ ತೇನ ಭೀಮಸೇನೇನ ಸಂಯುಗೇ ರಾಕ್ಷಸಸ್ಯ ಮಹಾಮಾಯಾಂ ಹತ್ವಾ ರಾಕ್ಷಸಮಾರ್ಧಯತ್’ (ದ್ರೋಣಪರ್ವ ೧೦೮.೪೦)- ರಾಕ್ಷಸನ ಮಾಯೆಯನ್ನು ಯಾವುದೇ ಶ್ರಮವಿಲ್ಲದೇ ಭೀಮಸೇನ ನಾಶಮಾಡಿದನು]

 

ತದೈವ ಕೃಷ್ಣಾತನಯಾಃ ಸಮೇತಾ ಜಘ್ನುಃ ಶಲಂ ಸಂಯತಿ ಸೌಮದತ್ತಿಮ್ ।

ಅಲಮ್ಭುಸಂ ಪ್ರಾಪ ತದಾ ಘಟೋತ್ಕಚಃ ಪರಸ್ಪರಂ ತೌ ರಥಿನಾವಯುದ್ಧ್ಯತಾಮ್ ॥ ೨೬.೮೬ ॥

 

ಆಗಲೇ ದ್ರೌಪದಿಯ ಮಕ್ಕಳು ಒಟ್ಟುಗೂಡಿ ಸೋಮದತ್ತನ ಮಗನಾದ ಶಲನನ್ನು ಯುದ್ಧದಲ್ಲಿ ಕೊಂದುಹಾಕಿದರು. ಆಗ ಘಟೋತ್ಕಚನು  ಅಲಮ್ಭುಸನನ್ನು ಎದುರುಗೊಂಡನು. ಅವರಿಬ್ಬರೂ ಪರಸ್ಪರ ಯುದ್ಧಮಾಡಲಾರಂಭಿಸಿದರು.

 

 

ಘಟೋತ್ಕಚಸ್ತಂ ವಿರಥಂ ವಿಧಾಯ ಖಸ್ಥಂ ಖ ಏವಾಭಿಯುಯೋಧ ಸಂಸ್ಥಿತಃ ।

ತತಸ್ತು ತಂ ಭೀಮಸುತೋ ನಿಗೃಹ್ಯ ನಿಪಾತ್ಯ ಭೂಮೌ ಪ್ರದದೌ ಪ್ರಹಾರಮ್ ॥ ೨೬.೮೭ ॥

 

ಪದಾ ಶಿರಸ್ಯೇವ ಸ ಪಿಷ್ಟಮಸ್ತಕೋ ಮಮಾರ ಮದ್ಧ್ಯೇ ಪೃಥಿವೀಪತೀನಾಮ್ ।

ತಸ್ಮಿನ್ ಹತೇ ಭೈಮಸೇನಿಃ ಕುರೂಣಾಂ ವ್ಯದ್ರಾವಯದ್ ರಥವೃನ್ದಂ ಸಮನ್ತಾತ್ ॥ ೨೬.೮೮ ॥

 

ಘಟೋತ್ಕಚನು ಅಲಮ್ಭುಸನನ್ನು ರಥಹೀನನನ್ನಾಗಿ ಮಾಡಿ ಆಕಾಶದಲ್ಲಿರುವ ಅವನೊಂದಿಗೆ  ಆಕಾಶದಲ್ಲಿಯೇ ನಿಂತು ಯುದ್ಧಮಾಡಿದನು. ಕೆಲವು ಹೊತ್ತು ಯುದ್ಧವಾದಮೇಲೆ ಘಟೋತ್ಕಚನು ಅಲಮ್ಭುಸನನ್ನು ನಿಗ್ರಹಿಸಿ, ಭೂಮಿಯಲ್ಲಿ ಬೀಳಿಸಿ, ಕಾಲಿನಿಂದ ಪ್ರಹಾರಮಾಡಿದನು. ಆಗ ಚೂರು-ಚೂರಾದ ತಲೆಯುಳ್ಳವನಾದ ಅಲಮ್ಭುಸನು ರಾಜರ ಮಧ್ಯದಲ್ಲಿ ಸತ್ತುಹೋದನು. ಅವನು ಸಾಯುತ್ತಿರಲು ಭೀಮಸೇನನ ಮಗನಾದ ಆ ಘಟೋತ್ಕಚನು ಅವನ ಬೆಂಗಾವಲು ಪಡೆಯನ್ನು ಓಡಿಸಿದನು.

No comments:

Post a Comment