ಪಾರ್ತ್ಥೇ ಪ್ರವಿಷ್ಟೇ
ಕುರುಸೈನ್ಯಮದ್ಧ್ಯಂ ದ್ರೋಣೋSವಿಶತ್ ಪಾಣ್ಡವಸೈನ್ಯಮಾಶು ।
ಸ
ತದ್ರಥಾನೀಕಮುದಗ್ರವೇಗೈಃ ಶರೈರ್ವಿಧೂಯ ನ್ಯಹನಚ್ಚ ವೀರಾನ್ ॥೨೬.೭೪॥
ಅರ್ಜುನನು ಕೌರವ ಸೈನ್ಯ
ನಡುವಲ್ಲಿ ಪ್ರವೇಶಮಾಡುತ್ತಿರಲು, ಇತ್ತ ದ್ರೋಣಾಚಾರ್ಯರು ಪಾಂಡವರ ಸೇನೆಯನ್ನು ಹೊಕ್ಕರು. ಅವರು
ಪಾಂಡವರ ರಥಿಕರ ಸಮೂಹವನ್ನು ಉಗ್ರವಾದ, ವೇಗವಾದ ಬಾಣಗಳಿಂದ ಹೊಡೆದು ಓಡಿಸಿ, ಬಹಳ ಜನ ಪರಾಕ್ರಮಶಾಲಿಗಳನ್ನು
ಕೊಂದರು.
ಸ ವೀರವರ್ಯ್ಯಃ
ಸ್ಥವಿರೋSಪಿ
ಯೂನಾಂ ಯುವೇವ ಮದ್ಧ್ಯೇ ಪ್ರಚಚಾರ ಧನ್ವಿನಾಮ್ ।
ಪ್ರಪಾತಯನ್
ವೀರಶಿರಾಂಸಿ ಬಾಣೈರ್ಯ್ಯುಧಿಷ್ಠಿರಂ ಚಾSಸದದುಗ್ರವೀರ್ಯ್ಯಃ ॥೨೬.೭೫॥
ವೀರರಲ್ಲಿಯೇ ಹಿರಿಯರಾದ
ಆ ದ್ರೋಣಾಚಾರ್ಯರು ವೃದ್ಧರಾದರೂ ಕೂಡಾ, ಯುವಕರ ಮಧ್ಯದಲ್ಲಿ ಯುವಕನಂತೆ ಹೋರಾಡಿದರು. ಬಾಣಗಳಿಂದ ವೀರರ
ತಲೆಗಳನ್ನು ಉರುಳಿಸುತ್ತಾ,
ಮಹೋಗ್ರಪರಾಕ್ರಮವುಳ್ಳವರಾಗಿ ಯುಧಿಷ್ಠಿರನನ್ನು ಹೊಂದಿದರು.
ನೃಪಗ್ರಹೇಚ್ಛುಂ
ತಮವೇತ್ಯ ಸತ್ಯಜಿನ್ನ್ಯವಾರಯದ್ ದ್ರೌಪದಿರಾಶು ವೀರ್ಯ್ಯವಾನ್ ।
ನಿವಾರಿತಸ್ತೇನ ಶಿರಃ
ಶರೇಣ ಚಕರ್ತ್ತ ಪಾಞ್ಚಾಲಸುತಸ್ಯ ವಿಪ್ರಃ ॥ ೨೬.೭೬ ॥
ಯುಧಿಷ್ಠಿರನನ್ನು
ಹಿಡಿಯಬೇಕು ಎಂದು ಬಯಸುವ ದ್ರೋಣಾಚಾರ್ಯರನ್ನು ತಿಳಿದು, ದ್ರುಪದನ ಮಗನಾದ, ವೀರ್ಯವಂತನಾದ ಸತ್ಯಜಿತ್ ಎನ್ನುವವನು ಅವರನ್ನು ಶೀಘ್ರದಲ್ಲಿ ತಡೆದನು.
ಅವನಿಂದ ತಡೆಹಿಡಿಯಲ್ಪಟ್ಟ ದ್ರೋಣಾಚಾರ್ಯರು ಸತ್ಯಜಿತನ ತಲೆಯನ್ನು ಬಾಣದಿಂದ ಕತ್ತರಿಸಿದರು.
ನಿಹತ್ಯ ತಂ ವೀರತಮಂ
ರಣೋತ್ಕಟಂ ಯುಧಿಷ್ಠಿರಂ ಬಾಣಗಣೈಃ ಸಮಾರ್ದ್ದಯತ್ ।
ಸ ಶಕ್ತಿತಸ್ತೇನ ವಿಧಾಯ
ಸಙ್ಗರಂ ನಿರಾಯುಧೋ ವ್ಯಶ್ವರಥಃ ಕೃತಃ ಕ್ಷಣಾತ್ ॥ ೨೬.೭೭ ॥
ವೀರಗ್ರೇಸರರಾದ ದ್ರೋಣಾಚಾರ್ಯರು
ರಣೋತ್ಕಟ ಸತ್ಯಜಿತನನ್ನು ಕೊಂದು, ಯುಧಿಷ್ಠಿರನನ್ನು ಬಾಣಗಳ ಸಮೂಹದಿಂದ ಪೀಡಿಸಿದರು. ಯುಧಿಷ್ಠಿರನಾದರೋ ಶಕ್ತಿ ಇದ್ದಷ್ಟು, ದ್ರೋಣಾಚಾರ್ಯರೊಡನೆ ಯುದ್ಧವನ್ನು ಮಾಡಿದನು. ಅವನು ದ್ರೋಣಾಚಾರ್ಯರಿಂದ ಒಂದು
ಕ್ಷಣದಲ್ಲಿ ನಿರಾಯುಧನಾಗಿಯೂ, ಕುದುರೆ-ರಥಗಳನ್ನು ಕಳೆದುಕೊಂಡವನಾಗಿಯೂ ಮಾಡಲ್ಪಟ್ಟನು.
ಸ ಊರ್ಧ್ವಬಾಹುರ್ಭುವಿ
ಸಂಸ್ಥಿತೋSಪಿ
ಗೃಹೀತುಮಾಜೌ ಗುರೂಣಾSಭಿಪನ್ನಃ ।
ಮಾದ್ರೀಸುತಸ್ಯಾವರಜಸ್ಯ
ಯಾನಮಾರುಹ್ಯ ವೇಗಾದಪಜಗ್ಮಿವಾಂಸ್ತತಃ ॥ ೨೬.೭೮ ॥
ಆಗ ಧರ್ಮರಾಜನು
ಕೈಗಳನ್ನು ಮೇಲೆತ್ತಿ,
ಭೂಮಿಯಲ್ಲಿ ಇದ್ದರೂ ಕೂಡಾ ಯುದ್ಧದಲ್ಲಿ ಹಿಡಿಯಲು ದ್ರೋಣಾಚಾರ್ಯರಿಂದ ಅಭಿಮುಖವಾಗಿ ಹೊಂದಲ್ಪಟ್ಟವನಾಗಿ,
ಏನೂ ಮಾಡಲು ತೋಚದೇ, ಮಾದ್ರೀಸುತ ಸಹದೇವನ ರಥವನ್ನೇರಿ ಅಲ್ಲಿಂದ ದೂರ ಹೊರಟು ಹೋದನು.
[ಕೈಗಳನ್ನು ಮೇಲೆತ್ತಿ
ನಿಲ್ಲುವುದು ಎಂದರೆ- ನನಗೆ ನಿನ್ನ ಹತ್ತಿರ ಯುದ್ಧ ಮಾಡುವ ಬಯಕೆ ಇಲ್ಲ. ಆದರೂ ಯುದ್ಧವನ್ನು
ಕರ್ತವ್ಯದಂತೆ ಮಾಡಿದ್ದೇನೆ. ನನ್ನ ಹತ್ತಿರ ಯಾವುದೇ ಆಯುಧವಿಲ್ಲ. ನಾನು ನಿನ್ನನ್ನು ಯಾವುದೇ
ರೀತಿಯಲ್ಲಿ ಛಲದಿಂದ ನೋಡುತ್ತಿಲ್ಲ, ಇತ್ಯಾದಿಯನ್ನು ಸೂಚಿಸುವುದು. ಹೀಗೆ ಕೈ ಎತ್ತಿದರೂ
ದ್ರೋಣಾಚಾರ್ಯರು ಆಕ್ರಮಿಸಿ ಬಂದಾಗ ಯುಧಿಷ್ಠಿರ ಅವರಿಂದ ತಪ್ಪಿಸಿಕೊಂಡು ಸಹದೇವನ ರಥವನ್ನೇರಿ ಅಲ್ಲಿಂದ
ಪಲಾಯನ ಮಾಡಿದನು.]
No comments:
Post a Comment