ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, February 5, 2023

Mahabharata Tatparya Nirnaya Kannada 26-01-13

 

೨೬. ನಾರಾಯಣಾಸ್ತ್ರೋಪಶಮನಮ್

 

̐

ಅಥಾಖಿಲಾನಾಂ ಪೃಥಿವೀಪತೀನಾಮಾಚಾರ್ಯ್ಯಮಗ್ರ್ಯಂ ರಥಿನಾಂ ಸುವಿದ್ಯಮ್ ।

ರಾಮಸ್ಯ ವಿಶ್ವಾಧಿಪತೇಃ ಸುಶಿಷ್ಯಂ ಚಕ್ರೇ ಚಮೂಪಂ ಧೃತರಾಷ್ಟ್ರಪುತ್ರಃ ॥ ೨೬.೦೧ ॥

 

ಭೀಷ್ಮಾಚಾರ್ಯರ ಪತನವಾದ ಮೇಲೆ, ಎಲ್ಲಾ ರಾಜರಿಗೂ ಅಸ್ತ್ರವಿದ್ಯೆಯ ಗುರುವಾಗಿರುವ, ರಥಿಕ ವೀರರಲ್ಲಿಯೇ ಶ್ರೇಷ್ಠರಾದ, ವಿದ್ಯಾಸಂಪನ್ನರಾದ, ಪ್ರಪಂಚಕ್ಕೆ ಒಡೆಯನಾಗಿರುವ ಪರಶುರಾಮನ ಸುಶಿಷ್ಯರಾದ ದ್ರೋಣಾಚಾರ್ಯರನ್ನು ದುರ್ಯೋಧನನು ಸೇನಾಧಿಪತಿಯನ್ನಾಗಿ ನೇಮಿಸಿದನು.

 

ಕರ್ಣ್ಣೋSಪಿ ಭೀಷ್ಮಾನುಮತೋ ಧನುಷ್ಮಾನ್ ಯುದ್ಧೋದ್ಯತೋSಭೂತ್ ತದಸತ್ಕೃತಃ ಪುರಾ ।

ತಸ್ಮಿನ್ ಸ್ಥಿತೇSನಾತ್ತಧನುಸ್ತದೈವ ರಥಂ ಸಮಾಸ್ಥಾಯ ಗುರುಂ ಸಮನ್ವಯಾತ್ ॥ ೨೬.೦೨ ॥

 

ಭೀಷ್ಮಾಚಾರ್ಯರು ಸೇನಾಧಿಪತಿಯಾಗಿ ನಿಯುಕ್ತಿಗೊಂಡಾಗ ಅವರಿಂದ ‘ಅರ್ಧರಥ’ ಎಂದು ಅವಮಾನಗೊಂಡು, ಭೀಷ್ಮರು ಇರುವಷ್ಟು ದಿನ ಆಯುಧವನ್ನು ಕೈಗೆತ್ತಿಕೊಳ್ಳದ ಕರ್ಣನು, ಭೀಷ್ಮರು ಬಿದ್ದ ಮೇಲೆ ಅವರ ಅನುಜ್ಞೆಯನ್ನು ಪಡೆದು, ರಥವನ್ನೇರಿ, ದ್ರೋಣನನ್ನು ಅನುಸರಿಸಿದನು.

[ಈ ಹಿಂದೆ ನೋಡಿದಂತೆ ಸೇನಾಧಿಪತಿಯಾಗಿ ನಿಯುಕ್ತಿಗೊಂಡ ಭೀಷ್ಮಾಚಾರ್ಯರು ಎರಡೂ ಕಡೆಯ ಯೋಧರ ಲೆಕ್ಕ ಹಾಕುವಾಗ ಕರ್ಣನನ್ನು ಲೆಕ್ಕಿಸಲೇ ಇಲ್ಲ. ದುರ್ಯೋಧನ ಆ ಕುರಿತು ಕೇಳಿದಾಗ ಅವರು ಕರ್ಣನನ್ನು ‘ಅರ್ಧರಥ ಎಂದು ಹೇಳಿ ಅವಮಾನ ಮಾಡಿದ್ದರು. ಆಗ ಕರ್ಣ  ನಾಹಂ ಜೀವತಿ ಗಙ್ಗೇಯೇ  ಯೋತ್ಸ್ಯೇ ರಾಜನ್ ಕಥಞ್ಚನ’(ಉದ್ಯೋಗಪರ್ವ ೧೬೮.೨೯) – ‘ಭೀಷ್ಮಾಚಾರ್ಯರು ಬದುಕಿರುವತನಕ ನಾನು ಶಸ್ತ್ರ ಹಿಡಿಯುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ್ದ. ಹೀಗಾಗಿ ಮೊದಲ ಹತ್ತು ದಿನ ಕರ್ಣ ಯುದ್ಧ ಮಾಡಿರಲಿಲ್ಲ. ಈಗ ಭೀಷ್ಮಾಚಾರ್ಯರು ಬಿದ್ದಮೇಲೆ ಅವರಲ್ಲಿಗೆ ಹೋಗಿ ಯುದ್ಧಮಾಡಲು ಅನುಜ್ಞೆ ಕೇಳಿದ. ಆಗ-  ಶಿವೇನಾಭಿವದಾಮಿ ತ್ವಾಂ ಗಚ್ಛ ಯುದ್ಧ್ಯಸ್ವ ಶತ್ರುಭಿಃ’ (ದ್ರೋಣಪರ್ವ ೪.೧೧) ‘ದೇವರು ಒಳ್ಳೆಯದನ್ನು ಮಾಡಲಿ, ನೀನು ಚೆನ್ನಾಗಿ ಯುದ್ಧಮಾಡು’ ಎಂದು ಬಾಣಗಳ ಮಂಚದಲ್ಲಿ ಮಲಗಿದ್ದ ಭೀಷ್ಮಾಚಾರ್ಯರು  ಆಶೀರ್ವಾದ ಮಾಡಿದರು. ಹೀಗೆ ಭೀಷ್ಮಾಚಾರ್ಯರ ಅನುಮತಿ ಪಡೆದ ಕರ್ಣ ರಣರಂಗಕ್ಕಿಳಿದ].   

 

ದ್ರೋಣೋ ವೃತೋ ಧಾರ್ತ್ತರಾಷ್ಟ್ರೇಣ ಧರ್ಮ್ಮಸುತಗ್ರಹೇ ತೇನ ಕೃತೇ ಪ್ರತಿಶ್ರವೇ ।

ಜ್ಞಾತ್ವಾ ಯತ್ತಾಃ ಪಾಣ್ಡವಾಸ್ತಂ ಸಮೀಯುರ್ಯ್ಯುದ್ಧಾಯ ತತ್ರಾಭವದುಗ್ರಯುದ್ಧಮ್ ॥ ೨೬.೦೩ ॥

 

ದುರ್ಯೋಧನನಿಂದ ಧರ್ಮರಾಜನ ಸೆರೆಯ ವಿಚಾರದಲ್ಲಿ ಪ್ರತಿಜ್ಞೆಯೊಂದಿಗೆ ವೃತರಾದ ದ್ರೋಣಾಚಾರ್ಯರನ್ನು ತಿಳಿದ ಪಾಂಡವರು, ಸಮಗ್ರ ಸನ್ನದ್ಧರಾಗಿ ಯುದ್ಧಕ್ಕಾಗಿ ಕೌರವ ಸೇನೆಯನ್ನು ಹೊಂದಿದರು. ಅಲ್ಲಿ ಅತ್ಯಂತ ಉಗ್ರವಾದ ಯುದ್ಧ ನಡೆಯಿತು.

[‘ಅಹಂ ಗೃಹೀತ್ವಾ ರಾಜಾನಂ ಸತ್ಯಧರ್ಮಪರಾಯಣಮ್ । ಆನಯಿಷ್ಯಾಮಿ ತೇ ರಾಜನ್ ವಶಮದ್ಯ ನ ಸಂಶಯಃ’ (ದ್ರೋಣಪರ್ವ ೧೨.೩೦) ‘ನ ಚೇದ್ ಯುಧಿಷ್ಟಿರಂ ವೀರಃ ಪಾಲಯೇದರ್ಜುನೋ ಯುಧಿ’(೧೨.೨೪) – ‘ಖಂಡಿತ ಧರ್ಮರಾಜನನ್ನು ವಶಮಾಡಿ ತಂದು ಕೊಡುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ ದ್ರೋಣರು, ‘ಅರ್ಜುನ ಅವನ ಬೆಂಗಾವಲಿಗಿದ್ದರೆ ಅದು ನನ್ನಿಂದ ಸಾಧ್ಯವಿಲ್ಲ’ ಎಂದಿದ್ದರು].  

 

ಪತತ್ರಿಭಿಸ್ತತ್ರ ದುಧಾವ ಶಾತ್ರವಾನ್ ದ್ರೋಣೋ ಧನುರ್ಮ್ಮಣ್ಡಲಮನ್ತ್ರನಿಸ್ಸೃತೈಃ ।

ತಮಾಸಸಾದಾSಶು ವೃಕೋದರೋ ನದನ್ ತಮಾಸದನ್ ದ್ರೌಣಿಕೃಪೌ ಚ ಮದ್ರರಾಟ್ ॥ ೨೬.೦೪ ॥

 

ಆ ಯುದ್ಧದಲ್ಲಿ ದ್ರೋಣಾಚಾರ್ಯರು ಮಂಡಲಾಕಾರವಾಗಿ ಕಾಣುತ್ತಿದ್ದ ಬಿಲ್ಲಿನಿಂದ ಮಂತ್ರಪೂತವಾದ ಬಾಣಗಳನ್ನು ಬಿಟ್ಟು  ಶತ್ರುಗಳನ್ನು ನಡುಗಿಸಿದರು. ಆಗ ಭೀಮಸೇನನು ಗರ್ಜಿಸುತ್ತಾ ದ್ರೋಣಾಚಾರ್ಯರನ್ನು ಎದುರುಗೊಂಡ. ಅಂತಹ ಭೀಮಸೇನನನ್ನು ಅಶ್ವತ್ಥಾಮ, ಕೃಪ ಮತ್ತು ಶಲ್ಯ ಈ ಮೂವರೂ ಯುದ್ಧಕ್ಕಾಗಿ ಎದುರುಗೊಂಡರು.

[ಇಲ್ಲಿ ‘ಧನುರ್ಮಣ್ಡಲಮನ್ತ್ರನಿಸ್ಸೃತೈಃ’ ಎನ್ನುವ ಪದವನ್ನು ಬಳಸಲಾಗಿದೆ. ಅಂದರೆ ಧನುಸ್ಸು ಮಂಡಲಾಕಾರವಾಗಿತ್ತು ಎಂದರ್ಥ. ಇದು ದ್ರೋಣಾಚಾರ್ಯರ ಬಾಣಪ್ರಯೋಗದ ವೇಗವನ್ನು ಸೂಚಿಸುವ ಪದವಾಗಿದೆ. ನಿರಂತರವಾಗಿ ಬಾಣಗಳನ್ನು ವೇಗವಾಗಿ ಬಿಡುತ್ತಿರುವಾಗ ಅವರ ಧನುಸ್ಸು ಯಾವಾಗಲೂ ವೃತ್ತಾಕಾರದಲ್ಲಿರುವಂತೆ ಕಾಣುತ್ತಿತ್ತು].   

 

ಸ ತಾನ್ ವಿಧೂಯಾಭ್ಯಪತದ್ ರಣೇSಗ್ರಣೀರ್ದ್ದ್ರೋಣಂ ತಮನ್ವಾರ್ಜ್ಜುನಿರಭ್ಯಯಾತ್ ಪರಾನ್ ।

ವವಾರ ತಂ ಮದ್ರಪತಿಸ್ತಯೋರಭೂದ್ ರಣೋ ಮಹಾಂಸ್ತತ್ರ ಗದಾಂ ಸಮಾದದೇ ॥ ೨೬.೦೫ ॥

 

ಶಲ್ಯೋSಥ ಭೀಮೋSಭಿಯಯೌ ಗದಾಧರಸ್ತಮೇತಯೋರತ್ರ ಬಭೂವ ಸಙ್ಗರಃ ।

ಉಭಾವಜೇಯೌ ಗದಿನಾಮನುತ್ತಮಾವತುಲ್ಯವೀರ್ಯ್ಯೌ ಪ್ರವರೌ ಬಲೀಯಸಾಮ್ ॥ ೨೬.೦೬ ॥

 

ವಿಚೇರತುಶ್ಚಿತ್ರತಮಂ ಪ್ರಪಶ್ಯತಾಂ ಮನೋಹರಂ ತಾವಭಿನರ್ದ್ದಮಾನೌ ।

ಗದಾಪ್ರಪಾತಾಙ್ಕಿತವಜ್ರಗಾತ್ರೌ ದದರ್ಶ ಲೋಕೋSಖಿಲ ಏವ ತೌ ರಣೇ ॥ ೨೬.೦೭ ॥

 

ಭೀಮಸೇನನು ಅಶ್ವತ್ಥಾಮ-ಕೃಪ-ಶಲ್ಯರನ್ನು ಓಡಿಸಿ(ಬದಿಗೆ ಸರಿಸಿ), ಯುದ್ಧದಲ್ಲಿ ಎಲ್ಲರ ಮುಂದಾಳುವಾಗಿ ದ್ರೋಣನನ್ನು ಎದುರುಗೊಂಡ. ಅವನನ್ನು  ಅನುಸರಿಸಿ ಅಭಿಮನ್ಯುವು ಶತ್ರುಗಳನ್ನು ಹೊಂದಿದನು. ಆಗ ಅಭಿಮನ್ಯುವನ್ನು ಶಲ್ಯನು ತಡೆದ. ಅವರ ನಡುವೆ ಬಹಳ ಘೋರವಾದ ಯುದ್ಧ ನಡೆಯಿತು. ಆ ಯುದ್ಧದಲ್ಲಿ ದೊಡ್ಡ ಗದೆಯನ್ನು ಶಲ್ಯ ಹಿಡಿದುಕೊಂಡ. ಆಗ ಗದೆಯನ್ನು ಹಿಡಿದಿರುವ ಭೀಮಸೇನನು ಶಲ್ಯನನ್ನು ಎದುರುಗೊಂಡ. ಗೆಲ್ಲಲಾಗದ ವೀರರಾದ ಅವರಿಬ್ಬರ ನಡುವೆ ಘೋರವಾದ ಯುದ್ಧ ನಡೆಯಿತು.  ಗದಾಧಾರಿಗಳಲ್ಲೇ ಶ್ರೇಷ್ಠರಾದ, ಎಣೆಯಿರದ ಪರಾಕ್ರಮವುಳ್ಳ ಅವರಿಬ್ಬರೂ ಗರ್ಜಿಸುತ್ತಾ, ಅತ್ಯಂತ ಚೆನ್ನಾಗಿ ಚಿತ್ರ-ವಿಚಿತ್ರ ಭಂಗಿಯಲ್ಲಿ ಗದಾಯುದ್ಧದ ಮಂಡಲಗಳನ್ನು ತಿರುಗಿದರು. ಪರಸ್ಪರ ಗದೆಯ ಹೊಡೆತಕ್ಕೆ ಸಿಲುಕಿದ ಮೈಯುಳ್ಳವರಾಗಿ ನಿರಾತಂಕರಾಗಿರುವ ಇಂತಹ ಭೀಮ ಹಾಗೂ ಶಲ್ಯರನ್ನು ಎಲ್ಲಾ ಲೋಕವೂ ಕೂಡಾ ನಿಬ್ಬೆರಗಾಗಿ ಕಂಡಿತು.

 

ಗದಾಭಿಘಾತೇನ ವೃಕೋದರಸ್ಯ ವಿಚೇತನಃ ಪ್ರಾಪತದತ್ರ ಮದ್ರರಾಟ್ ।

ಭೀಮೋSಪಿ ಕೋಪಾತ್ ಪ್ರಚಲತ್ಪದಃ ಕ್ಷಿತೌ ನಿಧಾಯ ಜಾನುಂ ಸಹಸೋತ್ಥಿತಃ ಕ್ಷಣಾತ್ ॥ ೧೬.೦೮ ॥

 

ಸ್ವಲ್ಪ ಹೊತ್ತಿನ ನಂತರ ಭೀಮಸೇನನ ಗದೆಯ ಪೆಟ್ಟಿನಿಂದ ಶಲ್ಯನು ಪ್ರಜ್ಞೆ ಕಳೆದುಕೊಂಡು ಬಿದ್ದನು. ಭೀಮನೂ ಕೂಡಾ ಗಟ್ಟಿಯಾಗಿ ಪಾದವನ್ನು ನೆಲದಲ್ಲಿ ಊರಲಾಗದೇ ಕ್ಷಣಕಾಲ ಭೂಮಿಯಲ್ಲಿ ಮೊಣಕಾಲನ್ನು ಊರಿದರೂ ತಕ್ಷಣ ಹುರುಪಿನಿಂದ ಮೇಲೆದ್ದ.

 

ವಿಚೇತನಂ ಪತಿತಂ ಮದ್ರರಾಜಂ ವಿಲೋಕ್ಯ ಭೀಮಂ ಚ ತಮಾಹ್ವಯನ್ತಮ್ ।

ರಥಂ ಸಮಾರೋಪ್ಯ ಜನಸ್ಯ ಪಶ್ಯತಃ ಪುರಶ್ಚ ಭೀಮಸ್ಯ ಕೃಪೋSಪಜಗ್ಮಿವಾನ್ ॥ ೨೬.೦೯ ॥

 

ಪ್ರಜ್ಞೆ ಕಳೆದುಕೊಂಡು ಬಿದ್ದಿರುವ ಶಲ್ಯನನ್ನೂ, ಅವನನ್ನು ಕುರಿತು ಯುದ್ಧೋನ್ಮಾದದಿಂದ ‘ಬಾ ಯುದ್ಧಕ್ಕೆ’ ಎಂದು ಕರೆಯುತ್ತಿರುವ ಭೀಮಸೇನನನ್ನೂ ನೋಡಿದ ಕೃಪಾಚಾರ್ಯರು, ಎಲ್ಲರು ನೋಡುತ್ತಿರುವಾಗಲೇ, ಭೀಮನ ಎದುರುಗಡೆಯೇ ಶಲ್ಯನನ್ನು ತನ್ನ ರಥದಲ್ಲಿರಿಸಿಕೊಂಡು ಯುದ್ಧದಿಂದ ಪಲಾಯನ ಮಾಡಿದರು.  

 

ವಿಜಿತ್ಯ ಮದ್ರಾಧಿಪಮೋಜಸಾSರಿಹಾ ನದನ್ ರಥಂ ಪ್ರಾಪ್ಯ ನಿಜಂ ಸ ಮಾರುತಿಃ ।

ವ್ಯದ್ರಾವಯದ್ ಬಾಣಗಣೈಃ ಪರೇಷಾಮನೀಕಿನೀಂ ದ್ರೋಣಸಮಕ್ಷಮೇವ ॥ ೨೬.೧೦ ॥

 

ಹೀಗೆ ಶತ್ರುಸಂಹಾರಕನಾದ ಭೀಮಸೇನನು ತನ್ನ ತೋಳ್ಬಲದಿಂದ ಶಲ್ಯನನ್ನು ಗೆದ್ದು ಮತ್ತೆ ರಥವನ್ನೇರಿ, ಬಾಣದ ಸಮೂಹಗಳಿಂದ ದ್ರೋಣಾಚಾರ್ಯರು ನೋಡುತ್ತಿರುವಂತೆಯೇ ಕೌರವರ ಸೇನೆಯನ್ನು ಓಡಿಸಿದನು.

 

ವಿದ್ರಾವಯತ್ಯಾಶು ಕುರೂನ್ ವೃಕೋದರೇ ವಿಧೂಯ ಸೌಭದ್ರಮುಖಾನ್ ಸಸಾತ್ಯಕೀನ್ ।

ದ್ರೋಣೋSಭಿಪೇದೇ ನೃಪತಿಂ ಗೃಹೀತುಂ ತಮಾಸಸಾದಾSಶು ಧನಞ್ಜಯೋ ರಥೀ ॥ ೨೬.೧೧ ॥

 

ಸ ವಾಸುದೇವಪ್ರಯತೇ ರಥೇ ಸ್ಥಿತಃ ಶರೈಃ ಶರೀರಾನ್ತಕರೈಃ ಸಮನ್ತತಃ ।

ನಿಹತ್ಯ ನಾಗಾಶ್ವನರಾನ್ ಪ್ರವರ್ತ್ತಯನ್ನದೃಶ್ಯತಾSಶ್ವೇವ ಚ ಶೋಣಿತಾಪಗಾಃ ॥ ೨೬.೧೨ ॥

 

ಹೀಗೆ ಭೀಮಸೇನನು ಕೌರವರನ್ನು ಓಡಿಸುತ್ತಿರಲು, ಇನ್ನೊಂದು ಮಗ್ಗುಲಿನಿಂದ ದ್ರೋಣಾಚಾರ್ಯರು ಸಾತ್ಯಕಿಯಿಂದ ಸಹಿತರಾದ ಅಭಿಮನ್ಯು ಮೊದಲಾದವರನ್ನು ಸೋಲಿಸಿ, ಧರ್ಮರಾಜನನ್ನು ಸೆರೆಹಿಡಿಯಲು ಮುನ್ನುಗ್ಗಿದರು. ಆಗ ರಥದಲ್ಲಿರುವ ಅರ್ಜುನನು ದ್ರೋಣಾಚಾರ್ಯರನ್ನು ಸಮೀಪಿಸಿದನು.   

ಶ್ರೀಕೃಷ್ಣನಿಂದ ನಿಯಂತ್ರಿಸಲ್ಪಟ್ಟ ರಥದಲ್ಲಿರತಕ್ಕ ಅರ್ಜುನನು, ಶರೀರವನ್ನು ನಾಶಮಾಡುವಂತಹ ಬಾಣಗಳಿಂದ ತನ್ನ ಸುತ್ತಲಿರುವ ಆನೆಗಳನ್ನೂ, ಕುದುರೆಗಳನ್ನೂ, ರಥಿಕರನ್ನೂ ಸಂಹಾರಮಾಡಿ, ರಕ್ತದ ನದಿಗಳನ್ನು ಸೃಷ್ಟಿಸುತ್ತಾ ಕಾಣಿಸಿಕೊಂಡನು.

 

ನಿಹನ್ಯಮಾನಾಸು ಕಿರೀಟಿನಾ ಚಮೂಷ್ವಾರಕ್ಷಿತೇ ಧರ್ಮ್ಮಸುತೇ ತಥಾSSಪದಃ ।

ಚಮೂಂ ಚ ಭೀಮಾರ್ಜ್ಜುನಬಾಣಭಗ್ನಾಂ ದ್ರೋಣೋSಪಹೃತ್ಯಾಪಯಯೌ ನಿಶಾಗಮೇ ॥ ೨೬.೧೩ ॥

 

ಹೀಗೆ ಅರ್ಜುನನಿಂದ ಸೈನ್ಯವು ಕೊಲ್ಲಲ್ಪಡುತ್ತಿರಲು, ಹಾಗೆಯೇ ಆಪತ್ತಿನಿಂದ ಧರ್ಮರಾಜನು ರಕ್ಷಿಸಲ್ಪಡುತ್ತಿರಲು, ಭೀಮಸೇನಾರ್ಜುನರ ಬಾಣಗಳಿಂದ ಭಗ್ನವಾದ ಸೇನೆಯುಳ್ಳವರಾದ ದ್ರೋಣಾಚಾರ್ಯರು, ರಾತ್ರಿಯಾಗುತ್ತಿರಲು ಸೇನೆಯನ್ನು ಉಪಸಂಹಾರ ಮಾಡಿ ಶಿಬಿರಕ್ಕೆ ತೆರಳಿದರು. (ಹೀಗೆ  ಹನ್ನೊಂದನೆಯ ದಿನದ ಯುದ್ಧವು ಮುಗಿಯಿತು).

No comments:

Post a Comment