ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 1, 2020

Mahabharata Tatparya Nirnaya Kannada 17181_17186

ತಯಾ ರಮನ್ ಜನಾರ್ದ್ದನೋ ವಿಯೋಗಶೂನ್ಯಯಾ ಸದಾ।

ಅಧತ್ತ ಪುತ್ರಮುತ್ತಮಂ ಮನೋಭವಂ ಪುರಾತನಮ್ ॥೧೭.೧೮೧॥

 

ಎಂದೂ ವಿಯೋಗವಿಲ್ಲದ ರುಗ್ಮಿಣಿಯೊಂದಿಗೆ ಕ್ರೀಡಿಸುತ್ತಾ ಶ್ರೀಕೃಷ್ಣನು, ಅತ್ಯಂತ ಹಿಂದಿನವನಾದ, ತನ್ನ ಮನಸ್ಸಿನಿಂದ ಹುಟ್ಟಿದ, ಉತ್ಕೃಷ್ಟನಾದ ಮಗನಾದ ‘ಕಾಮನನ್ನು ಅವಳ ಗರ್ಭದಲ್ಲಿಟ್ಟನು.

 

[ಇಲ್ಲಿ ಮನೋಭವ, ಪುರಾತನ, ಇತ್ಯಾದಿ ವಿಶೇಷಣಗಳ ಬಳಕೆಯನ್ನು ಕಾಣುತ್ತೇವೆ. ಈ ವಿವರಣೆಗೆ ಪೂರಕವಾದ ಮಾಹಿತಿಯನ್ನು ನಾವು ಹರಿವಂಶದಲ್ಲಿ[ವಿಷ್ಣುಪರ್ವಣಿ ೧೦೪.೨]ಕಾಣಬಹುದು: ‘ರುಗ್ಮಿಣ್ಯಾಂ ವಾಸುದೇವಸ್ಯ ಲಕ್ಷ್ಮ್ಯಾಂ  ಕಾಮೋ ಧೃತವೃತಃ । ಶಮ್ಬರಾನ್ತಕರೋ ಜಜ್ಞೇ ಪ್ರದ್ಯುಮ್ನಃ  ಕಾಮದರ್ಶನಃ । ಸನತ್ಕುಮಾರ ಇತಿ ಯಃ  ಪುರಾಣೇ ಪರಿಗೀಯತೇ’  (ಪೂರ್ವದಲ್ಲಿ  ಪುತ್ರನಾಗಿದ್ದ ಸನತ್ಕುಮಾರನೇ (ಅವನೇ ಮನ್ಮಥ) ಇಲ್ಲಿ ಪ್ರದ್ಯುಮ್ನನಾಗಿ ಹುಟ್ಟಿದ) ] 


ಚತುಸ್ತನೋರ್ಹರೇಃ ಪ್ರಭೋಸ್ತೃತೀಯರೂಪಸಂಯುತಃ ।

ತತಸ್ತದಾಹ್ವಯೋSಭವತ್ ಸ ರುಗ್ಮಿಣೀಸುತೋ ಬಲೀ ॥೧೭.೧೮೨॥

 

ಬಲಿಷ್ಠನಾದ ಆ ರುಗ್ಮಿಣೀಪುತ್ರ, ನಾಲ್ಕು ರೂಪಗಳುಳ್ಳ[1], ಸರ್ವಸಮರ್ಥನಾದ ಪರಮಾತ್ಮನ ಮೂರನೇ ರೂಪವಾದ ಪ್ರದ್ಯುಮ್ನ ರೂಪದಿಂದ ಪ್ರವಿಷ್ಟನಾದ. ಆ ಕಾರಣದಿಂದ ‘ಪ್ರದ್ಯುಮ್ನ’ ಎನ್ನುವ ಹೆಸರುಳ್ಳವನೇ ಆದ.

 

ಪುರೈವ ಮೃತ್ಯವೇsವದತ್ ತಮೇವ ಶಮ್ಬರಸ್ಯ ಹ ।

ಪ್ರಜಾತಮಬ್ಜಜಾಙ್ಕಜಸ್ತವಾನ್ತಕೋsಯಮಿತ್ಯಪಿ ॥೧೭.೧೮೩॥

 

ಪ್ರದ್ಯುಮ್ನ ಹುಟ್ಟುವುದಕ್ಕೂ ಮೊದಲೇ, ‘ನಿನ್ನನ್ನು ಕೊಲ್ಲುವವನು ಮುಂದೆ ಹುಟ್ಟುತ್ತಾನೆ’ ಎಂದು ಬ್ರಹ್ಮನ ತೊಡೆಯಿಂದ ಹುಟ್ಟಿದ ನಾರದರು ಶಮ್ಬರನಿಗೆ ಹೇಳಿದ್ದರು. ಪ್ರದ್ಯುಮ್ನ ಹುಟ್ಟಿದ ಮೇಲೆ ‘ಈ ರುಗ್ಮಿಣಿಪುತ್ರನೇ ನಿನ್ನ ಮೃತ್ಯು’ ಎಂದು ಹೇಳುತ್ತಾರೆ ಕೂಡಾ. 

 

ಸ ಮಾಯಯಾ ಹರೇಃ ಸುತಂ ಪ್ರಗೃಹ್ಯ ಸೂತಿಕಾಗೃಹಾತ್ ।

ಅವಾಕ್ಷಿಪನ್ಮಹೋದಧಾವುಪೇಕ್ಷಿತೋsರಿಪಾಣಿನಾ ॥೧೭.೧೮೪॥

 

ತಮಗ್ರಸಜ್ಜಲೇಚರಃ ಸ ದಾಶಹಸ್ತಮಾಗತಃ ।

ಕುಮಾರಮಸ್ಯ ತೂದರೇ ನಿರೀಕ್ಷ್ಯ ಶಮ್ಬರೇ ದದುಃ ॥೧೭.೧೮೫॥

 

ಆ ಶಮ್ಬರಾಸುರನು ತನ್ನ ಕೂಟವಿದ್ಯೆಯಿಂದ, ಪರಮಾತ್ಮನಿಂದ ಉಪೇಕ್ಷಿತನಾಗಿ, ಪ್ರಸೂತ ಗೃಹದಿಂದ  ಶ್ರೀಕೃಷ್ಣನ ಪುತ್ರನಾದ ಪ್ರದ್ಯುಮ್ನನನ್ನು ಹಿಡಿದು ಸಮುದ್ರದಲ್ಲಿ ಎಸೆದನು.

ಈರೀತಿ ಎಸೆಯಲ್ಪಟ್ಟ ಆ ಮಗುವನ್ನು ಮೀನೊಂದು ನುಂಗಿತು. ಆ ಮೀನು ಬೆಸ್ತನ ಕೈಯನ್ನು ಸೇರಿತು.  ಮೀನಿನ ಹೊಟ್ಟೆಯಲ್ಲಿ ಮಗುವಿರುವುದನ್ನು ಕಂಡ ಬೆಸ್ತರು ಆ ಮಗುವನ್ನು ಶಮ್ಬರನಿಗೇ ನೀಡಿದರು.

 

[ಹರಿವಂಶದಲ್ಲಿ(ವಿಷ್ಣುಪರ್ವಣಿ: ೧೦೪.೩) ಈ ಕುರಿತಾದ ವಿವರಣೆ ಕಾಣಸಿಗುತ್ತದೆ: ‘ತಂ ಸಪ್ತರಾತ್ರೇ ಸಂಪೂರ್ಣೇ ನಿಶೀಥೇ ಸೂತಿಕಾಗೃಹಾತ್ । ಜಹಾರ ಕೃಷ್ಣಸ್ಯ ಸುತಂ ಶಿಶುಂ  ವೈ ಕಾಲಶಮ್ಬರಃ’.

 ವಿಷ್ಣುಪುರಾಣದಲ್ಲೂ[೫.೨೭.೪-೫] ಈ ಕುರಿತಾದ ವಿವರಣೆ ಇದೆ: ‘ಹೃತ್ವಾ ಚಿಕ್ಷೇಪ ಚೈವೈನಂ ಗ್ರಹೋಗ್ರೇ ಲವಣಾರ್ಣವೇ । ಕಲ್ಲೋಲಜನಿತಾವರ್ತೇ ಸುಘೋರೇ ಮಕರಾಲಯೇ । ಪಾತಿತಂ ತತ್ರ ಚೈವೈಕೋ  ಮತ್ಸ್ಯೋ  ಜಗ್ರಾಹ ಬಾಲಕಮ್ । ನ ಮಮಾರ ಚ ತಸ್ಯಾಪಿ ಜಠರಾಗ್ನಿಪ್ರದೀಪಿತಃ’ (ಶಮ್ಬರನು ತನ್ನ ಕೂಟವಿದ್ಯೆಯನ್ನು ಬಳಸಿ, ಸೂತಿಕಾಗೃಹದಿಂದ ಶ್ರೀಕೃಷ್ಣನ ಪುತ್ರನನ್ನು ಅಪಹರಿಸಿ, ಆ ಮಗುವನ್ನು ಸಮುದ್ರದಲ್ಲಿ ಎಸೆದನು. ಈರೀತಿ ಎಸೆಯಲ್ಪಟ್ಟ ಮಗು ಮೀನಿನಿಂದ ನುಂಗಲ್ಪಟ್ಟು,  ಜಠರಾಗ್ನಿಯಿಂದ ಸುಟ್ಟರೂ ಕೂಡಾ ಸಾಯಲಿಲ್ಲ)]

 

ವಿಪಾಟ್ಯ ಮತ್ಸ್ಯಕೋದರಂ ಸ ಶಮ್ಬರಃ ಕುಮಾರಕಮ್ ।

ನ್ಯವೇದಯನ್ಮನೋಭವಪ್ರಿಯಾಕರೇ ಸುರೂಪಿಣಮ್ ॥೧೭.೧೮೬॥

 

ಆ ಶಮ್ಬರನು ಮೀನಿನ ಹೊಟ್ಟೆಯನ್ನು ಸೀಳಿ, ಸುರೂಪಿಯಾದ ಆ ಬಾಲಕನನ್ನು ಪ್ರದ್ಯುಮ್ನನ ಹೆಂಡತಿಯಾದ ರತಿಯ ಕೈಯಲ್ಲಿ ನೀಡಿದನು.

 

[ಇಲ್ಲಿ ‘ಮನೋಭವಪ್ರಿಯಾಕರೇ’ ಎನ್ನುವ ವಿಶೇಷ ಪ್ರಯೋಗವನ್ನು ಬಳಸಲಾಗಿದೆ. ಇದರ ವಿವರಣೆಯನ್ನು  ಹರಿವಂಶದಲ್ಲಿ(ವಿಷ್ಣುಪರ್ವಣಿ-೧೦೪) ಹೀಗೆ ಸಂಗ್ರಹಿಸಲಾಗಿದೆ:  ತಸ್ಯ ಮಾಯಾವತೀ ನಾಮ ಪತ್ನೀ ಸರ್ವಗೃಹೇಶ್ವರೀ । ಕಾರಯಾಮಾಸ ಸೂದಾನಾಮಾಧಿಪತ್ಯಮನಿನ್ದಿತಾ’(೭) (ಅಲ್ಲಿ, ನಿಂದಿತಳಲ್ಲದ, ಕಾಮನ ಪತ್ನಿ, ಮಾಯಾವತೀ ಎಂಬ ಹೆಸರಿನಿಂದ ಕರೆಯಲ್ಪಟ್ಟು, ಶಮ್ಬರನ ಅಡುಗೆ ಮನೆಯ ಮೇಲುಸ್ತುವಾರಿ  ನೋಡಿಕೊಳ್ಳುತ್ತಿದ್ದಳು) ‘ಅನಪತ್ಯಾ ತು ತಸ್ಯಾsಸೀದ್ ಭಾರ್ಯಾ ರೂಪಗುಣಾನ್ವಿತಾ ।  ನಾಮ್ನಾ ಮಾಯಾವತೀ ನಾಮ ಮಾಯೇವ ಶುಭದರ್ಶನಾ । ದದೌ  ಸ ವಾಸುದೇವಸ್ಯ  ಪುತ್ರಂ ಪುತ್ರಮಿವಾsತ್ಮಜಮ್ ।  ತಸ್ಯಾ ಮಹಿಷ್ಯಾ ಮಾದಿನ್ಯಾ ದಾನವಃ ಕಾಲಚೋದಿತಃ’ (೫-೬)]

 

(ಈ ಹಿನ್ನೆಲೆಯಲ್ಲಿನ ಕಥೆಯನ್ನು ಮುಂದೆ ಹೇಳುತ್ತಾರೆ: )



[1] ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು  ಅನಿರುದ್ಧ


Friday, July 31, 2020

Mahabharata Tatparya Nirnaya Kannada 17176_17180

ಜನಾರ್ದ್ದನಶ್ಚ ರುಗ್ಮಿಣೀಕರಂ ಶುಭೇ ದಿನೇSಗ್ರಹೀತ್ ।

ಮಹೋತ್ಸವಸ್ತಧಾSಭವತ್ ಕುಶಸ್ಥಲೀನಿವಾಸಿನಾಮ್ ॥೧೭.೧೭೬॥

 

ಶ್ರೀಕೃಷ್ಣನೂಕೂಡಾ ಶುಭದಿನದಲ್ಲಿ ರುಗ್ಮಿಣಿಯ ಕೈಹಿಡಿದನು. ಈ ಪಾಣೀಗ್ರಹಣ ದ್ವಾರಕಾಪಟ್ಟಣದಲ್ಲಿರುವವರಿಗೆ ಅತ್ಯಂತ ದೊಡ್ಡ ಉತ್ಸವವಾಯಿತು.

 

ಚತುರ್ಮ್ಮುಖೇಶಪೂರ್ವಕಾಃ ಸುರಾ ವಿಯತ್ಯವಸ್ಥಿತಾಃ ।

ಪ್ರತುಷ್ಟುವುರ್ಜ್ಜನಾರ್ದ್ದನಂ ರಮಾಸಮೇತಮವ್ಯಯಮ್ ॥೧೭.೧೭೭॥

 

ಚತುರ್ಮುಖ, ರುದ್ರ, ಮೊದಲಾಗಿರತಕ್ಕಂತಹ ದೇವತೆಗಳು ಆಕಾಶದಲ್ಲಿ ನಿಂತು, ಲಕ್ಷ್ಮೀಯಿಂದ ಒಡಗೂಡಿದ, ನಾಶವಿಲ್ಲದ ಪರಮಾತ್ಮನನ್ನು ಸ್ತೋತ್ರಮಾಡಿದರು.

 

ಮುನೀನ್ದ್ರದೇವಗಾಯನಾದಯೋSಪಿ ಯಾದವೈಃ ಸಹ ।

ವಿಚೇರುರುತ್ತಮೋತ್ಸವೇ ರಮಾರಮೇಶಯೋಗಿನಿ ॥೧೭.೧೭೮॥

 

ಮುನಿಶ್ರೇಷ್ಠರು, ಗಂಧರ್ವರೇ ಮೊದಲಾದವರು, ಯಾದವರಿಂದ ಕೂಡಿಕೊಂಡು, ಲಕ್ಷ್ಮೀ ಹಾಗೂ ನಾರಾಯಣರಿಗೆ ಸಂಬಂಧಿಸಿದ ಅತ್ಯಂತ ಉತ್ಕೃಷ್ಟವಾದ ಈ ಉತ್ಸವದಲ್ಲಿ ವಿಹರಿಸಿದರು.

 

ಸುರಾಂಶಕಾಶ್ಚ ಯೇ ನೃಪಾಃ ಸಮಾಹುತಾ ಮಹೋತ್ಸವೇ ।

ಸಪಾಣ್ಡವಾಃ ಸಮಾಯಯುರ್ಹರಿಂ ರಮಾಸಮಾಯುತಮ್ ॥೧೭.೧೭೯॥

 

ದೇವತಾಂಶವುಳ್ಳ ಯಾವ ರಾಜರು ಈ ಮಹೋತ್ಸವದಲ್ಲಿ ಕರೆಸಲ್ಪಟ್ಟರೋ, ಅವರು ಪಾಣ್ಡವರಿಂದ ಕೂಡಿದವರಾಗಿ ರುಗ್ಮಿಣಿಯಿಂದ ಕೂಡಿರುವ ಕೃಷ್ಣನ ಮದುವೆಯ ಮಹೋತ್ಸವಕ್ಕೆ ಬಂದರು.  

 

ಸಮಸ್ತಲೋಕಸುನ್ದರೌ ಯುತೌ ರಮಾರಮೇಶ್ವರೌ ।

ಸಮೀಕ್ಷ್ಯಮೋದಮಾಯಯುಃ ಸಮಸ್ತಲೋಕಸಜ್ಜನಾಃ ॥೧೭.೧೮೦॥

 

ಸಮಸ್ತ ಲೋಕದಲ್ಲಿಯೇ ಅತ್ಯಂತ ಸುಂದರರೆನಿಸಿದ ರುಗ್ಮಿಣಿ-ಕೃಷ್ಣರು ಕೂಡಿರುವುದನ್ನು ನೋಡಿ, ಸಮಸ್ತ ಲೋಕದಲ್ಲಿರುವ ಸಜ್ಜನರು ಸಂತಸವನ್ನು ಹೊಂದಿದರು.


Mahabharata Tatparya Nirnaya Kannada 17164_17175

ಅಥಾsಸಸಾದ ಸೌಭರಾಡ್ ಹರಿಂ ಶರಾಮ್ಬುವರ್ಷಣಃ ।

ಹರಿಃ ಶರಂ ಯಮೋಪಮಂ ಮುಮೋಚ ತಸ್ಯ ವಕ್ಷಸಿ ॥೧೭.೧೬೪॥

 

ರುಗ್ಮಿ ಸೋತನಂತರ ಸೌಭಸಾಲ್ವನು ಬಾಣಗಳ ಮಳೆಗರೆಯುವವನಾಗಿ ಪರಮಾತ್ಮನನ್ನು ಕುರಿತು ತೆರಳಿದನು. ಪರಮಾತ್ಮನು ಯಮದಂಡದಂತೆ ಇರುವ ಬಾಣವನ್ನು ಆ ಸಾಲ್ವನ ವಕ್ಷಸ್ಥಳಕ್ಕೆ ಬಿಟ್ಟನು.   

 

ಶರೇಣ ತೇನ ಪೀಡಿತಃ ಪಪಾತ ಮನ್ದಚೇಷ್ಟಿತಃ ।

ಚಿರಾತ್ತಸಙ್ಜ್ಞಕೋsಗಮತ್ ತ್ರಿನೇತ್ರತೋಷಣೇಚ್ಛಯಾ ॥೧೭.೧೬೫॥

 

ಆ ಬಾಣದಿಂದ ಪೀಡಿತನಾಗಿ ಒದ್ದಾಡುತ್ತಾ ಬಿದ್ದ  ಸಾಲ್ವನು, ಬಹಳ ಹೊತ್ತಿನ ನಂತರ ಮೂರ್ಛೆ ಬಂದವನಾಗಿ ಮೇಲೆದ್ದು, ರುದ್ರನನ್ನು ಪ್ರೀತಿಗೊಳಿಸಲೋಸುಗ ತೆರಳಿದನು(ರುದ್ರನನ್ನು ಕುರಿತು ತಪಸ್ಸನ್ನಾಚರಿಸಲು ಕಾಡಿಗೆ ತೆರಳಿದನು)

 

ಸಮಸ್ತರಾಜಸನ್ನಿಧಾವಯಾದವಾಂ ಮಹೀಮಹಮ್ ।

ಕರಿಷ್ಯ ಇತ್ಯುದೀರ್ಯ ಸ ವ್ಯಧಾತ್ ತಪೋsತಿದುಶ್ಚರಮ್ ॥೧೭.೧೬೬॥

 

ಎಲ್ಲಾ ರಾಜರ ಸಮಕ್ಷಮದಲ್ಲಿ ಸೌಭಸಾಲ್ವನು “ನಾನು ಭೂಮಿಯನ್ನು ಯಾದವಹೀನರನ್ನಾಗಿ ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿ, ಅತ್ಯಂತ ದುಶ್ಚರವಾದ ತಪಸ್ಸನ್ನು ಮಾಡಿದನು.

 

ಅಥೋ ವಿವೇಶ ಕೇಶವಃ ಪುರೀಂ ಕುಶಸ್ಥಲೀಂ ವಿಭುಃ ।

ಪ್ರಿಯಾಯುತೋsಬ್ಜಜಾದಿಭಿಃ ಸಮೀಡಿತಃ ಸುರೇಶ್ವರೈಃ  ॥ ೧೭.೧೬೭॥

 

ತದನಂತರ, ಸರ್ವಸಮರ್ಥನಾದ ಕೇಶವನು ರುಗ್ಮಿಣಿಯಿಂದ ಕೂಡಿಕೊಂಡು, ಚತುರ್ಮುಖನೇ  ಮೊದಲಾಗಿರುವ ದೇವತೆಗಳಿಂದ ಸ್ತುತನಾಗಿ, ದ್ವಾರಕಾ ಪಟ್ಟಣವನ್ನು ಪ್ರವೇಶಮಾಡಿದನು.  

 

ಪುರಾ ತತೋ ಹಲಾಯುಧಃ ಪ್ರಿಯಾಂ ನಿಜಾಂ ಪುರಾSಪಿ ಹಿ ।

ಸ ವಾರುಣೀಸಮಾಹ್ವಯಾಮವಾಪ ರೈವತೀಂ ವಿಭುಃ ॥೧೭.೧೬೮ ॥

 

ಇದಕ್ಕೂ ಮೊದಲು ಬಲರಾಮನು, ಮೂಲರೂಪದಲ್ಲಿಯೂ ಕೂಡಾ ವಾರುಣೀ ಎಂದು ಹೆಸರುಳ್ಳ, ತನ್ನ ಹೆಂಡತಿಯಾದ, ಭೂಮಿಯಲ್ಲಿ  ರೇವತ ರಾಜನ ಮಗಳಾಗಿ ಅವತರಿಸಿರುವ ರೇವತೀದೇವಿಯನ್ನು  ಮದುವೆಯಾದನು.

 

(ಈ ಹಿನ್ನೆಲೆಯಲ್ಲಿರುವ ಕಥೆಯನ್ನು ವಿವರಿಸುತ್ತಾರೆ: )

 

ಪತಿಂ ಯಥಾsನುರೂಪಿಣಂ ತದೀಯಮೇವ ಪೂರ್ವಕಮ್ ।

ಪಿತಾ ತದೀಯ ಐಚ್ಛತ ಪ್ರವೇತ್ತುಮಬ್ಜಸಮ್ಭವಾತ್ ॥೧೭.೧೬೯॥

 

 ರೇವತೀದೇವಿಯ ತಂದೆಯು ಅವಳ ರೂಪಕ್ಕೆ ಅನುರೂಪನಾದ, ಪೂರ್ವಜನ್ಮದಲ್ಲಿ ಅವಳ ಗಂಡನಾಗಿರತಕ್ಕವನೇ ಅವಳಿಗೆ ಗಂಡನಾಗಿ ಸಿಗಬೇಕು ಎಂದು ಬಯಸಿ, ಅಂಥಹ ಗಂಡು ಯಾರೆಂದು ಬ್ರಹ್ಮದೇವರಿಂದ ತಿಳಿಯಲು ಬಯಸಿದ.

 

ಸ ತತ್ಸದೋ ಗತೋ ವರಾತ್ ತದೀಯತಃ ಪ್ರಗೀತಿಕಾಮ್ ।

ನಿಶಮ್ಯ ನಾವಿದದ್ ಗತಂ ಯುಗೋರುಕಾಲಪರ್ಯ್ಯಯಮ್ ॥೧೭.೧೭೦॥

 

ಸದೇಹನಾಗಿ ಸತ್ಯಲೋಕಕ್ಕೆ ಹೋಗಿ ಬರಬಲ್ಲ ವರವನ್ನು ಬ್ರಹ್ಮದೇವರಿಂದ ಹೊಂದಿದ್ದ ಆತನು, ಮಗಳೊಂದಿಗೆ ಸತ್ಯಲೋಕಕ್ಕೆ ತೆರಳಿದನು. ಬ್ರಹ್ಮದೇವರ ಆಸ್ಥಾನದಲ್ಲಿ ನಡೆಯುತ್ತಿರುವ ಗಾನ ವಿಶೇಷವನ್ನು  ಕೇಳುತ್ತಾ, ಅವನಿಗೆ ಯುಗ-ಯುಗಗಳೇ ಸರಿದು ಹೋದದ್ದು ತಿಳಿಯಲಿಲ್ಲ.  

 

ನರಾನಯೋಗ್ಯಗೀತಿಕಾ ವಿಮೋಹಯೇತ್ ತತೋ ನೃಪಃ ।

ಸುಮೂಢಬುದ್ಧಿರನ್ತತೋsಲ್ಪಕಾಲ ಇತ್ಯಮನ್ಯತ ॥೧೭.೧೭೧॥

 

ಮನುಷ್ಯರನ್ನು ಅವರ ಯೋಗ್ಯತೆಗಿಂತ ಮೇಲ್ಪಟ್ಟ ವಿಷಯಗಳು (ಗೀತೆ, ಸೌಂದರ್ಯ,  ಮೊದಲಾದವುಗಳು) ಮೋಹಗೊಳಿಸುತ್ತವೆ. ಆ ಕಾರಣದಿಂದ ರಾಜನು ಬ್ರಹ್ಮದೇವರ ಸಭೆಯಲ್ಲಿನ ಗಾನವಿಶೇಷದಿಂದ ಅತ್ಯಂತ ಮೋಹಗೊಂಡ ಬುದ್ಧಿಯುಳ್ಳವನಾಗಿ, ‘ಅಲ್ಪಕಾಲವಷ್ಟೇ ಕಳೆಯಿತು’ ಎಂದು ತಿಳಿದನು.

 

ಸ ಮೂರ್ಚ್ಛಿತಃ ಪ್ರಬೋಧಿತೋsಬ್ಜಜೇನ ತಂ ತ್ವಪೃಚ್ಛತ ।

ಸುತಾಪತಿಂ ಬಲಂ ಚ ಸೋsಬ್ರವೀದ್ ಯುಗಾತ್ಯಯೇ ಬಹೌ ॥೧೭.೧೭೨॥

 

ಹೀಗೆ ಬಹಳ ಯುಗಗಳು ಉರುಳಲು, ಮೂರ್ಛೆಹೊಂದಿದ್ದ ಅವನು ಬ್ರಹ್ಮದೇವರಿಂದ ಎಬ್ಬಿಸಲ್ಪಟ್ಟವನಾಗಿ, ಬ್ರಹ್ಮನಿಂದ ತನ್ನ ಮಗಳಿಗೆ ಗಂಡನನ್ನು ಕೇಳಿದನು. ಬ್ರಹ್ಮದೇವರಾದರೋ, ಆ ರೇವತಿಗೆ ಬಲರಾಮನನ್ನು ಗಂಡನನ್ನಾಗಿ ಹೇಳಿದರು.

 

ಸ ರೈವತೋ ಬಲಾಯ ತಾಂ ಪ್ರದಾಯ ಗನ್ಧಮಾದನಮ್ ।

ಗತೋsತ್ರ ಚೀರ್ಣ್ಣಸತ್ತಪಾ ಅವಾಪ ಕೇಶವಾನ್ತಿಕಮ್ ॥೧೭.೧೭೩॥

 

ಸತ್ಯಲೋಕದಿಂದ ಹಿಂದಿರುಗಿದ ಆ ರೈವತ ರಾಜನು, ಬಲರಾಮನಿಗೆ ತನ್ನ ಮಗಳನ್ನಿತ್ತು, ಗನ್ಧಮಾದನ ಪರ್ವತಕ್ಕೆ ತೆರಳಿ, ಆ ಪರ್ವತದಲ್ಲಿ ತಪಸ್ಸನ್ನು ಮಾಡುತ್ತಾ, ಪರಮಾತ್ಮನ ಬಳಿ ತೆರಳಿದನು.

 

ಬಲೋsಪಿ ತಾಂ ಪುರಾತನಪ್ರಮಾಣಸಮ್ಮಿತಾಂ ವಿಭುಃ ।

ಹಲೇನ ಚಾSಜ್ಞಯಾ ಸಮಾಂ ಚಕಾರ ಸತ್ಯವಾಞ್ಛಿತಃ ॥೧೭.೧೭೪॥

 

ಸತ್ಯಕಾಮನೂ, ಸಮರ್ಥನೂ ಆದ ಬಲರಾಮನು, ಪೂರ್ವಯುಗದಲ್ಲಿನ ಮನುಷ್ಯರ ಎತ್ತರವಿರುವ ಅವಳನ್ನು, ತನ್ನ ನೇಗಿಲಿನಿಂದ ಜಗ್ಗಿ, ತನ್ನ ಎತ್ತರಕ್ಕೆ ಸಮಳನ್ನಾಗಿ ಮಾಡಿದನು.    

 

ತಯಾ ರತಃ ಸುತಾವುಭೌ ಶಠೋಲ್ಮುಕಾಭಿಧಾವಧಾತ್ ।

ಪುರಾSರ್ಯಮಾಂಶಕೌ ಸುರಾವುದಾರಚೇಷ್ಟಿತೋ ಬಲಃ ॥೧೭.೧೭೫॥

 

ಆ ಸುವೃತೆಯಿಂದ ಸಂತಸಪಟ್ಟವನಾದ ಬಲರಾಮನು, ಮೊದಲು ‘ಆರ್ಯಮ’ ಹಾಗೂ ‘ಅಂಶಕ’ ಎಂದು ಹೆಸರುಳ್ಳ ದೇವತೆಗಳಾದವರನ್ನು,  ಶಠ ಹಾಗೂ ಉಲ್ಮುಕ ಎಂಬ ಹೆಸರಿನ ಮಕ್ಕಳಾಗಿ ಪಡೆದನು.