ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 1, 2020

Mahabharata Tatparya Nirnaya Kannada 17181_17186

ತಯಾ ರಮನ್ ಜನಾರ್ದ್ದನೋ ವಿಯೋಗಶೂನ್ಯಯಾ ಸದಾ।

ಅಧತ್ತ ಪುತ್ರಮುತ್ತಮಂ ಮನೋಭವಂ ಪುರಾತನಮ್ ॥೧೭.೧೮೧॥

 

ಎಂದೂ ವಿಯೋಗವಿಲ್ಲದ ರುಗ್ಮಿಣಿಯೊಂದಿಗೆ ಕ್ರೀಡಿಸುತ್ತಾ ಶ್ರೀಕೃಷ್ಣನು, ಅತ್ಯಂತ ಹಿಂದಿನವನಾದ, ತನ್ನ ಮನಸ್ಸಿನಿಂದ ಹುಟ್ಟಿದ, ಉತ್ಕೃಷ್ಟನಾದ ಮಗನಾದ ‘ಕಾಮನನ್ನು ಅವಳ ಗರ್ಭದಲ್ಲಿಟ್ಟನು.

 

[ಇಲ್ಲಿ ಮನೋಭವ, ಪುರಾತನ, ಇತ್ಯಾದಿ ವಿಶೇಷಣಗಳ ಬಳಕೆಯನ್ನು ಕಾಣುತ್ತೇವೆ. ಈ ವಿವರಣೆಗೆ ಪೂರಕವಾದ ಮಾಹಿತಿಯನ್ನು ನಾವು ಹರಿವಂಶದಲ್ಲಿ[ವಿಷ್ಣುಪರ್ವಣಿ ೧೦೪.೨]ಕಾಣಬಹುದು: ‘ರುಗ್ಮಿಣ್ಯಾಂ ವಾಸುದೇವಸ್ಯ ಲಕ್ಷ್ಮ್ಯಾಂ  ಕಾಮೋ ಧೃತವೃತಃ । ಶಮ್ಬರಾನ್ತಕರೋ ಜಜ್ಞೇ ಪ್ರದ್ಯುಮ್ನಃ  ಕಾಮದರ್ಶನಃ । ಸನತ್ಕುಮಾರ ಇತಿ ಯಃ  ಪುರಾಣೇ ಪರಿಗೀಯತೇ’  (ಪೂರ್ವದಲ್ಲಿ  ಪುತ್ರನಾಗಿದ್ದ ಸನತ್ಕುಮಾರನೇ (ಅವನೇ ಮನ್ಮಥ) ಇಲ್ಲಿ ಪ್ರದ್ಯುಮ್ನನಾಗಿ ಹುಟ್ಟಿದ) ] 


ಚತುಸ್ತನೋರ್ಹರೇಃ ಪ್ರಭೋಸ್ತೃತೀಯರೂಪಸಂಯುತಃ ।

ತತಸ್ತದಾಹ್ವಯೋSಭವತ್ ಸ ರುಗ್ಮಿಣೀಸುತೋ ಬಲೀ ॥೧೭.೧೮೨॥

 

ಬಲಿಷ್ಠನಾದ ಆ ರುಗ್ಮಿಣೀಪುತ್ರ, ನಾಲ್ಕು ರೂಪಗಳುಳ್ಳ[1], ಸರ್ವಸಮರ್ಥನಾದ ಪರಮಾತ್ಮನ ಮೂರನೇ ರೂಪವಾದ ಪ್ರದ್ಯುಮ್ನ ರೂಪದಿಂದ ಪ್ರವಿಷ್ಟನಾದ. ಆ ಕಾರಣದಿಂದ ‘ಪ್ರದ್ಯುಮ್ನ’ ಎನ್ನುವ ಹೆಸರುಳ್ಳವನೇ ಆದ.

 

ಪುರೈವ ಮೃತ್ಯವೇsವದತ್ ತಮೇವ ಶಮ್ಬರಸ್ಯ ಹ ।

ಪ್ರಜಾತಮಬ್ಜಜಾಙ್ಕಜಸ್ತವಾನ್ತಕೋsಯಮಿತ್ಯಪಿ ॥೧೭.೧೮೩॥

 

ಪ್ರದ್ಯುಮ್ನ ಹುಟ್ಟುವುದಕ್ಕೂ ಮೊದಲೇ, ‘ನಿನ್ನನ್ನು ಕೊಲ್ಲುವವನು ಮುಂದೆ ಹುಟ್ಟುತ್ತಾನೆ’ ಎಂದು ಬ್ರಹ್ಮನ ತೊಡೆಯಿಂದ ಹುಟ್ಟಿದ ನಾರದರು ಶಮ್ಬರನಿಗೆ ಹೇಳಿದ್ದರು. ಪ್ರದ್ಯುಮ್ನ ಹುಟ್ಟಿದ ಮೇಲೆ ‘ಈ ರುಗ್ಮಿಣಿಪುತ್ರನೇ ನಿನ್ನ ಮೃತ್ಯು’ ಎಂದು ಹೇಳುತ್ತಾರೆ ಕೂಡಾ. 

 

ಸ ಮಾಯಯಾ ಹರೇಃ ಸುತಂ ಪ್ರಗೃಹ್ಯ ಸೂತಿಕಾಗೃಹಾತ್ ।

ಅವಾಕ್ಷಿಪನ್ಮಹೋದಧಾವುಪೇಕ್ಷಿತೋsರಿಪಾಣಿನಾ ॥೧೭.೧೮೪॥

 

ತಮಗ್ರಸಜ್ಜಲೇಚರಃ ಸ ದಾಶಹಸ್ತಮಾಗತಃ ।

ಕುಮಾರಮಸ್ಯ ತೂದರೇ ನಿರೀಕ್ಷ್ಯ ಶಮ್ಬರೇ ದದುಃ ॥೧೭.೧೮೫॥

 

ಆ ಶಮ್ಬರಾಸುರನು ತನ್ನ ಕೂಟವಿದ್ಯೆಯಿಂದ, ಪರಮಾತ್ಮನಿಂದ ಉಪೇಕ್ಷಿತನಾಗಿ, ಪ್ರಸೂತ ಗೃಹದಿಂದ  ಶ್ರೀಕೃಷ್ಣನ ಪುತ್ರನಾದ ಪ್ರದ್ಯುಮ್ನನನ್ನು ಹಿಡಿದು ಸಮುದ್ರದಲ್ಲಿ ಎಸೆದನು.

ಈರೀತಿ ಎಸೆಯಲ್ಪಟ್ಟ ಆ ಮಗುವನ್ನು ಮೀನೊಂದು ನುಂಗಿತು. ಆ ಮೀನು ಬೆಸ್ತನ ಕೈಯನ್ನು ಸೇರಿತು.  ಮೀನಿನ ಹೊಟ್ಟೆಯಲ್ಲಿ ಮಗುವಿರುವುದನ್ನು ಕಂಡ ಬೆಸ್ತರು ಆ ಮಗುವನ್ನು ಶಮ್ಬರನಿಗೇ ನೀಡಿದರು.

 

[ಹರಿವಂಶದಲ್ಲಿ(ವಿಷ್ಣುಪರ್ವಣಿ: ೧೦೪.೩) ಈ ಕುರಿತಾದ ವಿವರಣೆ ಕಾಣಸಿಗುತ್ತದೆ: ‘ತಂ ಸಪ್ತರಾತ್ರೇ ಸಂಪೂರ್ಣೇ ನಿಶೀಥೇ ಸೂತಿಕಾಗೃಹಾತ್ । ಜಹಾರ ಕೃಷ್ಣಸ್ಯ ಸುತಂ ಶಿಶುಂ  ವೈ ಕಾಲಶಮ್ಬರಃ’.

 ವಿಷ್ಣುಪುರಾಣದಲ್ಲೂ[೫.೨೭.೪-೫] ಈ ಕುರಿತಾದ ವಿವರಣೆ ಇದೆ: ‘ಹೃತ್ವಾ ಚಿಕ್ಷೇಪ ಚೈವೈನಂ ಗ್ರಹೋಗ್ರೇ ಲವಣಾರ್ಣವೇ । ಕಲ್ಲೋಲಜನಿತಾವರ್ತೇ ಸುಘೋರೇ ಮಕರಾಲಯೇ । ಪಾತಿತಂ ತತ್ರ ಚೈವೈಕೋ  ಮತ್ಸ್ಯೋ  ಜಗ್ರಾಹ ಬಾಲಕಮ್ । ನ ಮಮಾರ ಚ ತಸ್ಯಾಪಿ ಜಠರಾಗ್ನಿಪ್ರದೀಪಿತಃ’ (ಶಮ್ಬರನು ತನ್ನ ಕೂಟವಿದ್ಯೆಯನ್ನು ಬಳಸಿ, ಸೂತಿಕಾಗೃಹದಿಂದ ಶ್ರೀಕೃಷ್ಣನ ಪುತ್ರನನ್ನು ಅಪಹರಿಸಿ, ಆ ಮಗುವನ್ನು ಸಮುದ್ರದಲ್ಲಿ ಎಸೆದನು. ಈರೀತಿ ಎಸೆಯಲ್ಪಟ್ಟ ಮಗು ಮೀನಿನಿಂದ ನುಂಗಲ್ಪಟ್ಟು,  ಜಠರಾಗ್ನಿಯಿಂದ ಸುಟ್ಟರೂ ಕೂಡಾ ಸಾಯಲಿಲ್ಲ)]

 

ವಿಪಾಟ್ಯ ಮತ್ಸ್ಯಕೋದರಂ ಸ ಶಮ್ಬರಃ ಕುಮಾರಕಮ್ ।

ನ್ಯವೇದಯನ್ಮನೋಭವಪ್ರಿಯಾಕರೇ ಸುರೂಪಿಣಮ್ ॥೧೭.೧೮೬॥

 

ಆ ಶಮ್ಬರನು ಮೀನಿನ ಹೊಟ್ಟೆಯನ್ನು ಸೀಳಿ, ಸುರೂಪಿಯಾದ ಆ ಬಾಲಕನನ್ನು ಪ್ರದ್ಯುಮ್ನನ ಹೆಂಡತಿಯಾದ ರತಿಯ ಕೈಯಲ್ಲಿ ನೀಡಿದನು.

 

[ಇಲ್ಲಿ ‘ಮನೋಭವಪ್ರಿಯಾಕರೇ’ ಎನ್ನುವ ವಿಶೇಷ ಪ್ರಯೋಗವನ್ನು ಬಳಸಲಾಗಿದೆ. ಇದರ ವಿವರಣೆಯನ್ನು  ಹರಿವಂಶದಲ್ಲಿ(ವಿಷ್ಣುಪರ್ವಣಿ-೧೦೪) ಹೀಗೆ ಸಂಗ್ರಹಿಸಲಾಗಿದೆ:  ತಸ್ಯ ಮಾಯಾವತೀ ನಾಮ ಪತ್ನೀ ಸರ್ವಗೃಹೇಶ್ವರೀ । ಕಾರಯಾಮಾಸ ಸೂದಾನಾಮಾಧಿಪತ್ಯಮನಿನ್ದಿತಾ’(೭) (ಅಲ್ಲಿ, ನಿಂದಿತಳಲ್ಲದ, ಕಾಮನ ಪತ್ನಿ, ಮಾಯಾವತೀ ಎಂಬ ಹೆಸರಿನಿಂದ ಕರೆಯಲ್ಪಟ್ಟು, ಶಮ್ಬರನ ಅಡುಗೆ ಮನೆಯ ಮೇಲುಸ್ತುವಾರಿ  ನೋಡಿಕೊಳ್ಳುತ್ತಿದ್ದಳು) ‘ಅನಪತ್ಯಾ ತು ತಸ್ಯಾsಸೀದ್ ಭಾರ್ಯಾ ರೂಪಗುಣಾನ್ವಿತಾ ।  ನಾಮ್ನಾ ಮಾಯಾವತೀ ನಾಮ ಮಾಯೇವ ಶುಭದರ್ಶನಾ । ದದೌ  ಸ ವಾಸುದೇವಸ್ಯ  ಪುತ್ರಂ ಪುತ್ರಮಿವಾsತ್ಮಜಮ್ ।  ತಸ್ಯಾ ಮಹಿಷ್ಯಾ ಮಾದಿನ್ಯಾ ದಾನವಃ ಕಾಲಚೋದಿತಃ’ (೫-೬)]

 

(ಈ ಹಿನ್ನೆಲೆಯಲ್ಲಿನ ಕಥೆಯನ್ನು ಮುಂದೆ ಹೇಳುತ್ತಾರೆ: )



[1] ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು  ಅನಿರುದ್ಧ


No comments:

Post a Comment