ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 24, 2019

Mahabharata Tatparya Nirnaya Kannada 13133_13138

ನಿತ್ಯಾತಿದುಃಖಮನಿವೃತ್ತಿ ಸುಖವ್ಯಪೇತಮನ್ಧಂ ತಮೋ ನಿಯತಮೇತಿ ಹರಾವಭಕ್ತಃ
ಭಕ್ತೋsಪಿ ಕಞ್ಜಜಗಿರೀಶಮುಖೇಷು ಸರ್ವಧರ್ಮ್ಮಾರ್ಣ್ಣವೋsಪಿ ನಿಖಿಲಾಗಮನಿರ್ಣ್ಣಯೇನ ॥೧೩.೧೩೩

ಪರಮಾತ್ಮನಲ್ಲಿ ಭಕ್ತನಾಗದೇ, ಪರಮಾತ್ಮನನ್ನು ದ್ವೇಷಮಾಡಿ,  ಬ್ರಹ್ಮಾ, ರುದ್ರ, ಮೊದಲಾದವರಲ್ಲಿ ಭಕ್ತನಾದರೂ,  ಪುಣ್ಯಕೆಲಸಗಳನ್ನು ಮಾಡುತ್ತಿದ್ದರೂ ಕೂಡಾ,  ಸಮಸ್ತ ವೇದಗಳ ನಿರ್ಣಯದಂತೆ, ನಿಶ್ಚಯವಾಗಿ ಮರಳಿ ಬರಲಾಗದ, ಆತ್ಯಂತಿಕವಾಗಿರುವ ದುಃಖವುಳ್ಳ   ಅನ್ಧಂತಮಸ್ಸನ್ನು ಖಂಡಿತವಾಗಿ ಹೊಂದುತ್ತಾನೆ.
[ಪರಮಾತ್ಮನಲ್ಲಿ ಅಭಕ್ತನಾಗಿ, ಪರಮಾತ್ಮನನ್ನು ದ್ವೇಷಮಾಡಿ,  ಉಳಿದ ಯಾರಲ್ಲಿ ಭಕ್ತನಾದರೂ ಕೂಡಾ, ಅದು ಪ್ರಯೋಜನಕ್ಕೆ ಬರುವುದಿಲ್ಲ, ಅಂತವರು ಕೊನೆಗೆ ಅನ್ಧಂತಮಸ್ಸನ್ನೇ ಹೊಂದುತ್ತಾರೆ].   

ಯೋ ವೇತ್ತಿ ನಿಶ್ಚಿತಮತಿರ್ಹರಿಮಬ್ಜಜೇಶಪೂರ್ವಾಖಿಲಸ್ಯ ಜಗತಃ ಸಕಲೇsಪಿ ಕಾಲೇ ।
ಸೃಷ್ಟಿಸ್ಥತಿಪ್ರಳಯಮೋಕ್ಷದಮಾತ್ಮತನ್ತ್ರಂ ಲಕ್ಷ್ಮ್ಯಾ ಅಪೀಶಮತಿಭಕ್ತಿಯುತಃ ಸ ಮುಚ್ಯೇತ್ ॥೧೩.೧೩೪

ಯಾರು ಪರಮಾತ್ಮನನ್ನು  ಬ್ರಹ್ಮ-ರುದ್ರರೇ ಮೊದಲಾಗಿರುವ ಈ ಪ್ರಪಂಚಕ್ಕೆ,  ಎಲ್ಲಾ ಕಾಲದಲ್ಲೂ, ಸೃಷ್ಟಿ-ಸ್ಥಿತಿ-ಪ್ರಳಯ-ಮೋಕ್ಷ ಇವುಗಳನ್ನು ಕೊಡುವಂತಹ ‘ಸ್ವತಂತ್ರ’ ಎಂದೂ,  ಲಕ್ಷ್ಮಿಗೂ ಕೂಡಾ ‘ಈಶಾ’ ಎಂದೂ, ನಿಶ್ಚಯವಾದ ಬುದ್ಧಿಯುಳ್ಳವನಾಗಿ ತಿಳಿಯುತ್ತಾನೋ, ಅಂತಹ, ಪರಮಾತ್ಮನಲ್ಲಿ ಭಕ್ತಿಯುಳ್ಳವನು ಮುಕ್ತನಾಗುತ್ತಾನೆ.

ತಸ್ಮಾದನನ್ತಗುಣಪೂರ್ಣ್ಣಮಮುಂ ರಮೇಶಂ ನಿಶ್ಚಿತ್ಯ ದೋಷರಹಿತಂ ಪರಯೈವ ಭಕ್ತ್ಯಾ ।
ವಿಜ್ಞಾಯ ದೈವತಗಣಾಶ್ಚ ಯಥಾ ಕ್ರಮೇಣ ಭಕ್ತಾ ಹರೇರಿತಿ ಸದೈವ ಭಜೇತ ಧೀರಃ೧೩.೧೩೫

ಆ ಕಾರಣದಿಂದ, ಬುದ್ಧಿವಂತನು,  ರಮಾಪತಿಯಾದ ಈ ಶ್ರೀಕೃಷ್ಣನನ್ನು, ಅನಂತ ಗುಣಗಳಿಗೆ ಪೂರ್ಣನಾಗಿರುವ ಲಕ್ಷ್ಮಿಗೂ ಒಡೆಯ ಎಂದೂ, ದೋಷಗಳಿಂದ ರಹಿತ ಎಂದೂ ನಿಶ್ಚಯಿಸಿ, ಸರ್ವೋತ್ಕೃಷ್ಟವಾದ ಭಕ್ತಿಯಿಂದ, ಎಲ್ಲಾ ದೇವತೆಗಳನ್ನೂ ಕ್ರಮವಾಗಿ(ತಾರತಮ್ಯಕ್ರಮದಲ್ಲಿ) ತಿಳಿದು, ಅವರೂ ಯಾವಾಗಲೂ ಪರಮಾತ್ಮನ ಭಕ್ತರೇ ಎಂದು ತಿಳಿದು ಹೊಂದಬೇಕು.
( ಈ ಕಥೆಯಿಂದ ನಮಗೆ ತಿಳಿದುಬರುವುದೇನೆಂದರೆ : ದೇವರು ಎಲ್ಲರ ಒಡೆಯ. ಉಳಿದ ಸಮಸ್ತ ದೇವತೆಗಳೂ ಕೂಡಾ ಭಗವಂತನ ಭಕ್ತರು ಎನ್ನುವ ಸತ್ಯ).

ನಿಹತ್ಯ ಕಂಸಮೋಜಸಾ ವಿಧಾತೃಶಮ್ಭುಪೂರ್ವಕೈಃ ।
ಸ್ತುತಃ ಪ್ರಸೂನವರ್ಷಿಭಿರ್ಮ್ಮುಮೋದ ಕೇಶವೋsಧಿಕಮ್ ॥೧೩.೧೩೬॥

ಹೀಗೆ ಕಂಸನನ್ನು ತನ್ನ ಶಕ್ತಿಯಿಂದ ಸಂಹಾರ ಮಾಡಿ, ಹೂವಿನ ಮಳೆಗರೆಯುವ ಬ್ರಹ್ಮ-ರುದ್ರ ಮೊದಲಾಗಿರುವ ದೇವತೆಗಳಿಂದ ಸ್ತೋತ್ರಮಾಡಲ್ಪಟ್ಟ  ಕೇಶವನು ಅತ್ಯಂತ ಸಂತಸಪಟ್ಟ.

ಸದೈವ ಮೋದರೂಪಿಣೋ ಮುದೋಕ್ತಿರಸ್ಯ ಲೌಕಿಕೀ
ಯಥೋದಯೋ ರವೇರ್ಭವೇತ್ ಸದೋದಿತಸ್ಯ ಲೋಕತಃ ॥೧೩.೧೩೭

ಆನಂದವೇ ಮೈವೆತ್ತು ಬಂದಿರುವ  ಪರಮಾತ್ಮ  ‘ಸಂತೋಷಗೊಂಡ’ ಎಂದು ಹೇಳುವ ಮಾತು ಕೇವಲ  ಲೌಕಿಕ. ಹೇಗೆ ಯಾವಾಗಲೂ ಉದಿಸಿಕೊಂಡೇ ಇರುವ ಸೂರ್ಯನಿಗೆ ಲೋಕದ ದೃಷ್ಟಿಯಲ್ಲಷ್ಟೇ ಉದಯವೋ ಹಾಗೆ.
[ಇಲ್ಲಿ ಆಚಾರ್ಯರು ‘ಸೂರ್ಯ ಎಂದೂ ಮುಳುಗುವುದಿಲ್ಲ, ಆದರೆ ಭೂಮಿಯಲ್ಲಿರುವ ನಮಗೆ ಮಾತ್ರ ಸೂರ್ಯ ಉದಯಿಸಿದಂತೆ ಹಾಗು ಮುಳುಗಿದಂತೆ ಕಾಣುತ್ತಾನೆ’ ಎಂಬ ಮಾತನ್ನು ೮೦೦ ವರ್ಷಗಳ ಹಿಂದೆಯೇ ಹೇಳಿರುವುದನ್ನು ಓದುಗರು ಗಮನಿಸಬೇಕು.
ಭಗವಂತ ಸದಾ ಆನಂದ ಸ್ವರೂಪ. ಅವನ ಆನಂದ  ಯಾವುದೋ ಒಂದು ಕ್ರಿಯೆಯ ಮಿತಿಯಲ್ಲಿರುವುದಿಲ್ಲ. ಆದರೆ ಮಾನವರಾಗಿರುವ ನಮಗೆ ಹಾಗೆ ಕಾಣುತ್ತದೆ ಅಷ್ಟೇ].

ಅನನ್ತಚಿತ್ಸುಖಾರ್ಣ್ಣವಃ ಸದೋದಿತೈಕರೂಪಕಃ ।
ಸಮಸ್ತದೋಷವರ್ಜ್ಜಿತೋ ಹರಿರ್ಗ್ಗುಣಾತ್ಮಕಃ ಸದಾ ॥೧೩.೧೩೮॥

ಭಗವಂತನು ಎಣೆಯಿರದ ಜ್ಞಾನ-ಆನಂದಗಳಿಗೆ ಕಡಲಿನಂತಿರುವವನು. ಯಾವಾಗಲೂ ಒಂದೇ ತರನಾಗಿರುವ, ಸಮಸ್ತ ದೋಷ ರಹಿತನಾಗಿರುವ ಶ್ರೀಹರಿಯು, ಯಾವಾಗಲೂ ಗುಣವೇ ಮೈವೆತ್ತುಬಂದವನಾಗಿದ್ದಾನೆ.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಕಂಸವಧೋ ನಾಮ ತ್ರಯೋದಶೋsಧ್ಯಾಯಃ ॥


ಶ್ರೀಕೃಷ್ಣಾರ್ಪಣಮಸ್ತು



Mahabharata Tatparya Nirnaya Kannada 13127_13132


ನಿಃಶೇಷತೋ ವಿನಿಹತೇ ಸ್ವಬಲೇ ಸ ಕಂಸಶ್ಚರ್ಮ್ಮಾಸಿಪಾಣಿರಭಿಯಾತುಮಿಯೇಷ ಕೃಷ್ಣಮ್ ।
ತಾವತ್ ತಮೇವ ಭಗವನ್ತಮಭಿಪ್ರಯಾತಮುತ್ತುಙ್ಗಮಞ್ಚಶಿರಸಿ ಪ್ರದದರ್ಶ ವೀರಮ್೧೩.೧೨೭

ತನ್ನ ಸೈನ್ಯವು ಸಂಪೂರ್ಣವಾಗಿ ನಾಶವಾಗಲು ಕಂಸನು, ಕತ್ತಿ-ಗುರಾಣಿಗಳನ್ನು ಹಿಡಿದುಕೊಂಡು ಕೃಷ್ಣನನ್ನು ಎದುರುಗೊಳ್ಳಲು ಇಚ್ಛಿಸಿದನು. ಆದರೆ ಆಗಲೇ ಶ್ರೀಕೃಷ್ಣನು ತನ್ನ ಮಂಚದ(ಆಸನದ) ಮೇಲ್ಗಡೆ ತನ್ನನ್ನು ಎದುರುಗೊಂಡು ಬರುತ್ತಿರುವುದನ್ನು ಆತ ಬೆದರುತ್ತಾ ಕಂಡನು. (ಯಾವಾಗ ಕಂಸ ಕತ್ತಿ-ಗುರಾಣಿಗಳನ್ನು ಹಿಡಿದು ಕೃಷ್ಣನ ಎದುರುಗಡೆ ಹೋಗಿ ಅವನನ್ನು ಕೊಲ್ಲಬೇಕು ಎಂದು ಯೋಚನೆ ಮಾಡುತ್ತಿದ್ದನೋ, ಆಗಲೇ ಕೃಷ್ಣ ಅವನ ಬಳಿ ಬಂದುಬಿಟ್ಟಿದ್ದ)

ತಂ ಶ್ಯೇನವೇಗಮಭಿತಃ ಪ್ರತಿಸಞ್ಚರನ್ತಂ ನಿಶ್ಚಿದ್ರಮಾಶು ಜಗೃಹೇ ಭಗವಾನ್ ಪ್ರಸಹ್ಯ   ।
ಕೇಶೇಷು ಚೈನಮಭಿಮೃಶ್ಯ ಕರೇಣ ವಾಮೇನೋದ್ಧೃತ್ಯ ದಕ್ಷಿಣಕರೇಣ ಜಘಾನ ಕೇsಸ್ಯ ೧೩.೧೨೮

ಗಿಡುಗದ ವೇಗದಂತೆ ವೇಗವುಳ್ಳ, ಅವಿಚ್ಛಿನ್ನನಾಗಿ ತನ್ನೆದುರು ಹಾರಿಬರುತ್ತಿರುವ ಕಂಸನ ಎಲ್ಲಾ ವೇಗವನ್ನು ನಾಶಮಾಡಿದ ಪರಮಾತ್ಮನು, ಅವನ ತಲೆಯನ್ನು ಎಡಗೈಯಿಂದ ಹಿಡಿದು, ಕೇಶವನ್ನು ಸೆಳೆದು,  ಬಲಗೈಯಿಂದ ಕತ್ತಿನಲ್ಲಿ ಹೊಡೆದನು.

ಸಞ್ಚಾಲಿತೇನ ಮಕುಟೇನ ವಿಕುಣ್ಡಲೇನ ಕರ್ಣ್ಣದ್ವಯೇನ ವಿಗತಾಭರಣೋರಸಾ ಚ
ಸ್ರಸ್ತಾಮ್ಭರೇಣ ಜಘನೇನ ಸುಶೋಚ್ಯರೂಪಃ ಕಂಸೋ ಬಭೂವ ನರಸಿಂಹಕರಾಗ್ರಸಂಸ್ಥಃ ॥೧೩.೧೨೯

ಪುರುಷಶ್ರೇಷ್ಠನಾದ ಕೃಷ್ಣನ ಕೈಯ ಅಳತೆಯೊಳಗಡೆ ಇದ್ದ ಕಂಸನು, ಕುಂಡಲವನ್ನು ಕಳೆದುಕೊಂಡ ಕಿವಿಯುಳ್ಳವನಾಗಿ, ಎದೆಯಲ್ಲಿ ಧರಿಸಿದ ಆಭರಣವನ್ನೂ ಬಿಟ್ಟು, ಜಾರಿಹೋದ ಬಟ್ಟೆಯುಳ್ಳ ಕಟಿ-ಊರುಗಳ ಮಧ್ಯ ಪ್ರದೇಶದಿಂದಲೂ ಅತ್ಯಂತ ಶೋಚನೀಯ ರೂಪವುಳ್ಳವನಾದನು.

ಉತ್ಕೃಷ್ಯ ತಂ ಸುರಪತಿಃ ಪರಮೋಚ್ಚಮಞ್ಚಾದನ್ಯೈರಜೇಯಮತಿವೀರ್ಯ್ಯಬಲೋಪಪನ್ನಮ್ ।
ಅಬ್ಜೋದ್ಭವೇಶವರಗುಪ್ತಮನನ್ತಶಕ್ತಿರ್ಭೂಮೌ ನಿಪಾತ್ಯ ಸ ದದೌ ಪದಯೋಃ ಪ್ರಹಾರಮ್ ॥೧೩.೧೩೦॥

ದೇವತೆಗಳಿಗೂ ಒಡೆಯನಾದ, ಅನಂತ ಶಕ್ತಿಯುಳ್ಳ ಕೃಷ್ಣನು, ಬೇರೊಬ್ಬರಿಂದ ಗೆಲ್ಲಲಾಗದ, ಅತಿವೀರ್ಯ-ಬಲದಿಂದ ಕೂಡಿದವನಾಗಿರುವ, ಬ್ರಹ್ಮ-ರುದ್ರರ ವರದಿಂದ ಅವಧ್ಯನಾದ ಕಂಸನನ್ನು, ಉತ್ಕೃಷ್ಟವಾದ ಆ ಆಸನದಿಂದ ಸೆಳೆದು,  ಭೂಮಿಯಲ್ಲಿ ಬೀಳಿಸಿ ಕಾಲಿನಿಂದ ಒದ್ದನು.

ದೇಹೇ ತು ಯೋsಭವದಮುಷ್ಯ ರಮೇಶಬನ್ಧುರ್ವಾಯುಃ ಸ ಕೃಷ್ಣತನುಮಾಶ್ರಯದನ್ಯಪಾಪಮ್ ।
ದೈತ್ಯಂ ಚಕರ್ಷ ಹರಿರತ್ರ ಶರೀರಸಂಸ್ಥಂ ಪಶ್ಯತ್ಸು ಕಞ್ಜಜಮುಖೇಷು ಸುರೇಷ್ವನನ್ತಃ ॥೧೩.೧೩೧॥

ಆಗ ಕಂಸನ ಶರೀರದಲ್ಲಿ ಪರಮಾತ್ಮನ ಬಂಧುವಾಗಿರುವ ಯಾವ ಮುಖ್ಯಪ್ರಾಣನಿದ್ದನೋ, ಅಂತಹ ಮುಖ್ಯಪ್ರಾಣನು(ವಾಯುವು), ಭಗವಂತನ  ಶರೀರವನ್ನು ಆಶ್ರಯಿಸಿದ. ಬ್ರಹ್ಮಾದಿಗಳೆಲ್ಲರೂ ನೋಡುತ್ತಿರಲು, ಆ ದೇಹದಲ್ಲಿರತಕ್ಕಂತಹ ಪಾಪಿಷ್ಠನಾದ ದೈತ್ಯನನ್ನು ಪರಮಾತ್ಮನು ಸೆಳೆದನು.
[ಇದೆಲ್ಲವೂ ದೇವತೆಗಳಿಗೆ ಮಾತ್ರ ಗೋಚರವಾಯಿತು. ಉಳಿದವರಿಗಾಗಲಿಲ್ಲ. ಉಳಿದ ಸಾಮಾನ್ಯರು ಕಂಸ ಸಾಯುತ್ತಿರುವುದನ್ನಷ್ಟೇ ನೋಡಿದರು].

ದ್ವೇಷಾತ್ ಸ ಸರ್ವಜಗದೇಕಗುರೋಃ ಸ್ವಕೀಯೈಃ ಪೂರ್ವಪ್ರಮಾಪಿತಜನೈಃ ಸಹಿತಃ ಸಮಸ್ತೈಃ
ಧಾತ್ರ್ಯಾದಿಭಿಃ ಪ್ರತಿ ಯಯೌ ಕುಮತಿಸ್ತಮೋsನ್ಧಮನ್ಯೇsಪಿ ಚೈವಮುಪಯಾನ್ತಿ ಹರಾವಭಕ್ತಾಃ ೧೩.೧೩೨    

ಕೆಟ್ಟಬುದ್ಧಿಯುಳ್ಳ ಆ ಕಂಸನು, ಸರ್ವಜಗದೇಕಗುರುವಾಗಿರುವ ಪರಮಾತ್ಮನ ಮೇಲಿನ ದ್ವೇಷದಿಂದಾಗಿ, ಈಮೊದಲೇ ಪರಮಾತ್ಮನಿಂದ ಕೊಲ್ಲಲ್ಪಟ್ಟ (ಪೂತನಿ ಮೊದಲಾದ ಎಲ್ಲಾ)ಸ್ವಕೀಯರಿಂದ  ಕೂಡಿಕೊಂಡು, ಅನ್ಧಂತಮಸ್ಸನ್ನು ಕುರಿತು ತೆರಳಿದ. 
ಉಳಿದ, ಪರಮಾತ್ಮನಲ್ಲಿ ದ್ವೇಷ ಉಳ್ಳವರೂ ಕೂಡಾ, ಹೀಗೆಯೇ ಅನ್ಧಂತಮಸ್ಸಿಗೆ ಹೋಗುತ್ತಾರೆ.

Mahabharata Tatparya Nirnaya Kannada 13123_13126


ತಾಭ್ಯಾಂ ಹತಾನಭಿಸಮೀಕ್ಷ್ಯ ನಿಜಾನ್ ಸಮಸ್ತಾನ್ ಕಂಸೋ ದಿದೇಶ ಬಲಮಕ್ಷಯಮುಗ್ರವೀರ್ಯ್ಯಮ್।
ರುದ್ರಪ್ರಸಾದಕೃತರಕ್ಷಮವ ದ್ಧ್ಯಮೇನೌ ನಿಸ್ಸಾರ್ಯ ದಣ್ಡಮಧಿಕಂ ಕುರುತೇತಿ ಪಾಪಃ ॥೧೩.೧೨೩

ಕೃಷ್ಣ-ಬಲರಾಮರಿಂದ ತನ್ನವರೆಲ್ಲರೂ ಕೊಲ್ಲಲ್ಪಟ್ಟದ್ದನ್ನು ಕಂಡ  ಪಾಪಿಷ್ಠನಾದ  ಕಂಸನು, ರುದ್ರನ ವರದಿಂದ ರಕ್ಷಣೆಯನ್ನು ಹೊಂದಿದ, ಯಾರಿಂದಲೂ ನಾಶಮಾಡಲು ಸಾಧ್ಯವಿಲ್ಲದ, ಉತ್ಕೃಷ್ಟವಾದ ವೀರ್ಯವುಳ್ಳ ತನ್ನ ಸೈನ್ಯಕ್ಕೆ, ರಾಮ-ಕೃಷ್ಣರನ್ನು ಹೊರಹಾಕಿ ಕಠಿಣವಾದ ಶಿಕ್ಷೆಯನ್ನು ಕೊಡುವಂತೆ ಆಜ್ಞೆಮಾಡಿದ.

ಶ್ರುತ್ವೈವ ರಾಜವಚನಂ ಬಲಮಕ್ಷಯಂ ತದಕ್ಷೋಹಿಣೀದಶಕಯುಗ್ಮಮನನ್ತವೀರ್ಯ್ಯಮ್ ।
ಕೃಷ್ಣಂ ಚಕಾರ ವಿವಿದಾಸ್ತ್ರಧರಂ ಸ್ವಕೋಷ್ಠೇ ಸಿಂಹಂ ಯಥಾsಕಿಲ ಸೃಗಾಲಬಲಂ ಸಮೇತಮ್॥೧೩.೧೨೪

ಕಂಸನ ಆಜ್ಞೆಯನ್ನು ಕೇಳಿದಕೂಡಲೇ, ನಾಶವಾಗದ ಆ ಅಕ್ಷೋಹಿಣಿಯ ಹತ್ತರ ಜೋಡಿಯ (ಇಪ್ಪತ್ತು ಅಕ್ಷೋಹಿಣಿ ಸಂಖ್ಯೆಯಿಂದ ಪರಿಮಿತವಾದ) ಮಹಾಪರಾಕ್ರಮಿಯಾದ, ವಿಧವಿಧವಾದ ಅಸ್ತ್ರವನ್ನು ಧರಿಸಿದ  ಆ ಸೈನ್ಯವು,  ಕೃಷ್ಣ-ಬಲರಾಮರನ್ನು ಸುತ್ತುವರಿಯಿತು. ನರಿಗಳ ಸಮೂಹ  ಸಿಂಹವನ್ನು ಸುತ್ತುವರಿದರೆ ಹೇಗಿರುತ್ತದೋ ಹಾಗೆ.

ಜಾನನ್ನಪೀಶ್ವರಮನನ್ತಬಲಂ ಮಹೇನ್ದ್ರಃ ಕೃಷ್ಣಂ ರಥಂ ನಿಜಮಯಾಪಯದಾಯುಧಾಢ್ಯಮ್ ।
ಶುಶ್ರೂಷಣಾಯ ಪರಮಸ್ಯ ಯಥಾ ಸಮುದ್ರಮರ್ಘ್ಯೇಣ ಪೂರಯತಿ ಪೂರ್ಣ್ಣಜಲಂ ಜನೋsಯಮ್೧೩.೧೨೫

ಇಂದ್ರನು ಸರ್ವಸಮರ್ಥನಾದ ಕೃಷ್ಣನನ್ನು ಅನಂತ ಬಲವುಳ್ಳವನೆಂದು ತಿಳಿದಿದ್ದರೂ ಕೂಡಾ,  ದೇವರ ಸೇವೆಗಾಗಿ,  ಆಯುಧದಿಂದ ಕೂಡಿದ, ಕೃಷ್ಣಸಂಬಂಧಿಯಾದ(ಭಗವಂತನಿಂದ ಇಂದ್ರನಿಗೆ ನೀಡಲ್ಪಟ್ಟ)  ರಥವನ್ನು ಕಳುಹಿಸಿಕೊಟ್ಟ. ಇಂದ್ರನ ಈ ಸೇವೆ ಹೇಗಿತ್ತೆಂದರೆ: ಪೂರ್ಣವಾದ ಜಲವುಳ್ಳ ಸಮುದ್ರವನ್ನು ಅರ್ಘ್ಯದಿಂದ ಹೇಗೆ  ಪೂಜಿಸುತ್ತಾರೋ ಹಾಗಿತ್ತು(ಅಂದರೆ:  ಹೇಗೆ ಸಮುದ್ರದ ಜಲವನ್ನೇ ತಮ್ಮ  ಕರ ಸಂಪುಟದಿಂದ ತೆಗೆದು  ಅರ್ಘ್ಯ ನೀಡಿ ಹೇಗೆ ಪೂರ್ಣವನ್ನಾಗಿ ಮಾಡುತ್ತಾರೋ ಹಾಗೆ)

ಸ್ವಸ್ಯನ್ದನಂ ತು ಭಗವಾನ್ ಸ ಮಹೇನ್ದ್ರದತ್ತಮಾರುಹ್ಯ ಸೂತವರಮಾತಲಿಸಙ್ಗೃಹೀತಮ್
ನಾನಾಯುಧೋಗ್ರಕಿರಣಸ್ತರಣಿರ್ಯ್ಯಥೈವ ಧ್ವಾನ್ತಂ ವ್ಯನಾಶಯದಶೇಷತ ಆಶು ಸೈನ್ಯಮ್ ॥೧೩.೧೨೬

ಪರಮಾತ್ಮನು,  ಸಾರಥಿಗಳಲ್ಲೇ ಅಗ್ರಗಣ್ಯನಾದ ಮಾತಲಿಯಿಂದ[1] ತರಲ್ಪಟ್ಟ,  ಇಂದ್ರನಿಂದ ನೀಡಲ್ಪಟ್ಟ,  ತನ್ನದೇ ಆದ ರಥವನ್ನು ಏರಿ, ನಾನಾ ಆಯುಧಗಳೆಂಬ ಉಗ್ರವಾದ ಕಿರಣವುಳ್ಳವನಾಗಿ,  ಹೇಗೆ ಸೂರ್ಯ  ಕತ್ತಲನ್ನು ನಾಶಪಡಿಸುತ್ತಾನೋ ಹಾಗೆ ಕಂಸನ  ಆ ಎಲ್ಲಾ ಸೈನ್ಯವನ್ನು  ಕೂಡಲೇ ನಾಶಮಾಡಿದನು.


[ಮಹಾಭಾರತ ಸಭಾಪರ್ವದಲ್ಲಿ ಈ ಕುರಿತಾದ ವಿವರ ಕಾಣಸಿಗುತ್ತದೆ. ‘ಏಷ ಶಕ್ರರಥೇ ತಿಷ್ಠಂಸ್ತಾನ್ಯನೀಕಾನಿ ಭಾರತ   ವ್ಯಧಮದ್ ಭೋಜಪುತ್ರಸ್ಯ  ಮಹಾಭ್ರಾಣೀವ ಮಾರುತಃ’(೫೪.೩೦)    ‘ಕಶ್ಚ ನಾರಾಯಣಾದನ್ಯಃ  ಸರ್ವರತ್ನವಿಭೂಷಿತಮ್ ರಥಮಾದಿತ್ಯಸಙ್ಕಾಶಾಮಾತಿಷ್ಠೇತ  ಶಚೀಪತೇಃ  ಕಸ್ಯ ಚಾಪ್ರತಿಮೋ ಯಂತಾ ವಜ್ರಪಾಣೇಃ ಪ್ರಿಯಃ ಸಖಾ ಮಾತಲಿಃ  ಸಙ್ಗ್ರಹೀತಾ  ಸ್ಯಾದನ್ಯತ್ರ  ಪುರುಷೋತ್ತಮಾತ್'(೫೪.೧೫-೧೬)
(ನಾರಾಯಣನಲ್ಲದೇ ಯಾರು ತಾನೆ ಇಂದ್ರನ ರಥವನ್ನು ಏರಿಯಾರು?  ಮಾತಲಿಯೂ ಕೂಡಾ ಸೇವೆ ಮಾಡಬೇಕು ಎಂಬ ಮನೋಭಾವದಿಂದ ರಥವನ್ನು ನಡೆಸಿದ. ಅಂತಹ ರಥವನ್ನು ಭಗವಂತನಲ್ಲದೆ ಬೇರೆ ಯಾರು ಏರಲು ಸಾಧ್ಯ]. 





[1] ಇಂದ್ರನ ಸಾರಥಿ