ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 10, 2018

Mahabharata Tatparya Nirnaya Kannada 11.46-11.50


ದೇವವ್ರತೋsಸಾವನುಶಾಸನಾಯ ಮಾತ್ರಾ ದತ್ತೋ ದೇವಗುರೌ ಶತಾರ್ದ್ಧಮ್ ।
ಸಂವತ್ಸರಾಣಾಮಖಿಲಾಂಶ್ಚ ವೇದಾನ್ ಸಮಭ್ಯಸತ್ ತದ್ವಶಗಾನ್ತರಾತ್ಮಾ ॥೧೧.೪೬

ತಾಯಿ ಗಂಗೆಯಿಂದ ವಿದ್ಯಾಭಾಸಕ್ಕಾಗಿ ಬೃಹಸ್ಪಿತಿಯಲ್ಲಿ ಬಿಡಲ್ಪಟ್ಟ ದೇವವ್ರತ ನಾಮಕ ಶನ್ತನು ಪುತ್ರನು, ಐವತ್ತು ವರ್ಷಗಳ ಕಾಲ ಬೃಹಸ್ಪತಿಯ ವಶದಲ್ಲಿ ಇದ್ದು, ವೇದಾಭ್ಯಾಸ ಮಾಡಿದನು.

ತತಶ್ಚ ಮಾತ್ರಾ ಜಗತಾಂ ಗರೀಯಸ್ಯನನ್ತಪಾರೇsಖಿಲಸದ್ಗುಣಾರ್ಣ್ಣವೇ ।
ರಾಮೇ ಭೃಗೂಣಾಮಧಿಪೇ ಪ್ರದತ್ತಃ ಶುಶ್ರಾವ ತತ್ತ್ವಂ ಚ ಶತಾರ್ದ್ಧವರ್ಷಮ್ ॥೧೧.೪೭

ಬೃಹಸ್ಪತಿಯಲ್ಲಿ ವೇದಾಭ್ಯಾಸವನ್ನು ಮುಗಿಸಿದ ಮೇಲೆ,   ಮತ್ತೆ ತಾಯಿ ಗಂಗೆಯಿಂದ, ಸಂಪೂರ್ಣವಾಗಿ ತಿಳಿದುಕೊಳ್ಳಲಾಗದ, ನಿರ್ದುಷ್ಟ ಗುಣಗಳಿಗೆ ಕಡಲಿನಂತಿರುವ, ಭೃಗುಕುಲದಲ್ಲಿ ಬಂದಿರುವ, ಜಗತ್ತಿನಲ್ಲಿ ಎಲ್ಲರಿಗಿಂತ ಮಿಗಿಲಾದ ಶಕ್ತಿ ಎಣಿಸಿದ   ಪರಶುರಾಮನಲ್ಲಿ ಕೊಡಲ್ಪಟ್ಟವನಾದ ದೇವವ್ರತ, ಅಲ್ಲಿ  ಐವತ್ತು ವರ್ಷಗಳ ಕಾಲ ತತ್ತ್ವವನ್ನು(ಭಗವಂತನ ಸ್ವರೂಪವನ್ನು ಪ್ರತಿಪಾದಿಸತಕ್ಕ ಶಾಸ್ತ್ರವನ್ನು) ಅಭ್ಯಾಸ ಮಾಡಿದನು.

ಸ ಪಞ್ಚವಿಂಶತ್ ಪುನರಬ್ದಕಾನಾಮಸ್ತ್ರಾಣಿ ಚಾಭ್ಯಸ್ಯ ಪತೇರ್ಭೃಗೂಣಾಮ್ ।
ಮಾತ್ರಾ ಸಮಾನೀಯ ತಟೇ ನಿಜೇ ತು ಸಂಸ್ಥಾಪಿತಃ ಪ್ರಾರ್ಪ್ಪಯಿತುಂ ಸ್ವಪಿತ್ರೇ ॥೧೧.೪೮

ಅವನು ಮತ್ತೆ ಇಪ್ಪತ್ತೈದು ವರ್ಷಗಳ ಕಾಲ, ಭೃಗುಗಳ ಒಡೆಯನಾಗಿರುವ ಭಾರ್ಗವರಾಮನ ಬಳಿಯಲ್ಲೇ ಇದ್ದು,  ಅಸ್ತ್ರಗಳನ್ನೆಲ್ಲಾ ಅಭ್ಯಾಸ ಮಾಡಿದನು. ನಂತರ,  ತಾಯಿಯಿಂದ ಕರೆತಂದು, ತನ್ನ ನದಿಯ ತಟದಲ್ಲಿ ಶನ್ತನುವಿಗೆ ಅರ್ಪಿಸಲು ಇಡಲ್ಪಟ್ಟನು (ಅಂದರೆ: ಮಗನನ್ನು ತಂದೆಗೆ ಒಪ್ಪಿಸುವುದಕ್ಕಾಗಿ ಗಂಗೆ, ಅವನನ್ನು ತನ್ನ(ಗಂಗಾನದಿ)  ತೀರಕ್ಕೆ ಕರೆತಂದು ಅಲ್ಲಿ ನಿಲ್ಲಿಸಿದಳು)

ಸ ತತ್ರ ಬಧ್ವಾ ಶರಪಞ್ಜರೇಣ ಗಙ್ಗಾಂ ವಿಜಹ್ರೇsಸ್ಯ ಪಿತಾ ತದೈವ ।
ವ್ರಜನ್ ಮೃಗಾರ್ತ್ಥೀ ತೃಷಿತೋ ವಿಲೋಕಯನ್ ಗಙ್ಗಾಮತೋಯಾಮಭವತ್ ಸುವಿಸ್ಮಿತಃ    ॥೧೧.೪೯

ದೇವವ್ರತನು ಗಂಗಾತೀರದಲ್ಲಿ ನಿಂತು, ನದಿಯನ್ನು  ತನ್ನ ಬಾಣಗಳ ಅಣೆಕಟ್ಟಿನಿಂದ ತಡೆದು, ಆಟವಾಡಿದನು. ಆಗಲೇ ದೇವವ್ರತನ ತಂದೆಯಾದ ಶನ್ತನು ಭೇಟೆಯಾಡಲು ತೆರಳುತ್ತಾ, ಬಾಯಾರಿದವನಾಗಿ,  ನೀರಿಲ್ಲದೇ ಇರುವ ಗಂಗೆಯನ್ನು ನೋಡಿ ಬಹಳ ಅಚ್ಚರಿಗೊಂಡನು.

ಸ ಮಾರ್ಗ್ಗಯಾಮಾಸ ತತೋsಸ್ಯ ಹೇತುಜ್ಞಪ್ತ್ಯೈ ತದಾ ಸ್ವಂ ಚ ದದರ್ಶ ಸೂನುಮ್ ।
ಕ್ರೀಡನ್ತಮಸ್ತ್ರೇಣ ಬಭೂವ ಸೋsಪಿ ಕ್ಷಣಾದದೃಶ್ಯಃ ಪಿತೃದರ್ಶನಾದನು                 ॥೧೧.೫೦

ನದಿಯಲ್ಲಿ ನೀರಿಲ್ಲದಿರುವಿಕೆಯ ಕಾರಣವನ್ನು ತಿಳಿಯಬೇಕೆಂದು ಹುಡುಕಾಡಿದ ಶನ್ತನು, ಅಸ್ತ್ರದೊಂದಿಗೆ ಆಟವಾಡುತ್ತಿರುವ ತನ್ನ ಮಗನನ್ನು ಕಂಡನು. ದೇವವ್ರತನಾದರೋ, ತಂದೆ ಕಂಡಕೂಡಲೇ, ಕ್ಷಣಕಾಲ ಅದೃಶ್ಯನಾದನು.

ಪದ್ಯ ರೂಪ:  https://go-kula.blogspot.com/

No comments:

Post a Comment