ಸ್ವಚ್ಛನ್ದಮೃತ್ಯುತ್ವವರಂ ಪ್ರದಾಯ ತಥಾsಪ್ಯಜೇಯತ್ವಮಧೃಷ್ಯತಾಂ ಚ ।
ಯುದ್ಧೇಷು ಭೀಷ್ಮಸ್ಯ ನೃಪೋತ್ತಮಃ ಸ ರೇಮೇ ತಯೈವಾಬ್ದಗಣಾನ್
ಬಹೂಂಶ್ಚ ॥೧೧.೮೧॥
ಸಂತುಷ್ಟನಾದ ಶನ್ತನುವು ಭೀಷ್ಮಾಚಾರ್ಯರಿಗೆ
‘ಬಯಸಿದಾಗ ಸಾವು’ ಎನ್ನುವ ವರವನ್ನು ಕೊಟ್ಟು, ಹಾಗೆಯೇ ಯುದ್ಧದಲ್ಲಿ ಇತರರಿಂದ ಗೆಲ್ಲಲ್ಪಡದಿರುವಿಕೆಯನ್ನೂ ಮತ್ತು ಸೋಲು
ಇಲ್ಲದಿರುವಿಕೆಯನ್ನೂ ವರವನ್ನಾಗಿ
ನೀಡಿದನು. ಮುಂದೆ ಪತ್ನಿ ಸತ್ಯವತಿಯ
ಜೊತೆಗೆ ಶನ್ತನು ಬಹಳ ವರ್ಷಗಳ ಕಾಲ ಸುಖಿಸಿದನು.
ಲೇಭೇ ಸ ಚಿತ್ರಾಙ್ಗದಮತ್ರ
ಪುತ್ರಂ ತಥಾ ದ್ವಿತೀಯಂ ಚ ವಿಚಿತ್ರವೀರ್ಯ್ಯಮ್ ।
ತಯೋಶ್ಚ ಬಾಲ್ಯೇ
ವ್ಯಧುನೋಚ್ಛರೀರಂ ಜೀರ್ಣ್ಣೇನ ದೇಹೇನ ಹಿ ಕಿಂ ಮಮೇತಿ ॥೧೧.೮೨॥
ಶನ್ತನುಚಕ್ರವರ್ತಿಯು
ಸತ್ಯವತಿಯೊಂದಿಗಿನ ದಾಂಪತ್ಯದಲ್ಲಿ ಚಿತ್ರಾಙ್ಗದ ಮತ್ತು ವಿಚಿತ್ರವೀರ್ಯ ಎಂಬ ಇಬ್ಬರು ಮಕ್ಕಳನ್ನು
ಪಡೆಯುತ್ತಾನೆ. ಆತ ಆ ಮಕ್ಕಳಿಬ್ಬರು ಬಾಲಕರಿರುವಾಗಲೇ, ‘ಜೀರ್ಣವಾದ ಈ ದೇಹದಿಂದ ಇನ್ನು ನನಗೇನು
ಪ್ರಯೋಜನ’ ಎಂದು ಯೋಚಿಸಿ, ಗಂಗೆಯಲ್ಲಿ ಸ್ವಇಚ್ಛೆಯಿಂದ ತನ್ನ ದೇಹವನ್ನು ತ್ಯಾಗ ಮಾಡುತ್ತಾನೆ. (ಇಚ್ಛೆಯಿಂದಲೇ
ಶರೀರವನ್ನು ಬಿಡುತ್ತಾನೆ).
[ಮಹಾಭಾರತದಲ್ಲಿ
ಹೇಳುವಂತೆ: ‘ಕಾಲಧರ್ಮಮುಪೇಯಿವಾನ್’ (ಆದಿಪರ್ವ ೧೦೮.೪) ದೇಹಜೀರ್ಣವಾಯಿತು, ಈ ದೇಹದಿಂದ ನನಗಿನ್ನೇನಾಗಬೇಕು
ಎಂಬ ಭಾವನೆಯಿಂದ, ಶನ್ತನು ಸ್ವೇಚ್ಛೆಯಿಂದ
ದೇಹತ್ಯಾಗ ಮಾಡುತ್ತಾನೆ. ಇಲ್ಲಿ ನಾವು ಗಮನಿಸಬೇಕಾದ ಅಂಶ ಏನೆಂದರೆ: ಶನ್ತನುವಿಗೆ ಸ್ವೇಚ್ಛೆಯಿಂದ ದೇಹತ್ಯಾಗ ಮಾಡುವ ಸಿದ್ಧಿಯಿತ್ತು. ಆದ್ದರಿಂದಲೇ ಆತ ತನ್ನ
ಮಗನಾದ ಭೀಷ್ಮನಿಗೆ ಇಚ್ಛಾ ಮರಣದ ವರಪ್ರದಾನ
ಮಾಡುವುದಕ್ಕೆ ಸಾಧ್ಯವಾಯಿತು. ಅಷ್ಟೇ ಅಲ್ಲಾ, ಇಚ್ಛಾಮರಣ ಎನ್ನುವುದು ತನ್ನ ಕಾಲಕ್ಕೇ ಕೊನೆಯಾಗಲಿದೆ ಎನ್ನುವುದೂ ಆತನಿಗೆ ತಿಳಿದಿತ್ತು.
ಹೀಗಾಗಿ ಆತ ಭೀಷ್ಮಾಚಾರ್ಯರಿಗೆ ಇಚ್ಛಾಮರಣದ
ವರವನ್ನು ನೀಡಿದ. ]
ಸ್ವೇಚ್ಛಯಾ ವರುಣತ್ವಂ ಸ ಪ್ರಾಪ ನಾನಿಚ್ಛಯಾ ತನುಃ ।
ತಸ್ಮಿನ್ ಕಾಲೇ ತ್ಯಜ್ಯತೇ ಹಿ ಬಲವದ್ಭಿರ್ವಧಂ ವಿನಾ ॥೧೧.೮೩॥
ಅತಿಸಕ್ತಾಸ್ತಪೋಹೀನಾಃ ಕಥಞ್ಚಿನ್ಮೃತಿಮಾಪ್ನುಯುಃ ।
ಅನಿಚ್ಛಯಾsಪಿ ಹಿ ಯಥಾ
ಮೃತಶ್ಚಿತ್ರಾಙ್ಗದಾನುಜಃ ॥೧೧.೮೪॥
ಹೀಗೆ ಶನ್ತನುವು ಸ್ವೇಚ್ಛೆಯಿಂದ
ದೇಹತ್ಯಾಗಮಾಡಿ ವರುಣತ್ತ್ವವನ್ನು(ಮೂಲರೂಪವನ್ನು)
ಹೊಂದಿದನು.
ಶನ್ತನು
ಚಕ್ರವರ್ತಿಯಾಗಿದ್ದ ಕಾಲದ ಮಹಿಮೆಯನ್ನು ಆಚಾರ್ಯರು ಇಲ್ಲಿ ವಿವರಿಸಿದ್ದಾರೆ: ‘ಶನ್ತನುವಿನ ಕಾಲದಲ್ಲಿ ಇಚ್ಛೆ ಇಲ್ಲದೇ
ದೇಹವನ್ನು ಬಿಡುವವರೇ ವಿರಳವಾಗಿದ್ದರು. ಆದರೆ
ಕೆಲವೇ ಕೆಲವರಿಗೆ ಮಾತ್ರ ಇಚ್ಛಾಮರಣ ಯೋಗವಿರಲಿಲ್ಲಾ. ಅಂಥವರು ಎರಡು ಕಾರಣದಿಂದ ಸಾಯುತ್ತಿದ್ದರು. (೧). ತಮಗಿಂತ ತಪೋಬಲದಲ್ಲಿ
ಶ್ರೇಷ್ಠನಾದವನಿಂದ ವಧೆಗೊಳಗಾಗಿ ಸಾವು. (ಹೇಗೆ ಚಿತ್ರಾಙ್ಗದ ಗಂಧರ್ವನಿಂದ ಕೊಲ್ಲಲ್ಪಟ್ಟನೋ
ಹಾಗೆ) (೨). ಕೇವಲ ವಿಷಯಾಸಕ್ತಿಯುಳ್ಳವರಾಗಿ, ಅದರಿಂದಾಗಿ ತಪೋಹೀನರಾಗಿ ಸಾವು. (ಹೇಗೆ ಚಿತ್ರಾಙ್ಗದನ
ತಮ್ಮನಾದ ವಿಚಿತ್ರವೀರ್ಯನು ಸಾವಿನ ಬಯಕೆ ಇಲ್ಲದೇ ಸತ್ತನೋ ಹಾಗೆ).
ಅಥೌರ್ಧ್ವದೈಹಿಕಂ ಕೃತ್ವಾ ಪಿತುರ್ಭೀಷ್ಮೋsಭ್ಯಷೇಚಯತ್ ।
ರಾಜ್ಯೇ ಚಿತ್ರಾಙ್ಗದಂ ವೀರಂ ಯೌವರಾಜ್ಯೇsಸ್ಯ ಚಾನುಜಮ್ ॥೧೧.೮೫॥
ಶನ್ತನುರಾಜನ ಮರಣಾನಂತರ
ಭೀಷ್ಮಾಚಾರ್ಯರು ತಂದೆಯ ಔರ್ಧ್ವದೈಹಿಕ ಕಾರ್ಯಗಳನ್ನೆಲ್ಲವನ್ನೂ ಮಾಡಿ, ಬಲಿಷ್ಠನಾದ ಚಿತ್ರಾಙ್ಗದನನ್ನು
ರಾಜನನ್ನಾಗಿಯೂ ಮತ್ತು ವಿಚಿತ್ರವೀರ್ಯ್ಯನನ್ನು
ಯುವರಾಜನನ್ನಾಗಿಯೂ ಅಭಿಷೇಕ ಮಾಡುತ್ತಾರೆ.
ಚಿತ್ರಾಙ್ಗದೇನೇ ನಿಹತೋ ನಾಮ ಸ್ವಂ ತ್ವಪರಿತ್ಯಜನ್ ।
ಚಿತ್ರಾಙ್ಗದೋsಕೃತೋದ್ವಾಹೋ ಗನ್ಧರ್ವೇಣ
ಮಹಾರಣೇ ॥೧೧.೮೬॥
‘ತನ್ನ ಹೆಸರನ್ನು ಪರಿತ್ಯಾಗ ಮಾಡದೇ ಇದ್ದುದರಿಂದ, ಚಿತ್ರಾಙ್ಗದ
ಎನ್ನುವ ಹೆಸರಿನ ಗಂಧರ್ವನೊಂದಿಗಿನ ಮಹಾಯುದ್ಧದಲ್ಲಿ^
ಶನ್ತನುಪುತ್ರ ಚಿತ್ರಾಙ್ಗದ ಕೊಲ್ಲಲ್ಪಡುತ್ತಾನೆ.
[ ^ ಈ ಕುರಿತಾದ
ವಿವರವನ್ನು ಮಹಾಭಾರತದ ಆದಿಪರ್ವದಲ್ಲಿ(೧೦೮-೭-೯) ಕಾಣುತ್ತೇವೆ: ಸ ತು ಚಿತ್ರಾಙ್ಗದಃ
ಶೌರ್ಯಾತ್ಸರ್ವಾಂಶ್ಚಿಕ್ಷೇಪ ಪಾರ್ಥಿವಾನ್।.....ತಂ ಕ್ಷಿಪಂತಂ ಸುರಾಂಶ್ಚೈವ
ಮನುಷ್ಯಾನಸುರಾಂಸ್ತಥಾ । ಗಂಧರ್ವರಾಜೋ ಬಲವಾಂಸ್ತುಲ್ಯನಾಮಾsಭ್ಯಯಾತ್ತದಾ॥ ಗಂಧರ್ವಃ- ‘ತ್ವಂ ವೈ ಸದೃಶನಾಮಾsಸಿ ಯುದ್ಧಂ ದೇಹಿ ನೃಪಾತ್ಮಜ । ನಾಮ ವಾsನ್ಯತ್ಪ್ರಗೃಹ್ಣೀಷ್ವ ಯದಿ
ಯುದ್ಧಂ ನ ದಾಸ್ಯಸಿ ॥ ಶನ್ತನುಪುತ್ರ ಚಿತ್ರಾಙ್ಗದ
ತನ್ನ ಶೌರ್ಯದಿಂದ ಎಲ್ಲರನ್ನೂ ಬಗ್ಗುಬಡಿದಿದ್ದ. ಇದರಿಂದಾಗಿ ಅವನ ಗರ್ವ ಎಲ್ಲಾ ಕಡೆ ಮನೆ
ಮಾತಾಯಿತು. ಒಮ್ಮೆ ಚಿತ್ರಾಙ್ಗದ ಎನ್ನುವ
ಹೆಸರಿನವನೇ ಆದ ಗಂಧರ್ವ ಆತನ ಬಳಿ ಬಂದು, “ನೀನು ನನ್ನ ಹೆಸರನ್ನು ಪರಿತ್ಯಾಗ ಮಾಡಬೇಕು, ಇಲ್ಲವೇ ನನ್ನೊಂದಿಗೆ
ಯುದ್ಧ ಮಾಡಬೇಕು” ಎನ್ನುತ್ತಾನೆ. ಆದರೆ ಶನ್ತನುಪುತ್ರನಾದ ಚಿತ್ರಾಙ್ಗದ ಹೆಸರನ್ನು ತ್ಯಾಗ
ಮಾಡಲು ಒಪ್ಪುವುದಿಲ್ಲ. ಇದರಿಂದಾಗಿ ಅವರಿಬ್ಬರ ನಡುವೆ ಧೀರ್ಘಕಾಲ ನಿರಂತರವಾಗಿ ಯುದ್ಧ ನಡೆಯಿತು. ಯುದ್ಧದಲ್ಲಿ ಶನ್ತನುಪುತ್ರ ಸೋಲಿಸಲ್ಪಡುತ್ತಾನೆ. ಸೋತರೂ ಕೂಡಾ ಹೆಸರು ಬದಲಿಸಲು
ಒಪ್ಪದ ಕಾರಣ, ತನಗಿಂತ ಬಲದಿಂದ ಶ್ರೇಷ್ಠನಾದ ಗಂಧರ್ವನಿಂದ
ಆತ ಕೊಲ್ಲಲ್ಪಡುತ್ತಾನೆ].
No comments:
Post a Comment