ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, November 23, 2018

Mahabharata Tatparya Nirnaya Kannada 11.93-11.96


ಭೀಷ್ಮಾಯ ತು ಯಶೋ ದಾತುಂ ಯುಯುಧೇ ತೇನ ಭಾರ್ಗ್ಗವಃ
ಅನನ್ತಶಕ್ತಿತರಪಿ ಸ ನ ಭೀಷ್ಮಂ ನಿಜಘಾನ ಹ ।
ನಚಾಮ್ಬಾಂ ಗ್ರಾಹಯಾಮಾಸ ಭೀಷ್ಮಕಾರುಣ್ಯಯನ್ತ್ರಿತಃ ೧೧.೯೩

ಭೀಷ್ಮನಿಗೆ ಯಶಸ್ಸನ್ನು ಕೊಡುವುದಕ್ಕಾಗಿಯೇ  ಪರಶುರಾಮ ಅವನೊಂದಿಗೆ ಯುದ್ಧ ಮಾಡುತ್ತಾನೆ. ಎಣೆಯಿರದ  ಶಕ್ತಿಯುಳ್ಳವನಾದರೂ ಕೊಡಾ,  ಪರಶುರಾಮನು ಭೀಷ್ಮನನ್ನು ಕೊಲ್ಲುವುದಿಲ್ಲ.
ಭೀಷ್ಮನ ಮೇಲಿರುವ ಕಾರುಣ್ಯದಿಂದ, ನಿಯಂತ್ರಣ ಮಾಡಲ್ಪಟ್ಟವನಾಗಿ, ಅಂಬೆಯನ್ನು ಆತನಿಗೆ ಮದುವೆ ಮಾಡಿಸಿ ಕೊಡುವುದಿಲ್ಲಾ.

‘ಅನನ್ತಶಕ್ತಿಃ ಸಕಲಾನ್ತರಾತ್ಮಾ ಯಃ ಸರ್ವವಿತ್ ಸರ್ವವಶೀ ಚ ಸರ್ವಜಿತ್ ।
‘ನ ಯತ್ಸಮೋsನ್ಯೋsಸ್ತಿ ಕಥಞ್ಚ ಕುತ್ರಚಿತ್ ಕಥಂ ಹ್ಯಶಕ್ತಿಃ ಪರಮಸ್ಯ ತಸ್ಯ’ ೧೧.೯೪

‘ಭೀಷ್ಮಂ ಸ್ವಭಕ್ತಂ ಯಶಸಾsಭಿಪೂರಯನ್ ವಿಮೋಹಯನ್ನಾಸುರಾಂಶ್ಚೈವ ರಾಮಃ ।
‘ಜಿತ್ವೈವ ಭೀಷ್ಮಂ ನ ಜಘಾನ ದೇವೋ ವಾಚಂ ಚ ಸತ್ಯಾಮಕರೋತ್ ಸ ತಸ್ಯ’೧೧.೯೫

ವಿದ್ಧವನ್ಮುಗ್ಧವಚ್ಛೈವ ಕೇಶವೋ ವೇದನಾರ್ತ್ತವತ್ ।
ದರ್ಶಯನ್ನಪಿ ಮೋಹಾಯ ನೈವ ವಿಷ್ಣುಸ್ತಥಾ ಭವೇತ್
ಏವಮಾದಿಪುರಾಣೋತ್ಥವಾಕ್ಯಾದ್ ರಾಮಃ ಸದಾ ಜಯೀ ॥೧೧.೯೬


‘ಯಾವಾತನು ಎಣೆಯಿರದ ಶಕ್ತಿ ಇರುವವನೋ, ಎಲ್ಲರ ಒಳಗೂ ಇರುವವನೋ, ಎಲ್ಲವನ್ನೂ ಬಲ್ಲವನೋ, ಎಲ್ಲವನ್ನೂ ವಶದಲ್ಲಿಟ್ಟುಕೊಂಡವನೋ, ಎಲ್ಲವನ್ನೂ ಗೆದ್ದವನೋ, ಯಾರಿಗೆ ಎಣೆಯಾದವರು ಬೇರೊಬ್ಬರು ಎಲ್ಲಿಯೂ ಇಲ್ಲವೋ,  ಅಂತಹ ಉತ್ಕೃಷ್ಟನಾದ ಪರಶುರಾಮನಿಗೆ ಶಕ್ತ್ಯಾಭಾವ ಎಲ್ಲಿಂದ’

‘ಪರಶುರಾಮನು ತನ್ನ ಭಕ್ತನಾದ ಭೀಷ್ಮನನ್ನು ಕೀರ್ತಿಯಿಂದ ತುಂಬಿಸಿರುವವನಾಗಿಯೂ, ಅಸುರರನ್ನು, ಅಸುರರಿಗೆ ಸಂಬಂಧಿಸಿದವರನ್ನು ಮೊಹಿಸುವವನಾಗಿಯೂ, ಭೀಷ್ಮನನ್ನು ಗೆದ್ದಿದ್ದರೂ  ಕೂಡಾ ಅವನನ್ನು ಕೊಲ್ಲಲಿಲ್ಲಾ. ಭಗವಂತ ಭೀಷ್ಮಾಚಾರ್ಯರ  ‘ಮದುವೆಯಾಗಲಾರೆ’ ಎನ್ನುವ ಪ್ರತಿಜ್ಞೆಯನ್ನು ಸತ್ಯವನ್ನಾಗಿ ಮಾಡಿದನು’.  
‘ಕೇಶವನು ಗಾಯಗೊಂಡವನಂತೆ, ಮೂರ್ಛೆಗೊಂಡವನಂತೆ, ನೊಂದವನಂತೆ ತೋರಿಸಿಕೊಂಡರೂ, ಮೂಲತಃ  ಹಾಗಾಗಲಾರ’.
ಇವೇ ಮೊದಲಾದ ಪುರಾಣ ವಾಕ್ಯದಂತೆ  ‘ಪರಶುರಾಮನು ಸದಾ ಜಯವುಳ್ಳವನೇ ಆಗಿರುತ್ತಾನೆ'.

No comments:

Post a Comment