ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, November 13, 2018

Mahabharata Tatparya Nirnaya Kannada 11.56-11.63


ಯದೈವ ಗಙ್ಗಾ ಸುಷುವೇsಷ್ಟಮಂ ಸುತಂ ತದೈವ ಯಾತೋ ಮೃಗಯಾಂ ಸ ಶನ್ತನುಃ ।
ಶರದ್ವತೋ ಜಾತಮಪಶ್ಯದುತ್ತಮಂ ವನೇ ವಿಸೃಷ್ಟಂ ಮಿಥುನಂ ತ್ವಯೋನಿಜಮ್ ॥೧೧.೫೬

ಗಂಗೆಯು ಎಂಟನೆಯ ಮಗನನ್ನು ಹೆತ್ತ ಸಮಯದಲ್ಲೇ  ಶನ್ತನುವು ಭೇಟೆಗೆಂದು  ಕಾಡಿಗೆ ತೆರಳಿದ್ದ. ಆಗ ‘ಶರದ್ವಾನ್ ’  ಎಂಬ ಋಷಿಯಿಂದ ಹುಟ್ಟಿದ, ಕಾಡಿನಲ್ಲಿ ಬಿಡಲ್ಪಟ್ಟ, ಮಾತೃ ಯೋನಿಯಲ್ಲಿ ಜನಿಸದ  ಜೋಡಿಯನ್ನು(ಅವಳಿ ಮಕ್ಕಳನ್ನು) ಆತ ಕಾಣುತ್ತಾನೆ.

ಶರದ್ವಾಂಸ್ತು ತಪಃ ಕುರ್ವನ್ ದದರ್ಶ ಸಹಸೋರ್ವಶೀಮ್ ।
ಚಸ್ಕನ್ದ ರೇತಸ್ತಸ್ಯಾಥ ಶರಸ್ತಮ್ಭೇ ತತೋSಭವತ್               ॥೧೧.೫೭


ವಿಷ್ಕಮ್ಭೋ ನಾಮ ರುದ್ರಾಣಾಂ ಭೂಭಾರಹರಣೇsಙ್ಗತಾಮ್ ।
ಹರೇಃ ಪ್ರಾಪ್ತುಂ ತಥಾ ತಾರಾ ಭಾರ್ಯ್ಯಾ ಯಾ ಹಿ ಬೃಹಸ್ಪತೇಃ         ॥೧೧.೫೮


‘ಶರದ್ವಾನ್’ ಎಂಬುವ ಋಷಿ ತಪಸ್ಸು ಮಾಡುತ್ತಿರುವಾಗ , ಆಕಸ್ಮಿಕವಾಗಿ  ಊರ್ವಶಿಯನ್ನು ಕಾಣುತ್ತಾನೆ. ಆಕೆಯನ್ನು ಕಂಡಾಗ ಅವನ ರೇತಸ್ಸು ಹುಲ್ಲಿನ ಮೆದೆಯಲ್ಲಿ ಜಾರಿ ಬೀಳುತ್ತದೆ. ಈರೀತಿ ಜಾರಿದ ರೇತಸ್ಸಿನ ದೆಸೆಯಿಂದ ರುದ್ರರಲ್ಲಿ ಒಬ್ಬನಾದ  ‘ವಿಷ್ಕಮ್ಭ’ ಎನ್ನುವ ರುದ್ರನು ಪರಮಾತ್ಮನ ಭೂಭಾರ ಹರಣ ಕಾರ್ಯದಲ್ಲಿ  ಸಹಾಯಕತ್ವವನ್ನು ಹೊಂದುವುದಕ್ಕಾಗಿ ಹುಟ್ಟಿ ಬರುತ್ತಾನೆ. ಹಾಗೆಯೇ ಬೃಹಸ್ಪತಿಯ ಪತ್ನಿ ತಾರಾದೇವಿಯೂ ಕೂಡಾ ಅವನೊಂದಿಗೆ ಹುಟ್ಟಿ ಬರುತ್ತಾಳೆ.

ತಾವುಭೌ ಶನ್ತನುರ್ದ್ದೃಷ್ಟ್ವಾ ಕೃಪಾವಿಷ್ಟಃ ಸ್ವಕಂ ಗೃಹಮ್ ।
ನಿನಾಯ ನಾಮ ಚಕ್ರೇ ಚ ಕೃಪಾಯಾ ವಿಷಯೌ ಯತಃ ೧೧.೫೯

ಕೃಪಃ ಕೃಪೀತಿ ಸ ಕೃಪಸ್ತಪೋ ವಿಷ್ಣೋಶ್ಚಕಾರ ಹ
ತಸ್ಯ ಪ್ರೀತಸ್ತದಾ ವಿಷ್ಣುಃ ಸರ್ವಲೋಕೇಶ್ವರೇಶ್ವರಃ ೧೧.೬೦

ಶನ್ತನುವು ಆ ಇಬ್ಬರು ಮಕ್ಕಳನ್ನು ನೋಡಿ ಮರುಕದಿಂದ ಆವಿಷ್ಟನಾಗಿ (ಕೃಪಾವಿಷ್ಟನಾಗಿ) ಅವರನ್ನು  ತನ್ನ ಅರಮನೆಗೆ ಕೊಂಡೊಯ್ಯುತ್ತಾನೆ. ಯಾವ ಕಾರಣದಿಂದ ಆ ಮಕ್ಕಳಿಬ್ಬರು ತನ್ನ ಕೃಪೆಗೆ ವಿಷಯರಾದರೋ, ಆ ಕಾರಣದಿಂದ ಅವರಿಗೆ ಆತ ‘ಕೃಪ’ ಮತ್ತು ‘ಕೃಪಿ’ ಎನ್ನುವ ಹೆಸರನ್ನಿಡುತ್ತಾನೆ . ಆ ಕೃಪನು ಮುಂದೆ  ವಿಷ್ಣುಸಂಬಂಧಿಯಾದ ತಪಸ್ಸನ್ನು ಮಾಡುತ್ತಾನೆ. ಆಗ ಎಲ್ಲಾ  ಲೋಕಕ್ಕೂ ಒಡೆಯನಾದ ವಿಷ್ಣುವು ಅವನಿಗೆ ಪ್ರೀತನಾಗುತ್ತಾನೆ.

ಪ್ರಾದಾದೇಷ್ಯತ್ಸಪ್ತರ್ಷಿತ್ವಮಾಯುಃ ಕಲ್ಪಾನ್ತಮೇವ ಚ ।
ಸ ಶನ್ತನುಗೃಹೇ ತಿಷ್ಠನ್ ದೇವವ್ರತಸಖಾsಭವತ್ ೧೧.೬೧

ಪ್ರಸನ್ನನಾದ ವಿಷ್ಣುವು, ‘ಮುಂದೆ ಬರುವ ಸಪ್ತರ್ಷಿಗಳಲ್ಲಿ ಒಬ್ಬನಾಗುವಿಕೆ’ಯ ವರವನ್ನೂ^,  ಅಲ್ಲದೆ, ಕಲ್ಪ ಮುಗಿಯುವ ತನಕದ ಆಯುಷ್ಯವನ್ನೂ ಕೂಡಾ ಅವನಿಗೆ ಕೊಟ್ಟನು. ಆ ಕೃಪನು ಶನ್ತನು ಮನೆಯಲ್ಲೇ ಇದ್ದು, ದೇವವ್ರತನ ಗೆಳೆಯನಾದನು.
[^ಈ ಅಂಶ ಮಹಾಭಾರತದಲ್ಲಿ ವಿವರಿಸಿಲ್ಲವಾದರೂ ಕೂಡಾ, ಬೇರೆಬೇರೆ ಪುರಾಣಗಳಲ್ಲಿ  ಈ ಕುರಿತು ಹೇಳಲಾಗಿದೆ]

ಪುತ್ರವಚ್ಛನ್ತನೋಶ್ಚಾsಸೀತ್ ಸ ಚ ಪುತ್ರವದೇವ ತತ್ ।
ಮಿಥುನಂ ಪಾಲಯಾಮಾಸ ಸ ಕೃಪೋsಸ್ತ್ರಾಣ್ಯವಾಪ ಚ ॥೧೧.೬೨


ಸರ್ವವೇದಾನಧಿಜಗೌ ಸರ್ವಶಾಸ್ತ್ರಾಣಿ ಕೌಶಿಕಾತ್

ತತ್ವಜ್ಞಾನಂ ತಥಾ ವ್ಯಾಸಾದಾಪ್ಯ ಸರ್ವಜ್ಞತಾಂ ಗತಃ        ॥೧೧.೬೩

ಕೃಪನು  ಶನ್ತನುವಿಗೆ ಮಗನಂತೆಯೇ ಆದನು. ಶನ್ತನುವಾದರೋ, ಈ ಎರಡು ಜೋಡಿ ಜೀವಗಳನ್ನು ತನ್ನ ಮಕ್ಕಳಂತೆಯೇ ಪಾಲನೆ ಮಾಡಿದನು. [ಶಂತನು  ಕ್ಷತ್ರಿಯ, ಇವರು ಬ್ರಾಹ್ಮಣರು. ಆದರೆ ಅವರೆಲ್ಲರೂ ಒಟ್ಟಿಗೆ ಇರಲು ಆಗ ಯಾವ ಸಮಸ್ಯೆಯೂ ಇರಲಿಲ್ಲ. ಅವರ ಆಚರಣೆ ಅವರಿಗೆ. ಇವರ ಆಚರಣೆ ಇವರಿಗೆ. ಇದು ನಮ್ಮ ಪ್ರಾಚೀನ ಸಂಸ್ಕೃತಿ. ಇದು ನಿಜವಾದ ಜಾತ್ಯಾತೀಯತೆ] ಆ ಕೃಪನು ಕೌಶಿಕನಿಂದ ಅಸ್ತ್ರಗಳನ್ನು ಪಡೆದನು.  ಸರ್ವ ವೇದಗಳನ್ನೂ, ಸರ್ವ ಶಾಸ್ತ್ರಗಳನ್ನೂ ಅಧ್ಯಯನ ಮಾಡಿದನು. ಹಾಗೆಯೇ, ವೇದವ್ಯಾಸರಿಂದ ತತ್ತ್ವಜ್ಞಾನವನ್ನು ಹೊಂದಿ,   ಸರ್ವಜ್ಞನೆನಿಸಿದನು.

[ಗೌತಮೋ Sಪಿ ತತೋSಭ್ಯೇತ್ಯ ಧನುರ್ವೇದಪರೋSಭವತ್’ (ಮಹಾಭಾರತ: ಉತ್ತರದ ಪಾಠ ೧೨೯.೧೯ ). ಕೃಪೋSಪಿ ಚ ತದಾ ರಾಜನ್ ಧನುರ್ವೇದಪರೋSಭವತ್(ದಾಕ್ಷಿಣಾತ್ಯಪಾಠ ೧೪೦.೨೯) ಎರಡೂ ಪಾಠದಲ್ಲೂ ಒಂದೊಂದು ದೋಷವಿದ್ದಂತೆ ಕಾಣುತ್ತದೆ. ನಿಜವಾದ ಪಾಠ ಹೀಗಿರಬಹುದು:  ಕೌಶಿಕೋSಪಿ ತದಾ ರಾಜನ್ ಧನುರ್ವೇದಪರೋSಭವತ್ ಚತುರ್ವೇದಂ ಧನುರ್ವೇದಂ ಶಾಸ್ತ್ರಾಣಿ ವಿವಿಧಾನಿ ಚ | ನಿಖಿಲೇನಾಸ್ಯ ತತ್ ಸರ್ವಂ ಗುಹ್ಯಮಾಖ್ಯಾತವಾಂಸ್ತದಾ’ . ಕೌಶಿಕ ಅಂದರೆ ವಿಶ್ವಾಮಿತ್ರ. ಆತ ಆಗಲೇ ಧನುರ್ವೇದಪರನಾಗಿದ್ದನು. ನಾಲ್ಕುತರಹದ ಧನುರ್ವೇದವನ್ನು, ಸಮಗ್ರ ರಹಸ್ಯವನ್ನು ಕೌಶಿಕ ಕೃಪನಿಗೆ ಹೇಳಿದನು. ಈ ರೀತಿ ಸಂಭಾವ್ಯ ಪ್ರಾಚೀನ ಪಾಠವಿರಬಹುದು].

ಪದ್ಯ ರೂಪ:  https://go-kula.blogspot.com/

No comments:

Post a Comment