ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, November 9, 2018

Mahabharata Tatparya Nirnaya Kannada 11.34-11.38


ಉವಾಚ ಸ ತಂ ನತು ಮಾಂ ಸುತಸ್ತೇ ಕಾsಸೀತಿ ಪೃಚ್ಛೇನ್ನತು ಮಾಂ ನಿವಾರಯೇತ್   
ಅಯೋಗ್ಯಕರ್ತ್ತ್ರೀಮಪಿ ಕಾರಣಂ ಚ ಮತ್ಕರ್ಮ್ಮಣೋ ನೈವ ಪೃಚ್ಛೇತ್ ಕದಾಚಿತ್     ೧೧.೩೪

ಯದಾ ತ್ರಯಾಣಾಮಪಿ ಚೈಕಮೇಷ ಕರೋತಿ ಗಚ್ಛೇಯಮಹಂ ವಿಸೃಜ್ಯ ।
ತದಾ ತ್ವದೀಯಂ ಸುತಮಿತ್ಯುದೀರಿತೇ ತಥೇತಿ ರಾಜಾsಪ್ಯವದತ್ ಪ್ರತೀಪಃ ॥೧೧.೩೫

ಪ್ರತೀಪನಿಂದ ‘ನನ್ನ ಮಗನಿಗೆ ನೀನು ಭಾರ್ಯೆಯಾಗು’ ಎಂದು ಹೇಳಿಸಿಕೊಂಡ ಗಂಗೆ, ಆತನಲ್ಲಿ ತನ್ನ  ಷರತ್ತುಗಳನ್ನು ವರವಾಗಿ ಕೇಳುತ್ತಾಳೆ: [ಅಂದರೆ: “ನೀನೇ ನಿನ್ನ ಮಗನನ್ನು ಮದುವೆಯಾಗು ಎಂದು ಹೇಳುತ್ತಿದ್ದೀಯ. ಆದ್ದರಿಂದ ನಿನ್ನಿಂದ ಸಾಧ್ಯವಿಲ್ಲವೆಂದು  ನೀನು ಒಪ್ಪಿಕೊಂಡ ಹಾಗೆ. ಹಾಗಾಗಿ, ನೀನು ನನಗೆ ವರವನ್ನು ನೀಡಬೇಕು. (ನೀನಾಗಿದ್ದರೆ ನಾನು ಯಾವ ಷರತ್ತನ್ನೂ ಹಾಕುತ್ತಿರಲಿಲ್ಲಾ. ನಿನಗೆ ಸಾಧ್ಯವಾಗದ ಕಾರಣ ಷರತ್ತು ಹಾಕುತ್ತಿದ್ದೇನೆ) ಎನ್ನುವ ಭಾವ]. “ನಿನ್ನ ಮಗನು ನನ್ನನ್ನು ಕುರಿತು ‘ನೀನು ಯಾರು’ ಎಂದು ಕೇಳಬಾರದು. ನಾನು ಎಷ್ಟೇ ಕೆಟ್ಟ ಕೆಲಸ ಮಾಡಿದರೂ ಕೂಡಾ, ಆತ ನನ್ನನ್ನು ತಡೆಯಬಾರದು. ನನ್ನ ಕೆಲಸದ ಕಾರಣವನ್ನೂ ಕೂಡಾ ಆತ ಕೇಳಬಾರದು”.
“ಈ ಮೂರರಲ್ಲಿ ಯಾವುದೇ ಒಂದು ಮಾತನ್ನು ನಿನ್ನ ಮಗ ಮುರಿದರೆ, ಆಕ್ಷಣವೇ ನಾನು ಅವನನ್ನು ಬಿಟ್ಟು, ಹೊರಡುತ್ತೇನೆ”  ಎಂಬುದಾಗಿ ಗಂಗೆಯಿಂದ  ಹೇಳಲ್ಪಡುತ್ತಿರಲು, ಪ್ರತೀಪ ರಾಜನೂ ಕೂಡಾ, ‘ಹಾಗೆಯೇ ಆಗಲಿ’ ಎಂದು ತನ್ನ ಒಪ್ಪಿಗೆಯನ್ನು ಸೂಚಿಸುತ್ತಾನೆ.

ತಥೈವ ಪುತ್ರಾಯ ಚ ತೇನ ತದ್ ವಚೋ ವಧೂಕ್ತಮುಕ್ತಂ ವಚನಾದ್ ದ್ಯುನದ್ಯಾಃ    
ಕನೀಯಸೇ ಸಾ ಹ್ಯವದತ್ ಸುತಸ್ತೇ ನಾನ್ಯಃ ಪತಿಃ ಶನ್ತನುರೇವ ಮೇ ವೃತಃ      ೧೧.೩೬

ಈ ಎಲ್ಲಾ ಮಾತುಗಳು ‘ವಧುವಿನಿಂದ ಹೇಳಲ್ಪಟ್ಟಿತು’ ಎಂದು ತನ್ನ ಮೂರನೇ ಮಗ ಶನ್ತನುವಿಗೆ ಹೇಳಬೇಕು ಎಂದು ಗಂಗೆ  ಪ್ರತೀಪನಿಗೆ ಹೇಳುತ್ತಾಳೆ.
“ಕಿರಿಯ ಮಗನಾದ ಶನ್ತನುವಿಗೇ ಹೇಳಬೇಕು.  ಬೇರೆ ಯಾರೂ ಅಲ್ಲಾ”  ಎಂದೂ ಆಕೆ ಹೇಳುತ್ತಾಳೆ. (ಅಂದರೆ ಆಕೆಗೆ ಆಗಲೇ ಭವಿಷತ್ ಜ್ಞಾನವಿತ್ತು ಎಂದಾಯಿತು. ಇದರಿಂದ ಆಕೆ ದೊಡ್ಡ ಯೋಗ್ಯತೆಯುಳ್ಳ ಜೀವವಾಗಿರಬೇಕು ಮತ್ತು ಆಕೆ ಕಾಮಿನಿ ಅಲ್ಲಾ ಎನ್ನುವುದು ಪ್ರತೀಪನಿಗೆ ತಿಳಿದಂತಾಯಿತು).

ತತಸ್ತು ಸಾ ಶನ್ತನುತೋsಷ್ಟ ಪುತ್ರಾನವಾಪ್ಯ ಸಪ್ತ ನ್ಯಹನತ್ ತಥಾsಷ್ಟಮಮ್       
ಗನ್ತುಂ ತತೋ ಮತಿಮಾಧಾಯ ಹನ್ತುಮಿವೋದ್ಯೋಗಂ ಸಾ ಹಿ ಮೃಷಾ ಚಕಾರ        ॥೧೧.೩೭

ತದನಂತರ ಮುಂದೆ ಅವಳು ಶನ್ತನುವನ್ನು ಮದುವೆಯಾಗಿ, ಅವನಿಂದ ಎಂಟು ಮಕ್ಕಳನ್ನು ಹೊಂದಿ, ಅವರಲ್ಲಿ ಮೊದಲ ಏಳು ಮಕ್ಕಳನ್ನು ಕೊಲ್ಲುತ್ತಾಳೆ. ಎಂಟನೆಯವನನ್ನು ಕೊಲ್ಲಲು , ಉದ್ಯೋಗವೋ ಎಂಬಂತೆ ಬುದ್ಧಿಯನ್ನು ಹೊತ್ತು, ಸುಮ್ಮನೆ ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡುತ್ತಿರುವಂತೆ ತೋರಿಸುತ್ತಾಳೆ. 

ಅವಸ್ಥಿತಿರ್ನ್ನಾತಿಸುಖಾಯ ಮಾನುಷೇ ಯತಃ ಸುರಾಣಾಮತ ಏವ ಗನ್ತುಮ್    
ಐಚ್ಛನ್ನ ತಸ್ಯಾ ಹಿ ಬಭೂವ ಮಾನುಷೋ ದೇಹೋ ನರೋತ್ಥೋ ಹಿ ತದಾssಸ ಶನ್ತನೋಃ॥೧೧.೩೮

ಏಕೆ ಗಂಗೆ ಶನ್ತನುವಿನೊಂದಿಗಿರದೇ, ದೇವಲೋಕಕ್ಕೆ ಹಿಂತಿರುಗುವ ಸಿದ್ದತೆ ಮಾಡಿದಳು ಎನ್ನುವುದನ್ನು ಇಲ್ಲಿ ವಿವರಿಸಿದ್ದಾರೆ.   ಮನುಷ್ಯ ದೇಹದ ಸಂಪರ್ಕದಲ್ಲಿ ಇರುವಿಕೆಯು ದೇವತೆಗಳಿಗೆ ಸುಖಕರ ಅಲ್ಲ. ಆ ಕಾರಣದಿಂದಲೇ ಆಕೆ ಹೊರಡಲು ಬಯಸಿದಳು. ಅವಳ ದೇಹವು ಮನುಷ್ಯ ದೇಹ ಆಗಿರಲಿಲ್ಲಾ. ಆದರೆ ಶನ್ತನುವಿನ ದೇಹವು ಮನುಷ್ಯ ಯೋನಿಯಿಂದ ಹುಟ್ಟಿದ್ದಾಗಿತ್ತಷ್ಟೇ. ಹೀಗಾಗಿ ಅವನಿಗೆ ಪೂರ್ವಜನ್ಮದ ಸ್ಮರಣೆ ಇರಲಿಲ್ಲಾ. ಗಂಗೆಗೆ ಮಾತ್ರ ಎಲ್ಲಾ  ಸ್ಮರಣೆ ಇತ್ತು.  ಅತೀತಾನಗತಗಳ ಜ್ಞಾನವಿತ್ತು. ಲಕ್ಷಣಗಳ ಅಭಿವ್ಯಕ್ತಿ ಎಲ್ಲವೂ ಇತ್ತು. ಆದರೆ  ಶನ್ತನುವಿಗೆ ಅದ್ಯಾವುದೂ ಇರಲಿಲ್ಲಾ. ಹೀಗಾಗಿ ಆಕೆ ಶನ್ತನುವನ್ನು ಬಿಟ್ಟು ಹೋಗಲು ಇಚ್ಛಿಸಿದಳು.

ಪದ್ಯ ರೂಪ:  https://go-kula.blogspot.com/

No comments:

Post a Comment