ಕಾಲೇ ಚ ತಸ್ಮಿನ್ ಪೃಷತೋsನಪತ್ಯೋ ವನೇ ತು
ಪಾಞ್ಚಾಲಪತಿಶ್ಚಚಾರ ।
ತಪೋ ಮಹತ್ ತಸ್ಯ ತಥಾ ವರಾಪ್ಸರಾವಲೋಕನಾತ್ ಸ್ಕನ್ದಿತಮಾಶು
ರೇತಃ ॥೧೧.೬೭॥
ದ್ರೋಣಾಚಾರ್ಯರು ಹುಟ್ಟಿದ ಕಾಲದಲ್ಲೇ
ಮಕ್ಕಳಿಲ್ಲದ ‘ಪೃಶತ’ ಎನ್ನುವ ಪಾಂಚಾಲ ದೇಶದ
ರಾಜನು ಮಕ್ಕಳನ್ನು ಪಡೆಯಲು ಕಾಡಿನಲ್ಲಿ ಮಹತ್ತಾದ
ತಪಸ್ಸನ್ನು ಮಾಡಿದನು. ಆತ ಒಮ್ಮೆ ಊರ್ವಶಿಯನ್ನು
ನೋಡಿದ್ದರಿಂದ ಆತನ ರೇತಸ್ಸು ಜಾರಿಬಿತ್ತು.
ಸ ತದ್ ವಿಲಜ್ಜಾವಶತಃ ಪದೇನ
ಸಮಾಕ್ರಮತ್ ತಸ್ಯ ಬಭೂವ ಸೂನುಃ ।
ಹಹೂ ತು ನಾಮ್ನಾ ಸ
ವಿರಿಞ್ಚಗಾಯಕೋ ನಾಮ್ನಾssವಹೋ ಯೋ ಮರುತಾಂ ತದಂಶಯುಕ್॥೧೧.೬೮॥
ಪೃಶತ್ ರಾಜನು ವಿಶೇಷವಾದ
ನಾಚಿಕೆಯಿಂದ ಜಾರಿ ಬಿದ್ದ ರೇತಸ್ಸನ್ನು ತನ್ನ
ಪಾದದಿಂದ ಮುಚ್ಚಿದನು. ಆ ರೇತಸ್ಸಿನಿಂದ ಅವನಿಗೆ
‘ಹಹೂ’ ಎಂಬ ಹೆಸರಿನ, ಬ್ರಹ್ಮದೇವರ ಗಾಯಕನಾದ ಗಂಧರ್ವನು ಮಗನಾಗಿ ಹುಟ್ಟಿದನು. ಆತನು ‘ಆವಹ’ನೆನ್ನುವ
ಮರುತ್ ದೇವತೆಯ ಅಂಶವುಳ್ಳವನಾಗಿದ್ದನು. (ಆವಹನೆನ್ನುವ ಮರುತ್ ದೇವತೆಯ ಅಂಶವುಳ್ಳವನಾಗಿ ಹುಟ್ಟಿದನು)
ಸ ದ್ರೋಣತಾತಾತ್ ಸಮವಾಪ
ವೇದಾನಸ್ತ್ರಾಣಿ ವಿದ್ಯಾಶ್ಚ ತಥಾ ಸಮಸ್ತಾಃ ।
ದ್ರೋಣೇನ ಯುಕ್ತಃ ಸ ತದಾ
ಗುರೋಃ ಸುತಂ ಸಹೈವ ನೌ ರಾಜ್ಯಮಿತಿ ಹ್ಯವಾದೀತ್ ॥೧೧.೬೯॥
ಈ ರೀತಿ ಹುಟ್ಟಿದ ಪೃಶತ್
ರಾಜನ ಮಗನು ದ್ರೋಣಾಚಾರ್ಯರ ಅಪ್ಪನಾದ ಭರದ್ವಾಜನಿಂದ, ದ್ರೋಣರೊಂದಿಗೆ ಕೂಡಿ, ವೇದಗಳನ್ನೂ , ಅಸ್ತ್ರಗಳನ್ನೂ , ಸಮಸ್ತ ವಿದ್ಯೆಗಳನ್ನೂ
ಕೂಡಾ ಹೊಂದಿದನು. ವಿದ್ಯಾಭ್ಯಾಸ ಕಾಲದಲ್ಲಿ ಅವನು
ತನ್ನ ಗುರುಗಳ ಮಗನಾದ ದ್ರೋಣಾಚಾರ್ಯರಿಗೆ ‘ರಾಜ್ಯದ
ಭೋಗವೂ ನಮ್ಮಿಬ್ಬರಿಗೆ ಸಮನಾಗಿರಲಿ(ಒಟ್ಟಿಗೆ)’ ಎಂದು ಹೇಳಿದ್ದನಷ್ಟೇ. (ಅಂದರೆ: ನನ್ನ
ರಾಜ್ಯದಲ್ಲಿ ಅರ್ಧ ರಾಜ್ಯವು ನಿನಗೆ ಎನ್ನುವ ಮಾತನ್ನಾಡಿದ್ದನು).
ಪದೇ ದ್ರುತತ್ವಾದ್
ದ್ರುಪದಾಭಿಧೇಯಃ ಸ ರಾಜ್ಯಮಾಪಾಥ ನಿಜಾಂ ಕೃಪೀಂ ಸಃ ।
ದ್ರೋಣೋsಪಿ ಭಾರ್ಯ್ಯಾಂ ಸಮವಾಪ್ಯ
ಸರ್ವಪ್ರತಿಗ್ರಹೋಜ್ಝಶ್ಚ ಪುರೇsವಸತ್ ಸುಖೀ ॥೧೧.೭೦॥
ಕಾಲಿನಿಂದ ಮುಚ್ಚಿದ್ದರಿಂದ
ಪೃಶತ್ ರಾಜನ ಮಗನು ‘ದ್ರುಪದ’ ಎಂಬ ಹೆಸರುಳ್ಳವನಾದನು. ಆತನು ತಂದೆಯ ಕಾಲದ ನಂತರ ಪಾಂಚಾಲ ದೇಶದ ರಾಜನಾದನು.
ಇತ್ತ ದ್ರೋಣಾಚಾರ್ಯರು ತನ್ನವಳೇ ಆದ, ಕೃಪಾಚಾರ್ಯರ ತಂಗಿಯನ್ನು ಹೆಂಡತಿಯನ್ನಾಗಿ ಹೊಂದಿ, ಹಸ್ತಿನಾವತಿಯಲ್ಲಿ,
ಎಲ್ಲಾ ಪ್ರತಿಗ್ರಹಗಳಿಂದ ವಿರಹಿತರಾಗಿ (ಅಂದರೆ ಯಾವುದೇ
ದಾನ ಮೊದಲಾದುವುಗಳನ್ನು ತೆಗೆದುಕೊಳ್ಳದೇ), ಸುಖವಾಗಿ ವಾಸ ಮಾಡಿದರು.
ಸಿಲೋಞ್ಚವೃತ್ತ್ಯೈವ ಹಿ ವರ್ತ್ತಯನ್ ಸ ಧರ್ಮ್ಮಂ ಮಹಾನ್ತಂ
ವಿರಜಂ ಜುಷಾಣಃ ।
ಉವಾಸ ನಾಗಾಖ್ಯಪುರೇ ಸಖಾ ಸ ದೇವವ್ರತಸ್ಯಾಥ ಕೃಪಸ್ಯ ಚೈವ ॥೧೧.೭೧॥
ದ್ರೋಣಾಚಾರ್ಯರು ‘ಸಿಲೋಞ್ಚ’
ಎನ್ನುವ ಧರ್ಮವನ್ನು ಆಯ್ಕೆ ಮಾಡಿಕೊಂಡು, ಅದರಿಂದಲೇ ಜೀವನ ಸಾಗಿಸುತ್ತಾ, ರಜೋಗುಣದ ಸಂಪರ್ಕ
ಇಲ್ಲದ , ಪರಮಾತ್ಮನಿಗೆ ಪ್ರೀತಿಕರವಾದ
ಧರ್ಮವನ್ನು ಮಾಡುತ್ತಾ, ಹಸ್ತಿನಾವತಿಯಲ್ಲಿ ವಾಸಮಾಡಿದರು. ಅವರು ರಾಜಕುಮಾರನಾದ ದೇವವ್ರತನ ಮತ್ತು
ಕೃಪಾಚಾರ್ಯರ ಗೆಳೆಯನಾಗಿಯೂ ಇದ್ದರು.
ತೇಷಾಂ ಸಮಾನೋ ವಯಸಾ ವಿರಾಟಸ್ತ್ವಭೂದ್ಧಹಾ ನಾಮ ವಿಧಾತೃಗಾಯಕಃ
।
ಮರುತ್ಸು ಯೋ ವಿವಹೋ ನಾಮ ತಸ್ಯಾಪ್ಯಂಶೇನ ಯುಕ್ತೋ ನಿಜಧರ್ಮ್ಮವರ್ತ್ತೀ ॥೧೧.೭೨॥
ಅದೇ ರೀತಿ ಇವರೆಲ್ಲರಿಗೆ(ದೇವವ್ರತ,
ಕೃಪ, ದ್ರೋಣ ಮತ್ತು ದ್ರುಪದ ಇವರಿಗೆ) ವಯಸ್ಸಿನಿಂದ ಸಮಾನನಾದವನಾಗಿ ವಿರಾಟರಾಜನಿದ್ದನು. ಮೂಲರೂಪದಲ್ಲಿ
ಆತ ‘ಹಹಾ’ ಎನ್ನುವ ಹೆಸರಿನ ಬ್ರಹ್ಮದೇವರ ಹಾಡುಗಾರ(ಗಂಧರ್ವ). ವಿರಾಟನಲ್ಲಿ ‘ವಿವಹ’ ಎನ್ನುವ ಮರುತ್
ದೇವತೆಯ ಆವೇಶವಿತ್ತು (ಅಂಶದಿಂದ ಕೂಡಿದವನಾಗಿದ್ದ). ವಿರಾಟ ತನ್ನ ಧರ್ಮದಲ್ಲಿ ತೊಡಗಿದವನಾಗಿದ್ದನು. [ವಿರಾಟನ ಹುಟ್ಟಿನ
ಕುರಿತಾದ ವಿವರವನ್ನು ಈಗಾಗಲೇ ಹತ್ತನೇ ಅಧ್ಯಾಯದಲ್ಲಿ ನೋಡಿದ್ದೇವೆ].
ಪದ್ಯ ರೂಪ: https://go-kula.blogspot.com/
ಪದ್ಯ ರೂಪ: https://go-kula.blogspot.com/
No comments:
Post a Comment