ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 10, 2018

Mahabharata Tatparya Nirnaya Kannada 11.51-11.55


ಮೀಮಾಂಸಮಾನಂ ತಮವಾಪ ಗಙ್ಗಾ ಸುತಂ ಸಮಾದಾಯ ಪತಿಂ ಜಗಾದ ಚ ।
ಅಯಂ ಸುತಸ್ತೇ ಪರಮಾಸ್ತ್ರವೇತ್ತಾ ಸಮರ್ಪ್ಪಿತೋ ವೀರ್ಯ್ಯಬಲೋಪಪನ್ನಃ ॥೧೧.೫೧

‘ಇವನು ಯಾರಿರಬಹುದು’ ಎಂದು ಶನ್ತನು ವಿಚಾರ ನಡೆಸುತ್ತಿರುವ ಸಮಯದಲ್ಲೇ, ಗಂಗೆಯು ಮಗನನ್ನು ಕರೆದುಕೊಂಡು, ಶನ್ತನುವಿನ ಬಳಿ ಬಂದಳು. “ಇವನು ನಿನ್ನ ಮಗನು. ಅಸ್ತ್ರವೇತ್ತನಾದ ನಿನ್ನ ಸುತನೀತ. ವೀರ್ಯಬಲದಿಂದ ಕೂಡಿರುವ ಇವನು ನಿನಗೆ ಸಮರ್ಪಿತನಾಗುತ್ತಿದ್ದಾನೆ” ಎಂದು ಗಂಗೆ ದೇವವ್ರತನನ್ನು ಶನ್ತನುವಿಗೆ ಒಪ್ಪಿಸಿದಳು.

ಅಸ್ಯಾಗ್ರಜಾಃ ಸ್ವಾಂ ಸ್ಥಿತಿಮೇವ ಯಾತಾ ಹರೇಃ ಪದಾಮ್ಭೋಜಸುಪಾವಿತೇ ಜಲೇ ।
ತನೂರ್ಮ್ಮದೀಯೇ ಪ್ರಣಿಧಾಯ ತತ್ ತ್ವಂ ತಾನ್ ಮಾ ಶುಚೋsನೇನ ಚ ಮೋದಮಾನಃ ॥೧೧.೫೨

ಇತಿ ಪ್ರದಾಯಾಮುಮದೃಶ್ಯತಾಮಗಾದ್ ಗಙ್ಗಾ ತಮಾದಾಯ ಯಯೌ ಸ್ವಕಂ ಗೃಹಮ್ ।
ರಾಜಾsಭಿಷಿಚ್ಯಾಥ ಚ ಯೌವರಾಜ್ಯೇ ಮುಮೋದ ತತ್ಸದ್ಗುಣತರ್ಪ್ಪಿತೋ ಭೃಶಮ್ ॥೧೧.೫೩

“ಈ ದೇವವ್ರತನ ಅಣ್ಣಂದಿರು, ಪರಮಾತ್ಮನ ಪಾದಕಮಲದಿಂದ ಪವಿತ್ರವಾದ ನನ್ನ ನೀರಿನಲ್ಲಿ ತಮ್ಮ  ದೇಹವನ್ನು ಇಟ್ಟು, ಅವರ ಮೂಲ ಸ್ವರೂಪವನ್ನು ಪಡೆದರು. ಆದ್ದರಿಂದ ನೀನು ಇವನ ಅಣ್ಣಂದಿರರ ಬಗೆಗೆ ಸಂಕಟಪಡಬೇಡ. ಇವನಿಂದ ಸಂತಸಗೊಳ್ಳುವವನಾಗು” ಎಂದು ನುಡಿದ ಗಂಗೆ, ದೇವವ್ರತನನ್ನು ಶನ್ತನುವಿಗೆ ಒಪ್ಪಿಸಿ, ಅದೃಶ್ಯಳಾಗುತ್ತಾಳೆ. ಶನ್ತನು  ದೇವವ್ರತನನ್ನು ತನ್ನ ಅರಮನೆಗೆ ಕೊಂಡೊಯ್ದು, ಯುವರಾಜ ಪದವಿಯಲ್ಲಿ ಅಭಿಷೇಕ ಮಾಡಿ, ಅವನ ಒಳ್ಳೆಯ ಗುಣಗಳಿಂದ ಸಂತುಷ್ಟನಾಗಿ, ಬಹಳ ಸಂತೋಷಪಟ್ಟನು.

ಪುನಃ ಸ ಪಿತ್ರಾsನುಮತೋ ಬೃಹಸ್ಪತೇರವಾಪ ವೇದಾನ್ ಪುರುಷಾಯುಷೋsರ್ದ್ಧತಃ ।
ರಾಮಾತ್ ತಥಾsಸ್ತ್ರಾಣಿ ಪುನಸ್ತ್ವವಾಪ ತಾವದ್ಭಿರಬ್ದೈಸ್ತ್ರಿಶತೈಶ್ಚ ತತ್ತ್ವಮ್ ॥೧೧.೫೪

ಮತ್ತೆ, ದೇವವ್ರತನು ತಂದೆಯಿಂದ ಅನುಮತಿಯನ್ನು ಪಡೆದು, ಬೃಹಸ್ಪತ್ಯಾಚಾರ್ಯರಿಂದ ಐವತ್ತು ವರ್ಷಗಳ ಕಾಲ  ವೇದಾಭ್ಯಾಸ  ಮಾಡಿದನು. ಹಾಗೆಯೇ, ಮತ್ತೆ ಐವತ್ತು ವರ್ಷಗಳ ಕಾಲ ಪರಶುರಾಮನಲ್ಲಿ  ಅಸ್ತ್ರವಿದ್ಯೆಯನ್ನೂ,  ಮುನ್ನೂರು ವರ್ಷಗಳ ತನಕ ತತ್ತ್ವವಿದ್ಯೆಯನ್ನೂ ಪಡೆದನು.

ಸ ಸರ್ವವಿತ್ತ್ವಂ ಸಮವಾಪ್ಯ ರಾಮಾತ್ ಸಮಸ್ತವಿದ್ಯಾಧಿಪತೇರ್ಗ್ಗುಣಾರ್ಣ್ಣವಾತ್ ।
ಪಿತುಃ ಸಮೀಪಂ ಸಮವಾಪ್ಯ ತಂ ಚ ಶುಶ್ರೂಷಮಾಣಃ ಪ್ರಮುಮೋದ ವೀರಃ ॥೧೧.೫೫

ಹೀಗೆ ದೇವವ್ರತನು ಎಲ್ಲಾ ವಿದ್ಯೆಗಳ ಒಡೆಯನಾದನು. ಗುಣಗಳಿಗೆ ಕಡಲಿನಂತಿರುವ ಪರಶುರಾಮನಿಂದ ಸರ್ವಜ್ಞತೆಯನ್ನು ಹೊಂದಿ, ತಂದೆಯ ಬಳಿ ಬಂದು, ತಂದೆಯ ಸೇವೆ ಮಾಡುತ್ತಾ, ತಾನೂ ಸಂತಸಪಟ್ಟನು.

ಪದ್ಯ ರೂಪ:  https://go-kula.blogspot.com/

No comments:

Post a Comment