ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 3, 2018

Mahabharata Tatparya Nirnaya Kannada 11.25-11.29


ಅಧರ್ಮ್ಮವೃತ್ತಾಃ ಪ್ರತಿಯಾತ ಮಾನುಷೀಂ ಯೋನಿಂ ದ್ರುತಂ ಯತ್ಕೃತೇ ಸರ್ವ ಏವ   
ಧರ್ಮಾಚ್ಚ್ಯುತಾಃ ಸ ತಥಾsಷ್ಟಾಯುರಾಪ್ಯ ತಾಮನ್ಯೇ ಪುನಃ ಕ್ಷಿಪ್ರಮತೋ ವಿಮೋಕ್ಷ್ಯಥ       ॥೧೧.೨೫

ಪ್ರಚೋದಯಾಮಾಸ ಚ ಯಾ ಕುಮಾರ್ಗ್ಗೇ ಪತಿಂ ಹಿ ಸಾsಮ್ಬೇತಿ ನರೇಷು ಜಾತಾ     
ಅಭರ್ತ್ತೃಕಾ ಪುಂಸ್ತ್ವಸಮಾಶ್ರಯೇಣ ಪತ್ಯುರ್ಮ್ಮೃತೌ ಕಾರಣತ್ವಂ ವ್ರಜೇತ         ॥೧೧.೨೬

 “ಧೇನುವಿನ ಬಂಧನ ರೂಪವಾದ ಅಧರ್ಮ ಕರ್ಮದಲ್ಲಿ ತೊಡಗಿದ ನೀವು ಮನುಷ್ಯಯೋನಿಯನ್ನು ಸೇರಿರಿ.   ಯಾವ ದ್ಯುನಾಮಕ ವಸುವಿನ ಪ್ರೀತಿಗಾಗಿ ನೀವು ಧರ್ಮಭ್ರಷ್ಟರಾಗಿದ್ದೀರೋ, ಅಂತಹ ದ್ಯುವಸು  ಎಂಟು ಜನರ ಆಯುಷ್ಯವನ್ನು ಹೊಂದಲಿ. ಉಳಿದವರು ಕ್ಷಿಪ್ರವಾಗಿ ಮನುಷ್ಯ ಯೋನಿಯಿಂದ ಮುಕ್ತರಾಗುವಿರಿ.
ಯಾರು ತನ್ನ ಗಂಡನನ್ನು ಕೆಟ್ಟ ಮಾರ್ಗದಲ್ಲಿ ಪ್ರಚೋದಿಸಿದಳೋ(ದ್ಯುವಸುವಿನ ಪತ್ನಿ ವರಾಂಗೀ ) , ಅವಳು ಅಂಬಾ ಎನ್ನುವ ಹೆಸರಿನಿಂದ ಮನುಷ್ಯರಲ್ಲಿ ಹುಟ್ಟಿದವಳಾಗಿ, ಗಂಡನ ಸಂಯೋಗವನ್ನು ಹೊಂದದೇ, ಪುರುಷತ್ವದ ಆಶ್ರಯವನ್ನು ಹೊಂದಿ, ಗಂಡನ ಮರಣಕ್ಕೆ ಕಾರಣವಾಗಲಿ.

ಭವತ್ವಸೌ ಬ್ರಹ್ಮಚರ್ಯ್ಯೈಕನಿಷ್ಠೋ ಮಹಾನ್ ವಿರೋಧಶ್ಚ ತಯೋರ್ಭವೇತ ।
ಸ ಗರ್ಭವಾಸಾಷ್ಟಕದುಃಖಮೇವ ಸಮಾಪ್ನುತಾಂ ಶರತಲ್ಪೇ ಶಯಾನಃ    ॥೧೧.೨೭

ಮೃತ್ಯಷ್ಟಕೋತ್ಥಾಮಪಿ ವೇದನಾಂ ಸಃ ಪ್ರಾಪ್ನೋತು ಶಸ್ತ್ರೈರ್ಬಹುಧಾ ನಿಕೃತ್ತಃ ।
ಇತೀರಿತಾಸ್ತೇ ಕಮಲೋದ್ಭವಂ ತಂ ಜ್ಞಾತ್ವಾ ಸಮುತ್ಸೃಜ್ಯ ಚ ಗಾಂ ಪ್ರಣೇಮುಃ ॥೧೧.೨೮

ದ್ಯುವಸು  ಬ್ರಹ್ಮಚರ್ಯದಲ್ಲಿ ವಿಶೇಷವಾದ ನಿಷ್ಠೆಯುಳ್ಳವನಾಗಲಿ.  ಮನುಷ್ಯಯೋನಿಯಲ್ಲಿರುವ  ದ್ಯುವಸು ಮತ್ತು ವರಾಂಗೀ ನಡುವೆ  ಮಹಾ ವಿರೋಧವುಂಟಾಗಲಿ. ಈ ದ್ಯುವಸುವು ಶರಕಲ್ಪದಲ್ಲಿ ಮಲಗಿದ್ದವನಾಗಿ, ಎಂಟು ಹುಟ್ಟುಗಳ ವೇದನೆಯನ್ನು (ಎಂಟು ಗರ್ಭವಾಸದ ದುಃಖವನ್ನು ), ಎಂಟು ಜನರ ಮರಣಾದಿಗಳಿಂದುಂಟಾಗುವ ನೋವನ್ನು ಶಸ್ತ್ರಗಳಿಂದ ಅನೇಕ ಪ್ರಕಾರವಾಗಿ ಛೇದಿಸಲ್ಪಟ್ಟವನಾಗಿ ಹೊಂದಲಿ”.
ಈ ರೀತಿಯಾಗಿ ಶಾಪಗ್ರಸ್ಥರಾದ ಅಷ್ಟವಸುಗಳು,  ವಸಿಷ್ಠರ ಒಳಗೆ ಬ್ರಹ್ಮನಿದ್ದಾನೆ ಎನ್ನುವುದನ್ನು ಅರಿತು, ಕಟ್ಟಿದ್ದ ಧೇನುವನ್ನು ಬಿಟ್ಟು,  ಬ್ರಹ್ಮನಿಗೆ ನಮಸ್ಕರಿಸಿ ವಿಜ್ಞಾಪಿಸಿಕೊಳ್ಳುತ್ತಾರೆ.

ನ ಮಾನುಷೀಂ ಗರ್ಭಮವಾಪ್ನುಮೋ ವಯಂ ಭವತ್ವಯಂ ಸರ್ವವಿತ್ ಕೀರ್ತ್ತಿಮಾಂಶ್ಚ 
ಮಹಾಸ್ತ್ರವೇತ್ತಾ ಭವದಂಶಯುಕ್ತಸ್ತಥಾ ಬಲಂ ನೋsಖಿಲಾನಾಮುಪೈತು    ॥೧೧.೨೯

ನಾವು ಮಾನುಷ ಸ್ತ್ರೀಗರ್ಭವನ್ನು ಪ್ರವೇಶಿಸದಂತಾಗಲಿ. ಮನುಷ್ಯಯೋನಿಯಲ್ಲಿ ಇವನು(ದ್ಯುವಸು) ಎಲ್ಲವನ್ನೂ ಕೂಡಾ ಬಲ್ಲವನಾಗಿರಲಿ. ಈತ ಒಳ್ಳೆಯ ಕೀರ್ತಿವನ್ತನಾಗಿರಲಿ. ಅಸ್ತ್ರವೇತ್ತನಾಗಲಿ. ನಿಮ್ಮ(ಬ್ರಹ್ಮದೇವರ) ಅಂಶ ಇವನಲ್ಲಿರಲಿ. ನಮ್ಮೆಲ್ಲರ ಬಲವೂ ಇವನಿಗೇ ಸೇರಲಿ” ಎಂದು ವಸುಗಳು ವಸಿಷ್ಠರ ಅಂತರ್ಗತನಾಗಿದ್ದ ಬ್ರಹ್ಮನಲ್ಲಿ ಬೇಡಿಕೊಳ್ಳುತ್ತಾರೆ.
(ಭೀಷ್ಮಾಚಾರ್ಯರಲ್ಲಿ ಬ್ರಹ್ಮದೇವರ ಆವೇಶವಿದ್ದ ವಿಷಯ ಇಲ್ಲಿ ನಮಗೆ ತಿಳಿಯುತ್ತದೆ).  

No comments:

Post a Comment