ಇತೀರಿತೇsಸ್ತ್ವಿತ್ಯುದಿತಾಃ
ಸ್ವಯಮ್ಭುವಾ ವಸಿಷ್ಠಸಂಸ್ಥೇನ ಸುರಾಪಗಾಂ ಯಯುಃ ।
ಊಚುಸ್ತಥೈನಾಮುದರೇ ವಯಂ ತೇ ಜಾಯೇಮಹಿ ಕ್ಷಿಪ್ರಮಸ್ಮಾನ್ ಹನ
ತ್ವಮ್ ॥೧೧.೩೦॥
ಈ ರೀತಿಯಾಗಿ ಅವರೆಲ್ಲರೂ
ಬೇಡಿಕೊಳ್ಳಲು, ‘ಹಾಗೇ ಆಗಲಿ’ ಎಂದು ವಸಿಷ್ಠರ ಮುಖೇನ
ಹೇಳಲ್ಪಟ್ಟವರಾದ ಅಷ್ಟವಸುಗಳು, ‘ಗಂಗೆ’ಯ ಬಳಿ
ಬರುತ್ತಾರೆ. (ಬ್ರಹ್ಮದೇವರು ಪ್ರತ್ಯಕ್ಷವಾಗಲಿಲ್ಲ. ವಸಿಷ್ಠರ ಅಂತರ್ಗತರಾಗಿಯೇ ಎಲ್ಲವೂ ನಡೆಯುತ್ತದೆ).
“ನಾವು ನಿನ್ನ ಹೊಟ್ಟೆಯಲ್ಲಿ ಹುಟ್ಟುತ್ತೇವೆ. ನೀನು
ನಮ್ಮನ್ನು ಹುಟ್ಟಿದ ತಕ್ಷಣ ಸಾಯಿಸಿಬಿಡು” ಎಂದು ಶಾಪಗ್ರಸ್ಥರಾದ
ಅಷ್ಟವಸುಗಳು ಗಂಗೆಯಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ.
ಇತೀರಿತಾ ಸಾ ವರಮಾಶು ವವ್ರೇ ತೋಭ್ಯೋsಪ್ಯಪಾಪತ್ವಮಥ ಪ್ರಿಯತ್ವಮ್
।
ತೇಷಾಂ ಸದೈವಾsತ್ಮನ ಏಕಮೇಷಾಂ
ದೀರ್ಘಾಯುಷಂ ತಾನ್ ಸುಷುವೇsಥ ಶನ್ತನೋಃ ॥೧೧.೩೧॥
ಈರೀತಿಯಾಗಿ ಅಷ್ಟವಸುಗಳಿಂದ
ಹೇಳಲ್ಪಟ್ಟ ಆ ಗಂಗೆಯು, “ನನಗೆ ಈ ಕರ್ಮದಿಂದ ಪಾಪ(ಭ್ರೂಣಹತ್ಯಾ ಪಾಪ) ಬರಬಾರದು. ನಾನು ಕೊಂದರೂ ಕೂಡಾ, ಕೊಂದ ನಂತರವೂ ನನ್ನಲ್ಲಿ ಎಲ್ಲರಿಗೂ ಪ್ರೀತಿಯೇ ಇರತಕ್ಕದ್ದು. ನನ್ನಿಂದ ಹುಟ್ಟಿದ ಒಬ್ಬನಿಗೆ ದೀರ್ಘಾಯುಸ್ಸು ಇರಬೇಕು”
ಎನ್ನುವ ವರ ಬೇಕೆಂದು ಕೇಳುತ್ತಾಳೆ.
ಗಂಗೆಯ ಮಾತನ್ನು ಕೇಳಿ, “ಅದನ್ನೇ
ತಾವು ಪಡೆದಿರುವುದು ಕೂಡಾ” ಎಂದು ಹೇಳಿದ ಅಷ್ಟವಸುಗಳು, ಗಂಗೆಯ ಮಾತನ್ನು ಒಪ್ಪುತ್ತಾರೆ. ಮುಂದೆ
ಗಂಗಾದೇವಿಯು ಶನ್ತನುವೊಂದಿಗಿನ ದಾಂಪತ್ಯದಲ್ಲಿ ಎಂಟು ಮಕ್ಕಳನ್ನು, ಅವರಲ್ಲಿ ಚಿಕ್ಕವನು
ಧೀರ್ಘಾಯುಷ್ಯವುಳ್ಳವನಾಗಿ ಪಡೆಯುತ್ತಾಳೆ.
[ ಗಂಗೆ ಶನ್ತನುವನ್ನು
ಮದುವೆಯಾಗುವುದಕ್ಕೂ ಮೊದಲು ಆತನ ತಂದೆ ಪ್ರತೀಪನ ಬಳಿ ಹೋಗಿ, ಆತನ ಬಲ ತೊಡೆಯ ಮೇಲೆ ಕುಳಿತ
ಕಥೆಯನ್ನು ಮಹಾಭಾರತದಲ್ಲಿ ಕಾಣುತ್ತೇವೆ. ಇಲ್ಲಿ ಸರ್ವೇ ಸಾಮಾನ್ಯವಾಗಿ ನಮಗೆ ಪ್ರಶ್ನೆ
ಬರುತ್ತದೆ. ಗಂಗೆಗೆ ತನ್ನ ಪತಿ ವರುಣನೇ ಶನ್ತನುವಾಗಿ ಹುಟ್ಟಿ ಬರುವ ವಿಷಯ
ಗೊತ್ತಿರಲಿಲ್ಲವೆ? ಈ ಕುರಿತು ಆಚಾರ್ಯರು ಇಲ್ಲಿ
ವಿವರ ನೀಡಿದ್ದಾರೆ: ].
ಅವಿಘ್ನತಸ್ತಾನ್ ವಿನಿಹನ್ತುಮೇವ ಪುರಾ ಪ್ರತೀಪಸ್ಯ ಹಿ
ದಕ್ಷಿಣೋರುಮ್ ।
ಸಮಾಶ್ರಿತಾ ಕಾಮಿನೀವ ತ್ವಕಾಮಾ ತತ್ಪುತ್ರಭಾರ್ಯ್ಯಾ ಭವಿತುಂ
ವಿಡಮ್ಬಾತ್ ॥೧೧.೩೨॥
ಮುಂದೆ ಮಾನುಷಯೋನಿಯಲ್ಲಿ
ಹುಟ್ಟುವ ಅಷ್ಟವಸುಗಳನ್ನು ನಿರ್ವಿಘ್ನವಾಗಿ ಕೊಲ್ಲಲೋಸುಗವೇ, ಶನ್ತನು ಹುಟ್ಟುವುದಕ್ಕೂ ಮೊದಲು
ಗಂಗೆ ಪ್ರತೀಪರಾಜನ ಬಲ ತೊಡೆಯನ್ನು ಕಾಮಿಯೋ ಎಂಬಂತೆ ಆಶ್ರಯವನ್ನು ಹೊಂದುತ್ತಾಳೆ. ವಸ್ತುತಃ
ಅವಳಿಗೆ ಕಾಮನೆ ಇರಲಿಲ್ಲಾ. ಕಟ್ಟು ಕಟ್ಟಳೆ
ಮೊದಲಾದುವುಗಳನ್ನು ಹಾಕುವುದಕ್ಕಾಗಿ, ಮುಂದೆ ಅವನ ಸೊಸೆಯಾಗುವ ಉದ್ದೇಶದಿಂದ ಆಕೆ ಆ ರೀತಿ
ಮಾಡುತ್ತಾಳೆ.
ತೇನೈವ ಚೋಕ್ತಾ ಭವ ಮೇ ಸುತಸ್ಯ ಭಾರ್ಯ್ಯಾ ಯತೋ
ದಕ್ಷಿಣೋರುಸ್ಥಿತಾsಸಿ ।
ಭಾಗೋ ಹಿ ದಕ್ಷೋ ದುಹಿತುಃ ಸ್ನುಷಾಯಾ ಭಾರ್ಯ್ಯಾಭಾಗೋ ವಾಮ ಇತಿ
ಪ್ರಸಿದ್ಧಃ ॥೧೧.೩೩॥
ಪ್ರತೀಪನ ಬಲ ತೊಡೆಯ ಮೇಲೆ
ಕುಳಿತ ಗಂಗೆ ಆತನಿಂದ ಈರೀತಿ ಹೇಳಲ್ಪಡುತ್ತಾಳೆ: “ಯಾವ
ಕಾರಣದಿಂದ ನೀನು ನನ್ನ ಬಲ ತೊಡೆಯಲ್ಲಿ ಕುಳಿತವಳಾಗಿರುತ್ತೀಯೋ, ಅದರಿಂದ ನೀನು ನನ್ನ ಮಗನ ಹೆಂಡತಿಯಾಗು” ಎಂದು. ಯಾವಾಗಲೂ ಬಲ
ತೊಡೆ ಮಗಳಿಗೆ ಅಥವಾ ಸೊಸೆಗೆ. ಹೆಂಡತಿಯ ಭಾಗ ಎಡತೊಡೆ
ಎಂದು ಪ್ರಸಿದ್ಧ. [ಮನುಷ್ಯರಲ್ಲಿ ಬಲತೊಡೆಯಲ್ಲಿ ಕುಳಿತವಳು ಮಗಳು ಅಥವಾ ಸೊಸೆ ಎನ್ನುವುದು
ಪ್ರಸಿದ್ಧವು].
[ತಾತ್ಪರ್ಯ ಇಷ್ಟು: ಈಕೆ
ದೇವತಾ ಸ್ತ್ರೀ ಎನ್ನುವುದು ರಾಜನಿಗೆ ತಿಳಿಯಿತು. ಆದರೆ ಆತ ಮಾನುಷ ಕಟ್ಟಳೆಗೆ ಬದ್ಧನಾಗಿರಬೇಕು. ಆಕೆ ಬಲ ತೊಡೆಯಲ್ಲಿ ಕುಳಿತುಕೊಂಡರೂ,
ಆಕೆ ಇಷ್ಟ ಪಟ್ಟಲ್ಲಿ ಆಕೆಯನ್ನು ಆತ ಭೋಗಿಸಬಹುದಿತ್ತು. ಏಕೆಂದರೆ ಬಯಸುತ್ತಿರುವವಳು ದೇವತಾ
ಸ್ತ್ರೀ. ಅವಳಿಗಾಗಿ ಮಾನುಷ ಕಟ್ಟು-ಕಟ್ಟಳೆ ಮೀರಿದರೂ ದೋಷವಿಲ್ಲಾ. ಆದರೆ ರಾಜನಿಗೆ ಮನುಷ್ಯ ಕಟ್ಟು-ಕಟ್ಟಳೆ ಮೀರಲು
ಆಗುವುದಿಲ್ಲಾ. ಏಕೆಂದರೆ ರಾಜನನ್ನೇ ಪ್ರಜೆಗಳು ಅನುಸರಿಸುತ್ತಾರೆ. (ಆಕೆಯನ್ನು
ನಿರಾಕರಿಸುವುದರಿಂದ ‘ಪ್ರಾಮಾದಿಕವಾಗಿ ಆಕೆ ಬಂದು ಬಲ ತೊಡೆಯಲ್ಲಿ ಕುಳಿತರೂ ಕೂಡಾ, ಮಗಳು ಎನ್ನುವ
ದೃಷ್ಟಿಯಿಂದ ನಮ್ಮ ರಾಜ ನಿರಾಕರಣೆ ಮಾಡಿದ’ ಎಂದು ಜನ ರಾಜನನ್ನು ಅನುಸರಿಸುತ್ತಾರೆ). ಇದರಿಂದ ಸಾಮಾಜಿಕ
ಕಟ್ಟು-ಕಟ್ಟಳೆ ಮುಂದುವರಿಯುತ್ತದೆ. ಅಷ್ಟೇ ಅಲ್ಲಾ, ಅವಳಲ್ಲಿ ಕಾಮನೆ ಇರಲಿಲ್ಲ ಎನ್ನುವುದೂ ಪ್ರತೀಪನಿಗೆ
ತಿಳಿದಿತ್ತು].
ಪದ್ಯ ರೂಪ: https://go-kula.blogspot.com/
No comments:
Post a Comment