ತತಃ ಕದಾಚಿನ್ಮೃಗಯಾಂ ಗತಃ
ಸ ದದರ್ಶ ಕನ್ಯಾಪ್ರವರಾಂ ತು ಶನ್ತನುಃ ।
ಯಾ ಪೂರ್ವಸರ್ಗ್ಗೇ
ಪಿತೃಪುತ್ರಿಕಾ ಸತೀ ಚಚಾರ ವಿಷ್ಣೋಸ್ತಪ ಉತ್ತಮಂ ಚಿರಮ್ ॥೧೧.೭೩॥
ತದನಂತರ, ಒಮ್ಮೆ ಭೇಟೆಗೆ
ಹೊರಟ ಶಂತನುವು ಶ್ರೇಷ್ಠ ಕನ್ನಿಕೆಯೊಬ್ಬಳನ್ನು ಕಂಡನು. ಯಾರು ತನ್ನ ಹಿಂದಿನ ಜನ್ಮದಲ್ಲಿ
ಪಿತೃದೇವತೆಗಳ ಮಗಳಾಗಿ, ನಾರಾಯಣನ ಉತ್ಕೃಷ್ಟವಾದ ತಪಸ್ಸನ್ನು ಬಹಳ ಕಾಲದ ತನಕ ಮಾಡಿದ್ದಳೋ, ಅವಳೇ ಆ
ಸತ್ಯವತಿ ಎನ್ನುವ ಹೆಸರಿನ ಕನ್ಯೆ. [ಈಕೆಯ
ಹುಟ್ಟಿನ ಹಿನ್ನೆಲೆ ಮತ್ತು ಈಕೆಯಲ್ಲಿ ಭಗವಂತ ವ್ಯಾಸರೂಪದಲ್ಲಿ ಅವತರಿಸಿದ ಕಥೆಯನ್ನು ಈಗಾಗಲೇ
ಹತ್ತನೇ ಅಧ್ಯಾಯದಲ್ಲಿ ನೋಡಿದ್ದೇವೆ]
ಯಸ್ಯೈ ವರಂ ವಿಷ್ಣುರದಾತ್ ಪುರಾsಹಂ ಸುತಸ್ತವ ಸ್ಯಾಮಿತಿ ಯಾ ವಸೋಃ ಸುತಾ ।
ಜಾತಾ ಪುನರ್ದ್ದಾಶಗೃಹೇ ವಿವರ್ದ್ಧಿತಾ
ವ್ಯಾಸಾತ್ಮನಾ ವಿಷ್ಣುರಭೂಚ್ಚ ಯಸ್ಯಾಮ್ ॥೧೧.೭೪॥
ಯಾರಿಗೆ ನಾರಾಯಣನು 'ಮುಂದಿನ
ಜನ್ಮದಲ್ಲಿ ನಾನು ನಿನ್ನ ಮಗನಾಗಿ ಹುಟ್ಟುತ್ತೇನೆ’ ಎಂದು ವರವನ್ನು ನೀಡಿದ್ದನೋ, ಅವಳೇ ಉಪರಿಚರ
ವಸುವಿನ ಮಗಳಾಗಿ ಹುಟ್ಟಿ, ನಂತರ ಅಂಬಿಗನ(ದಾಶರಾಜನ) ಮನೆಯಲ್ಲಿ ಬೆಳೆದಳು. ಯಾರಲ್ಲಿ ನಾರಾಯಣನು
ವೇದವ್ಯಾಸನಾಗಿ ಹುಟ್ಟಿದನೋ ಆ ಸತ್ಯವತಿಯನ್ನು ಶನ್ತನು ಕಂಡನು.
ತದ್ದರ್ಶನಾನ್ನೃಪತಿರ್ಜ್ಜಾತಹೃಚ್ಛ್ರಯೋ
ವವ್ರೇ ಪ್ರದಾನಾಯ ಚ ದಾಶರಾಜಮ್ ।
ಋತೇ ಸ ತಸ್ಯಾಸ್ತನಯಸ್ಯ
ರಾಜ್ಯಂ ನೈಚ್ಛದ್ ದಾತುಂ ತಾಮಥಾsಯಾದ್ ಗೃಹಂ ಸ್ವಮ್ ॥೧೧.೭೫॥
ಅವಳನ್ನು ನೋಡಿದೊಡನೆಯೇ
ಶನ್ತನುವಿನ ಹೃದಯದಲ್ಲಿ ಸುಪ್ತವಾಗಿ ಮಲಗಿದ್ದ ಕಾಮ ಮೇಲೆದ್ದಿತು. ಆತ ಸತ್ಯವತಿಯ ಸಾಕುತಂದೆ ದಾಶರಾಜನಲ್ಲಿ
ಸತ್ಯವತಿಯನ್ನು ತನಗೆ ಕೊಡುವಂತೆ ಬೇಡುತ್ತಾನೆ. ಆದರೆ
ದಾಶರಾಜ ಮುಂದೆ ಸತ್ಯವತಿಯ ಮಗನಿಗೆ ಸಾಮ್ರಾಜ್ಯ ಸಿಗದ
ಹೊರತು ಅವಳನ್ನು ಶನ್ತನುವಿಗೆ ಕೊಡಲು ಬಯಸುವುದಿಲ್ಲಾ. ದಾಶರಾಜನ ನಿರಾಕರಣೆಯ ನಂತರ ಶನ್ತನು ತನ್ನ ಮನೆಯನ್ನು ಕುರಿತು ತೆರಳುತ್ತಾನೆ.
ತಚ್ಚಿನ್ತಯಾ ಗ್ಲಾನಮುಖಂ ಜನಿತ್ರಂ ದೃಷ್ಟ್ವೈವ ದೇವವ್ರತ ಆಶ್ವಪೃಚ್ಛತ್ ।
ತತ್ಕಾರಣಂ ಸಾರಥಿಮಸ್ಯ ತಸ್ಮಾಚ್ಛ್ರುತ್ವಾsಖಿಲಂ ದಾಶಗೃಹಂ ಜಗಾಮ ॥೧೧.೭೬॥
ಸತ್ಯವತಿಯನ್ನು
ನೋಡಿದಂದಿನಿಂದ, ಅವಳದೇ ಬಗೆಗಿನ ಚಿಂತೆಯಿಂದ ಬಾಡಿದ ಮುಖವುಳ್ಳ ತಂದೆಯನ್ನು ನೋಡಿದ ದೇವವ್ರತನು,
ಕೂಡಲೇ ಆ ಕುರಿತು ತಂದೆಯನ್ನು ಕೇಳುತ್ತಾನೆ. ಆದರೆ ಅವನಿಗೆ ಶನ್ತನುವಿನಿಂದ ಸರಿಯಾದ ಉತ್ತರ ಸಿಗುವುದಿಲ್ಲಾ.
ಆಗ ಅವನು ಶನ್ತನುವಿನ ಸಾರಥಿಯನ್ನು ಆ ಕುರಿತು ಕೇಳಿ, ಅವನಿಂದ ಎಲ್ಲವನ್ನೂ ತಿಳಿದುಕೊಂಡು, ಅಂಬಿಗನ(ದಾಶರಾಜನ)
ಮನೆಯನ್ನು ಕುರಿತು ತೆರಳುತ್ತಾನೆ.
ಸ ತಸ್ಯ ವಿಶ್ವಾಸಕೃತೇ ಪ್ರತಿಜ್ಞಾಂ ಚಕಾರ ನಾಹಂ ಕರವಾಣಿ
ರಾಜ್ಯಮ್ ।
ತಥೈವ ಮೇ ಸನ್ತತಿತೋ ಭಯಂ ತೇ ವ್ಯೈತೂರ್ಧ್ವರೇತಾಃ ಸತತಂ ಭವಾನಿ
॥೧೧.೭೭॥
ದೇವವ್ರತನು ಅಂಬಿಗನಿಗೆ
ವಿಶ್ವಾಸ ಹುಟ್ಟಿಸುವುದಕ್ಕಾಗಿ ಪ್ರತಿಜ್ಞೆ ಮಾಡುತ್ತಾನೆ. “ನಾನು ರಾಜ್ಯವನ್ನು ಹೊಂದುವುದಿಲ್ಲ.
ಹಾಗೆಯೇ, ನನ್ನ ಸಂತತಿಯಿಂದ ನಿನಗೆ ಭಯವೂ ಇಲ್ಲಾ. ನಿನ್ನ ಆ ಭಯವು ನಾಶವಾಗಲಿ. ಏಕೆಂದರೆ: ನಾನು ನಿರಂತರವಾಗಿ
ಊರ್ಧ್ವ ರೇತಸ್ಕನಾಗುತ್ತೇನೆ”.
ಭೀಮವ್ರತತ್ವಾದ್ಧಿ ತದಾsಸ್ಯ ನಾಮ ಕೃತ್ವಾ ದೇವಾ
ಭೀಷ್ಮ ಇತಿ ಹ್ಯಚೀಕ್ಲ್ಪನ್ ।
ಪ್ರಸೂನವೃಷ್ಟಿಂ ಸ ಚ
ದಾಶದತ್ತಾಂ ಕಾಳೀಂ ಸಮಾದಾಯ ಪಿತುಃ ಸಮರ್ಪ್ಪಯತ್ ॥೧೧.೭೮॥
ದೇವವ್ರತನು ಇಂತಹ ಭಯಂಕರವಾದ ವ್ರತವುಳ್ಳವನಾದ ಪ್ರಯುಕ್ತ ದೇವತೆಗಳು ಅವನಿಗೆ
‘ಭೀಷ್ಮ’ ಎಂಬ ಹೆಸರನ್ನಿಟ್ಟು ಹೂವಿನ ಮಳೆಗರೆದರು. ಅವನಾದರೋ(ದೇವವ್ರತನು), ಅಂಬಿಗ ಕೊಟ್ಟ ಕಾಳೀ
ನಾಮಕ ವಸುಕನ್ಯೆಯನ್ನು ಕೊಂಡೊಯ್ದು ತಂದೆಗೆ ಅರ್ಪಿಸಿದನು.
ಜ್ಞಾತ್ವಾ ತು ತಾಂ
ರಾಜಪುತ್ರೀಂ ಗುಣಾಢ್ಯಾಂ ಸತ್ಯಸ್ಯ ವಿಷ್ಣೋರ್ಮ್ಮಾತರಂ ನಾಮತಸ್ತತ್ ।
ಲೋಕೇ ಪ್ರಸಿದ್ಧಾಂ
ಸತ್ಯವತೀತ್ಯುದಾರಾಂ ವಿವಾಹಯಾಮಾಸ ಪಿತುಃ ಸ ಭೀಷ್ಮಃ ॥೧೧.೭೯॥
ದಾಶರಾಜನಿಂದ ಕೊಡಲ್ಪಟ್ಟ
ಕಾಳೀಯನ್ನು ರಾಜಪುತ್ರಿಯೆಂದೂ (ಅಂಬಿಗನ ಮನೆಯಲ್ಲಿ ಬೆಳೆದವಳು ಆದರೆ ಮೂಲತಃ ವಸುರಾಜನ ಮಗಳು ಎಂದು
ತಿಳಿದು) ಮತ್ತು ಸತ್ಯನಾಮಕನಾದ ನಾರಾಯಣನ ತಾಯಿಯಾಗಿರುವುದರಿಂದ(ವ್ಯಾಸ ಮುನಿಯ ತಾಯಿಯಾಗಿರುವುದರಿಂದ)
ಆಕೆ ಸತ್ಯವತೀ ಎಂದು ಲೋಕದಲ್ಲಿ ಪ್ರಸಿದ್ಧಳಾಗಿದ್ದಾಳೆ ಎಂದು ತಿಳಿದೇ, ಗುಣದಿಂದ ತುಂಬಿದ ಅವಳನ್ನು ಭೀಷ್ಮಾಚಾರ್ಯರು ತನ್ನ ತಂದೆಗೆ
ಮದುವೆ ಮಾಡಿಕೊಟ್ಟರು.
ಪ್ರಾಯಃ ಸತಾಂ ನ ಮನಃ ಪಾಪಮಾರ್ಗ್ಗೇ ಗಚ್ಛೇದಿತಿ
ಹ್ಯಾತ್ಮಮನಶ್ಚ ಸಕ್ತಮ್ ।
ಜ್ಞಾತ್ವಾsಪಿ ತಾಂ ದಾಶಗೃಹೇ ವಿವರ್ದ್ಧಿತಾಂ ಜಗ್ರಾಹ
ಸದ್ಧರ್ಮರತಶ್ಚ ಶನ್ತನುಃ ॥೧೧.೮೦॥
“ಸಾಮಾನ್ಯವಾಗಿ ಸಜ್ಜನರ
ಮನಸ್ಸು ಪಾಪದ ದಾರಿಯಲ್ಲಿ ಹೋಗುವುದಿಲ್ಲಾ. ನನ್ನ ಮನಸ್ಸು ಇವಳಲ್ಲಿ ಆಸಕ್ತವಾಗಿದೆ. ಅದರಿಂದಾಗಿ
ಇದು ಅಧರ್ಮವಿರಲು ಸಾಧ್ಯವಿಲ್ಲಾ” ಎಂದು ತಿಳಿದ
ಧರ್ಮರಥನಾಗಿರುವ ಶನ್ತನುವು, ಕಾಳೀ ಅಂಬಿಗರ ಮನೆಯಲ್ಲಿ ಬೆಳೆದಿದ್ದಾಳೆ ಎಂದು ತಿಳಿದೂ ಕೂಡಾ ಅವಳನ್ನು ಸ್ವೀಕರಿಸಿದನು. [ಸತ್ಯವತಿ ಅಂಬಿಗರ ಮನೆಯಲ್ಲಿ
ಬೆಳೆದಿದ್ದರೂ ಕೂಡಾ, ಚಕ್ರವರ್ತಿಯಾದ ತನ್ನ ಪತ್ನಿಯಾಗಲು ಆಕೆ ಯೋಗ್ಯಳು ಎನ್ನುವುದನ್ನು ಶನ್ತನು
ತನ್ನ ಹೃದಯದಿಂದ ಅರಿತಿದ್ದ. ಹಾಗಾಗಿ ಆಕೆಯನ್ನು ಬಯಸಿದ ಮತ್ತು ಸ್ವೀಕರಿಸಿದ].
No comments:
Post a Comment