ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 10, 2018

Mahabharata Tatparya Nirnaya Kannada 11.39-11.45


ತಾಂ ಪುತ್ರನಿಧನೋದ್ಯುಕ್ತಾಂ ನ್ಯವಾರಯತ್ ಶನ್ತನುಃ ।
ಕಾsಸಿ ತ್ವಂ ಹೇತುನಾ ಕೇನ ಹನ್ಸಿ ಪುತ್ರಾನ್ ನೃಶಂಸವತ್  ॥೧೧.೩೯

ರೂಪಂ ಸುರವರಸ್ತ್ರೀಣಾಂ ತವ ತೇನ ನ ಪಾಪಕಮ್       
ಭವೇತ್ ಕರ್ಮ್ಮ  ತ್ವದೀಯಂ ತನ್ಮಹತ್ ಕಾರಣಮತ್ರ ಹಿ         ೧೧.೪೦

ತತ್ ಕಾರಣಂ ವದ ಶುಭೇ ಯದಿ ಮಚ್ಛ್ರೋತ್ರಮರ್ಹತಿ ।
ಇತೀರಿತಾsವದತ್ ಸರ್ವಂ ಪ್ರಯಯೌ ಚ ಸುರಾಪಗಾ  ॥೧೧.೪೧

ಏಳು ಜನ ಪುತ್ರರನ್ನು ಕಳೆದುಕೊಂಡ ಶನ್ತನು, ತನ್ನ ಎಂಟನೇ ಪುತ್ರನನ್ನು ಕೊಲ್ಲಲು ಉದ್ಯುಕ್ತಳಾದ ಪತ್ನಿ ಗಂಗೆಯನ್ನು ತಡೆದು ಕೇಳುತ್ತಾನೆ:  “ನೀನು ಯಾರು? ಏತಕ್ಕಾಗಿ ಹೀಗೆ  ಕಟುಕರಂತೆ ಮಕ್ಕಳನ್ನು ಕೊಲ್ಲುತ್ತಿದ್ದೀಯ? ನೋಡಿದರೆ ದೇವತಾ ಸ್ತ್ರೀ ರೂಪವನ್ನು ಹೊಂದಿರುವೆ. ಆ ಕಾರಣದಿಂದ ನಿನ್ನ ಕೆಲಸ ಪಾಪಿಷ್ಠವಾಗಿರಲಾರದು. ಇದರ ಹಿಂದೆ ಇನ್ನೇನೋ ಒಳ್ಳೆಯ ಕಾರಣ ಇರಲೇಬೇಕು. ಮಂಗಳೆಯೇ, ಒಂದು ವೇಳೆ  ನನ್ನ ಕಿವಿ ಅದನ್ನು ಕೇಳಲು ಯೋಗ್ಯವಾಗಿದ್ದರೆ, ಆ ಕಾರಣವನ್ನು ಹೇಳು” ಎಂದು. ಈ ರೀತಿಯಾಗಿ ಶನ್ತನು ಕೇಳಿದಾಗ, ಗಂಗೆ ವಸುಕೃತವಾದ ಎಲ್ಲವನ್ನೂ ವಿವರಿಸುತ್ತಾಳೆ ಮತ್ತು ತಕ್ಷಣ ಅಲ್ಲಿಂದ ದೇವಲೋಕಕ್ಕೆ ತೆರಳುತ್ತಾಳೆ  ಕೂಡಾ.

ನ ಧರ್ಮ್ಮೋ ದೇವತಾನಾಂ ಹಿ ಜ್ಞಾತವಾಸಶ್ಚಿರಂ ನೃಷು ।
ಕಾರಣಾದೇವ ಹಿ ಸುರಾ ನೃಷು ವಾಸಂ ಪ್ರಕುರ್ವತೇ  ೧೧.೪೨

ಕಾರಣಾಪಗಮೇ ಯಾನ್ತಿ ಧರ್ಮ್ಮೋsಪ್ಯೇಷಾಂ ತಥಾವಿಧಃ
ಅದೃಶ್ಯತ್ವಮಸಂಸ್ಪರ್ಶೋ ಹ್ಯಸಮ್ಭಾಷಣಮೇವ ಚ             ೧೧.೪೩

ಸುರೈರಪಿ ನೃಜಾತೈಸ್ತು ಗುಹ್ಯಧರ್ಮ್ಮೋ ದಿವೌಕಸಾಮ್
ಅತಃ ಸಾ ವರುಣಂ ದೇವಂ ಪೂರ್ವಭರ್ತ್ತಾರಮಪ್ಯಮುಮ್        ೧೧.೪೪

ನೃಜಾತಂ ಶನ್ತನುಂ ತ್ಯಕ್ತ್ವಾ ಪ್ರಯಯೌ ವರುಣಾಲಯಮ್
ಸುತಮಷ್ಟಮಮಾದಾಯ ಭರ್ತ್ತುರೇವಾಪ್ಯನುಜ್ಞಯಾ ।
ವಧೋದ್ಯೋಗಾನ್ನಿವೃತ್ತಾ ಸಾ ದದೌ ಪುತ್ರಂ ಬೃಹಸ್ಪತೌ        ೧೧.೪೫

ಏಕೆ ಗಂಗೆ ತನ್ನ ಪತಿಯನ್ನು ಬಿಟ್ಟು ತೆರಳಿದಳು ಎನ್ನುವುದನ್ನು ಆಚಾರ್ಯರು ಇಲ್ಲಿ ವಿವರಿಸಿದ್ದಾರೆ: ದೇವತೆಗಳಿಗೆ ಮನುಷ್ಯರಲ್ಲಿ ಪ್ರತ್ಯಕ್ಷವಾಗಿ ತನ್ನ ಸ್ವರೂಪವು ತಿಳಿಯಲ್ಪಟ್ಟ ಮೇಲೆ ಬಹುಕಾಲ  ವಾಸಮಾಡುವುದು ಧರ್ಮವಲ್ಲ. ಅವರು ಯಾವುದೋ ಒಂದು ವಿಶಿಷ್ಟ ಕಾರಣದಿಂದಲೇ ಮನುಷ್ಯರಲ್ಲಿ ವಾಸ ಮಾಡುತ್ತಾರೆ. ದೇವತೆಗಳು ಯಾವ ಕಾರಣಕ್ಕೆ ಬರುತ್ತಾರೋ, ಅದು ಈಡೇರಿದ ಮೇಲೆ ಅವರು ಹಿಂತಿರುಗುತ್ತಾರೆ. ಇದು ದೇವತೆಗಳಿಗೆ ಧರ್ಮವೂ ಕೂಡಾ ಹೌದು. ಕಾಣದಿರುವಿಕೆ, ಮುಟ್ಟದಿರುವಿಕೆ, ಮಾತನಾಡದಿರುವಿಕೆ, ಇತ್ಯಾದಿಗಳು ಮನುಷ್ಯರಾಗಿ ಬಂದ ದೇವತೆಗಳಿಗೆ ಧರ್ಮವಾಗಿರುತ್ತದೆ. ಇದು ದೇವತೆಗಳ  ಗುಹ್ಯಧರ್ಮ. ಆ ಕಾರಣದಿಂದ ಗಂಗೆ  ಮನುಷ್ಯ ಯೋನಿಯಲ್ಲಿ ಬಂದಿರುವ ತನ್ನ ಗಂಡ ವರುಣನನ್ನು(ಶನ್ತನುವನ್ನು) ಬಿಟ್ಟು, ವರುಣಲೋಕಕ್ಕೆ ತೆರಳುತ್ತಾಳೆ. ಈ ರೀತಿ ತೆರಳುವಾಗ, ಕೊಲ್ಲುವ ಉದ್ಯೋಗದಿಂದ ನಿವೃತ್ತಳಾದ  ಗಂಗೆ,  ಗಂಡನಾದ ಶನ್ತನುವಿನ ಅನುಜ್ಞೆಯಿಂದ, ತನ್ನ ಎಂಟನೆಯ ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ, ಬೃಹಸ್ಪತಿಯ ಅಧೀನಕ್ಕೆ ಒಪ್ಪಿಸುತ್ತಾಳೆ.

ಪದ್ಯ ರೂಪ:  https://go-kula.blogspot.com/

No comments:

Post a Comment