ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, June 4, 2018

Mahabharata Tatparya Nirnaya Kannada 7.36-7.41


ಅಥ ಪ್ರಗೃಹ್ಯ ತಂ ಕಪಿಂ ಸಮೀಪಮಾನಯಂಶ್ಚ ತೇ ।
ನಿಶಾಚರೇಶ್ವರಸ್ಯ ತಂ ಸ ಪೃಷ್ಟವಾಂಶ್ಚ ರಾವಣಃ ॥೭.೩೬॥

ಕಪೇ ಕುತೋsಸಿ ಕಸ್ಯ ವಾ ಕಿಮರ್ತ್ಥಮೀದೃಶಂ ಕೃತಮ್ ।
ಇತೀರಿತಃ ಸ ಚಾವದತ್ ಪ್ರಣಮ್ಯ ರಾಮಮೀಶ್ವರಮ್ ॥೭.೩೭॥

ತದನಂತರ ಆ ದೈತ್ಯ ಪಡೆ ಮಹಾಕಪಿಯನ್ನು ಹಿಡಿದುಕೊಂಡು ರಾವಣನ ಸಮೀಪಕ್ಕೆ ಬರುತ್ತಾರೆ. ತನ್ನ ಮುಂದೆ ನಿಂತಿರುವ ಹನುಮಂತನನ್ನು ಕುರಿತು ರಾವಣ ಹೀಗೆ ಕೇಳುತ್ತಾನೆ:
“ಎಲೈ ಕಪಿಯೇ, ಎಲ್ಲಿಂದ ಬಂದಿರುವೆ ?  ನೀನು ಯಾರ ದಾಸನಾಗಿದ್ದೀಯ? ಏಕಾಗಿ ಈರೀತಿ ಮಾಡಿರುವೆ” ಎಂದು. ಈ ರೀತಿಯಾಗಿ ಕೇಳಲ್ಪಟ್ಟ  ಹನುಮಂತನು  ರಾಮಚಂದ್ರನಿಗೆ ನಮಸ್ಕರಿಸಿ ಉತ್ತರಿಸುತ್ತಾನೆ:

ಅವೈಹಿ ದೂತಮಾಗತಂ ದುರನ್ತವಿಕ್ರಮಸ್ಯ ಮಾಮ್ ।
ರಘೂತ್ತಮಸ್ಯ ಮಾರುತಿಂ ಕುಲಕ್ಷಯೇ ತವೇಶ್ವರಮ್ ॥೭.೩೮॥

“ಅತ್ಯಂತ ಪರಾಕ್ರಮಿಯಾದ ರಘೂತ್ತಮನ ಧೂತನಾಗಿರುವ ಹನುಮಂತನು ನಾನು. ನಿನ್ನ ಕುಲವನ್ನೇ ನಾಶ ಮಾಡುವುದರಲ್ಲಿ ಸಮರ್ಥನಾದ ರಾಮಧೂತ ಮಾರುತಿ ನಾನು ಎನ್ನುವುದನ್ನು ತಿಳಿ” ಎನ್ನುತ್ತಾನೆ ಹನುಮಂತ.

ನ ಚೇತ್ ಪ್ರದಾಸ್ಯಸಿ ತ್ವರನ್ ರಘೂತ್ತಮಪ್ರಿಯಾಂ ತದಾ ।
ಸಪುತ್ರಮಿತ್ರಬಾನ್ಧವೋ ವಿನಾಶಮಾಶು ಯಾಸ್ಯಸಿ ॥೭.೩೯॥

“ನೀನು ತಕ್ಷಣ ರಾಮನ ಪತ್ನಿಯಾದ ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸದೇ ಇದ್ದಲ್ಲಿ, ಆಗ  ನಿನ್ನ  ಮಕ್ಕಳು, ಮಿತ್ರರು, ಬಂಧುಗಳಿಂದ ಕೂಡಿದವನಾಗಿ, ನೀನು ವಿನಾಶವನ್ನು ಹೊಂದುತ್ತೀಯ” ಎಂದು ರಾವಣನನ್ನು ಹನುಮಂತ ಎಚ್ಚರಿಸುತ್ತಾನೆ.

ನ ರಾಮಬಾಣಧಾರಣೇ ಕ್ಷಮಾಃ ಸುರೇಶ್ವರಾ ಅಪಿ ।
ವಿರಿಞ್ಚಶರ್ವಪೂರ್ವಕಾಃ ಕಿಮು ತ್ವಮಲ್ಪಸಾರಕಃ ॥೭.೪೦॥

ಪ್ರಕೋಪಿತಸ್ಯ ತಸ್ಯ ಕಃ ಪುರಃಸ್ಥಿತೌ ಕ್ಷಮೋ ಭವೇತ್ ।
ಸುರಾಸುರೋರಗಾದಿಕೇ ಜಗತ್ಯಚಿನ್ತ್ಯಕರ್ಮಣಃ ॥೭.೪೧॥

ರಾಮನ ಬಾಣವನ್ನು ತಡೆಯುವ ಶಕ್ತಿ ದೇವತೆಗಳಿಗೂ ಇಲ್ಲಾ. ಬ್ರಹ್ಮ-ರುದ್ರ ಮೊದಲಾದವರಿಗೂ ಆ ಸಾಮರ್ಥ್ಯವಿಲ್ಲ. ಹಾಗಿರುವಾಗ ಇನ್ನು ಅತ್ಯಂತ ಕಡಿಮೆ ಬಲವುಳ್ಳ ನೀನು ಎಲ್ಲಿಂದ ತಡೆದೀಯೇ?
ಮುನಿದ ರಾಮನ ಮುಂದೆ ನಿಲ್ಲಲು ದೇವತೆಗಳು, ಅಸುರರು, ಸರ್ಪಗಳು, ಇತರ ಜಗತ್ತಿನಲ್ಲಿರುವ ಯಾರೂ ಕೂಡಾ ಸಮರ್ಥರಲ್ಲ ಎನ್ನುವ ಸತ್ಯವನ್ನು ರಾವಣನಿಗೆ ಹನುಮಂತ ತಿಳಿಸುತ್ತಾನೆ. 

Sunday, June 3, 2018

Mahabharata Tatparya Nirnaya Kannada 7.30-7.35


ವಿಚೂರ್ಣ್ಣಿತೇ ಧರಾತಳೇ ನಿಜೇ ಸುತೇ ಸ ರಾವಣಃ ।
ನಿಶಮ್ಯ ಶೋಕತಾಪಿತಸ್ತದಗ್ರಜಂ ಸಮಾದಿಶತ್ ॥೭.೩೦॥

ತನ್ನ ಮಗನಾದ ಅಕ್ಷಕುಮಾರನು ಭೂಮಿಯಲ್ಲಿ ಪುಡಿಪುಡಿಯಾಗಿ ಬಿದ್ದನೆಂದು ಕೇಳಿ ತಿಳಿದ ರಾವಣನು ಶೋಕದಿಂದ ಕಂಗೆಟ್ಟು, ಇಂದ್ರಜಿತುವನ್ನು ಹನುಮಂತನ ನಿಗ್ರಹಕ್ಕೆ ಕಳುಹಿಸುತ್ತಾನೆ.

ಅಥೇನ್ದ್ರಜಿನ್ಮಹಾಶರೈರ್ವರಾಸ್ತ್ರಸಮ್ಪ್ರಯೋಜಿತೈಃ ।
ತತಕ್ಷ ವಾನರೋತ್ತಮಂ ನಚಾಶಕದ್ ವಿಚಾಲನೇ ॥೭.೩೧॥

ತದನಂತರ ಇಂದ್ರಜಿತುವು ಉತ್ತಮವಾದ ಅಸ್ತ್ರಗಳಿಂದ, ಅಭಿಮಂತ್ರಿತವಾದ ಬಾಣಗಳಿಂದ ಹನುಮಂತನನ್ನು  ಪೀಡಿಸಲು ಪ್ರಯತ್ನಿಸಿದನು. ಆದರೆ ಹನುಮಂತನನ್ನು ಅಲುಗಾಡಿಸಲೂ ಆತ ಸಮರ್ಥನಾಗಲಿಲ್ಲ.

ಅಥಾಸ್ತ್ರಮುತ್ತಮಂ ವಿಧೇರ್ಯ್ಯುಯೋಜ  ಸರ್ವದುಷ್ಷಹಮ್[1]
ಸ ತೇನ ತಾಡಿತೋ ಹರಿರ್ವ್ಯಚಿನ್ತಯನ್ನಿರಾಕುಲಃ ॥೭.೩೨॥

ಕೊನೆಗೆ ಇಂದ್ರಜಿತುವು ಯಾರಿಗೂ ಎದುರಿಸಲು ಅಸಾಧ್ಯವಾಗಿರುವ, ಬ್ರಹ್ಮದೇವರ ಉತ್ಕೃಷ್ಟವಾದ ಅಸ್ತ್ರವನ್ನು ಹೂಡಿದನು. ಬ್ರಹ್ಮಾಸ್ತ್ರದಿಂದ ಹೊಡೆಯಲ್ಪಟ್ಟವನಾದ ಹನುಮಂತನು, ಯಾವುದೇ ಚಿಂತೆ ಇಲ್ಲದೆ, ಮುಂದೆ  ಏನು ಮಾಡಬೇಕು ಎಂಬುದನ್ನು ಆಲೋಚಿಸಿದನು.

ಮಯಾ ವರಾ ವಿಲಙ್ಘಿತಾ ಹ್ಯನೇಕಶಃ ಸ್ವಯಮ್ಭುವಃ ।
ಸ ಮಾನನೀಯ ಏವ ಮೇ ತತೋsತ್ರ ಮಾನಯಾಮ್ಯಹಮ್ ॥೩೩॥

“ನನ್ನಿಂದ ಬ್ರಹ್ಮನ ಅನೇಕ ವರಗಳು ಉಲ್ಲಂಘಿಸಲ್ಪಟ್ಟಿವೆ. (ಎಷ್ಟೋ ವರಗಳನ್ನು ನಾನು ಮುರಿದಿದ್ದೇನೆ) ಬ್ರಹ್ಮನು ನನಗೆ ಗೌರವಾಸ್ಪದನಾಗಿದ್ದಾನೆ. ಆ ಕಾರಣದಿಂದ ಇಂದ್ರಜಿತು ಬಿಟ್ಟ ಈ ಬ್ರಹ್ಮಾಸ್ತ್ರವನ್ನು ನಾನು  ಗೌರವಿಸುತ್ತೇನೆ” ಎಂದು ಹನುಮಂತ ಚಿಂತಿಸಿದ.

ಇಮೇ ಚ ಕುರ್ಯ್ಯುರತ್ರ ಕಿಂ ಪ್ರಹೃಷ್ಟರಕ್ಷಸಾಂ ಗಣಾಃ ।
ಇತೀಹ ಲಕ್ಷ್ಯಮೇವ ಮೇ ಸ ರಾವಣಶ್ಚ ದೃಶ್ಯತೇ ॥೭.೩೪॥

ಇದಂ ಸಮೀಕ್ಷ್ಯ ಬದ್ಧವತ್ ಸ್ಥಿತಂ ಕಪೀನ್ದ್ರಮಾಶು ತೇ ।
ಬಬನ್ಧುರನ್ಯಪಾಶಕೈರ್ಜ್ಜಗಾಮ ಚಾಸ್ತ್ರಮಸ್ಯ ತತ್ ॥೭.೩೫॥


ಸಂತಸಗೊಂಡ ರಾಕ್ಷಸರ ಗಣವು ಏನು ಮಾಡೀತು ಎಂದು ನನಗೆ ಲಕ್ಷ್ಯವಾಗುತ್ತದೆ. ಆ ರಾವಣನೂ ನನ್ನಿಂದ ನೋಡಲ್ಪಡುತ್ತಾನೆ.
[ನಾನು ಶರಣಾದಂತೆ ನಟಿಸಿದರೆ ಆಗ ರಾವಣನನ್ನೂ ನೋಡಿದಂತಾಗುತ್ತದೆ ಮತ್ತು ಸಂತಸಗೊಂಡ ದೈತ್ಯರ ವರ್ತನೆ ಹೇಗಿರುತ್ತದೆ ಎನ್ನುವುದನ್ನೂ  ತಿಳಿದಂತಾಗುತ್ತದೆ ಎಂದು ನಿರ್ಧರಿಸಿದ ಹನುಮಂತ, ಬ್ರಹ್ಮಾಸ್ತ್ರಕ್ಕೆ ತಲೆಬಾಗುತ್ತಾನೆ]

ಈ ರೀತಿ ಯೋಚಿಸಿ ಬಂಧನಕ್ಕೆ ಒಳಗಾದ ಕಪೀನ್ದ್ರನನ್ನು  ದೈತ್ಯಪಡೆ ಹಗ್ಗಗಳಿಂದ ಕಟ್ಟುತ್ತಾರೆ. ಹಾಗೆ ಕಟ್ಟಿದ ತಕ್ಷಣ ಹನುಮಂತನನ್ನು ಬಂಧಿಸಿದ್ದ ಬ್ರಹ್ಮಾಸ್ತ್ರ ಅವಮಾನಗೊಂಡು ಆತನನ್ನು ಬಿಟ್ಟು  ಹೊರಟು ಹೋಗುತ್ತದೆ.
[ಈ ಪ್ರಸಂಗದ ವಿವರಣೆ ಸುಂದರಕಾಂಡದಲ್ಲಿ(೪೮.೪೮) ಬರುತ್ತದೆ. ‘ಅಸ್ತ್ರಬಂಧಃ ಸ ಚಾನ್ಯಂ ಹಿ ನ ಬಂಧಮನುವರ್ತತೇ’. ಬ್ರಹ್ಮಾಸ್ತ್ರ ಬಂಧವಿರುವಾಗ ಬೇರೆ ಹಗ್ಗದಿಂದ ಕಟ್ಟಿದರೆ ಅದು ನಿಷ್ಕ್ರೀಯವಾಗುತ್ತದೆ. ಏಕೆಂದರೆ ಅದು ಬ್ರಹ್ಮಾಸ್ತ್ರಕ್ಕೆ ಮಾಡುವ ಅವಮಾನ. ಇಲ್ಲಿ ಅವಿವೇಕತನದಿಂದ ದೈತ್ಯರು ಹನುಮಂತನನ್ನು ಹಗ್ಗದಿಂದ ಕಟ್ಟಿ, ಬ್ರಹ್ಮಾಸ್ತ್ರಕ್ಕೆ ಅವಮಾನ ಮಾಡಿರುವುದರಿಂದ ಅದು ಹೊರಟುಹೋಗುತ್ತದೆ. ಈ ಘಟನೆಯನ್ನು ಕಂಡ ಇಂದ್ರಜಿತ್, ತನ್ನವರ ಅವಿವೇಕತನದಿಂದ  ಬ್ರಹ್ಮಾಸ್ತ್ರವು ನಿರರ್ಥಕವಾದುದನ್ನು ತಿಳಿದು  ಮರುಗುತ್ತಾನೆ]



[1] ‘ಸರ್ವದುಃ ಸಹಮ್’

Mahabharata Tatparya Nirnaya Kannada 7.22-7.29


ಪುನಶ್ಚ ಮನ್ತ್ರಿಪುತ್ರಕಾನ್ ಸ ರಾವಣಪ್ರಚೋದಿತಾನ್ ।
ಮಮರ್ದ್ಧ ಸಪ್ತ ಪರ್ವತಪ್ರಭಾನ್ ವರಾಭಿರಕ್ಷಿತಾನ್ ॥೭.೨೨॥

ಬಲಾಗ್ರಗಾಮಿನಸ್ತಥಾ ಸ ಶರ್ವವಾಕ್ಸುಗರ್ವಿತಾನ್ ।
ನಿಹತ್ಯ ಸರ್ವರಕ್ಷಸಾಂ ತೃತೀಯಭಾಗಮಕ್ಷಿಣೋತ್ ॥೭.೨೩॥

ಮತ್ತೂ ಕೂಡಾ  ಹನುಮಂತನು ರಾವಣನಿಂದ ಕಳುಹಿಸಲ್ಪಟ್ಟ,  ಪರ್ವತ ಸದೃಶರಾದ, ರುದ್ರನ ವರ ಬಲದಿಂದ ಅತ್ಯಂತ ಗರ್ವಿಷ್ಠರಾಗಿದ್ದ, ಏಳು ಮಂದಿ  ಮಂತ್ರಿಯ ಮಕ್ಕಳನ್ನು ಕೊಂದನು. ಅವರೆಲ್ಲರೂ ಕೂಡಾ ಸೇನೆಯ ಮುಂದೆ ನಿಂತು ಯುದ್ಧ ಮಾಡುವ ಮುಂದಾಳುಗಳಾಗಿದ್ದರು. ಅವರೆಲ್ಲರನ್ನೂ ಕೊಂದು, ರಾಕ್ಷಸ ಸೇನೆಯ ಮೂರನೇ ಒಂದು ಭಾಗವನ್ನುಹನುಮಂತ  ನಾಶ ಮಾಡಿದನು.

ಅನೌಪಮಂ ಹರೇರ್ಬಲಂ ನಿಶಮ್ಯ ರಾಕ್ಷಸಾಧಿಪಃ ।
ಕುಮಾರಮಕ್ಷಮಾತ್ಮನಃ ಸಮಂ ಸುತಂ ನ್ಯಯೋಜಯತ್ ॥೭.೨೪॥

ಕಪಿಯ ಬಲವು ಎಣಿಕೆಗೆ ನಿಲುಕದ್ದು ಎನ್ನುವುದನ್ನು ಕೇಳಿ ತಿಳಿದ  ರಾವಣನು, ಹನುಮಂತನನ್ನು ಎದುರಿಸಲು, ಬಲದಲ್ಲಿ ತನಗೆ ಸಮನಾಗಿರುವ, ತನ್ನ ಮಗನಾದ  ಅಕ್ಷಕುಮಾರನನ್ನು  ನಿಯೋಗಿಸಿದನು. 

ಸ ಸರ್ವಲೋಕಸಾಕ್ಷಿಣಃ ಸುತಂ ಶರೈರ್ವವರ್ಷ ಹ ।
ಶಿತೈರ್ವರಾಸ್ತ್ರಮನ್ತ್ರಿತೈರ್ನ್ನಚೈನಮಭ್ಯಚಾಲಯತ್ ॥೭.೨೫॥

ಅಕ್ಷಕುಮಾರನು ಎಲ್ಲಾ ಲೋಕಗಳಿಗೂ ಅಂತರ್ಯಾಮಿಯಾಗಿ ಸಾಕ್ಷಿಯಾಗಿರುವ, ಮುಖ್ಯಪ್ರಾಣನ ಮಗನಾಗಿರುವ ಹನುಮಂತನನ್ನು ಚೂಪಾಗಿರುವ ಅಸ್ತ್ರದಿಂದ, ಅಭಿಮಂತ್ರಿತ ಬಾಣಗಳಿಂದ ಪೀಡಿಸಲು ಪ್ರಯತ್ನಿಸಿದನು. ಆದರೆ ಅವನಿಂದ ಹನುಮಂತನನ್ನು ಆಲುಗಾಡಿಸಲಾಗಲಿಲ್ಲಾ.

ಸ ಮಣ್ಡಮಧ್ಯಕಾಸುತಂ ಸಮೀಕ್ಷ್ಯ ರಾವಣೋಪಮಮ್ ।
ತೃತೀಯ ಏಷ ಚಾಂಶಕೋ ಬಲಸ್ಯ ಹೀತ್ಯಚಿನ್ತಯತ್ ॥೭.೨೬॥

ಹನುಮಂತನು ಬಲದಲ್ಲಿ ರಾವಣನಿಗೆ ಸಮನಾದ ಮಂಡೋದರಿಯ ಮಗನನ್ನು ನೋಡಿ, ಇವನು ಬಲದಲ್ಲಿ ರಾವಣನ ಒಟ್ಟು ಬಲದ  ಮೂರನೇ ಒಂದು ಭಾಗಕ್ಕೆ ಸಮನಾಗಿರುವವನು ಎಂದು ಚಿಂತಿಸಿದನು. [ಉಳಿದ ಎರಡು ಭಾಗ ಇಂದ್ರಜಿತ್ ಮತ್ತು ರಾವಣ]

ನಿದಾರ್ಯ್ಯ ಏವ ರಾವಣಃ ಸ ರಾಘವಸ್ಯ ನಾನ್ಯಥಾ ।
ಯದೀನ್ದ್ರಜಿನ್ಮಯಾ ಹತೋ ನಚಾಸ್ಯ ಶಕ್ತಿರೀಕ್ಷ್ಯತೇ ॥೭.೨೭ ॥

ರಾವಣ ರಾಘವನ ಭಾಗವೆಂದು ನಿರ್ಧರಿಸಲ್ಪಡಬೇಕಾದವನು(ಅಂದರೆ ರಾವಣನಿಗೆ ತಕ್ಕ ಶಾಸ್ತಿಯನ್ನುಶ್ರೀರಾಮನೇ ಮಾಡಬೇಕು). ಇದು ಬೇರೆ ರೀತಿಯಾಗಿ ಆಗಲು ಸಾಧ್ಯವಿಲ್ಲ. ಆದ್ದರಿಂದ ನಾನು ಅವನನ್ನು ನಿಗ್ರಹಿಸಬಾರದು. ಇಂದ್ರಜಿತುವನ್ನು ನಾನು ಕೊಂದರೆ ಅವನ ಶಕ್ತಿಯು(ಆತನ ಅಸ್ತ್ರ-ಶಸ್ತ್ರ ಕೌಶಲ) ಯಾರಿಗೂ ಕಾಣಸಿಗುವುದಿಲ್ಲ.

ಅತಸ್ತಯೋಃ ಸಮೋ ಮಯಾ ತೃತೀಯ ಏಷ ಹನ್ಯತೇ ।
ವಿಚಾರ್ಯ್ಯ ಚೈವಮಾಶು ತಂ ಪದೋಃ ಪ್ರಗೃಹ್ಯ ಪುಪ್ಲುವೇ ॥೭.೨೮॥

‘ಅದರಿಂದ ಅವರಿಬ್ಬರಿಗೆ ಬಲದಲ್ಲಿ ಸಮನಾದ ಈ ಮೂರನೆಯವನನ್ನು ನಾನು ಕೊಲ್ಲುತ್ತೇನೆ’ ಎಂಬುದಾಗಿ ಚಿಂತಿಸಿದ ಹನುಮಂತನು, ಅಕ್ಷಕುಮಾರನನ್ನು  ತನ್ನ ಪಾದಗಳಲ್ಲಿ ಹಿಡಿದು ಮೇಲೆ  ಹಾರಿದನು.

ಸ ಚಕ್ರವದ್ ಭ್ರಮಾತುರಂ ವಿಧಾಯ ರಾವಣಾತ್ಮಜಮ್ ।
ಅಪೋಥಯದ್ ಧರಾತಳೇ ಕ್ಷಣೇನ ಮಾರುತೀ ತನುಃ ॥೭.೨೯॥

ಹನುಮಂತನು ರಾವಣನ ಮಗನಾದ ಅಕ್ಷಕುಮಾರನನ್ನು ಗಾಳಿಯಲ್ಲಿ ಚಕ್ರದಂತೆ ಗಿರಗಿರನೆ ತಿರುಗಿಸಿ, ಕೆಲವೇ ಕ್ಷಣಗಳಲ್ಲಿ  ಭೂಮಿಗೆ ಅಪ್ಪಳಿಸಿದನು.