ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, June 3, 2018

Mahabharata Tatparya Nirnaya Kannada 7.30-7.35


ವಿಚೂರ್ಣ್ಣಿತೇ ಧರಾತಳೇ ನಿಜೇ ಸುತೇ ಸ ರಾವಣಃ ।
ನಿಶಮ್ಯ ಶೋಕತಾಪಿತಸ್ತದಗ್ರಜಂ ಸಮಾದಿಶತ್ ॥೭.೩೦॥

ತನ್ನ ಮಗನಾದ ಅಕ್ಷಕುಮಾರನು ಭೂಮಿಯಲ್ಲಿ ಪುಡಿಪುಡಿಯಾಗಿ ಬಿದ್ದನೆಂದು ಕೇಳಿ ತಿಳಿದ ರಾವಣನು ಶೋಕದಿಂದ ಕಂಗೆಟ್ಟು, ಇಂದ್ರಜಿತುವನ್ನು ಹನುಮಂತನ ನಿಗ್ರಹಕ್ಕೆ ಕಳುಹಿಸುತ್ತಾನೆ.

ಅಥೇನ್ದ್ರಜಿನ್ಮಹಾಶರೈರ್ವರಾಸ್ತ್ರಸಮ್ಪ್ರಯೋಜಿತೈಃ ।
ತತಕ್ಷ ವಾನರೋತ್ತಮಂ ನಚಾಶಕದ್ ವಿಚಾಲನೇ ॥೭.೩೧॥

ತದನಂತರ ಇಂದ್ರಜಿತುವು ಉತ್ತಮವಾದ ಅಸ್ತ್ರಗಳಿಂದ, ಅಭಿಮಂತ್ರಿತವಾದ ಬಾಣಗಳಿಂದ ಹನುಮಂತನನ್ನು  ಪೀಡಿಸಲು ಪ್ರಯತ್ನಿಸಿದನು. ಆದರೆ ಹನುಮಂತನನ್ನು ಅಲುಗಾಡಿಸಲೂ ಆತ ಸಮರ್ಥನಾಗಲಿಲ್ಲ.

ಅಥಾಸ್ತ್ರಮುತ್ತಮಂ ವಿಧೇರ್ಯ್ಯುಯೋಜ  ಸರ್ವದುಷ್ಷಹಮ್[1]
ಸ ತೇನ ತಾಡಿತೋ ಹರಿರ್ವ್ಯಚಿನ್ತಯನ್ನಿರಾಕುಲಃ ॥೭.೩೨॥

ಕೊನೆಗೆ ಇಂದ್ರಜಿತುವು ಯಾರಿಗೂ ಎದುರಿಸಲು ಅಸಾಧ್ಯವಾಗಿರುವ, ಬ್ರಹ್ಮದೇವರ ಉತ್ಕೃಷ್ಟವಾದ ಅಸ್ತ್ರವನ್ನು ಹೂಡಿದನು. ಬ್ರಹ್ಮಾಸ್ತ್ರದಿಂದ ಹೊಡೆಯಲ್ಪಟ್ಟವನಾದ ಹನುಮಂತನು, ಯಾವುದೇ ಚಿಂತೆ ಇಲ್ಲದೆ, ಮುಂದೆ  ಏನು ಮಾಡಬೇಕು ಎಂಬುದನ್ನು ಆಲೋಚಿಸಿದನು.

ಮಯಾ ವರಾ ವಿಲಙ್ಘಿತಾ ಹ್ಯನೇಕಶಃ ಸ್ವಯಮ್ಭುವಃ ।
ಸ ಮಾನನೀಯ ಏವ ಮೇ ತತೋsತ್ರ ಮಾನಯಾಮ್ಯಹಮ್ ॥೩೩॥

“ನನ್ನಿಂದ ಬ್ರಹ್ಮನ ಅನೇಕ ವರಗಳು ಉಲ್ಲಂಘಿಸಲ್ಪಟ್ಟಿವೆ. (ಎಷ್ಟೋ ವರಗಳನ್ನು ನಾನು ಮುರಿದಿದ್ದೇನೆ) ಬ್ರಹ್ಮನು ನನಗೆ ಗೌರವಾಸ್ಪದನಾಗಿದ್ದಾನೆ. ಆ ಕಾರಣದಿಂದ ಇಂದ್ರಜಿತು ಬಿಟ್ಟ ಈ ಬ್ರಹ್ಮಾಸ್ತ್ರವನ್ನು ನಾನು  ಗೌರವಿಸುತ್ತೇನೆ” ಎಂದು ಹನುಮಂತ ಚಿಂತಿಸಿದ.

ಇಮೇ ಚ ಕುರ್ಯ್ಯುರತ್ರ ಕಿಂ ಪ್ರಹೃಷ್ಟರಕ್ಷಸಾಂ ಗಣಾಃ ।
ಇತೀಹ ಲಕ್ಷ್ಯಮೇವ ಮೇ ಸ ರಾವಣಶ್ಚ ದೃಶ್ಯತೇ ॥೭.೩೪॥

ಇದಂ ಸಮೀಕ್ಷ್ಯ ಬದ್ಧವತ್ ಸ್ಥಿತಂ ಕಪೀನ್ದ್ರಮಾಶು ತೇ ।
ಬಬನ್ಧುರನ್ಯಪಾಶಕೈರ್ಜ್ಜಗಾಮ ಚಾಸ್ತ್ರಮಸ್ಯ ತತ್ ॥೭.೩೫॥


ಸಂತಸಗೊಂಡ ರಾಕ್ಷಸರ ಗಣವು ಏನು ಮಾಡೀತು ಎಂದು ನನಗೆ ಲಕ್ಷ್ಯವಾಗುತ್ತದೆ. ಆ ರಾವಣನೂ ನನ್ನಿಂದ ನೋಡಲ್ಪಡುತ್ತಾನೆ.
[ನಾನು ಶರಣಾದಂತೆ ನಟಿಸಿದರೆ ಆಗ ರಾವಣನನ್ನೂ ನೋಡಿದಂತಾಗುತ್ತದೆ ಮತ್ತು ಸಂತಸಗೊಂಡ ದೈತ್ಯರ ವರ್ತನೆ ಹೇಗಿರುತ್ತದೆ ಎನ್ನುವುದನ್ನೂ  ತಿಳಿದಂತಾಗುತ್ತದೆ ಎಂದು ನಿರ್ಧರಿಸಿದ ಹನುಮಂತ, ಬ್ರಹ್ಮಾಸ್ತ್ರಕ್ಕೆ ತಲೆಬಾಗುತ್ತಾನೆ]

ಈ ರೀತಿ ಯೋಚಿಸಿ ಬಂಧನಕ್ಕೆ ಒಳಗಾದ ಕಪೀನ್ದ್ರನನ್ನು  ದೈತ್ಯಪಡೆ ಹಗ್ಗಗಳಿಂದ ಕಟ್ಟುತ್ತಾರೆ. ಹಾಗೆ ಕಟ್ಟಿದ ತಕ್ಷಣ ಹನುಮಂತನನ್ನು ಬಂಧಿಸಿದ್ದ ಬ್ರಹ್ಮಾಸ್ತ್ರ ಅವಮಾನಗೊಂಡು ಆತನನ್ನು ಬಿಟ್ಟು  ಹೊರಟು ಹೋಗುತ್ತದೆ.
[ಈ ಪ್ರಸಂಗದ ವಿವರಣೆ ಸುಂದರಕಾಂಡದಲ್ಲಿ(೪೮.೪೮) ಬರುತ್ತದೆ. ‘ಅಸ್ತ್ರಬಂಧಃ ಸ ಚಾನ್ಯಂ ಹಿ ನ ಬಂಧಮನುವರ್ತತೇ’. ಬ್ರಹ್ಮಾಸ್ತ್ರ ಬಂಧವಿರುವಾಗ ಬೇರೆ ಹಗ್ಗದಿಂದ ಕಟ್ಟಿದರೆ ಅದು ನಿಷ್ಕ್ರೀಯವಾಗುತ್ತದೆ. ಏಕೆಂದರೆ ಅದು ಬ್ರಹ್ಮಾಸ್ತ್ರಕ್ಕೆ ಮಾಡುವ ಅವಮಾನ. ಇಲ್ಲಿ ಅವಿವೇಕತನದಿಂದ ದೈತ್ಯರು ಹನುಮಂತನನ್ನು ಹಗ್ಗದಿಂದ ಕಟ್ಟಿ, ಬ್ರಹ್ಮಾಸ್ತ್ರಕ್ಕೆ ಅವಮಾನ ಮಾಡಿರುವುದರಿಂದ ಅದು ಹೊರಟುಹೋಗುತ್ತದೆ. ಈ ಘಟನೆಯನ್ನು ಕಂಡ ಇಂದ್ರಜಿತ್, ತನ್ನವರ ಅವಿವೇಕತನದಿಂದ  ಬ್ರಹ್ಮಾಸ್ತ್ರವು ನಿರರ್ಥಕವಾದುದನ್ನು ತಿಳಿದು  ಮರುಗುತ್ತಾನೆ]



[1] ‘ಸರ್ವದುಃ ಸಹಮ್’

No comments:

Post a Comment