ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, June 4, 2018

Mahabharata Tatparya Nirnaya Kannada 7.36-7.41


ಅಥ ಪ್ರಗೃಹ್ಯ ತಂ ಕಪಿಂ ಸಮೀಪಮಾನಯಂಶ್ಚ ತೇ ।
ನಿಶಾಚರೇಶ್ವರಸ್ಯ ತಂ ಸ ಪೃಷ್ಟವಾಂಶ್ಚ ರಾವಣಃ ॥೭.೩೬॥

ಕಪೇ ಕುತೋsಸಿ ಕಸ್ಯ ವಾ ಕಿಮರ್ತ್ಥಮೀದೃಶಂ ಕೃತಮ್ ।
ಇತೀರಿತಃ ಸ ಚಾವದತ್ ಪ್ರಣಮ್ಯ ರಾಮಮೀಶ್ವರಮ್ ॥೭.೩೭॥

ತದನಂತರ ಆ ದೈತ್ಯ ಪಡೆ ಮಹಾಕಪಿಯನ್ನು ಹಿಡಿದುಕೊಂಡು ರಾವಣನ ಸಮೀಪಕ್ಕೆ ಬರುತ್ತಾರೆ. ತನ್ನ ಮುಂದೆ ನಿಂತಿರುವ ಹನುಮಂತನನ್ನು ಕುರಿತು ರಾವಣ ಹೀಗೆ ಕೇಳುತ್ತಾನೆ:
“ಎಲೈ ಕಪಿಯೇ, ಎಲ್ಲಿಂದ ಬಂದಿರುವೆ ?  ನೀನು ಯಾರ ದಾಸನಾಗಿದ್ದೀಯ? ಏಕಾಗಿ ಈರೀತಿ ಮಾಡಿರುವೆ” ಎಂದು. ಈ ರೀತಿಯಾಗಿ ಕೇಳಲ್ಪಟ್ಟ  ಹನುಮಂತನು  ರಾಮಚಂದ್ರನಿಗೆ ನಮಸ್ಕರಿಸಿ ಉತ್ತರಿಸುತ್ತಾನೆ:

ಅವೈಹಿ ದೂತಮಾಗತಂ ದುರನ್ತವಿಕ್ರಮಸ್ಯ ಮಾಮ್ ।
ರಘೂತ್ತಮಸ್ಯ ಮಾರುತಿಂ ಕುಲಕ್ಷಯೇ ತವೇಶ್ವರಮ್ ॥೭.೩೮॥

“ಅತ್ಯಂತ ಪರಾಕ್ರಮಿಯಾದ ರಘೂತ್ತಮನ ಧೂತನಾಗಿರುವ ಹನುಮಂತನು ನಾನು. ನಿನ್ನ ಕುಲವನ್ನೇ ನಾಶ ಮಾಡುವುದರಲ್ಲಿ ಸಮರ್ಥನಾದ ರಾಮಧೂತ ಮಾರುತಿ ನಾನು ಎನ್ನುವುದನ್ನು ತಿಳಿ” ಎನ್ನುತ್ತಾನೆ ಹನುಮಂತ.

ನ ಚೇತ್ ಪ್ರದಾಸ್ಯಸಿ ತ್ವರನ್ ರಘೂತ್ತಮಪ್ರಿಯಾಂ ತದಾ ।
ಸಪುತ್ರಮಿತ್ರಬಾನ್ಧವೋ ವಿನಾಶಮಾಶು ಯಾಸ್ಯಸಿ ॥೭.೩೯॥

“ನೀನು ತಕ್ಷಣ ರಾಮನ ಪತ್ನಿಯಾದ ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸದೇ ಇದ್ದಲ್ಲಿ, ಆಗ  ನಿನ್ನ  ಮಕ್ಕಳು, ಮಿತ್ರರು, ಬಂಧುಗಳಿಂದ ಕೂಡಿದವನಾಗಿ, ನೀನು ವಿನಾಶವನ್ನು ಹೊಂದುತ್ತೀಯ” ಎಂದು ರಾವಣನನ್ನು ಹನುಮಂತ ಎಚ್ಚರಿಸುತ್ತಾನೆ.

ನ ರಾಮಬಾಣಧಾರಣೇ ಕ್ಷಮಾಃ ಸುರೇಶ್ವರಾ ಅಪಿ ।
ವಿರಿಞ್ಚಶರ್ವಪೂರ್ವಕಾಃ ಕಿಮು ತ್ವಮಲ್ಪಸಾರಕಃ ॥೭.೪೦॥

ಪ್ರಕೋಪಿತಸ್ಯ ತಸ್ಯ ಕಃ ಪುರಃಸ್ಥಿತೌ ಕ್ಷಮೋ ಭವೇತ್ ।
ಸುರಾಸುರೋರಗಾದಿಕೇ ಜಗತ್ಯಚಿನ್ತ್ಯಕರ್ಮಣಃ ॥೭.೪೧॥

ರಾಮನ ಬಾಣವನ್ನು ತಡೆಯುವ ಶಕ್ತಿ ದೇವತೆಗಳಿಗೂ ಇಲ್ಲಾ. ಬ್ರಹ್ಮ-ರುದ್ರ ಮೊದಲಾದವರಿಗೂ ಆ ಸಾಮರ್ಥ್ಯವಿಲ್ಲ. ಹಾಗಿರುವಾಗ ಇನ್ನು ಅತ್ಯಂತ ಕಡಿಮೆ ಬಲವುಳ್ಳ ನೀನು ಎಲ್ಲಿಂದ ತಡೆದೀಯೇ?
ಮುನಿದ ರಾಮನ ಮುಂದೆ ನಿಲ್ಲಲು ದೇವತೆಗಳು, ಅಸುರರು, ಸರ್ಪಗಳು, ಇತರ ಜಗತ್ತಿನಲ್ಲಿರುವ ಯಾರೂ ಕೂಡಾ ಸಮರ್ಥರಲ್ಲ ಎನ್ನುವ ಸತ್ಯವನ್ನು ರಾವಣನಿಗೆ ಹನುಮಂತ ತಿಳಿಸುತ್ತಾನೆ. 

No comments:

Post a Comment