ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, June 12, 2018

Mahabharata Tatparya Nirnaya Kannada 8.10-8.12


ಸ ಕ್ರೋಧದೀಪ್ತನಯನಾನ್ತಹತಃ ಪರಸ್ಯ ಶೋಷಂ ಕ್ಷಣಾದುಪಗತೋ ದನುಜಾದಿಸತ್ವ್ಯಃ ।
‘ಸಿನ್ಧುಃ ಶಿರಸ್ಯರ್ಹಣಂ ಪರಿಗೃಹ್ಯ ರೂಪೀ ಪಾದಾರವಿನ್ದಮುಪಗಮ್ಯ ಬಭಾಷ ಏತತ್ ॥೮.೧೦॥

ಆ ಸಮುದ್ರವು, ಕೋಪದಿಂದ ಉರಿದ ನಾರಾಯಣನ ಕಣ್ಣಿನ ನೋಟದಿಂದ ಪೀಡಿತನಾಗಿ, ಕ್ಷಣಮಾತ್ರದಲ್ಲಿ  ಸಮುದ್ರದ ಒಳಗಡೆ ಇರುವ ದಾನವರೇ ಮೊದಲಾದ ಪ್ರಾಣಿಗಳಿಂದ ಕೂಡಿಕೊಂಡು ಬತ್ತಲಾರಂಭಿಸಿತು. ಆಗ ಸಮುದ್ರರಾಜನಾದ ವರುಣನು,  ಪೂಜಾ ಸಾಮಗ್ರಿಗಳೆನ್ನೆಲ್ಲಾ ಹೊತ್ತುಕೊಂಡು,  ಮೂರ್ದ ರೂಪವನ್ನು ಧರಿಸಿ,  ರಾಮನ ಪಾದಾರವಿನ್ದವನ್ನು ಹೊಂದಿ  ಪ್ರಾರ್ಥಿಸುತ್ತಾನೆ: (ಸೂಚನೆ: ಸಿನ್ಧುಃ ಶಿರಸ್ಯರ್ಹಣಂ.... ಇಲ್ಲಿಂದ   .....ಯಮುಪೇತ್ಯ ಭೂಪಾಃ’ ಇಲ್ಲಿಯ ತನಕ ನೇರ ಭಾಗವತದ ಶ್ಲೋಕಗಳಾಗಿವೆ).  
[ಈ ಮೇಲಿನ  ವಿವರಣೆಯ ಹಿನ್ನೆಲೆಯನ್ನು ನೋಡಿದರೆ: ಮಹಾರ್ಣವಂ ಶೋಷಯಿಷ್ಯೇ ಮಹಾದಾನವ ಸಂಕುಲಂ ಎಂದು ಸ್ಕಂಧಪುರಾಣದ ಬ್ರಹ್ಮಖಂಡದಲ್ಲಿ(೨.೬೯) ಹೇಳಿದ್ದಾರೆ. ಆದರೆ ಅಲ್ಲಿ  ದೀಪ್ತಾ ಬಾಣಾಶ್ಚ ಯೇ  ಘೋರಾ ಭಾಸಯನ್ತೋ ದಿಶೋ ದಶ । ಪ್ರಾವಿಶನ್ ವಾರಿದೆಸ್ತೋಯಂ ದೃಪ್ತದಾನವಸಂಕುಲಮ್(೭೨)  ಎನ್ನುವಲ್ಲಿ ಬಾಣವನ್ನು ಹೊಡೆದ ಎಂದಿದೆ. ಆದರೆ ನೇರ ಬಾಣವನ್ನೇ ಹೊಡೆದಿರುವುದಲ್ಲಾ, ಕಡೆಗಣ್ಣನೋಟವೇ ಬಾಣದಂತೆ ಹೊಡೆಯಿತು ಎನ್ನುವ ವಿವರಣೆಯನ್ನು ಆಚಾರ್ಯರು ಇಲ್ಲಿ ನೀಡಿದ್ದಾರೆ].

‘ತಂ ತ್ವಾ ವಯಂ ಜಡಧಿಯೋ ನ ವಿದಾಮ ಭೂಮನ್ ಕೂಟಸ್ಥಮಾದಿಪುರುಷಂ ಜಗತಾಮಧೀಶಮ್ ।
‘ತ್ವಂ ಸತ್ವತಃ ಸುರಗಣಾನ್ ರಜಸೋ ಮನುಷ್ಯಾಂಸ್ತಾರ್ತ್ತೀಯತೋsಸುರಗಣಾನಭಿತಸ್ತಥಾsಸ್ರಾಃ ॥೮.೧೧॥

ರಾಮಚಂದ್ರನ ಪಾದಕ್ಕೆರಗಿದ ವರುಣ ಹೇಳುತ್ತಾನೆ:  “ಪೂರ್ಣನೇ, ಮಂದಬುದ್ಧಿಯವರಾದ ನಾವು ನಿನ್ನನ್ನು ತಿಳಿಯಲಾರೆವು. ನೀನು ಆಕಾಶದಂತೆ ನಿರ್ವಿಕಾರನಾಗಿರುವವನು. ನೀನು ಎಲ್ಲರಿಗೂ ಮೊದಲಿಗ ಮತ್ತು ಈ ಜಗತ್ತಿನ ಒಡೆಯ. ನೀನು ಸತ್ವಗುಣದಿಂದ ದೇವತೆಗಳನ್ನೂ, ರಜೋಗುಣದಿಂದ ಮನುಷ್ಯರನ್ನೂ ಮತ್ತು ಮೂರನೆಯ ಗುಣದಿಂದ (ತಮೋಗುಣದಿಂದ) ಅಸುರರನ್ನೂ, ಎಲ್ಲಾ ದೇಶ ಕಾಲಗಳಲ್ಲಿ ಸೃಷ್ಟಿ ಮಾಡಿರುವೆ”.

‘ಕಾಮಂ ಪ್ರ ಯಾಹಿ ಜಹಿ ವಿಶ್ರವಸೋsವಮೇಹಂ ತ್ರೈಲೋಕ್ಯರಾವಣಮವಾಪ್ನುಹಿ ವೀರ ಪತ್ನೀಮ್ ।
‘ಬಧ್ನೀಹಿ  ಸೇತುಮಿಹ ತೇ ಯಶಸೋ ವಿತತ್ಯೈ ಗಾಯನ್ತಿ ದಿಗ್ವಿಜಯಿನೋ ಯಮುಪೇತ್ಯ ಭೂಪಾಃ’ ॥೮.೧೨॥

“ನಿನ್ನ ಇಚ್ಚಾನುಸಾರ ಲಂಕೆಗೆ  ನಡೆದುಕೊಂಡು ಹೋಗು. ಮೂರು ಲೋಕವನ್ನು ರೋದನ ಮಾಡಿಸುವ, (ರಾವಯತೀತಿ ರಾವಣಃ) ವಿಶ್ರವಸ್ ಮುನಿಯ ಮಲವನ್ನು ಕೊಂದು, ನಿನ್ನ ಹೆಂಡತಿಯನ್ನು ಪಡೆ. (ಲೋಕಕಂಟಕನಾದ ರಾವಣ ವಿಶ್ರವಸ್ ಮುನಿಯ ಮಗ ಅಲ್ಲ, ಮಲ ಎನ್ನುವ ಭಾವದ ಮಾತು). ನಿನ್ನ ಯಶಸ್ಸಿನ ವಿಸ್ತಾರಕ್ಕಾಗಿ ಈ ಸಮುದ್ರಕ್ಕೆ ಸೇತುವೆಯನ್ನು ಕಟ್ಟು. ದಗ್ವಿಜಯೀಗಳಾಗಿರುವ ಅರಸರು ಈ ಸೇತುವೆಯನ್ನು ನೋಡಿ ನಿನ್ನ ಯಶಸ್ಸನ್ನು ಕೊಂಡಾಡುತ್ತಾರೆ” ಎನ್ನುತ್ತಾನೆ ವರುಣ.

Monday, June 11, 2018

Mahabharata Tatparya Nirnaya Kannada 8.07-8.09


ಸಬ್ರಹ್ಮಕಾಃ ಸುರಗಣಾಃ ಸಹದೈತ್ಯಮರ್ತ್ತ್ಯಾಃ ಸರ್ವೇ ಸಮೇತ್ಯ ಚ ಮದಙ್ಗುಲಿಚಾಲನೇsಪಿ ।
ನೇಶಾ ಭಯಂ ನ ಮಮ ರಾತ್ರಿ ಚರಾದಮುಷ್ಮಾಚ್ಛುದ್ಧಸ್ವಭಾವ ಇತಿ ಚೈನಮಹಂ ವಿಜಾನೇ ॥೮.೦೭॥

‘ವಿಭೀಷಣ ಶತ್ರು ಕಡೆಯವನಾದ್ದರಿಂದ ಮೋಸ ಮಾಡಬಹುದು’ ಎನ್ನುವ ಭಯವನ್ನು ವ್ಯಕ್ತಪಡಿಸಿದ್ದ ಕಪಿಗಳನ್ನುದ್ದೇಶಿಸಿ ರಾಮಚಂದ್ರ ಹೇಳುತ್ತಾನೆ: “ಬ್ರಹ್ಮನಿಂದ ಕೂಡಿದ ದೇವತೆಗಳು, ದೈತ್ಯರು, ಮರ್ತ್ಯರು, ಹೀಗೆ  ಎಲ್ಲರೂ ಸೇರಿದರೂ ಕೂಡಾ, ನನ್ನ ಹೆಬ್ಬೆರಳನ್ನೂ ಆಲುಗಾಡಿಸಲು ಸಾಧ್ಯವಿಲ್ಲ. ಹೀಗಿರುವಾಗ  ಈ ದೈತ್ಯನಿಂದ ನನಗೆ ಭಯವಿಲ್ಲ. ನಾನು ಇವನನ್ನು ಶುದ್ಧಸ್ವಭಾವ ಉಳ್ಳವನೆಂದು ತಿಳಿದಿದ್ದೇನೆ” ಎಂದು.

ಇತ್ಯುಕ್ತವಾಕ್ಯ ಉತ ತಂ ಸ್ವಜನಂ ವಿಧಾಯ ರಾಜ್ಯೇsಭ್ಯಷೇಚಯದಪಾರಸುಸತ್ತ್ವರಾಶಿಃ ।
ಮತ್ವಾತೃಣೋಪಮಮಶೇಷಸದನ್ತಕಂ ತಂ ರಕ್ಷಃಪತಿಂ ತ್ವವರಜಸ್ಯ ದದೌ ಸ ಲಙ್ಕಾಮ್ ॥೮.೦೮॥

ಈ ರೀತಿಯಾಗಿ ಹೇಳಿದ ರಾಮಚಂದ್ರನು ವಿಭೀಷಣನನ್ನು ತನ್ನ ಸೇವಕನನ್ನಾಗಿ ಮಾಡಿಕೊಂಡು (ಅವನನ್ನು ಸ್ವಜನನನ್ನಾಗಿ ಮಾಡಿಕೊಂಡು) ಅಪರಿಮಿತ ಬಲ ರಾಶೀಭೂತನಾದ ರಾಮಚಂದ್ರನು ವಿಭೀಷಣನಿಗೆ ಅಲ್ಲಿಂದಲೇ ರಾಜ್ಯಾಭಿಷೇಕ ಮಾಡುತ್ತಾನೆ^.(ರಾವಣ ಇರುವಾಗಲೇ ಹೇಗೆ ರಾಜ್ಯಾಭಿಷೇಕ ಮಾಡಿದ ಎಂದರೆ) ಎಲ್ಲಾ ಸಜ್ಜನರಿಗೆ ಅಂತಕನಾಗಿರುವ ರಾವಣನನ್ನು ರಾಮಚಂದ್ರ ಒಂದು ಹುಲ್ಲುಕಡ್ಡಿಗಿಂತಲೂ ಕಡೆಯಾಗಿ ಕಂಡು,  ವಿಭೀಷಣನಿಗೆ ಅಲ್ಲಿಂದಲೇ ಲಂಕೆಯನ್ನು ಕೊಡುತ್ತಾನೆ ರಾಮಚಂದ.
[^ಇದು ಶ್ರೀರಾಮಚಂದ್ರನ ಕಾರ್ಯವೈಖರಿ. ಯಾರಾದರೊಬ್ಬರೊಂದಿಗೆ ಯುದ್ಧಕ್ಕೆ ಹೋಗುವ ಮೊದಲೇ, ಆ ರಾಜ್ಯವನ್ನು ಮುಂದೆ ಯಾರಿಗೆ ಕೊಡಬೇಕು ಎಂದಿರುತ್ತದೋ, ಅವರಿಗೆ ಅಭಿಷೇಕ ಮಾಡಿ ಆತ ಮುಂದುವರಿಯುತ್ತಿದ್ದ.  ಉದಾಹರಣೆಗೆ:  ಲವಣಾಸುರನೊಂದಿಗೆ ಕಾದಾಡಲು ಹೊರಡುವ ಮೊದಲು, ಶತ್ರುಘ್ನನನ್ನು ಮದುರಾಪಟ್ಟಣದ ದೊರೆಯಾಗಿ ಅಯ್ಯೋಧ್ಯೆಯಲ್ಲಿಯೇ ಶ್ರೀರಾಮ ಅಭಿಷೇಕ ಮಾಡಿ ಕಳುಹಿಸಿದ್ದ].     

ಕಲ್ಪಾನ್ತಮಸ್ಯ ನಿಶಿಚಾರಿಪತಿತ್ವಪೂರ್ವಮಾಯುಃ ಪ್ರದಾಯ ನಿಜಲೋಕಗತಿಂ ತದನ್ತೇ ।
ರಾತ್ರಿತ್ರಯೇsಪ್ಯನುಪಗಾಮಿನಮೀಕ್ಷ್ಯ ಸೋsಬ್ಧಿಂಚುಕ್ರೋಧ ರಕ್ತನಯನಾನ್ತಮಯುಞ್ಜದಬ್ಧೌ॥೮.೦೯॥

ವಿಭೀಷಣನಿಗೆ ಈ ಬ್ರಹ್ಮಕಲ್ಪದ ಅಂತ್ಯದವರೆಗೂ ರಾಕ್ಷಸರಿಗೆ ರಾಜನಾಗಿರುವುದಕ್ಕೆ ಬೇಕಾದ ಆಯುಷ್ಯವನ್ನು ಕೊಟ್ಟು,  ಕಲ್ಪಾಂತ್ಯದಲ್ಲಿ ತನ್ನ ಲೋಕದ ಗತಿಯನ್ನೂ ಕೂಡಾ ರಾಮಚಂದ್ರ ಕರುಣಿಸಿದ.
ಇತ್ತ, ಮೂರು ರಾತ್ರಿ ಕಳೆದರೂ ಬರದ ವರುಣನ ಮೇಲೆ ಸಿಟ್ಟುಗೊಂಡ ಶ್ರೀರಾಮಚಂದ್ರನು, ತನ್ನ ಕೆಂಪಾದ ಕಡೆಗಣ್ಣನೋಟವನ್ನು ಸಮುದ್ರದ ಮೇಲೆ ಬೀರಿದನು.  

Sunday, June 10, 2018

Mahabharata Tatparya Nirnaya Kannada 8.04-8.06


ಬ್ರಹ್ಮಾತ್ಮಜೇನ ರವಿಜೇನ ಬಲಪ್ರಣೇತ್ರಾ ನೀಲೇನ ಮೈನ್ದವಿವಿದಾಙ್ಗದತಾರಪೂರ್ವೈಃ ।
ಸರ್ವೈಶ್ಚ ಶತ್ರುಸದನಾದುಪಯಾತ ಏಷ ಭ್ರಾತಾsಸ್ಯ ನ ಗ್ರಹಣಯೋಗ್ಯ ಇತಿ ಸ್ಥಿರೋಕ್ತಃ ॥೮.೦೪॥

ಜಾಂಬವಂತನಿಂದ, ಸುಗ್ರೀವನಿಂದ, ಸೇನಾಧಿಪತಿಯಾಗಿರುವ ನೀಲನಿಂದ; ಮೈನ್ದ, ವಿವಿದ, ಅಂಗದ, ತಾರ, ಮೊದಲಾದವರಿಂದ, ಒಟ್ಟಾರೆ  ಎಲ್ಲರಿಂದಲೂ ಶತ್ರುವಿನ ಮನೆಯಿಂದ ಬಂದಿರುವ, ರಾವಣನ ತಮ್ಮನಾದ ವಿಭೀಷಣನು ತಮ್ಮ ಕಡೆಗೆ   ಸೇರಲು ಅರ್ಹನಲ್ಲ ಎಂದು ಬಲವಾಗಿ ಹೇಳಲ್ಪಟ್ಟಿತು.

[ಈ ಕುರಿತಾದ ವಿವರಣೆ ವಾಲ್ಮೀಕಿ ರಾಮಾಯಣದಲ್ಲಿ ಕಾಣಸಿಗುತ್ತದೆ:

ಬದ್ಧ ವೈರಾಚ್ಚ ಪಾಪಾಚ್ಚ ರಾಕ್ಷಸೇಂದ್ರಾದ್  ವಿಭೀಷಣಃ । ಅದೇಶಕಾಲೇ ಸಂಪ್ರಾಪ್ತಃ  ಸರ್ವಥಾ ಶಂಕ್ಯತಾಮಯಮ್ ॥ಯುದ್ಧಕಾಂಡ ೧೭.೪೪ ॥
ಅವನು ಬಂದಿರುವ ದೇಶ ಮತ್ತು ಕಾಲ ಸರಿ ಇಲ್ಲ. ಆತ ಗೂಢಚಾರಿಕೆಗೆ ಬಂದಿರಬಹುದು. ಮೊದಲೇ ಸ್ನೇಹವಿದ್ದಿದ್ದರೆ, ಈ ಹಿಂದೆಯೇ ಬರಬೇಕಿತ್ತು. ಆದರೆ ಹಾಗೆ ಮಾಡದೇ ಈಗ ಏಕೆ ಬಂದಿದ್ದಾನೆ? ಅದರಿಂದಾಗಿ ಅವನನ್ನು ನಮ್ಮ ಕಡೆ ಸೇರಿಸಿಕೊಳ್ಳಬಾರದು ಎಂಬುದಾಗಿ ಜಾಂಬವಂತ ಹೇಳುತ್ತಾನೆ.

ಪ್ರಕೃತ್ಯಾ ರಾಕ್ಷಸೋ ಹ್ಯೇಷ ಭ್ರಾತಾಮಿತ್ರಸ್ಯ  ತೇ ಪ್ರಭೋ  । ಆಗತಶ್ಚ ರಿಪೋಃ ಪಕ್ಷಾತ್ ಕಥಮಸ್ಮಿನ್  ಹಿ  ವಿಶ್ವಸೇತ್ ॥ಯುದ್ಧಕಾಂಡ ೧೭.೨೩ ॥ 

ಶತ್ರುವಿನ ತಮ್ಮ ಮತ್ತು ಸ್ವಾಭಾವಿಕವಾಗಿ ರಾಕ್ಷಸ. ಹೀಗಿರುವಾಗ ಈತನ ಮೇಲೆ ಹೇಗೆ ವಿಶ್ವಾಸ ತೋರುವುದು ಎಂದು   ಸುಗ್ರೀವ ಪ್ರಶ್ನಿಸುತ್ತಾನೆ.

ವದ್ಯತಾಮೇಷ ದಂಡೇನ ತೀವ್ರೇಣ ಸಚಿವೈಃ ಸಹ । ರಾವಣಸ್ಯ ನೃಶಂಸಸ್ಯ ಭ್ರಾತಾ ಹ್ಯೇಷ ವಿಭೀಷಣಃ ॥ಯುದ್ಧಕಾಂಡ: ೧೭.೨೭॥

“ಇವನನ್ನು ಹಿಂತಿರುಗಲು ಬಿಡದೇ ಇಲ್ಲೇ ಕೊಂದು ಬಿಡಬೇಕು” ಎಂದು ಉಗ್ರವಾಗಿ ನೀಲ ಹೇಳುತ್ತಾನೆ.

ಭಾವಮಸ್ಯ  ತು ವಿಜ್ಞಾಯ ತತಸ್ತತ್ವಂ ಕರಿಷ್ಯಸಿ ॥ಯುದ್ಧಕಾಂಡ: ೧೮.೪೭॥

ಅವನ ಮನೋಭಾವವನ್ನು ಪರೀಕ್ಷೆ ಮಾಡಿ ನೋಡಿ ನಂತರ  ಮುಂದುವರಿಯಬೇಕು ಎನ್ನುವ ಅಭಿಪ್ರಾಯವನ್ನು  ಮೈನ್ದ ವ್ಯಕ್ತಪಡಿಸುತ್ತಾನೆ.
ಈ ರೀತಿ ಅಲ್ಲಿ ಎಲ್ಲರೂ ವಿಭೀಷಣನನ್ನು ತಮ್ಮತ್ತ ಸೇರಿಸಿಕೊಳ್ಳಲು ನಿರಾಕರಣೆ ಮಾಡಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ]

ಅತ್ರಾsಹ ರೂಪಮಪರಂ ಬಲದೇವತಾಯಾ ಗ್ರಾಹ್ಯಃ ಸ ಏಷ ನಿತರಾಂ ಶರಣಂ ಪ್ರಪನ್ನಃ ।
ಭಕ್ತಶ್ಚ ರಾಮಪದಯೋರ್ವಿನಶಿಷ್ಣು ರಕ್ಷೋ ವಿಜ್ಞಾಯ ರಾಜ್ಯಮುಪಭೋಕ್ತುಮಿಹಾಭಿಯಾತಃ ॥೮.೦೫॥

ಆಗ ಬಲಕ್ಕೆ ದೇವತೆಯಾಗಿರುವ ಮುಖ್ಯಪ್ರಾಣನ ಇನ್ನೊಂದು ರೂಪವಾದ ಹನುಮಂತನು ಈ ವಿಚಾರದಲ್ಲಿ ಶ್ರಿರಾಮನಲ್ಲಿ ಹೇಳುತ್ತಾನೆ: “ನಿನ್ನನ್ನೇ ಶರಣು ಹೊಂದಿರುವ ಸುಗ್ರೀವನು ಅನುಗ್ರಾಹ್ಯನಾಗಿಯೇ ಇದ್ದಾನೆ. ನಿನ್ನ ಪಾದದಲ್ಲಿ ಭಕ್ತಿ ಉಳ್ಳವನಾಗಿ, ರಾಕ್ಷಸ ಸಾಯುತ್ತಾನೆ ಎಂದು ಖಚಿತವಾಗಿ ತಿಳಿದು, ರಾಜ್ಯವನ್ನು ಭೋಗಿಸಲು ಇವನು ಇಲ್ಲಿ ಬಂದಿದ್ದಾನೆ” ಎಂದು.

ವಾಲ್ಮೀಕಿ ರಾಮಾಯಣದಲ್ಲಿ(ಯುದ್ಧಕಾಂಡ ೧೭.೬೩)  ಹೇಳುವಂತೆ: ಉದ್ಯೋಗಂ ತವ ಸಂಪ್ರೇಕ್ಷ್ಯ ಮಿಥ್ಯಾವೃತ್ತಂ ಚ ರಾವಣಮ್ ।  ವಾಲಿನಶ್ಚ ವಧಂ ಶ್ರುತ್ವಾ ಸುಗ್ರೀವಂ ಚಾಭಿಷೇಚಿತಮ್ ॥ ರಾಜ್ಯಂ ಪ್ರಾರ್ಥಯಮಾನಶ್ಚ ಬುದ್ಧಿಪೂರ್ವಮಿಹಾsಗತಃ । “ ನಿನ್ನ ಉದ್ಯೋಗವನ್ನು ನೋಡಿ(ವಾಲಿಯನ್ನು ಕೊಂದು ಸುಗ್ರೀವನಿಗೆ ರಾಜ್ಯ ಕೊಡಿಸಿದ ಉದ್ಯೋಗವನ್ನು ನೋಡಿ), ರಾವಣ ತಪ್ಪು ಮಾರ್ಗದಲ್ಲಿದ್ದಾನೆ ಎನ್ನುವುದನ್ನು ತಿಳಿದು ಬಂದಿದ್ದಾನೆ” ಎಂದು ಹನುಮಂತ ಶ್ರೀರಾಮನಿಗೆ ತನ್ನ ಅಭಿಪ್ರಾಯವನ್ನು ತಿಳಿಸುತ್ತಾನೆ.  

 ಇತ್ಯುಕ್ತವತ್ಯಥ ಹನೂಮತಿ ದೇವದೇವಃ ಸಙ್ಗೃಹ್ಯ ತದ್ವಚನಮಾಹ ಯಥೈವ ಪೂರ್ವಮ್ ।
ಸುಗ್ರೀವಹೇತುತ ಇಮಂ ಸ್ಥಿರಮಾಗ್ರಹೀಷ್ಯೇ ಪಾದಪ್ರಪನ್ನಮಿದಮೇವ ಸದಾ ವ್ರತಂ ಮೇ ॥೮.೦೬॥

ಈರೀತಿಯಾಗಿ ಹನುಮಂತನು ಹೇಳುತ್ತಿರಲು, ದೇವತೆಗಳಿಗೇ ದೇವನಾದ ರಾಮಚಂದ್ರನು, ಹೇಗೆ  (ಸುಗ್ರೀವನ ವಿಷಯದಲ್ಲಿ) ಹನುಮಂತನ ಮಾತನ್ನು  ಹಿಂದೆ ಯಾವ ರೀತಿ ಸ್ವೀಕರಿಸಿದ್ದನೋ ಹಾಗೆಯೇ ಸ್ವೀಕರಿಸಿ, “ನನ್ನ ಪಾದದಲ್ಲಿ ಯಾರು ಶರಣು ಹೊಂದುತ್ತಾರೆ ಅವರನ್ನು ಸ್ವೀಕರಿಸುತ್ತೇನೆ ಎನ್ನುವುದು ನನ್ನ ವ್ರತ” ಎಂದು ಹೇಳಿ, ವಿಭೀಷಣನನ್ನು ಸ್ವೀಕರಿಸುತ್ತಾನೆ.   
[ವಾಲ್ಮೀಕಿ ರಾಮಾಯಣದಲ್ಲಿ ಹೇಳುವಂತೆ: ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ । ಅಭಯಂ ಸರ್ವಭೂತೇಭ್ಯೋ ದದಾಮ್ಯೇತದ್ ವ್ರತಂ ಮಮ ॥ಯುದ್ಧಕಾಂಡ ೧೮.೩೩ ॥  ರಾಮಚಂದ್ರ ಹೇಳುತ್ತಾನೆ: “ಯಾರು ಒಮ್ಮೆ ‘ನಾನು ನಿನ್ನವನು’ ಎಂದು ನನ್ನಲ್ಲಿ ಶರಣು ಬಂದು ರಕ್ಷಣೆಗೆ ಪ್ರಾರ್ಥಿಸಿದರೆ, ನಾನು ಅವರನ್ನು ಸಮಸ್ತ ಪ್ರಾಣಿಗಳಿಂದ ನಿರ್ಭಯನನ್ನಾಗಿಸುವೆನು. ಇದು ಎಂದೆಂದಿಗೂ ನನ್ನ ವ್ರತ” ]