ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, June 10, 2018

Mahabharata Tatparya Nirnaya Kannada 8.04-8.06


ಬ್ರಹ್ಮಾತ್ಮಜೇನ ರವಿಜೇನ ಬಲಪ್ರಣೇತ್ರಾ ನೀಲೇನ ಮೈನ್ದವಿವಿದಾಙ್ಗದತಾರಪೂರ್ವೈಃ ।
ಸರ್ವೈಶ್ಚ ಶತ್ರುಸದನಾದುಪಯಾತ ಏಷ ಭ್ರಾತಾsಸ್ಯ ನ ಗ್ರಹಣಯೋಗ್ಯ ಇತಿ ಸ್ಥಿರೋಕ್ತಃ ॥೮.೦೪॥

ಜಾಂಬವಂತನಿಂದ, ಸುಗ್ರೀವನಿಂದ, ಸೇನಾಧಿಪತಿಯಾಗಿರುವ ನೀಲನಿಂದ; ಮೈನ್ದ, ವಿವಿದ, ಅಂಗದ, ತಾರ, ಮೊದಲಾದವರಿಂದ, ಒಟ್ಟಾರೆ  ಎಲ್ಲರಿಂದಲೂ ಶತ್ರುವಿನ ಮನೆಯಿಂದ ಬಂದಿರುವ, ರಾವಣನ ತಮ್ಮನಾದ ವಿಭೀಷಣನು ತಮ್ಮ ಕಡೆಗೆ   ಸೇರಲು ಅರ್ಹನಲ್ಲ ಎಂದು ಬಲವಾಗಿ ಹೇಳಲ್ಪಟ್ಟಿತು.

[ಈ ಕುರಿತಾದ ವಿವರಣೆ ವಾಲ್ಮೀಕಿ ರಾಮಾಯಣದಲ್ಲಿ ಕಾಣಸಿಗುತ್ತದೆ:

ಬದ್ಧ ವೈರಾಚ್ಚ ಪಾಪಾಚ್ಚ ರಾಕ್ಷಸೇಂದ್ರಾದ್  ವಿಭೀಷಣಃ । ಅದೇಶಕಾಲೇ ಸಂಪ್ರಾಪ್ತಃ  ಸರ್ವಥಾ ಶಂಕ್ಯತಾಮಯಮ್ ॥ಯುದ್ಧಕಾಂಡ ೧೭.೪೪ ॥
ಅವನು ಬಂದಿರುವ ದೇಶ ಮತ್ತು ಕಾಲ ಸರಿ ಇಲ್ಲ. ಆತ ಗೂಢಚಾರಿಕೆಗೆ ಬಂದಿರಬಹುದು. ಮೊದಲೇ ಸ್ನೇಹವಿದ್ದಿದ್ದರೆ, ಈ ಹಿಂದೆಯೇ ಬರಬೇಕಿತ್ತು. ಆದರೆ ಹಾಗೆ ಮಾಡದೇ ಈಗ ಏಕೆ ಬಂದಿದ್ದಾನೆ? ಅದರಿಂದಾಗಿ ಅವನನ್ನು ನಮ್ಮ ಕಡೆ ಸೇರಿಸಿಕೊಳ್ಳಬಾರದು ಎಂಬುದಾಗಿ ಜಾಂಬವಂತ ಹೇಳುತ್ತಾನೆ.

ಪ್ರಕೃತ್ಯಾ ರಾಕ್ಷಸೋ ಹ್ಯೇಷ ಭ್ರಾತಾಮಿತ್ರಸ್ಯ  ತೇ ಪ್ರಭೋ  । ಆಗತಶ್ಚ ರಿಪೋಃ ಪಕ್ಷಾತ್ ಕಥಮಸ್ಮಿನ್  ಹಿ  ವಿಶ್ವಸೇತ್ ॥ಯುದ್ಧಕಾಂಡ ೧೭.೨೩ ॥ 

ಶತ್ರುವಿನ ತಮ್ಮ ಮತ್ತು ಸ್ವಾಭಾವಿಕವಾಗಿ ರಾಕ್ಷಸ. ಹೀಗಿರುವಾಗ ಈತನ ಮೇಲೆ ಹೇಗೆ ವಿಶ್ವಾಸ ತೋರುವುದು ಎಂದು   ಸುಗ್ರೀವ ಪ್ರಶ್ನಿಸುತ್ತಾನೆ.

ವದ್ಯತಾಮೇಷ ದಂಡೇನ ತೀವ್ರೇಣ ಸಚಿವೈಃ ಸಹ । ರಾವಣಸ್ಯ ನೃಶಂಸಸ್ಯ ಭ್ರಾತಾ ಹ್ಯೇಷ ವಿಭೀಷಣಃ ॥ಯುದ್ಧಕಾಂಡ: ೧೭.೨೭॥

“ಇವನನ್ನು ಹಿಂತಿರುಗಲು ಬಿಡದೇ ಇಲ್ಲೇ ಕೊಂದು ಬಿಡಬೇಕು” ಎಂದು ಉಗ್ರವಾಗಿ ನೀಲ ಹೇಳುತ್ತಾನೆ.

ಭಾವಮಸ್ಯ  ತು ವಿಜ್ಞಾಯ ತತಸ್ತತ್ವಂ ಕರಿಷ್ಯಸಿ ॥ಯುದ್ಧಕಾಂಡ: ೧೮.೪೭॥

ಅವನ ಮನೋಭಾವವನ್ನು ಪರೀಕ್ಷೆ ಮಾಡಿ ನೋಡಿ ನಂತರ  ಮುಂದುವರಿಯಬೇಕು ಎನ್ನುವ ಅಭಿಪ್ರಾಯವನ್ನು  ಮೈನ್ದ ವ್ಯಕ್ತಪಡಿಸುತ್ತಾನೆ.
ಈ ರೀತಿ ಅಲ್ಲಿ ಎಲ್ಲರೂ ವಿಭೀಷಣನನ್ನು ತಮ್ಮತ್ತ ಸೇರಿಸಿಕೊಳ್ಳಲು ನಿರಾಕರಣೆ ಮಾಡಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ]

ಅತ್ರಾsಹ ರೂಪಮಪರಂ ಬಲದೇವತಾಯಾ ಗ್ರಾಹ್ಯಃ ಸ ಏಷ ನಿತರಾಂ ಶರಣಂ ಪ್ರಪನ್ನಃ ।
ಭಕ್ತಶ್ಚ ರಾಮಪದಯೋರ್ವಿನಶಿಷ್ಣು ರಕ್ಷೋ ವಿಜ್ಞಾಯ ರಾಜ್ಯಮುಪಭೋಕ್ತುಮಿಹಾಭಿಯಾತಃ ॥೮.೦೫॥

ಆಗ ಬಲಕ್ಕೆ ದೇವತೆಯಾಗಿರುವ ಮುಖ್ಯಪ್ರಾಣನ ಇನ್ನೊಂದು ರೂಪವಾದ ಹನುಮಂತನು ಈ ವಿಚಾರದಲ್ಲಿ ಶ್ರಿರಾಮನಲ್ಲಿ ಹೇಳುತ್ತಾನೆ: “ನಿನ್ನನ್ನೇ ಶರಣು ಹೊಂದಿರುವ ಸುಗ್ರೀವನು ಅನುಗ್ರಾಹ್ಯನಾಗಿಯೇ ಇದ್ದಾನೆ. ನಿನ್ನ ಪಾದದಲ್ಲಿ ಭಕ್ತಿ ಉಳ್ಳವನಾಗಿ, ರಾಕ್ಷಸ ಸಾಯುತ್ತಾನೆ ಎಂದು ಖಚಿತವಾಗಿ ತಿಳಿದು, ರಾಜ್ಯವನ್ನು ಭೋಗಿಸಲು ಇವನು ಇಲ್ಲಿ ಬಂದಿದ್ದಾನೆ” ಎಂದು.

ವಾಲ್ಮೀಕಿ ರಾಮಾಯಣದಲ್ಲಿ(ಯುದ್ಧಕಾಂಡ ೧೭.೬೩)  ಹೇಳುವಂತೆ: ಉದ್ಯೋಗಂ ತವ ಸಂಪ್ರೇಕ್ಷ್ಯ ಮಿಥ್ಯಾವೃತ್ತಂ ಚ ರಾವಣಮ್ ।  ವಾಲಿನಶ್ಚ ವಧಂ ಶ್ರುತ್ವಾ ಸುಗ್ರೀವಂ ಚಾಭಿಷೇಚಿತಮ್ ॥ ರಾಜ್ಯಂ ಪ್ರಾರ್ಥಯಮಾನಶ್ಚ ಬುದ್ಧಿಪೂರ್ವಮಿಹಾsಗತಃ । “ ನಿನ್ನ ಉದ್ಯೋಗವನ್ನು ನೋಡಿ(ವಾಲಿಯನ್ನು ಕೊಂದು ಸುಗ್ರೀವನಿಗೆ ರಾಜ್ಯ ಕೊಡಿಸಿದ ಉದ್ಯೋಗವನ್ನು ನೋಡಿ), ರಾವಣ ತಪ್ಪು ಮಾರ್ಗದಲ್ಲಿದ್ದಾನೆ ಎನ್ನುವುದನ್ನು ತಿಳಿದು ಬಂದಿದ್ದಾನೆ” ಎಂದು ಹನುಮಂತ ಶ್ರೀರಾಮನಿಗೆ ತನ್ನ ಅಭಿಪ್ರಾಯವನ್ನು ತಿಳಿಸುತ್ತಾನೆ.  

 ಇತ್ಯುಕ್ತವತ್ಯಥ ಹನೂಮತಿ ದೇವದೇವಃ ಸಙ್ಗೃಹ್ಯ ತದ್ವಚನಮಾಹ ಯಥೈವ ಪೂರ್ವಮ್ ।
ಸುಗ್ರೀವಹೇತುತ ಇಮಂ ಸ್ಥಿರಮಾಗ್ರಹೀಷ್ಯೇ ಪಾದಪ್ರಪನ್ನಮಿದಮೇವ ಸದಾ ವ್ರತಂ ಮೇ ॥೮.೦೬॥

ಈರೀತಿಯಾಗಿ ಹನುಮಂತನು ಹೇಳುತ್ತಿರಲು, ದೇವತೆಗಳಿಗೇ ದೇವನಾದ ರಾಮಚಂದ್ರನು, ಹೇಗೆ  (ಸುಗ್ರೀವನ ವಿಷಯದಲ್ಲಿ) ಹನುಮಂತನ ಮಾತನ್ನು  ಹಿಂದೆ ಯಾವ ರೀತಿ ಸ್ವೀಕರಿಸಿದ್ದನೋ ಹಾಗೆಯೇ ಸ್ವೀಕರಿಸಿ, “ನನ್ನ ಪಾದದಲ್ಲಿ ಯಾರು ಶರಣು ಹೊಂದುತ್ತಾರೆ ಅವರನ್ನು ಸ್ವೀಕರಿಸುತ್ತೇನೆ ಎನ್ನುವುದು ನನ್ನ ವ್ರತ” ಎಂದು ಹೇಳಿ, ವಿಭೀಷಣನನ್ನು ಸ್ವೀಕರಿಸುತ್ತಾನೆ.   
[ವಾಲ್ಮೀಕಿ ರಾಮಾಯಣದಲ್ಲಿ ಹೇಳುವಂತೆ: ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ । ಅಭಯಂ ಸರ್ವಭೂತೇಭ್ಯೋ ದದಾಮ್ಯೇತದ್ ವ್ರತಂ ಮಮ ॥ಯುದ್ಧಕಾಂಡ ೧೮.೩೩ ॥  ರಾಮಚಂದ್ರ ಹೇಳುತ್ತಾನೆ: “ಯಾರು ಒಮ್ಮೆ ‘ನಾನು ನಿನ್ನವನು’ ಎಂದು ನನ್ನಲ್ಲಿ ಶರಣು ಬಂದು ರಕ್ಷಣೆಗೆ ಪ್ರಾರ್ಥಿಸಿದರೆ, ನಾನು ಅವರನ್ನು ಸಮಸ್ತ ಪ್ರಾಣಿಗಳಿಂದ ನಿರ್ಭಯನನ್ನಾಗಿಸುವೆನು. ಇದು ಎಂದೆಂದಿಗೂ ನನ್ನ ವ್ರತ” ]

No comments:

Post a Comment