ಸಬ್ರಹ್ಮಕಾಃ ಸುರಗಣಾಃ ಸಹದೈತ್ಯಮರ್ತ್ತ್ಯಾಃ
ಸರ್ವೇ ಸಮೇತ್ಯ ಚ ಮದಙ್ಗುಲಿಚಾಲನೇsಪಿ ।
ನೇಶಾ ಭಯಂ ನ ಮಮ ರಾತ್ರಿ
ಚರಾದಮುಷ್ಮಾಚ್ಛುದ್ಧಸ್ವಭಾವ ಇತಿ ಚೈನಮಹಂ ವಿಜಾನೇ ॥೮.೦೭॥
‘ವಿಭೀಷಣ ಶತ್ರು ಕಡೆಯವನಾದ್ದರಿಂದ ಮೋಸ ಮಾಡಬಹುದು’ ಎನ್ನುವ ಭಯವನ್ನು
ವ್ಯಕ್ತಪಡಿಸಿದ್ದ ಕಪಿಗಳನ್ನುದ್ದೇಶಿಸಿ ರಾಮಚಂದ್ರ ಹೇಳುತ್ತಾನೆ: “ಬ್ರಹ್ಮನಿಂದ ಕೂಡಿದ ದೇವತೆಗಳು,
ದೈತ್ಯರು, ಮರ್ತ್ಯರು, ಹೀಗೆ ಎಲ್ಲರೂ ಸೇರಿದರೂ
ಕೂಡಾ, ನನ್ನ ಹೆಬ್ಬೆರಳನ್ನೂ ಆಲುಗಾಡಿಸಲು ಸಾಧ್ಯವಿಲ್ಲ. ಹೀಗಿರುವಾಗ ಈ ದೈತ್ಯನಿಂದ ನನಗೆ ಭಯವಿಲ್ಲ. ನಾನು ಇವನನ್ನು
ಶುದ್ಧಸ್ವಭಾವ ಉಳ್ಳವನೆಂದು ತಿಳಿದಿದ್ದೇನೆ” ಎಂದು.
ಇತ್ಯುಕ್ತವಾಕ್ಯ ಉತ ತಂ ಸ್ವಜನಂ
ವಿಧಾಯ ರಾಜ್ಯೇsಭ್ಯಷೇಚಯದಪಾರಸುಸತ್ತ್ವರಾಶಿಃ
।
ಮತ್ವಾತೃಣೋಪಮಮಶೇಷಸದನ್ತಕಂ ತಂ
ರಕ್ಷಃಪತಿಂ ತ್ವವರಜಸ್ಯ ದದೌ ಸ ಲಙ್ಕಾಮ್ ॥೮.೦೮॥
ಈ ರೀತಿಯಾಗಿ ಹೇಳಿದ ರಾಮಚಂದ್ರನು ವಿಭೀಷಣನನ್ನು ತನ್ನ ಸೇವಕನನ್ನಾಗಿ
ಮಾಡಿಕೊಂಡು (ಅವನನ್ನು ಸ್ವಜನನನ್ನಾಗಿ ಮಾಡಿಕೊಂಡು) ಅಪರಿಮಿತ ಬಲ ರಾಶೀಭೂತನಾದ ರಾಮಚಂದ್ರನು
ವಿಭೀಷಣನಿಗೆ ಅಲ್ಲಿಂದಲೇ ರಾಜ್ಯಾಭಿಷೇಕ ಮಾಡುತ್ತಾನೆ^.(ರಾವಣ ಇರುವಾಗಲೇ ಹೇಗೆ ರಾಜ್ಯಾಭಿಷೇಕ
ಮಾಡಿದ ಎಂದರೆ) ಎಲ್ಲಾ ಸಜ್ಜನರಿಗೆ ಅಂತಕನಾಗಿರುವ ರಾವಣನನ್ನು ರಾಮಚಂದ್ರ ಒಂದು
ಹುಲ್ಲುಕಡ್ಡಿಗಿಂತಲೂ ಕಡೆಯಾಗಿ ಕಂಡು, ವಿಭೀಷಣನಿಗೆ ಅಲ್ಲಿಂದಲೇ ಲಂಕೆಯನ್ನು ಕೊಡುತ್ತಾನೆ
ರಾಮಚಂದ.
[^ಇದು ಶ್ರೀರಾಮಚಂದ್ರನ ಕಾರ್ಯವೈಖರಿ. ಯಾರಾದರೊಬ್ಬರೊಂದಿಗೆ
ಯುದ್ಧಕ್ಕೆ ಹೋಗುವ ಮೊದಲೇ, ಆ ರಾಜ್ಯವನ್ನು ಮುಂದೆ ಯಾರಿಗೆ ಕೊಡಬೇಕು ಎಂದಿರುತ್ತದೋ, ಅವರಿಗೆ
ಅಭಿಷೇಕ ಮಾಡಿ ಆತ ಮುಂದುವರಿಯುತ್ತಿದ್ದ. ಉದಾಹರಣೆಗೆ:
ಲವಣಾಸುರನೊಂದಿಗೆ ಕಾದಾಡಲು ಹೊರಡುವ ಮೊದಲು, ಶತ್ರುಘ್ನನನ್ನು ಮದುರಾಪಟ್ಟಣದ ದೊರೆಯಾಗಿ
ಅಯ್ಯೋಧ್ಯೆಯಲ್ಲಿಯೇ ಶ್ರೀರಾಮ ಅಭಿಷೇಕ ಮಾಡಿ ಕಳುಹಿಸಿದ್ದ].
ಕಲ್ಪಾನ್ತಮಸ್ಯ
ನಿಶಿಚಾರಿಪತಿತ್ವಪೂರ್ವಮಾಯುಃ ಪ್ರದಾಯ ನಿಜಲೋಕಗತಿಂ ತದನ್ತೇ ।
ರಾತ್ರಿತ್ರಯೇsಪ್ಯನುಪಗಾಮಿನಮೀಕ್ಷ್ಯ ಸೋsಬ್ಧಿಂಚುಕ್ರೋಧ ರಕ್ತನಯನಾನ್ತಮಯುಞ್ಜದಬ್ಧೌ॥೮.೦೯॥
ವಿಭೀಷಣನಿಗೆ ಈ ಬ್ರಹ್ಮಕಲ್ಪದ ಅಂತ್ಯದವರೆಗೂ ರಾಕ್ಷಸರಿಗೆ
ರಾಜನಾಗಿರುವುದಕ್ಕೆ ಬೇಕಾದ ಆಯುಷ್ಯವನ್ನು ಕೊಟ್ಟು,
ಕಲ್ಪಾಂತ್ಯದಲ್ಲಿ ತನ್ನ ಲೋಕದ ಗತಿಯನ್ನೂ ಕೂಡಾ ರಾಮಚಂದ್ರ ಕರುಣಿಸಿದ.
ಇತ್ತ, ಮೂರು ರಾತ್ರಿ ಕಳೆದರೂ ಬರದ ವರುಣನ ಮೇಲೆ ಸಿಟ್ಟುಗೊಂಡ ಶ್ರೀರಾಮಚಂದ್ರನು,
ತನ್ನ ಕೆಂಪಾದ ಕಡೆಗಣ್ಣನೋಟವನ್ನು ಸಮುದ್ರದ ಮೇಲೆ ಬೀರಿದನು.
No comments:
Post a Comment