ಸ ಕ್ರೋಧದೀಪ್ತನಯನಾನ್ತಹತಃ ಪರಸ್ಯ
ಶೋಷಂ ಕ್ಷಣಾದುಪಗತೋ ದನುಜಾದಿಸತ್ವ್ಯಃ ।
‘ಸಿನ್ಧುಃ ಶಿರಸ್ಯರ್ಹಣಂ ಪರಿಗೃಹ್ಯ
ರೂಪೀ ಪಾದಾರವಿನ್ದಮುಪಗಮ್ಯ ಬಭಾಷ ಏತತ್ ॥೮.೧೦॥
ಆ ಸಮುದ್ರವು, ಕೋಪದಿಂದ ಉರಿದ ನಾರಾಯಣನ ಕಣ್ಣಿನ ನೋಟದಿಂದ ಪೀಡಿತನಾಗಿ,
ಕ್ಷಣಮಾತ್ರದಲ್ಲಿ ಸಮುದ್ರದ ಒಳಗಡೆ ಇರುವ ದಾನವರೇ
ಮೊದಲಾದ ಪ್ರಾಣಿಗಳಿಂದ ಕೂಡಿಕೊಂಡು ಬತ್ತಲಾರಂಭಿಸಿತು. ಆಗ ಸಮುದ್ರರಾಜನಾದ ವರುಣನು, ಪೂಜಾ ಸಾಮಗ್ರಿಗಳೆನ್ನೆಲ್ಲಾ ಹೊತ್ತುಕೊಂಡು, ಮೂರ್ದ ರೂಪವನ್ನು ಧರಿಸಿ, ರಾಮನ ಪಾದಾರವಿನ್ದವನ್ನು ಹೊಂದಿ ಪ್ರಾರ್ಥಿಸುತ್ತಾನೆ: (ಸೂಚನೆ: ಸಿನ್ಧುಃ
ಶಿರಸ್ಯರ್ಹಣಂ.... ಇಲ್ಲಿಂದ .....ಯಮುಪೇತ್ಯ
ಭೂಪಾಃ’ ಇಲ್ಲಿಯ ತನಕ ನೇರ ಭಾಗವತದ ಶ್ಲೋಕಗಳಾಗಿವೆ).
[ಈ ಮೇಲಿನ ವಿವರಣೆಯ ಹಿನ್ನೆಲೆಯನ್ನು
ನೋಡಿದರೆ: ಮಹಾರ್ಣವಂ ಶೋಷಯಿಷ್ಯೇ ಮಹಾದಾನವ ಸಂಕುಲಂ ಎಂದು ಸ್ಕಂಧಪುರಾಣದ
ಬ್ರಹ್ಮಖಂಡದಲ್ಲಿ(೨.೬೯) ಹೇಳಿದ್ದಾರೆ. ಆದರೆ ಅಲ್ಲಿ ದೀಪ್ತಾ ಬಾಣಾಶ್ಚ ಯೇ ಘೋರಾ ಭಾಸಯನ್ತೋ ದಿಶೋ ದಶ । ಪ್ರಾವಿಶನ್ ವಾರಿದೆಸ್ತೋಯಂ
ದೃಪ್ತದಾನವಸಂಕುಲಮ್(೭೨) ಎನ್ನುವಲ್ಲಿ
ಬಾಣವನ್ನು ಹೊಡೆದ ಎಂದಿದೆ. ಆದರೆ ನೇರ ಬಾಣವನ್ನೇ ಹೊಡೆದಿರುವುದಲ್ಲಾ, ಕಡೆಗಣ್ಣನೋಟವೇ ಬಾಣದಂತೆ
ಹೊಡೆಯಿತು ಎನ್ನುವ ವಿವರಣೆಯನ್ನು ಆಚಾರ್ಯರು ಇಲ್ಲಿ ನೀಡಿದ್ದಾರೆ].
‘ತಂ ತ್ವಾ ವಯಂ ಜಡಧಿಯೋ ನ ವಿದಾಮ ಭೂಮನ್ ಕೂಟಸ್ಥಮಾದಿಪುರುಷಂ ಜಗತಾಮಧೀಶಮ್
।
‘ತ್ವಂ ಸತ್ವತಃ ಸುರಗಣಾನ್ ರಜಸೋ ಮನುಷ್ಯಾಂಸ್ತಾರ್ತ್ತೀಯತೋsಸುರಗಣಾನಭಿತಸ್ತಥಾsಸ್ರಾಃ ॥೮.೧೧॥
ರಾಮಚಂದ್ರನ ಪಾದಕ್ಕೆರಗಿದ ವರುಣ ಹೇಳುತ್ತಾನೆ: “ಪೂರ್ಣನೇ, ಮಂದಬುದ್ಧಿಯವರಾದ ನಾವು ನಿನ್ನನ್ನು ತಿಳಿಯಲಾರೆವು.
ನೀನು ಆಕಾಶದಂತೆ ನಿರ್ವಿಕಾರನಾಗಿರುವವನು. ನೀನು ಎಲ್ಲರಿಗೂ ಮೊದಲಿಗ ಮತ್ತು ಈ ಜಗತ್ತಿನ ಒಡೆಯ.
ನೀನು ಸತ್ವಗುಣದಿಂದ ದೇವತೆಗಳನ್ನೂ, ರಜೋಗುಣದಿಂದ ಮನುಷ್ಯರನ್ನೂ ಮತ್ತು ಮೂರನೆಯ ಗುಣದಿಂದ (ತಮೋಗುಣದಿಂದ)
ಅಸುರರನ್ನೂ, ಎಲ್ಲಾ ದೇಶ ಕಾಲಗಳಲ್ಲಿ ಸೃಷ್ಟಿ ಮಾಡಿರುವೆ”.
‘ಕಾಮಂ ಪ್ರ ಯಾಹಿ ಜಹಿ ವಿಶ್ರವಸೋsವಮೇಹಂ ತ್ರೈಲೋಕ್ಯರಾವಣಮವಾಪ್ನುಹಿ ವೀರ
ಪತ್ನೀಮ್ ।
‘ಬಧ್ನೀಹಿ
ಸೇತುಮಿಹ ತೇ ಯಶಸೋ ವಿತತ್ಯೈ ಗಾಯನ್ತಿ ದಿಗ್ವಿಜಯಿನೋ ಯಮುಪೇತ್ಯ ಭೂಪಾಃ’ ॥೮.೧೨॥
“ನಿನ್ನ ಇಚ್ಚಾನುಸಾರ ಲಂಕೆಗೆ ನಡೆದುಕೊಂಡು ಹೋಗು. ಮೂರು ಲೋಕವನ್ನು ರೋದನ ಮಾಡಿಸುವ,
(ರಾವಯತೀತಿ ರಾವಣಃ) ವಿಶ್ರವಸ್ ಮುನಿಯ ಮಲವನ್ನು ಕೊಂದು, ನಿನ್ನ ಹೆಂಡತಿಯನ್ನು ಪಡೆ. (ಲೋಕಕಂಟಕನಾದ
ರಾವಣ ವಿಶ್ರವಸ್ ಮುನಿಯ ಮಗ ಅಲ್ಲ, ಮಲ ಎನ್ನುವ ಭಾವದ ಮಾತು). ನಿನ್ನ ಯಶಸ್ಸಿನ ವಿಸ್ತಾರಕ್ಕಾಗಿ
ಈ ಸಮುದ್ರಕ್ಕೆ ಸೇತುವೆಯನ್ನು ಕಟ್ಟು. ದಗ್ವಿಜಯೀಗಳಾಗಿರುವ ಅರಸರು ಈ ಸೇತುವೆಯನ್ನು ನೋಡಿ ನಿನ್ನ
ಯಶಸ್ಸನ್ನು ಕೊಂಡಾಡುತ್ತಾರೆ” ಎನ್ನುತ್ತಾನೆ ವರುಣ.
No comments:
Post a Comment